ಸಾಹಿತ್ಯ ಪಠ್ಯ ಮೊದಲೋ? ರಂಗಪಠ್ಯ ಮೊದಲೋ…?

9 months ago

ಈ ಪೋಸ್ಟ್ ರಘುನಂದನ್ ಒಬ್ಬರನ್ನು ಆಧರಿಸಿ ಬರೆದದ್ದಲ್ಲ
  
ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಪರಂಪರೆಯ ಚರಿತ್ರೆಯಲ್ಲಿ ಆರಂಭದಿಂದಲೂ ಸಾಹಿತ್ಯ ಪಠ್ಯಗಳಾದ ಕಥೆ, ಕಾದಂಬರಿ, ಕಾವ್ಯ, ಸಂಶೋಧನ ಬರಹ, ವೈಚಾರಿಕ ಲೇಖನ ಇತ್ಯಾದಿಗಳನ್ನು ಬಳಸಿಕೊಂಡು/ಪ್ರೇರಣೆ ಪಡೆದು ರಂಗಪಠ್ಯವನ್ನು ಸಿದ್ಧಪಡಿಸಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ. ಈಚೆಗೆ ಪ್ರಯೋಗವಾದ ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಮೊದಲುಗೊಂಡು ಅವರ ಒಡಲಾಳ, ಅಮಾಸ, ಕುಸುಮಬಾಲೆ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕವಾದದ್ದೂ ಹೀಗೆ ದೊಡ್ಡ ಪಟ್ಟಿ ಮಾಡಬಹುದಾದಷ್ಟು ಪ್ರಯೋಗಗಳು ನಡೆದಿವೆ.

ನಾನು ಗಮನಿಸಿದ ನಾಟಕ ರೂಪಾಂತರಗಳಲ್ಲಿ ಮೊದಲಿಗೆ ಟೈಟಲ್ ಕಾರ್ಡಲ್ಲಿ ಮೂಲ ಲೇಖಕ/ಕಿಯರ ಹೆಸರಿನೊಂದಿಗೇ ನಾಟಕದ ಹೆಸರು ಶುರುವಾಗುತ್ತದೆ. ಉದಾಹರಣೆಗೆ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ರಾತ್ರಿಪೂರ 9 ಗಂಟೆಗಳ ರಂಗಪ್ರಯೋಗ ಅಂತಲೂ, ದೇವನೂರ ಮಹಾದೇವ ಅವರ ‘ಒಡಲಾಳ’ ಎಂತಲೂ ಶುರುವಾದ ನಂತರದಲ್ಲಿ ರಂಗರೂಪ ಅಥವಾ ರಂಗಪಠ್ಯ ಯಾರದು ಎಂದು ಹಾಕುತ್ತಾರೆ. ಹಾಗಂತ ಈ ನಿರ್ದೇಶಕರು ನಾಟಕ ಮಾಡುವಾಗ ಲೇಖಕರ ಏಕೈಕ ಪಠ್ಯವನ್ನು ಮಾತ್ರ ನೋಡಿರುವುದಿಲ್ಲ. ಆ ಲೇಖಕರ ಇತರ ಕೃತಿಗಳನ್ನು ಅಧ್ಯಯನ ಮಾಡಿರುತ್ತಾರೆ, ಆ ಪಠ್ಯಗಳ ಲೇಖಕರ ಜತೆ ಸಂವಾದ ಮಾಡಿರುತ್ತಾರೆ, ಆ ಪಠ್ಯಕ್ಕೆ ಪೂರಕವಾಗ ವಿವರಗಳನ್ನೆಲ್ಲಾ ಅಧ್ಯಯನ ಮಾಡಿ ಕಲೆಹಾಕಿರುತ್ತಾರೆ. ಇದಕ್ಕಾಗಿ ಸಂಶೋಧನೆಯನ್ನೂ ಮಾಡಿರುತ್ತಾರೆ. ಹಾಗೆಂದು ರಂಗರೂಪವೆ ಮೊದಲೆಂದು ಎಲ್ಲಿಯೂ ಯಾವ ರಂಗ ನಿರ್ದೇಶಕರು ಭಾವಿಸುವುದಿಲ್ಲ. ರಾತ್ರಿ ರಂಗಭೂಮಿಯ ಯುವ ನಿರ್ದೇಶಕ ಬೇಲೂರು ರಘುನಂಧನ್ ಅವರು ನಿರ್ದೇಶಿಸುತ್ತಿರುವ ‘ಅಮೀರಬಾಯಿ ಕರ್ನಾಟಕಿ’ ನಾಟಕದ ಪೋಷ್ಟರ್ ನೋಡಿದೆ. ಇದರಲ್ಲಿ ಮೊದಲಿಗೆ ರಂಗಪಠ್ಯ ವಿನ್ಯಾಸ ನಿರ್ದೇಶನ ಎಂದು ದೊಡ್ಡದಾಗಿ ತಮ್ಮ ಹೆಸರು ಹಾಕಿಕೊಂಡು ನಂತರ ಆಧಾರ ಕೃತಿ: ಅಮೀರಬಾಯಿ ಕರ್ನಾಟಕಿ-ರಹಮತ್ ತರೀಕೆರೆ ಎಂದು ಹಾಕಿ, ಇದನ್ನಷ್ಟೇ ಅಲ್ಲ ಎನ್ನುವಂತೆ ಈ ಕೃತಿಯ ಆಧಾರದಿಂದ ಹುಡುಕಾಟ ಮಾಡಿದ ಅಂತರ್ಜಾಲ ಮಾಹಿತಿ ಸಂದರ್ಶನಗಳನ್ನು ‘ಆಕರ’ ಎಂದು ಸೇರಿಸಿದ್ದಾರೆ. ಇವರಿಗೆ ‘ಆಕರ’ ಮತ್ತು ಆಧಾರ ಕೃತಿಯ ಪದಗಳ ನಡುವಿನ ವ್ಯತ್ಯಾಸ ತಿಳಿಯದು ಅನ್ನಿಸುತ್ತೆ. ರಹಮತ್ ತರೀಕೆರೆ ಅವರ ಸಂಶೋಧನ ಕೃತಿ ‘ಅಮೀರಬಾಯಿ ಕರ್ನಾಟಕಿ’ ರಂಗರೂಪ: ಬೇಲೂರು ರಘುನಂದನ್ ಎಂದು ಕಾಣಿಸುವುದಕ್ಕೂ ಮೇಲಿನ ತರಹ ಸಣ್ಣದಾಗಿ ಲೇಖಕರ ಹೆಸರು ಹಾಕುವುದಕ್ಕೂ ವ್ಯತ್ಯಾಸ ಇಲ್ಲವೇ? ರಘುನಂದನ್ ರ ಈ ನಡೆ ಇದು ಮೊದಲಲ್ಲ. ನಾನು ನಿರೂಪಿಸಿದ ಮಂಜಮ್ಮ ಜೋಗತಿ ಆತ್ಮಕಥನದ ನಿರೂಪಣೆಯ ‘ನಡುವೆ ಸುಳಿವ ಹೆಣ್ಣು’ ಕೃತಿಯನ್ನು ರಂಗರೂಪಕ್ಕೆ ತರುವಾಗ ಆರಂಭಕ್ಕೆ ಇದರ ಮಾಹಿತಿ ಕೂಡ ನನಗೆ ತಿಳಿಸಿರಲಿಲ್ಲ. ಅಂತರ್ಜಾಲದ ಮಾಹಿತಿಯಿಂದ ತಿಳಿದುಕೊಂಡೆ. ಆಗಲೂ ಈ ಕೃತಿಯ ಮಹತ್ವವನ್ನು ಕಡೆಗಣಿಸಲು ಮಂಜಮ್ಮನ ಬಗ್ಗೆ ಬಂದ ಮತ್ತೊಂದು ಕೃತಿಯ ಹೆಸರನ್ನೂ ಸಂದರ್ಶನ ಮತ್ತು ಅಂತರ್ಜಾಲ ಮಾಹಿತಿ ಎಂದು ಹಾಕಿಕೊಂಡರು. ಅಸಲಿಗೆ ಅಂತರ್ಜಾಲ ಮಾಹಿತಿ ಎಂದರೇನು? ಅದೇನು ಶೂನ್ಯದ ಸೃಷ್ಟಿಯೇ? ಡಿಜಿಟಲ್ ಸ್ಪೇಸಲ್ಲಿರುವ ಮಾಹಿತಿಗಳೂ ಕೂಡ ಇಂತಹ ಮೂಲ ಕೃತಿಗಳ ಉಪ ಉತ್ಪನ್ನಗಳಲ್ಲವೇ?

ಅಂತರ್ಜಾಲದಲ್ಲಿ ಪುಸ್ತಕ ಖರೀದಿಸಿ ಅದನ್ನೂ ಪುಸ್ತಕದ ಹೆಸರು ಲೇಖಕರ ಹೆಸರು ಬಳಸದೆ ಅಂತರ್ಜಾಲ ಮಾಹಿತಿ ಎಂದು ಬರೆಯಬಹುದಲ್ಲವೆ? ಅಂತರ್ಜಾಲ ಎನ್ನುವುದು ವಿವಿಧ ಮೂಲಗಳ ಮಾಹಿತಿಗಳನ್ನು ಕೂಡಿಟ್ಟುಕೊಂಡು ಅದನ್ನು ಕೇಳಿದವರಿಗೆ ಒದಗಿಸುವ ಒಂದು ತಂತ್ರಾಂಶವಷ್ಟೆ. ಅಂತರ್ಜಾಲವೆ ಸ್ವಯಂ ಲೇಖಕ ಲೇಖಕಿಯರಲ್ಲ. ಇಷ್ಟು ಕನಿಷ್ಠ ತಿಳಿವು ಬೇಡವೆ? ಒಬ್ಬ ಲೇಖಕ/ಕಿ ಸಾಹಿತಿಗಳು ಒಂದು ಕೃತಿ ರಚನೆಗೆ ಎಷ್ಟು ಶ್ರಮ ಹಾಕಿರುತ್ತಾರೆ. ರಹಮತ್ ತರೀಕೆರೆಯವರು ಅಮೀರ್ ಬಾಯಿ ಕುರಿತು ಸಂಶೋಧನೆ ಮಾಡುವಾಗ ಒಂದೊಂದು ಮಾಹಿತಿಗಾಗಿ ಎಷ್ಟು ತಿರುಗಾಟ ಮಾಡಿದ್ದಾರೆ, ನನಗೆ ಗೊತ್ತಿರುವಂತೆ ಹತ್ತು ವರ್ಷಗಳ ಕಾಲ ನಡೆಸಿದ ಸಂಶೋಧನೆ ಅದು.‌ ಅವರ ತಿರುಗಾಟ ಓಡಾಟದ ಅರಿವಿದ್ದರೆ ರಘುನಂದನ್ ಹೀಗೆ ಮಾಡುತ್ತಿರಲಿಲ್ಲ.

ನಾನು ಹದಿನೈದು ವರ್ಷಗಳ ಅಂತರದಲ್ಲಿ ಮಂಜಮ್ಮನ ಜತೆ ಮಾತುಕತೆ ಒಡನಾಟದಿಂದ ಸೃಜನಶೀಲವಾಗಿ ರೂಪುಕೊಂಡ ಕಥನ ‘ನಡುವೆ ಸುಳಿವ ಹೆಣ್ಣು’ ಆತ್ಮಕಥನ. ಮಂಜಮ್ಮನ ಗುರು ಕಾಳಮ್ಮ ಇದ್ದಾಗ ಹೇಳಿದ ಎಷ್ಟೋ ಘಟನೆಗಳನ್ನು ಮಂಜಮ್ಮ ಪುಸ್ತಕ ಪ್ರಕಟಿಸುವಾಗ ಇದೆಲ್ಲಾ ನಾನು ಹೇಳಿದ್ದಾ, ನನಗೇ ನೆನಪಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಹೀಗೆ ಹಲವು ವರ್ಷ, ಅಪಾರ ಶ್ರಮ ಹಾಕಿ ಬರೆದ ಪುಸ್ತಕದಿಂದ ಪ್ರೇರಣೆ ಪಡೆದು ರಂಗಪಠ್ಯಕ್ಕೆ ಬೇಕಾಗುವ ಬೀಜ ಪಡೆದು ರಂಗಭೂಮಿಗೆ ತರುವಾಗ ಲೇಖಕರಿಗೆ ಒಂದು ಘನತೆಯನ್ನು ಕೊಡದಿರುವ ರಘುನಂದನ್ ಅವರ ಈ ಕ್ರಮ ಕನ್ನಡ ರಂಗಭೂಮಿಯ ಪರಂಪರೆಯಲ್ಲಿ ಇಲ್ಲ.

ಇತ್ತೀಚೆಗೆ ತೆಲುಗು ಲೇಖಕಿ ಸತ್ಯವತಿ (ಅನು: ಅಜಯವರ್ಮ ಅಲ್ಲೂರಿ) ಅವರ ‘ಹೆಸರಿಲ್ಲದವಳು’ ಕಥೆಯನ್ನು ಆಧರಿಸಿದ ‘ಹೂ ಆಮ್ ಐ’ ನಾಟಕದ (ರಂಗರೂಪ: ವಿಶಾಲ ಮ್ಯಾಸರ್, ನಿರ್ದೇಶನ: ರಿಯಾಜ್ ಅಹಮದ್-ಸಹನ ಪಿಂಜಾರ್) ಟೈಟಲ್‌ಕಾರ್ಡಲ್ಲಿ ಸತ್ಯವತಿಯ ಹೆಸರಿಲ್ಲದ್ದನ್ನು ನೋಡಿದ್ದೆ. ಹುಡುಕಿದರೆ ಇಂತಹ ಹತ್ತಾರು ಉದಾಹರಣೆಗಳು ಸಿಗುತ್ತವೆ. ಈ ಪೋಸ್ಟ್ ರಘುನಂದನ್ ಒಬ್ಬರನ್ನು ಆಧರಿಸಿ ಬರೆದದ್ದಲ್ಲ. ಬದಲಾಗಿ ಹೊಸ ತಲೆಮಾರಿನಲ್ಲಿ ಇಂತಹ ನಡೆಗಳು ಹಲವಿವೆ. ಹಾಗಾಗಿ ಈ ಬಗೆಯ ಕೃಜತ್ಞತಾ ರಹಿತ ನಡೆ ಕನ್ನಡ ಪರಂಪರೆಯದ್ದಲ್ಲ ಎಂದು ಹೇಳಲಿಕ್ಕೆ ಇಷ್ಟನ್ನು ಬರೆಯಬೇಕಾಯಿತು.

ದಯವಿಟ್ಟು ಹೊಸ ಕಾಲದ ಯುವ ನಿರ್ದೇಶಕ ನಿರ್ದೇಶಕಿಯರಲ್ಲಿ ಅಥವಾ ಅನ್ಯ ಪಠ್ಯಗಳನ್ನು ರಂಗರೂಪಕ್ಕೆ ತರುವವರಲ್ಲಿ ಒಂದು ವಿನಂತಿ. ನೀವು ಮಾಡಬಹುದಾದ ಯಾವುದೇ ರಂಗರೂಪಕ್ಕೆ ಬೀಜವಾದ ಮೂಲ ಕೃತಿ/ಘಟನೆ/ಕಲ್ಪನೆ/ಕಥನ ಮತ್ತು ಅದರ ಸೃಷ್ಟಿಕಾರರು ಅಥವಾ ರಚನೆಕಾರರ ಘನತೆಯನ್ನು ಕಳೆಯಬೇಡಿ.

ಡಾ.ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು

Leave a Reply