(ಟಿ.ಶಶಿಧರ್ ಅವರ ಸ್ಮರಣ ಸಂಚಿಕೆಗೆ ಬರೆದಿರುವ ಮುನ್ನುಡಿ)
ಪ್ರಗತಿಪರ ಸಾಮಾಜಿಕ ಹೋರಾಟ ಮತ್ತು ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿ ಬಾನಿನಲ್ಲಿ ಹೊಳೆದು ಮರೆಯಾಗಿ ಹೋಗುವ ಮಿಂಚಿನಂತೆ ಮಿಂಚಿ ಅಕಾಲದಲ್ಲಿ ಕಾಲವಶರಾದ ಆತ್ಮೀಯ ಗೆಳೆಯ ಟಿ.ಶಶಿಧರ್ ಬತ್ತಲಾರದ ನೆನಪುಗಳನ್ನು ಉಳಿಸಿಹೋಗಿದ್ದಾರೆ. ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ರಸ್ತಾಪುರ ಎಂಬ ಚಿಕ್ಕ ಗ್ರಾಮದಲ್ಲಿ, ರೈತಾಪಿ ಕುಟುಂಬದಲ್ಲಿ ಹುಟ್ಟಿ ತಾಂತ್ರಿಕ ಶಿಕ್ಷಣದಲ್ಲಿ ಬಿಟೆಕ್ ಪದವಿಯನ್ನು ಪಡೆದ ಪದವೀಧರ. ವಿಜ್ಞಾನದ ವಿದ್ಯಾರ್ಥಿಯಾದರೂ ಅವರ ಒಲವು ಸಾಹಿತ್ಯ, ಸಮಾಜ ವಿಜ್ಞಾನ ಹಾಗೂ ಮಾನವಿಕ ಶಾಸ್ತ್ರಗಳ ಕಡೆಗೆ ಹೆಚ್ಚು ತುಡಿಯುತ್ತಿತ್ತು. ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ದಿನಗಳಿಂದಲೂ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿ ಎಳವೆಯಲ್ಲಿಯೇ ರಾಜಕೀಯಾಸಕ್ತಿ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡವರು. ವಿದ್ಯಾರ್ಥಿ ನಾಯಕನಾಗಿ ದಲಿತ ಚಳವಳಿಗಳ ಮುಂಚೂಣಿಯಲ್ಲಿದ್ದ ಟಿ.ಶಶಿಧರ್, ಆರೋಗ್ಯಕರ ಸಮಾಜ ನಿರ್ಮಾಣದ ಉಪಕ್ರಮಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿಯಾಗಿ ಮಂಡಲ್ ಆಯೋಗದ ಮೀಸಲಾತಿ ಶಿಫಾರಸ್ಸುಗಳ ಜಾರಿಗಾಗಿ ಆಗ್ರಹಿಸಿ ಚಳವಳಿಯನ್ನು ಸಂಘಟಿಸುವ ಮೂಲಕ ಹೋರಾಟದ ಕಣಕ್ಕೆ ಧುಮುಕಿದ್ದು ಟಿ.ಶಶಿಧರ್ ಅವರ ಸಾಮಾಜಿಕ ಹೋರಾಟದ ಪುಟಗಳಿಗೆ ಬರೆದ ಮುನ್ನುಡಿಯಾಯಿತು.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ರೈತಾಪಿಗಳ ಮಗನಾಗಿ ದಲಿತ ಚಳವಳಿಯೊಂದಿಗೆ ರೈತ ಚಳವಳಿಯನ್ನು ಸಮಾನ ನೆಲೆಯಲ್ಲಿ ಬೆಸೆದುಕೊಂಡು ‘ರೈತ ಹಿತ ರಕ್ಷಣಾ ಹೋರಾಟ ಸಮಿತಿಯ’ ಪ್ರಧಾನ ಕಾರ್ಯದರ್ಶಿಯಾಗಿ ರೈತ ಸಂಘಟನೆಯಲ್ಲಿ ದಲಿತ ಭೂಹಿಡುವಳಿದಾರರು ಮತ್ತು ದಲಿತ ಕೂಲಿಕಾರ್ಮಿಕರ ಹಿತಾಸಕ್ತಿಗಾಗಿ ಹೋರಾಟಗಳನ್ನು ಸಂಘಟಿಸಿ ನಡೆಸಿದವರು ಟಿ.ಶಶಿಧರ್.
ಆ ದಿನಗಳಲ್ಲಿ ಹಸಿರು ಸೇನಾನಿ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ನಾಯಕತ್ವದಲ್ಲಿ ‘ಕರ್ನಾಟಕ ರಾಜ್ಯ ರೈತ ಸಂಘವು’ ನಾಡಿನ ಮೂಲೆಮೂಲೆಗಳಿಗೆ ತಲುಪಿತ್ತು. ‘ಹಸಿರೇ ರೈತರ ಉಸಿರು’ ‘ರೈತ ಸಾಲಗಾರನಲ್ಲ ಸರ್ಕಾರವೇ ಬಾಕಿದಾರ’ ಎಂಬ ಘೋಷಣೆಗಳನ್ನು ಹೊತ್ತ ಬೋರ್ಡುಗಳು ಕರಾರೈಸಂ ಶಾಖೆಗಳಿರುವ ಊರುಗಳ ಮುಖ್ಯ ದ್ವಾರ-ದಾರಿಗಳಲ್ಲಿ ರಾರಾಜಿಸುತ್ತಿದ್ದವು. ಪುರಪ್ರವೇಶ ಮಾಡಲಿಚ್ಛಿಸಿದ ಸರ್ಕಾರಿ ಸಂಬಳದ ಯಾವುದೇ ಅಧಿಕಾರಿ ಅಥವಾ ರಾಜಕಾರಣಿ ಗ್ರಾಮದ ರೈತ ಮುಖಂಡರ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ರೈತ ಮುಖಂಡರನ್ನು ಭೇಟಿಯಾಗಲು ಸಂಜೆ 5 ರಿಂದ 7 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿತ್ತು. ಸೋಮವಾರ ರೈತರಿಗೆ ರಜಾ ದಿನ. ಆ ದಿನ ಯಾವುದೇ ರಾಜಕಾರಣಿ ಅಥವಾ ಸರ್ಕಾರಿ ಅಧಿಕಾರಿಗಳು ಗ್ರಾಮದ ರೈತ ಮುಖಂಡರನ್ನು ಭೇಟಿಯಾಗುವಂತಿರಲಿಲ್ಲ. ಇಂತಹ ಕಟ್ಟಳೆಗಳನ್ನು ಉಲ್ಲಂಘನೆ ಮಾಡಿದವರು ರೈತ ಸಂಘಟನೆಯು ನೀಡುವ ಶಿಕ್ಷೆಗೆ ಬದ್ಧವಾಗಬೇಕಿತ್ತು. ಊರಿನ ಹೊರಗೆ ನಾಮಫಲಕಗಳನ್ನು ತೂಗು ಹಾಕಲಾಗಿರುತ್ತಿತ್ತು.
ಸಾಮಾಜಿಕ ಅಸಮಾನತೆಯಿಂದಾಗಿ ಅಸ್ಪೃಶ್ಯತೆ ಅನುಭವಿಸುತ್ತಿರುವ ತಳ ಸಮುದಾಯಗಳಲ್ಲಿ ಭೂಹಿಡುವಳಿ ಹೊಂದಿರುವವರ ಪ್ರಮಾಣ ತೀರಾ ಕಮ್ಮಿ. ಆಗಿನ ರೈತ ಚಳವಳಿ ಉಚ್ಛ್ರಾಯ ಹಂತದಲ್ಲಿದ್ದ ದಿನಗಳಲ್ಲಿ ಬಹುತೇಕ ಎಲ್ಲಾ ಅಸ್ಪೃಶ್ಯ ಜಾತಿಗಳು, ಪಾರಂಪರಿಕ ಮಲಿನ ವೃತ್ತಿ ಹಾಗೂ ಬಿಟ್ಟಿಚಾಕರಿಗಳನ್ನು ನಿರ್ವಹಿಸುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ಭೂಸ್ವಾಮ್ಯ ಹೊಂದಿರುವ ಮತ್ತು ಧಾರ್ಮಿಕ ಹಕ್ಕುದಾರಿಕೆ ಸ್ಥಾಪಿಸಿಕೊಂಡ ಜಾತಿಗಳ ಅಧೀನದಲ್ಲಿರಬೇಕಾಗಿತ್ತು. ಇಂತಹ ಹೊತ್ತಿನಲ್ಲಿ ಊರಿನ ದಲಿತರು ಮತ್ತು ರೈತರು ಪರಸ್ಪರ ಸಹಬಾಳ್ವೆ ನಡೆಸಬೇಕಾದ ಬಗೆಯನ್ನು ಕುರಿತು ಟಿ.ಶಶಿಧರ್ ಆಲೋಚಿಸುತ್ತಿದ್ದರು. ಈಗಲೂ ನಮ್ಮ ಜಾತಿಗ್ರಸ್ತ ಭಾರತ ದೇಶದ ಗ್ರಾಮಗಳಲ್ಲಿ ಕುಳವಾಡಿಕೆ ಅಥವಾ ಆಯಗಾರಿಕೆ ಪದ್ದತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇಂತಹ ಅಪಸವ್ಯಗಳನ್ನು ನೀಗಲು ಶಶಿಧರ್ ಶ್ರಮಿಸುತ್ತಿದ್ದರು. ಈಗಲೂ ದಲಿತರಲ್ಲಿ ಅಲ್ಪಸ್ವಲ್ಪ ಆರ್ಥಿಕ ಮತ್ತು ಭೂಸುಧಾರಣೆ ಕಂಡುಬಂದಿದ್ದರೂ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸುವ ಕುಳವಾಡಿಕೆ ಪದ್ದತಿಯನ್ನು ಅನೂಚಾನವಾಗಿ ಚಾಲ್ತಿಯಲ್ಲಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ಪದ್ದತಿಯನ್ನು ಹೋಗಲಾಡಿಸಲು ಶಶಿಧರ್ ಸದಾಕಾಲವೂ ದಲಿತ ಚಳವಳಿ ಮತ್ತು ರೈತ ಚಳವಳಿಗಳಲ್ಲಿ ಶ್ರಮಿಸುತ್ತಿದ್ದರು.
ಪ್ರೊ.ಬಿ.ಕೃಷ್ಣಪ್ಪ ಮತ್ತು ಇತರ ದಲಿತ ನಾಯಕರ ನೇತೃತ್ವದಲ್ಲಿ ಮೂಡಿಬಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು, ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಸಮುದಾಯಗಳ ಜನರ ವಿರುದ್ಧ ರೂಕ್ಷ ಮಾರ್ಗಗಳನ್ನು ಅನುಸರಿಸಲಿಲ್ಲ. ಟಿ.ಶಶಿಧರ್ ಕೂಡಾ ಅಂತಹ ಯಾವುದೇ ಒರಟು ದಾರಿಯನ್ನು ಅನುಸರಿಸದೆ ಬುದ್ಧಗುರು ಮತ್ತು ಅಂಬೇಡ್ಕರ್ ಅವರ ಅಹಿಂಸಾ ಮಾರ್ಗವನ್ನು ಅನುಸರಿಸಿದರು. ಇದು ದಲಿತ ಚಳವಳಿಯ ತಾತ್ವಿಕತೆಯೂ ಮತ್ತು ಮೌಲ್ಯವೂ ಆಗಿರುತ್ತದೆ ಎಂಬುದನ್ನು ಟಿ.ಶಶಿಧರ್ ಚೆನ್ನಾಗಿ ಅರಿತುಕೊಂಡಿದ್ದರು.
ಸಾಮಾಜಿಕ ಸಂಘಟನೆಗಳ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕವಿ -ಸಾಹಿತಿ- ಚಿಂತಕರ ಸಂಸರ್ಗದಿಂದ ಹಾಗೂ ಸಾಹಿತ್ಯ ಕೃತಿಗಳ ಓದಿನಿಂದಾಗಿ ವೈಚಾರಿಕ ಪ್ರಜ್ಣೆ ಮತ್ತು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಂಡ ಟಿ.ಶಶಿಧರ್ ಅವರು ಸಮಕಾಲೀನ ವಿದ್ಯಮಾನಗಳನ್ನು ಕುರಿತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದರು. ಆ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ಅವರ ರಾಜಕೀಯ ಚಿಂತನೆಗಳೆಲ್ಲವೂ ಅಂಬೇಡ್ಕರ್ ಪ್ರಣೀತ ಸಮಾಜವಾದಿ ಸಿದ್ಧಾಂತದ ಪ್ರಭಾವದಿಂದ ರೂಪಿತವಾಗಿದ್ದವು. ವೈಚಾರಿಕ ಸಾಹಿತ್ಯ ಕೃತಿಗಳ ಓದಿನ ವ್ಯಾಮೋಹಿಯಾಗಿದ್ದ ಶಶಿಧರ್ ದಲಿತ ಸಾಹಿತ್ಯ ಪರಿಷತ್ತಿನ ಖಜಾಂಚಿಯಾಗಿಯೂ ಕಾರ್ಯ ನಿರ್ವಹಿಸಿದರು. ಇದರ ನಡುವೆ ದಲಿತ ಪರ್ಯಾಯ ರಾಜಕೀಯ ಚಿಂತನೆಗಳ ಲೇಖನಗಳನ್ನು ಬರೆಯುತ್ತಾ ಜನಪರ ರಾಜಕಾರಣಿಯಾದ ಡಾ.ಎಚ್.ಸಿ.ಮಹದೇವಪ್ಪನವರ ಗೆಳೆತನದಿಂದ ಜನತಾದಳ (ಜಾತ್ಯಾತೀತ) ಪಕ್ಷದಲ್ಲಿ ಸೇರ್ಪಡೆಯಾದರು. ಆ ಪಕ್ಷದಲ್ಲಿ ಈಗಿನ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯನವರ ರಾಜಕೀಯ ಗರಡಿಯಲ್ಲಿ ಅಹಿಂದದ ರಾಜಕೀಯ ಹೋರಾಟದ ಪಟ್ಟುಗಳನ್ನು ಅರಿತುಕೊಂಡರು. ಹಾಗಾಗಿಯೇ ಅವರು ಶಹಾಪುರ ತಾಲ್ಲೂಕಿನ ಜನತಾದಳ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಹೊತ್ತುಕೊಂಡರು. ಎಚ್.ಸಿ.ಮಹದೇವಪ್ಪನವರ ಸಹಚರರಾಗಿ ಪಕ್ಷದ ಬಲವರ್ಧನೆಗಾಗಿ ಶ್ರಮಿಸಿದರು. ಇವರ ಪ್ರಾಮಾಣಿಕ ಪರಿಶ್ರಮವನ್ನು ಗುರುತಿಸಿದ ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠಾಧಿಕಾರಿಗಳು ಕರ್ನಾಟಕ ಪ್ರದೇಶ ಜನತಾದಳ ಪಕ್ಷದ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಿದರು.
ಮುಂದೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜನತಾದಳ ಪಕ್ಷವನ್ನು ತೊರೆದು ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ, ಸಿ.ಎಂ.ಇಬ್ರಾಹಿಂ, ಸತೀಶ್ ಜಾರಕಿಹೊಳಿ ಮುಂತಾದ ನಾಯಕರ ಜೊತೆಯಲ್ಲಿ ಟಿ.ಶಶಿಧರ್ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು. ಸ್ವತಂತ್ರ ಉದ್ಯಮಿಯಾಗಿ ಪುಸ್ತಕದ ಅಂಗಡಿಯನ್ನು ತೆರೆದು ಸಾಹಿತ್ಯದ ಪರಿಚಾರಕರಾದರು. ಗುತ್ತಿಗೆದಾರನಾಗಿಯೂ ದುಡಿದರು. ಅಂಬೇಡ್ಕರ್ ಆಶಿಸಿದಂತೆ ಸಮಾಜದ ಋಣ ಸಂದಾಯ ಮಾಡಲು ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ತೊಡಗಿಕೊಂಡರು. ಹೀಗೆ ಬಹುಮುಖ ವ್ಯಕ್ತಿತ್ವದ ಟಿ.ಶಶಿಧರ್ ಯುವಕರ ಪಾಲಿನ ಆದರ್ಶ ಮಾದರಿಯಾದರು.
ಟಿ.ಶಶಿಧರ್ ಅಂತರಂಗದೊಳಗೊಬ್ಬ ನಿರ್ಭೀತ ಅಂಬೇಡ್ಕರ್ ವಾದಿ ರಾಜಕೀಯ ಚಿಂತಕನಿದ್ದ. ಎಲ್ಲಕ್ಕಿಂತಲೂ ಮಿಗಿಲಾಗಿ ಅವರಲ್ಲೊಬ್ಬ ಬಂಡುಕೋರ ಬರೆಹಗಾರನಿದ್ದ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಬರೆದ ಪತ್ರದಲ್ಲಿ ದೇವೇಗೌಡರ ಕುಟುಂಬ ಪಕ್ಷಪಾತವನ್ನು ಮತ್ತು ಸಾಮಾಜಿಕ ನ್ಯಾಯ ವಿರೋಧಿ ನಡೆಗಳನ್ನು ಯಾವುದೇ ಮುಲಾಜಿಗೆ ಒಳಪಡದೆ ಪ್ರಶ್ನಿಸಿದ್ದಾರೆ. ಧರ್ಮಾಧಿಕಾರಿಗಳಾದವರು ಧರ್ಮದಲ್ಲಿ ರಾಜಕೀಯವನ್ನು ಬೆರೆಸಬಾರದೆಂದು ಮತ್ತು ಧರ್ಮವನ್ನು ರಾಜಕೀಯದ ವಸ್ತುವನ್ನಾಗಿಸಬಾರದೆಂದು ಶಶಿಧರ್ ಬಲವಾಗಿ ನಂಬಿದ್ದರು. ಲಿಂಗಾಯತ ಸ್ವಾಮೀಜಿಯೊಬ್ಬರು ಯಡಿಯೂರಪ್ಪನವರ ಪರವಾಗಿ ಜಾತಿಪ್ರೇಮದಿಂದ ಪಕ್ಷಪಾತದ ಮಾತಾಡಿದಾಗ ಶಶಿಧರ್ ಅವರು ಆ ಸ್ವಾಮೀಜಿಯನ್ನು ಖಾರವಾಗಿಯೇ ಪ್ರಶ್ನಿಸುತ್ತಾರೆ. ಬಸವ ತತ್ವ ಮತ್ತು ಅಂಬೇಡ್ಕರ್ ವಿಚಾರಧಾರೆಯಲ್ಲಿ ಅಪಾರವಾದ ನಂಬಿಕೆ ಇರಿಸಿಕೊಂಡಿದ್ದ ಶಶಿಧರ್, ಲಿಂಗಾಯತವು ಒಂದು ಜಾತಿಯಾಗದೆ ಪ್ರತ್ಯೇಕವಾದ ಧರ್ಮದ ಗುರುತನ್ನು ಪಡೆಯುವಂತಾಗಬೇಕೆಂದು ಹಂಬಲಿಸಿದರು. ಅಂತೆಯೇ ದಲಿತ ಮುಖ್ಯಮಂತ್ರಿಯ ಸ್ಥಾನ ದಲಿತರಿಗೆ ಸಿಗುವ ಮೂಲಕ ಸಾಮಾಜಿಕ ನ್ಯಾಯದ ಪ್ರತಿಪಾದನೆ ಸಾಧ್ಯವಾಗಬೇಕೆಂದು ಲೇಖನಗಳನ್ನು ಬರೆದು ಆಗ್ರಹಿಸಿದರು. ಶಶಿಧರ್ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ವಿರೋಧ ಪಕ್ಷಗಳ ನಾಯಕರಂತೆ ಕಾಂಗ್ರೆಸ್ ನ ನಾಯಕರನ್ನು ಮತ್ತು ಅವರ ಅಪನಡೆಗಳನ್ನು ಪ್ರಶ್ನಿಸಬಲ್ಲವರಾಗಿದ್ದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರ ಅಪಕ್ವ ರಾಜಕೀಯ ಹೇಳಿಕೆಗಳನ್ನು ಒಪ್ಪಲಿಲ್ಲ. ಹಾಗೆಯೇ ರಾಹುಲ್ ಮತ್ತು ಪ್ರಿಯಾಂಕ ಅವರು ಬೇರೆ ಬಾಯಿ ಬಡುಕರನ್ನು ಕ್ಷಮಿಸಬಾರದೆಂದು ಬೌದ್ಧಿಕ ತಿಳಿವಿನ ಕಿವಿಮಾತು ಹೇಳುವುದನ್ನು ಮರೆಯಲಿಲ್ಲ.
ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕೊಡುಗೆಯಾದ ಸಾಮಾಜಿಕ ಜಾಲತಾಣವನ್ನು ಟಿ.ಶಶಿಧರ್ ಅವರು ಸಮಕಾಲೀನ ರಾಜಕೀಯ ವಿದ್ಯಮಾನಗಳನ್ನು ಕುರಿತು ಚರ್ಚಿಸಲು, ಶೈಕ್ಷಣಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಹಂಚಿಕೊಳ್ಳಲು, ಸಾಹಿತ್ಯದ ಸೃಜನಶೀಲತೆಯನ್ನು ಅಭಿವ್ಯಕ್ತಿಸಲು, ಬಹುಮುಖ್ಯವಾಗಿ ಅಂಬೇಡ್ಕರ್ ಪ್ರಣೀತ ವೈಚಾರಿಕ ಬರೆಹಗಳಿಗಾಗಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದರು. ವಾಟ್ಸಾಪ್ ಮತ್ತು ಫೇಸ್‌ಬುಕ್ ಬರೆಹಗಳ ಮೂಲಕ ಇವತ್ತಿನ ಯುವಜನತೆಯನ್ನು ತಲುಪುವ ಬಗೆಯನ್ನು ಅವರು ಕಂಡುಕೊಂಡಿದ್ದರು. ನನಗೆ ಟಿ.ಶಶಿಧರ್ ಪರಿಚಯವಾದದ್ದು ಮತ್ತು ನನ್ನೊಂದಿಗೆ ಗೆಳೆತನ ಏರ್ಪಡಿಸಿಕೊಂಡದ್ದು ಫೇಸ್‌ಬುಕ್ ಬರೆಹಗಳ ಮೂಲಕವೇ. ನನಗೊಮ್ಮೆ ಫೇಸ್‌ಬುಕ್ ನಲ್ಲಿ ಹಲವಾರು ಫೋಟೋಗಳನ್ನು ಏಕಕಾಲದಲ್ಲಿ ಒಂದೇ ಪೋಸ್ಟಿಗೆ ಅಪ್ಲೋಡ್ ಮಾಡುವುದು ಹೇಗೆಂಬುದನ್ನು ಕುರಿತು ಮತ್ತು ಬರೆಹವನ್ನು ಹೇಗೆ copy- paste ಮಾಡಬೇಕೆಂಬುದನ್ನು ಪ್ರಾಯೋಗಿಕವಾಗಿ ತೋರಿಸಿ ಕಲಿಸಿಕೊಟ್ಟರು.
ನೂರಾರು ಓದುಗರನ್ನು, ಅನುಚರರನ್ನು ಮತ್ತು ಸಾವಿರಾರು ಗೆಳೆಯರನ್ನು ಸಾಮಾಜಿಕ ಜಾಲತಾಣದಲ್ಲಿ ಹೊಂದಿದ್ದ ಶಶಿಧರ್, ಸನಾತನ ಕೋಮುವಾದವನ್ನು ವಿರೋಧಿಸಿ ಬರೆಯುತ್ತಲಿದ್ದರು. ತಮ್ಮ ನಿರ್ಭೀತ ಬರೆಹಗಳಿಂದಾಗಿಯೇ ಅನೇಕ ಮನುವಾದಿ ಮನಸ್ಸುಗಳನ್ನು ಎದುರು ಹಾಕಿಕೊಂಡಿದ್ದರು. ಸಹಜವಾಗಿಯೇ ಬಲಪಂಥೀಯ ವಿಚಾರಧಾರೆಯ ರಾಜಕೀಯ ಪಕ್ಷದ ಪರವಾಗಿದ್ದ ‘ಭಕ್ತರು’ ಶಶಿಧರ್ ಅವರ ಚಿಂತನೆಗಳನ್ನು ಸಹಿಸದೆ ಎದುರುಬಿದ್ದು ವಿತಂಡ ವಾದಕ್ಕೆ ತೊಡಗುತ್ತಿದ್ದರು. ಶಶಿಧರ್ ಎಲ್ಲರಿಗೂ ಅತ್ಯಂತ ಸಮರ್ಥವಾಗಿ ಮತ್ತು ತಾರ್ಕಿಕವಾಗಿ ಉತ್ತರಿಸುವ ಮೂಲಕ ‘ಭಕ್ತರ’ ಬಾಯಿ ಮುಚ್ಚಿಸುತ್ತಿದ್ದರು.
ಈಗಾಗಲೇ ಹೇಳಿದಂತೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ಸಾಹಿತ್ಯದ ಕಡೆಗೆ ಹೆಚ್ಚು ಒಲಿದಿದ್ದ ಟಿ.ಶಶಿಧರ್ ಅನೇಕ ಕವಿತೆಗಳನ್ನು ಕೂಡಾ ಬರೆದಿದ್ದಾರೆ. “ಸಂವಿಧಾನ ಕೊಟ್ಟ ಬಾಬಾ ಸಾಹೇಬ” ಎಂಬ ಕವಿತೆಯಲ್ಲಿ ಮೌಲ್ಯಹೀನ ರಾಜಕಾರಣಿಗಳನ್ನು ಕುರಿತು, ‘ಓಟು ಕೇಳುವಾಗ ಕೈಕಾಲು ಹಿಡಿತಾರೆ, ಗೆದ್ದ ಮೇಲೆ ಎದೆಗೆ ಒದಿತಾರೆ’ ಎಂದು ಲೇವಡಿ ಮಾಡಿದ್ದಾರೆ. ‘ಹೊಟ್ಟೆಗೆ ಹಿಟ್ಟಿಲ್ಲ. ಮೈತುಂಬ ಬಟ್ಟೆ ಇಲ್ಲ. ಅಕ್ಷರ ಕಲಿತ ಮಕ್ಕಳು ನಿರುದ್ಯೋಗಿಯಾಗ್ಯಾರೆ. ಉದ್ಯೋಗ ಹಿಡಿದವರು ನಿದ್ದೆಯಲ್ಲಿದ್ದಾರೆ ಬಾಬಾ ಸಾಹೇಬ’ ಎಂದು ಯುವಜನರ ನಿರುದ್ಯೋಗ ಸಮಸ್ಯೆ ಮತ್ತು ಸಮಾಜದ ಋಣ ಸಂದಾಯ ಮಾಡದಿರುವ ನೌಕರಶಾಹಿಯನ್ನು ಕುರಿತು ತೀವ್ರವಾದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಧರ್ಮದ ಹೆಸರಿನಲ್ಲಿ ದೌರ್ಜನ್ಯ ಮಾಡ್ತಾರೆ. ರಾಮ ರಹೀಮರ ಹೆಸರಿನಲ್ಲಿ ಧರ್ಮದ್ರೋಹದ ಕೆಲಸ… ನಮ್ಮ ಕಣ್ಣೀರು ಒರೆಸಲು ಮತ್ತೆ ಹುಟ್ಟಿ ಬನ್ನಿ ಬಾಬಾ ಸಾಹೇಬ’ ಎಂದು ಬಾಬಾ ಸಾಹೇಬರು ಮತ್ತೊಮ್ಮೆ ಹುಟ್ಟಿ ಬರಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ.
‘ಹಿಂದೂ ನಾವೆಲ್ಲರೂ ಒಂದು’ ಹೇಳುವ ಜಾತಿವಾದಿಗಳ ಆಷಾಢಭೂತಿಯನ್ನು ಮತ್ತೊಂದು ಕವಿತೆಯಲ್ಲಿ ವಿಡಂಬನೆ ಮಾಡಿರುವ ಟಿ.ಶಶಿಧರ್,
‘ಬೋಧಿಸುವುದೆಲ್ಲಾ ಹುಸಿ ಶ್ರೇಷ್ಠತೆ
ಬುದ್ಧ ಬಸವಣ್ಣನನ್ನು ಸಹಿಸಲಿಲ್ಲ
ಪೆರಿಯಾರ್ ಫುಲೆಯನ್ನು ಒಪ್ಪಲಿಲ್ಲ
ಇನ್ನು ಗೌರಿ ಕಲ್ಬುರ್ಗಿ ದಾಬೋಲ್ಕರ್ ಪನ್ಸಾರೆಯನ್ನಂತೂ ಬದುಕಲು ಬಿಡಲೇ ಇಲ್ಲ
ದಯವಿಲ್ಲದ ಧರ್ಮ ಅದಾವುದಯ್ಯಾ ? ಎಂದರು ಬಸವಣ್ಣ
ಹರಳಯ್ಯ ಮಧುವರಸರ ಕುಟುಂಬವನ್ನು ಕೊಂದನು ಕೊಂಡೇಯ ಮಂಚಣ್ಣ !
ರಘುಪತಿ ರಾಘವ ರಾಜಾರಾಂ
ಗುಂಡಿಕ್ಕಿ ಕೊಂದನು ಭಯೋತ್ಪಾದಕ ನಾಥೂರಾಂ !
ಬುದ್ಧನ ಭೂಮಿಯಲ್ಲಿ ನಿಂತಿದೆ ಕೋಮುವಾದ
ವಿವೇಕಾನಂದರ ನಾಡಿನಲ್ಲಿ ನರ್ತಿಸುತ್ತಿದೆ ಜಾತಿವಾದ’ ಎಂದು ಮನುವಾದಿಗಳು ಲಾಗಾಯ್ತಿನಿಂದಲೂ ಪ್ರಗತಿಪರರ ವಿರುದ್ಧ ಎಸಗಿದ ಕ್ರೌರ್ಯವನ್ನು ಮನಗಾಣಿಸಿದ್ದಾರೆ.
‘ಸಿರಿವಂತರ ಚಲ್ಲಾಟ ಬಡವರ ಗೋಳಾಟ’, ‘ತುತ್ತು ಅನ್ನ ಸಿಗದೆ ಉಪವಾಸ ಸತ್ತವರು ಯಾರಯ್ಯ?’, ‘ಅನ್ನದ ಬೆಲೆ ಅರಿಯದವನು’ ಮುಂತಾದ ಕವಿತೆಗಳು ಮತ್ತು ಕವಿತೆಗಳಿಗೆ ಕೊಟ್ಟಿರುವ ಶೀರ್ಷಿಕೆಗಳೇ ಟಿ.ಶಶಿಧರ್ ಒಬ್ಬ ಮಾನವತಾವಾದಿ ಎಂಬುದಕ್ಕೆ ಸಾಕ್ಷಿಯಾಗಿವೆ.
ಬಲಪಂಥೀಯ ಚಿಂತನಾಧಾರೆಯ RSS ಸಂಘಟನೆಯ ಶೂದ್ರರ ವೇದಿಕೆಯಾಗಿರುವ ಭಜರಂಗದಳದ ನಾಯಕನಾಗಿದ್ದ ಮಹೇಂದ್ರಕುಮಾರ್ ಅವರು ಭಜರಂಗದಳವನ್ನು ತೊರೆದು ‘ನಮ್ಮ ಧ್ವನಿ’ ಎಂಬ ಜಾತ್ಯತೀತ ಯುವ ವೇದಿಕೆಯನ್ನು ಸ್ಥಾಪಿಸಿದಾಗ ಟಿ.ಶಶಿಧರ್ ಅವರು ಬಹುವಾಗಿ ಮೆಚ್ಚಿಕೊಂಡು ಸ್ವಾಗತಿಸಿದರು.
ಜಾತಿವಾರು ಜನಸಂಖ್ಯೆಯ ಆಧಾರದ ಮೇಲೆ ದೇಶದ ಸಂಪತ್ತು ಮತ್ತು ಅಧಿಕಾರಗಳು ಸಮಾನವಾಗಿ ಹಂಚಿಕೆಯಾಗಬೇಕೆಂದು, ಹಾಗಾದಾಗ ಮಾತ್ರ ಸಾಮಾಜಿಕ ನ್ಯಾಯದ ಅನುಷ್ಠಾನ ಸಾಧ್ಯವೆಂದು ಶಶಿಧರ್ ಅವರು ಬಲವಾಗಿ ನಂಬಿದ್ದರು. ಕಾಂಗ್ರೆಸ್ ಪಕ್ಷದ ಒಬ್ಬ ಸಕ್ರಿಯ ಕಾರ್ಯಕರ್ತನಾಗಿ, ಪಾತಕ ಮತ್ತು ಭ್ರಷ್ಟಾಚಾರ ರಹಿತವಾದ ರಾಜಕಾರಣ ಸಾಧ್ಯವಾಗಬೇಕೆಂದು ಬಯಸಿದ್ದರು. ಮಾತ್ರವಲ್ಲದೆ ಶಕ್ತಿ ರಾಜಕಾರಣಕ್ಕಿಂತಲೂ ಸಾಂಸ್ಕೃತಿಕ ರಾಜಕಾರಣದಲ್ಲಿ ಬಲವಾದ ನಂಬಿಕೆ ಇರಿಸಿಕೊಂಡಿದ್ದರು. ತನ್ನದೇ ಆದ ಸ್ವತಂತ್ರ ಪತ್ರಿಕೆಯೊಂದನ್ನು ಪ್ರಾರಂಭಿಸಬೇಕೆಂಬ ಮಹದಾಸೆ ಇರಿಸಿಕೊಂಡಿದ್ದ ಟಿ.ಶಶಿಧರ್ ಕರ್ನಾಟಕದ ಭರವಸೆಯ ರಾಜಕೀಯ ನಾಯಕನಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳಿದ್ದವು. ಇಂತಹ ಶಶಿಧರ್ ಅಕಾಲಿಕವಾಗಿ ಕಾಲನ ಕರೆಗೆ ಓಗೊಟ್ಟು ನಮ್ಮನ್ನು ಪ್ರಯಾಣದ ದಾರಿಯ ನಡುವೆಯೇ ಬಿಟ್ಟುಹೋಗಿದ್ದಾರೆ. ಅವರ ಆಶಯಗಳನ್ನು ಸಾಕಾರಗೊಳಿಸುವ ಎಚ್ಚರದ ಪ್ರಯತ್ನವಾಗಿ ಅಪಾರ ಗೆಳೆಯರು ಮತ್ತು ಬಂಧು ವರ್ಗದವರು ಶಶಿಧರ್ ಅವರ ಸ್ಮರಣ ಸಂಚಿಕೆಯನ್ನು ಹೊರತರುತ್ತಿರುವುದು ಸಂತೋಷದ ಸಂಗತಿ.
ಜೈ ಭೀಮ್ ನಮೋ ಬುದ್ಧಾಯ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು



