ಚಾಮರಾಜನಗರ: ಜಿಲ್ಲೆಯು ಜಾನಪದ ಕಲೆಗಳ ಕಣಜ. ಇಲ್ಲಿನ ಜಾನಪದ ಸಾಹಿತ್ಯ ಸಂವೇದನೆಗಳು ಸಂಸ್ಕೃತಿ ಅಧ್ಯಯನಕ್ಕೆ ಹೆಚ್ಚಿನ ಅವಕಾಶವಿದೆ. ಇಂಥ ಅರ್ಥಪೂರ್ಣ ಅಧ್ಯಯನಕ್ಕೆ ಪೂರಕವಾಗಿ ಪುನ್ನಾಡು ಸಾಹಿತ್ಯ ಸಂಶೋಧನಾ ಗ್ರಂಥ ಹೊರ ಬರಲಿ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ .ಎಂ ಆರ್ ಗಂಗಾಧರ್ ಅಭಿಪ್ರಾಯಪಟ್ಟರು.
ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ರಂಗವಾಹಿನಿ ಸಂಸ್ಥೆ ಏರ್ಪಡಿಸಿದ್ದ ಪುನ್ನಾಡು ಸಾಹಿತ್ಯ ಮೇಳ ಸಮಾರೋಪದಲ್ಲಿ ಮಾತನಾಡಿದ ಅವರು, ಜಾನಪದದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಇಂದು ಬಹುತೇಕ ಕಡಿಮೆಯಾಗಿದೆ. ಜಾನಪದದ ಹೊಸ ಹೊಸ ಸಂಗತಿಗಳ ಶೋಧ ಆರಂಭವಾಗಿದೆ. ಮುಂದಿನ ತಲೆಮಾರಿಗೆ ಇತಿಹಾಸ ತಿಳಿದುಕೊಳ್ಳಲು ಇಂತಹ ಸಂಶೋಧನಾ ಗ್ರಂಥಗಳು ಸಹಕಾರಿಯಾಗುತ್ತದೆ. ಆದುದರಿಂದ ಇಂತಹ ಸಂಶೋಧನಾ ಗ್ರಂಥಗಳ ಪ್ರಕಟಣೆಗೆ ನಮ್ಮ ವಿಶ್ವವಿದ್ಯಾಲಯವು ಎಲ್ಲಾ ರೀತಿಯ ನೆರವು ನೀಡಲಿದೆ. ಈ ನಿಟ್ಟಿನಲ್ಲಿ ಪುನ್ನಾಡು ಸಾಹಿತ್ಯ ಮೇಳ ಒಂದು ವಿಭಿನ್ನ ಕಾರ್ಯಕ್ರಮವಾಗಿದೆ. ಇದನ್ನು ಆಯೋಜಿಸಿದ ಕರ್ನಾಟಕ ಜಾನಪದ ಪರಿಷತ್ತು ಮತ್ತು ರಂಗವಾಹಿನಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪ ನಿರ್ದೇಶಕ ಕಾಶಿನಾಥ ಮಾತನಾಡಿ, ಮಲೆ ಮಹದೇಶ್ವರ ಮಂಟೇಸ್ವಾಮಿ ರಾಚಪ್ಪಾಜಿ ಬಿಳಿಗಿರಿರಂಗನಾಥ ಸ್ವಾಮಿ ಮೊದಲಾದ ಪವಾಡ ಪುರುಷರು ಜಿಲ್ಲೆಯಲ್ಲಿ ನೆಲೆಸಿರುವುದರಿಂದ ವಿಭಿನ್ನ ಜಾನಪದ ಕಾವ್ಯಗಳಿಗೆ ಸ್ಪೂರ್ತಿಯಾಗಿದ್ದಾರೆ. ಇಲ್ಲಿನ ಗೊರವರ ಕುಣಿತ ಕಂಸಾಳೆ ವೀರಗಾಸೆ ಜಾನಪದ ಕಲೆಗಳು ಧಾರ್ಮಿಕ ಹಿನ್ನೆಲೆಯಲ್ಲಿ ರೂಪ ತಳೆದು ಜಿಲ್ಲೆಯು ಜಾನಪದ ಕಲೆಗಳ ತವರೂರು ಆಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ನವೆಂಬರ್ ತಿಂಗಳಿನಲ್ಲಿ ಚಾಮರಾಜನಗರ ಜಿಲ್ಲೆಯ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನವೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಕನ್ನಡದ ವರನಟ ಡಾ. ರಾಜಕುಮಾರ್ ನಾಟಕೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಜಾನಪದ ಪರಿಷತ್ತು ಹಾಗೂ ರಂಗವಾಹಿನಿ ಸಂಸ್ಥೆಯ ಜಿಲ್ಲಾಧ್ಯಕ್ಷ ಸಿಎಂ ನರಸಿಂಹಮೂರ್ತಿ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೆ ಅರಸ್, ಕಲ್ಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್, ಸಾಹಿತಿಗಳಾದ ಡಾ. ರಾಜಶೇಖರ್ ಜಮದಂಡಿ ಡಾ ಶಿವರಾಜು ಬೂದಿತಿಟ್ಟು ಕೆ ಶ್ರೀಧರ್, ಹರವೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹೇಶ್ ಹರವೆ ನಗರಸಭಾ ಸದಸ್ಯೆ ಚಿನ್ನಮ್ಮ ಸಿದ್ದರಾಮಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೀಲಗಾರರಾದ ನಿಂಗಶೆಟ್ಟಿ, ದೊಡ್ಡಗವಿಬಸಪ್ಪ, ಯುವ ನೀಲಗಾರ ಕಲಾವಿದ ಕೈಲಾಸ ಮೂರ್ತಿ, ತತ್ವಪದ ಗಾಯಕ ರಾಚಯ್ಯ, ಮಂಡ್ಯದ ಕೀಲಾರ ಕೃಷ್ಣೇಗೌಡ ಮೊದಲಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪುನ್ನಾಡು ಸಾಹಿತ್ಯ ಮೇಳದಲ್ಲಿ ಭಾಗವಹಿಸಿದ್ದ ಕನ್ನಡ ಉಪನ್ಯಾಸಕರು, ಅಧ್ಯಾಪಕರು, ಜಾನಪದ ಕಲಾವಿದರು ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.




