ಚಾಮರಾಜನಗರ: ಜನಪದ ಎಂದಿಗೂ ಜೀವ ಪರವಾಗಿದ್ದು, ಜನರ ಜೊತೆಗೆ ಅದು ಬೆಳೆಯುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ. ಕೆ ರಾಮೇಶ್ವರಪ್ಪ ಅಭಿಪ್ರಾಯಪಟ್ಟರು.
ಹರವೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಚಾಮರಾಜನಗರ ಜಿಲ್ಲಾ ಘಟಕ ಮತ್ತು ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು ಕೌಟುಂಬಿಕ ಜೀವನವನ್ನು ಸಂಬಂಧಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ ಎಂದರು.
ಈ ಜನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ .ಇವು ಸಾಮಾನ್ಯ ಜನರ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿಯೇ ಜಾನಪದ ಗೀತೆಗಳಾಗಿವೆ. ಜನಪದ ಜ್ಞಾನ ಅಗಾಧವಾಗಿದ್ದು, ನಮ್ಮ ಪೂರ್ವಜರ ಅಧ್ಯಯನ ಜ್ಞಾನವನ್ನು ಜಾನಪದ ತಿಳಿಸುತ್ತದೆ. ಜಾನಪದ ಎಂದರೆ ಕೇವಲ ಹಾಡು ಕುಣಿತ ಗಾದೆ ಒಗಟು ಅಲ್ಲ ಒಟ್ಟಾರೆ ನಮ್ಮ ಬದುಕಿನ ತಿಳುವಳಿಕೆಯೇ ಜನಪದ ಎಂದು ಹೇಳಿದರು.
ಪ್ರಾಸ್ತವಿಕ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಬ್ರೆಜಿಲ್ ಸರ್ಕಾರ ಆಗಸ್ಟ್ 22ರನ್ನು 1965ರ ಆಗಸ್ಟ್ 17ರಂದು ಅಧಿಕೃತವಾಗಿ ಘೋಷಿಸಿತು. ಅಲ್ಲಿಂದ ಪ್ರತಿವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯು ಜಾನಪದ, ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ಮನುಷ್ಯ ಸುಸಂಸ್ಕೃತನಾಗಬೇಕಾದರೆ ಕಲೆ ಜೊತೆಗೆ ಸಾಹಿತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹೇಶ್ ಹರವೆ ಮಾತನಾಡಿ, ಮಲೆ ಮಹದೇಶ್ವರ, ಮಂಟೇಸ್ವಾಮಿ ನೆಲೆಸಿರುವ ಚಾಮರಾಜನಗರ ಜಿಲ್ಲೆ ಪುಣ್ಯಭೂಮಿಯಾಗಿದೆ. ವಿದ್ಯಾರ್ಥಿ ಯುವ ಸಮುದಾಯವು ನಮ್ಮ ಪಠ್ಯದ ಜೊತೆಗೆ ಜನಪದ ಕಲೆ ಸಾಹಿತ್ಯವನ್ನು ಹೆಚ್ಚಾಗಿ ಓದಬೇಕು. ಜೊತೆಗೆ ಶಿಸ್ತು ಸಂಯಮ ಸಹನೆಯನ್ನು ಬೆಳೆಸಿಕೊಂಡರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂದರು.
ಜಾನಪದ ಕಲೆಗೆ ತಮ್ಮದೇ ಕೊಡುಗೆ ನೀಡಿದ 90 ವರ್ಷದ ಹಿರಿಯ ಜಾನಪದ ತಾಳವಾದ್ಯ ಕಲಾವಿದ ಗುರುಸಿದ್ದಪ್ಪ ಅವರನ್ನು ಮೈಸೂರು ಪೇಟ ತೊಡಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಮಾಜ ಸೇವಕ ವೆಂಕಟೇಶ್ ಕೆರೆಹಳ್ಳಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಉಪನ್ಯಾಸಕರುಗಳಾದ ಎಲ್. ಮಹದೇವಪ್ಪ, ನಾಗಮಲ್ಲಪ್ಪ, ಎಸ್.ಪ್ರಸಾದ್, ಶಿವಕುಮಾರ, ಸೌಗಂಧಿ, ಸುಚಿತ್ರ, ಸುನಂದ ಉಪಸ್ಥಿತರಿದ್ದರು. ಜಾನಪದ ಗೀತೆಗಳನ್ನು ಗಾಯಕರು ಹಾಡಿದರು. ವಿದ್ಯಾರ್ಥಿಗಳಿಗೆ ಒಗಟು ಗಾದೆ ಕುರಿತು ರಸಪ್ರಶ್ನೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಕೊನೆಯಲ್ಲಿ ಸಿಹಿ ವಿತರಿಸಲಾಯಿತು.




