_ಸಂಗಾತಿ ನಿಮಗಿದೋ ಹುಟ್ಟು ಹಬ್ಬದ ಶುಭಾಶಯಗಳು_
1999ರ ಕಾಲಾವಧಿ….SFI ನ ಅಖಿಲ ಭಾರತ ಸಮ್ಮೇಳನ ಚೆನ್ನೈನಲ್ಲಿ ಜರುಗಿತ್ತು. ಮೊದಲ ದಿನವೇ ಮರೀನಾ ಬೀಚ್ ನಲ್ಲಿ ಸಾರ್ವಜನಿಕ ಸಭೆಯು ನಡೆಯಿತು. ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆದು ಸಭೆ ಇನ್ನೇನು ಪ್ರಾರಂಭವಾಗಬೇಕು ಎನ್ನುವಾಗ ಸಂಜೆ 7 ಗಂಟೆ ಕಳೆದಿತ್ತು. ಸಭೆಯಲ್ಲಿ ವಿದ್ಯಾರ್ಥಿಗಳು, ಯುವಜನರು ಹಾಗೂ ವಿದ್ಯಾರ್ಥಿಗಳ ಸಮ್ಮೇಳನಕ್ಕೆ ಬೆಂಬಲ ನೀಡಿ ಬಂದಂತಹ ರೈತ ಕಾರ್ಮಿಕರು, ಮಹಿಳೆಯರು ಎಲ್ಲಾ ಸೇರಿ 2 ಲಕ್ಷದಷ್ಟು ಜನ ಸೇರಿದ್ದರು. ಅಷ್ಟು ಜನರನ್ನು ನೋಡಿದ್ದೇ ನನಗೆ ಸೋಜಿಗವಾಯಿತು.
1996ರಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಜರುಗಿದ SFI ಸಮ್ಮೇಳನದ ಬಹಿರಂಗ ಸಭೆಯಲ್ಲಿ ಲಕ್ಷಾಂತರ ಜನ ಸೇರಿದ್ದು ಬಿಟ್ಟರೆ ಮತ್ತೆ ನೋಡಿದ್ದು ಇದೇ ಜನ ಸಾಗರ. ನಾಯಕರ ಭಾಷಣ ಅದಾಗಲೇ ಪ್ರಾರಂಭಗೊಂಡಿತು.10 ಗಂಟೆ ಕಳೆದರೂ ಜನ ಮಾತ್ರ ಕದಲಲಿಲ್ಲ. ನನಗಂತೂ ತುಂಬಾ ಆಶ್ಚರ್ಯವಾಯಿತು. ವಿಷಯ ಏನು ಅಂತ ಅತ್ಯಂತ ಆಸಕ್ತಿದಾಯಕವಾಗಿ ನಮ್ಮ ಮುಖಂಡರನ್ನು ಕೇಳಿದೆ. ಅದಕ್ಕೆ ಬಂದ ಉತ್ತರ….. ಕಾ. ಎನ್ ಶಂಕರಯ್ಯ CPIM ತಮಿಳುನಾಡು ರಾಜ್ಯ ಕಾರ್ಯದರ್ಶಿ. ಅತ್ಯಂತ ಪ್ರಭಾವಶಾಲಿ ನಾಯಕರು. ತಮಿಳುನಾಡಿನಲ್ಲಿ ಎಲ್ಲಾ ವರ್ಗದ ಜನತೆಯ ಪ್ರೀತಿಪಾತ್ರರಾದವರು. ಅವರು ಈ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರು. ಅವರನ್ನು ನೋಡಲು ಹಾಗೂ ಅವರ ಆಕರ್ಷಕ ಶೈಲಿಯ ಭಾಷಣ ಕೇಳಲು ಸ್ವಯಂಪ್ರೇರಿತರಾಗಿ ಅತ್ಯಂತ ದೂರದ ಊರುಗಳಿಂದ ಬರುವಂಥದ್ದು ಇಲ್ಲಿನ ವಾಡಿಕೆ. ಅದಕ್ಕಾಗಿ ಜನ ಅವರ ಬರುವಿಕೆಗಾಗಿ ಕಾಯುತ್ತಾ ಇದ್ದಾರೆ ಎಂದಾಗ ನನಗೆ ನಿಜಕ್ಕೂ ರೋಮಾಂಚನವಾಯಿತು.
ಅಬ್ಬಾ…..ಇಂತಹ ನಾಯಕರಿವರು….ಕೊನೆಗೆ ಅವರು ಬಂದೇ ಬಿಟ್ಟರು. ಆಗ ಸಮಯ 10.30 ಆಗಿತ್ತು. ಸೇರಿದ್ದ ಇಡೀ ಜನಸಾಗರ ಅವರನ್ನು ಅತ್ಯಂತ ಕರತಾಡನದಿಂದ ಸ್ವಾಗತಿಸಿತು. ಭಾಷಣ ಪ್ರಾರಂಭವಾಯಿತು. 30 ನಿಮಿಷಗಳ ಕಾಲ ಭಾಷಣ ಮಾಡಿದರು. ಕ್ಷಣಕ್ಷಣಕ್ಕೂ ಪ್ರತಿಯೊಂದು ಮಾತಿಗೂ ಸೇರಿದ್ದ ಜನ ಪ್ರತಿಕ್ರಿಯೆ ನೀಡಿದ್ದು ನೋಡಿ ಕಾ.ಎನ್ ಶಂಕರಯ್ಯರವರ ಆಕರ್ಷಕ ವ್ಯಕ್ತಿತ್ವ, ಧೈರ್ಯಶಾಲಿ, ನಾಯಕತ್ವ ಗುಣ ನನ್ನಂತಹ ಸಾಮಾನ್ಯ ಕಾರ್ಯಕರ್ತರಿಗೆ ಸ್ಫೂರ್ತಿಯಾಯಿತು.
_ಕಾ. ಎನ್ ಶಂಕರಯ್ಯ ಇನ್ನಷ್ಟು ಕಾಲ ಸುಖವಾಗಿ ಬಾಳಬೇಕು…_
ಲಾಲ್ ಸಲಾಂ ಕಾಮ್ರೇಡ್…..
– ಸುನಿಲ್ ಕುಮಾರ್ ಬಜಾಲ್




