ಬೆಂಗಳೂರು: ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ನಿವೇಶನದಾರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
ಬೆಂಗಳೂರಿನ ಮಾದರಿಯಲ್ಲಿ ಇತರೆ ನಗರಪ್ರದೇಶದ ಸ್ವತ್ತುಗಳಿಗೆ ಬಿ ಖಾತಾ ನೀಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ನ.ಹರೀಶ್‍ಗೌಡ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ರಹಿಂಖಾನ್ ಉತ್ತರಿಸುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಅವರು, ಬೆಂಗಳೂರಿನಲ್ಲಿ ಭೂ ಪರಿವರ್ತನೆಯಾದ ನಿವೇಶನ ಮತ್ತು ಕಟ್ಟಡಗಳಿಗೆ ಎ ಖಾತೆ, ಭೂ ಪರಿವರ್ತನೆಯಾಗದ ಸ್ವತ್ತುಗಳಿಗೆ ಬಿ ಖಾತೆ ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತೆಗೆ ಅವಕಾಶ ಕಲ್ಪಿಸಿದರೆ ಸರ್ಕಾರಕ್ಕೂ ಎರಡು ಸಾವಿರ ಕೋಟಿ ಆದಾಯ ಬರಲಿದೆ ಎಂದರು.
ಈ ಸಂಬಂಧ ಪೌರಾಡಳಿತ ಸಚಿವರ ಜತೆ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖಾತೆ ಬಿಕ್ಕಟ್ಟು ಇರುವುದರಿಂದ ಬಹಳಷ್ಟು ನಗರ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಇಲ್ಲದಾಗಿದೆ. ಇದರಿಂದ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿದರೂ ಆದಾಯ ಬರುತ್ತಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಉತ್ತರ ನೀಡಿದ ಪೌರಾಡಳಿತ ಸಚಿವ ರಹಿಂಖಾನ್, ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ 81 ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿವೆ. ಗ್ರಾಮಾಂತರ, ನಗರ ಯೋಜನಾ ಕಚೇರಿಯಿಂದ ಅನುಮೋದನೆಗೊಂಡ ಬಡಾವಣೆ ಗ್ರಾಮಠಾಣಾ ನಿವೇಶನಗಳಿಗೆ ನಮೂನೆ -3ಅನ್ನು ನೀಡಲಾಗುತ್ತಿದೆ. ಯೋಜನಾ ಇಲಾಖೆಯಿಂದ ಅನುಮೋದನೆಯಾಗದ ಬಡಾವಣೆಗಳಿಗೆ 2018ರ ಜನವರಿ 5ರಿಂದ ನಮೂನೆ-3ಅನ್ನು ನೀಡಲು ಅವಕಾಶವಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳಿಗೆ ಎರಡು ಪಟ್ಟು ತೆರಿಗೆ ಶುಲ್ಕ ಪಾವತಿಸಿಕೊಂಡು ಕುಡಿಯುವ ನೀರು, ಬಿದಿ ದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ನಮೂನೆ -3 ನೀಡುವ ವಿಚಾರ ಲೋಕಾಯುಕ್ತದಲ್ಲಿ ಕೇಸು ದಾಖಾಗಿದ್ದು, ಹೊಸದಾಗಿ ಕೊಡಬಾರದು ಹಾಗೂ ಈಗಾಗಲೇ ಕೊಟ್ಟಿರುವುದನ್ನು ರದ್ದುಪಡಿಸಬೇಕೆಂಬ ನಿರ್ದೇಶನವಿದೆ. ಅಕ್ರಮ-ಸಕ್ರಮ ಯೋಜನೆಗೂ ನ್ಯಾಯಾಲಯದ ತಡೆಯಜ್ಞೆ ಇದೆ. ಇದು ಒಂದು ಕ್ಷೇತ್ರಕ್ಕೆ ಸೀಮಿತವಿಲ್ಲ. ನನ್ನ ಕ್ಷೇತ್ರವೂ ಸೇರಿದಂತೆ ಎಲ್ಲಾ ಕಡೆ ಸಮಸ್ಯೆ ಇದೆ. ಸಂಪುಟ ಉಪ ಸಮಿತಿ ರಚಿಸಿ ಪರಿಹಾರ ಕಲ್ಪಿಸುವ ಮಾಡಲಾಗುವುದು ಎಂದರು.




