ಬೆಂಗಳೂರು: ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಕಬ್ಬಿನ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂಬ ದೂರು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಹಾಕುವ ಚಿಂತನೆ ಇದೇ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ರಾಜೂ ಕಾಗೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾರ್ಖಾನೆಗಳಲ್ಲಿ ರೈತರ ಕಬ್ಬನ್ನು ತೂಕ ಮಾಡುವಾಗ ವ್ಯತ್ಯಾಸ ಮಾಡಲಾಗುತ್ತಿದೆ ಎಂಬ ಸಾಕಷ್ಟು ದೂರುಗಳು ಇವೆ. ಆದರೆ ನಿರ್ದಿಷ್ಟವಾಗಿ ಯಾರೂ ದೂರು ಕೊಟ್ಟಿಲ್ಲ. ಆದರೂ ನಮ್ಮ ಇಲಾಖೆಯಿಂದ ತೂಕದ ಯಂತ್ರ ಅಳವಡಿಸಿ ರೈತರಿಗೆ ವಂಚನೆಯಾಗದಂತೆ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದೆ ಎಂದರು.
ಕಾನೂನು ಕ್ರಮ: ಬೆಳಗಾವಿಯ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ, ಉಗಾರ್ ಹಾಗೂ ಅಥಣಿ ಶುಗರ್ ಕಾರ್ಖಾನೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘಿಸಿದ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಅಥಣಿ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ. ಉಗಾರ್ ಸಕ್ಕರೆ ಕಾರ್ಖಾನೆ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕರಣ ದಾಖಲಿಸಿದೆ. ಆ ಕಾರ್ಖಾನೆ ಮಾಲಿನ್ಯ ಉಂಟು ಮಾಡಿರುವುದು ದೃಢಪಟ್ಟರೆ ಕಾನೂನು ಪ್ರಕಾರ ಶಿಕ್ಷೆ ಹಾಗೂ ದಂಡವೂ ವಿಧಿಸಲಾಗುತ್ತದೆ ಎಂದು ವಿವರಿಸಿದರು.
ಕೆಲವು ಸಕ್ಕರೆ ಕಾರ್ಖಾನೆಗಳಿಂದ ಜಲ ಮಾಲಿನ್ಯವಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜತೆ ಚರ್ಚಿಸಲಾಗಿದೆ. ತಾವು ನಾಳೆಯೇ ಸ್ಥಳ ಪರಿಶೀಲನೆ ಮಾಡುತ್ತಿದ್ದೇನೆ. ಈ ವೇಳೆ ಉಲ್ಲಂಘನೆ ಧೃಡಪಟ್ಟರೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಲಕ್ಷ್ಮಣ ಸವದಿ, ಸಕ್ಕರೆ ಕಾರ್ಖಾನೆಗಳಲ್ಲಿ ಇಲಾಖೆಯಿಂದ ತೂಕದ ಯಂತ್ರ ಅಳವಡಿಸುಚ ಚಿಂತನೆ ಸ್ವಾಗತಾರ್ಹ ಎಂದು ತಿಳಿಸಿದರು.
ಜವಳಿ ಪಾರ್ಕ್: ಬಿಜೆಪಿಯ ಸುನಿಲ್ ಕುಮಾರ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ನಿರ್ಮಾಣಗೊಳ್ಳುವ ಜವಳಿ ಪಾರ್ಕ್‍ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು ಅನಿವಾರ್ಯ ಎಂದು ಹೇಳಿದರು.
ಜವಳಿ ಪಾರ್ಕ್ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವ ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಏಳು ಜವಳಿ ಪಾರ್ಕ್‍ಗಳನ್ನು ತಲಾ ಸಾವಿರ ಎಕರೆ ಸಾಮರ್ಥ್ಯದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಅದಕ್ಕೂ ಕೂಡ ಖಾಸಗಿ ಸಹಭಾಗಿತ್ವವನ್ನೇ ಆಶ್ರಯಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಕಳದಲ್ಲಿ ಜವಳಿ ಪಾರ್ಕಿಗೆ ಮಾಸ್ಟರ್ ಡೆವಲಪರ್‍ಗಳೊಂದಿಗೆ ಚರ್ಚಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.




