ಬೆಂಗಳೂರು: ರಾಜ್ಯದ ಯಾವ ಶಾಸಕರೂ ಏಕಪತ್ನಿವ್ರತಸ್ಥರಲ್ಲ ಎಂಬ ಸಚಿವ ಡಾ.ಸುಧಾಕರ್ ಹೇಳಿಕೆ ಬಿಜೆಪಿ ಶಾಸಕರಿಗೂ ಅನ್ವಯವಾಗುವ ಕಾರಣ ಅವರೆಲ್ಲರೂ ತಕ್ಷಣ ಸ್ಪಷ್ಟೀಕರಣ ನೀಡಿ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಏಕಪತ್ನಿವ್ರತಸ್ಥರಲ್ಲ ಎಂಬ ಹೇಳಿಕೆಯನ್ನು ಬಿಜೆಪಿ ಶಾಸಕರು ವಿರೋಧಿಸುವುದಾಗಿದ್ದರೆ ನಮ್ಮ ಪಕ್ಷದ ಶಾಸಕರೆಲ್ಲರೂ ಸ್ವಇಚ್ಛೆಯಿಂದ ತನಿಖೆಗೆ ಒಳಪಡಲು ನಿರ್ಧರಿಸಿದಂತೆ ಅವರೂ ಕೂಡಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ಬಗ್ಗೆ ಕೂಡಾ ತನಿಖೆ ನಡೆಯಬೇಕೆಂದು ಮನವಿ ಮಾಡಬೇಕು ಎಂದಿದ್ದಾರೆ.
ಡಾ.ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಳ್ಳುವುದಾದರೆ ರಾಜ್ಯ ಸರ್ಕಾರ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 494 ಮತ್ತು 495ರ ಅನ್ವಯ ಕಾನೂನು ಕ್ರಮಕೈಗೊಳ್ಳಬೇಕು. 1955ರ ಹಿಂದೂ ವಿವಾಹ ಕಾಯ್ದೆಯಡಿ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧವಾಗಿದೆ ಎಂದಿದ್ದಾರೆ.




