ಬೆಂಗಳೂರು: ಸ್ಲಂ ನಿವಾಸಿಗಳಿಗೆ ಮಂಡಳಿ ಪರಿಚಯ ಪತ್ರ ನೀಡಲಾಗುತ್ತಿತ್ತು. ಇದೀಗ ಅವರು ಸಬ್ ರಿಜಿಸ್ಟಾರ್ ಕಛೇರಿಯಲ್ಲಿ ಅವರ ಮನೆಗಳನ್ನು ನೋಂದಣಿ ಮಾಡಿಕೊಳ್ಳಲು ನಿರ್ಣಯ ತಂದು ಜಾರಿಗೆ ತರಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಇದು ಭಾರತ ದೇಶದಲ್ಲಿ ಮೊದಲು. ಇದಕ್ಕೆ ಪೇರಣೆ ನೀಡಿದ ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿರವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಕ್ಕುಪತ್ರ ನೋಂದಣಿ ಶುಲ್ಕ ನಗರ ಪ್ರದೇಶದಲ್ಲಿ ಸಾಮಾನ್ಯ ವರ್ಗಕ್ಕೆ 10 ಸಾವಿರದಿಂದ 4 ಸಾವಿರಕ್ಕೆ ಇಳಿಸಲಾಗಿದೆ ಮತ್ತು ಎಸ್.ಸಿ., ಎಸ್.ಟಿ. ಸಮುದಾಯಕ್ಕೆ 4 ಸಾವಿರದಿಂದ 2 ಸಾವಿರಕ್ಕೆ ಇಳಿಸಲಾಗಿದೆ .ಗ್ರಾಮಾಂತರ ಹಳ್ಳಿಗಳಲ್ಲಿ ಸಾಮಾನ್ಯ ವರ್ಗಕ್ಕೆ 2 ಸಾವಿರ ಮತ್ತು ಎಸ್.ಸಿ., ಎಸ್.ಟಿ. ಸಮುದಾಯಕ್ಕೆ 1 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಇದರಿಂದ ರಾಜ್ಯದಲ್ಲಿ 3 ಲಕ್ಷ ಕುಟುಂಬ 46 ಲಕ್ಷ ಜನರಿಗೆ ಉಪಯೋಗವಾಗಲಿದೆ ಎಂದು ಮಾಹಿತಿ ನೀಡಿದರು.
ಇಂದು ಭೂಮಿಗೆ ಲಕ್ಷಾಂತರ ಬೆಲೆ ಇದೆ. ಮನೆ ಮೇಲೆ ಸಾಲ ಮಾಡಬೇಡಿ ಮತ್ತು ಮಾರಾಟ ಮಾಡಬೇಡಿ. ಮನೆ ಕಟ್ಟಲು 5 ಲಕ್ಷ ರೂಪಾಯಿ ನೀಡುತ್ತಿದ್ದೇವೆ. 20×30ಜಾಗದಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿರಿ ಎಂದು ಸಲಹೆ ನೀಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಅನುದಾನದ ಅಡಿಯಲ್ಲಿ ಮನೆ ಕಟ್ಟಲು ಹಣ ಬಿಡುಗಡೆ ಚೆಕ್ಕುಗಳನ್ನು ವಿ.ಸೋಮಣ್ಣ ಫಲಾನುಭವಿಗಳಿಗೆ ವಿತರಿಸಿದರು.
ಗೋವಿಂದರಾಜನಗರ ಬಿ.ಜೆ.ಪಿ. ಮಂಡಲದ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಮಪ್ಪ, ವಾಗೀಶ್, ದಾಸೇಗೌಡ ಮತ್ತು ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.
