ಸರ್ಕಾರ ಬೀಳಿಸುವ ಮಾತಾಡುತ್ತಿರುವ ಕುಮಾರಸ್ವಾಮಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ತೆರೆದಿಟ್ಟಿದ್ದಾರೆ: ಎಚ್ ಸಿ ಮಹದೇವಪ್ಪ
ಬಿಜೆಪಿಗರ ದುರಾಡಳಿತಕ್ಕೆ ಬೇಸತ್ತು, ಕುಮಾರಸ್ವಾಮಿ ಅವರ ಸಿದ್ಧಾಂತವಿಲ್ಲದ ಇಬ್ಬಂದಿತನದಿಂದ ಕಂಗೆಟ್ಟು, ಜನಪರವಾದ ಸ್ಥಿರ ಸರ್ಕಾರ ಬೇಕೆಂದು 136 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮನಃಪೂರ್ವಕವಾಗಿ ಆಶೀರ್ವಾದ ಮಾಡಿದ ಸರ್ಕಾರವನ್ನು ಬೀಳಿಸುವ ಮಾತನ್ನು ಆಡುತ್ತಿರುವ ಕುಮಾರಸ್ವಾಮಿ ಅವರು ತಮ್ಮ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ನನಗೆ ಪೂರ್ಣ ಬಹುಮತ ನೀಡಿದರೆ ಒಳ್ಳೆಯ ಕೆಲಸ ಮಾಡುತ್ತೇನೆ ಎನ್ನುತ್ತಿದ್ದ ಕುಮಾರಸ್ವಾಮಿ ಅವರು ಸದ್ಯ ಜನರು ನೀಡಿರುವ ಬಹುಮತದ ತೀರ್ಪನ್ನು ಗೌರವಿಸದೇ ಮರೆತು ಮಾತನಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದವಾದ ಸಂಗತಿಯಾಗಿದೆ.
ಸರ್ಕಾರದ ಆಡಳಿತವು 3-4 ವರ್ಷ ಬಾಕಿ ಇರುವಾಗಲೇ ವಿಪರೀತ ಹತಾಶೆಯಿಂದ ಅಧಿಕಾರಕ್ಕಾಗಿ ಚಡಪಡಿಸುತ್ತಿರುವ ಕುಮಾರಸ್ವಾಮಿ ಅವರು ತಮ್ಮ ಅಸೂಕ್ಷ್ಮವಾದ ಮಾತುಗಳಿಂದ ರಾಜ್ಯದ ಜನರ ತೀರ್ಪನ್ನು ಅವಮಾನಿಸುತ್ತಿದ್ದಾರೆ.
ಅದರಲ್ಲೂ ಹಿಂದುಳಿದ ವರ್ಗಗಳ ಅಧಿಕಾರವನ್ನು ಯಾವ ಕಾರಣಕ್ಕೂ ಸಹಿಸಬಾರದು ಎಂಬ ಫ್ಯೂಡಲಿಸಂನ ಗುಣಕ್ಕೆ ತಕ್ಕನಾಗಿ ವರ್ತಿಸುತ್ತಿರುವ ಕುಮಾರಸ್ವಾಮಿ ಅವರು ತೆರೆಮರೆಯಲ್ಲಿ ಸ್ಥಿರ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿರಬಹುದು ಎಂಬ ಸಂಗತಿಯು ಅವರ ಮಾತುಗಳಿಂದಲೇ ತಿಳಿಯುತ್ತಿದೆ.
ಜನರ ಬದುಕಿಗೆ ಸಹಾಯ ಮಾಡುತ್ತಿರುವ ಸರ್ಕಾರದ ನಡೆಗಳನ್ನೂ ರಾಜಕೀಯ ಕಾರಣಕ್ಕಾಗಿ ಟೀಕಿಸುತ್ತಿರುವ ಕುಮಾರಸ್ವಾಮಿ ಅವರು ಒಂದುಕಡೆಯಾದರೆ ಭ್ರಷ್ಟಾಚಾರದಿಂದಲೇ ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿಗರು ಈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ನಾವು ಈ ಸರ್ಕಾರ ವಜಾಗೊಳಿಸಲು ರಾಷ್ಟ್ರಪತಿ ಅವರ ಬಳಿ ಹೋಗುತ್ತೇವೆ ಎಂದು ಹೇಳುತ್ತಿರುವುದು ಇನ್ನೊಂದು ತಮಾಷೆಯಾಗಿದೆ.
ಕೇಂದ್ರ ಮಂತ್ರಿಯಾಗಿ ಇದ್ದುಕೊಂಡು ದೇಶದ ಜನರಿಗೆ ಸಹಾಯ ಮಾಡಬೇಕಿರುವ ಕುಮಾರಸ್ವಾಮಿ ಅವರು ಹಲವು ಹೋರಾಟಗಳ ಫಲವಾಗಿ ಸ್ಥಗಿತಗೊಂಡ ಕುದುರೆಮುಖ ಗಣಿಗಾರಿಕೆಯ ಬಗ್ಗೆ ತೋರಿಸುತ್ತಿರುವ ಆಸಕ್ತಿ ನೋಡಿದರೆ ಇವರ ಆದ್ಯತೆಗಳು ಏನೆಂಬುದಕ್ಕೆ ಬಹಿರಂಗ ಪುರಾವೆಗಳು ದೊರೆಯುತ್ತವೆ.
ಆದರೆ ಜನಪರತೆಯ ಬಗ್ಗೆ ಸ್ಪಷ್ಟವಾದ ಕಲ್ಪನೆ ಉಳ್ಳ ನಮ್ಮ ಸರ್ಕಾರವು ಇಂತವರ ಬೇಜವಾಬ್ದಾರಿ ಮಾತಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಜನ ಸಾಮಾನ್ಯರ ಮೂಕ ಅಳುವಿಗೆ ಪ್ರಭುತ್ವ ಬೀಳಿಸುವ ಶಕ್ತಿಯಿದೆ. ಹೀಗಾಗಿ ಜನರು ದುಃಖಿಸದಂತೆ ಅವರ ಪರವಾಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಆಗಿದ್ದು ಅದನ್ನು ನಾವು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ.
– ಡಾ. ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




