ಅಂಬೇಡ್ಕರ್ ಮೌಲ್ಯಗಳ ಕುರಿತ ಸಿನಿಮಾಗಳಿಗೆ ಅಗತ್ಯವಾದ ನೆರವು: ಸಿದ್ದರಾಮಯ್ಯ

2 years ago

ಬೆಂಗಳೂರು: ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಮಾನವೀಯಗೊಳಿಸಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ. ಇಡೀ ಜಗತ್ತು ಮಾನವೀಯ ಬೆಸುಗೆಯಲ್ಲಿ ಬೆರೆಯಲು, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂಸ್ಕೃತಿಯನ್ನು ಪಾಲಿಸಿದಾಗ ಜಗತ್ತಲ್ಲಿ ಶಾಂತಿ ನೆಲೆಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿನೆಮಾ ಬಹಳ ಪ್ರಭಾವಿ ಮಾಧ್ಯಮ. ನೋಡುಗರ ಮನಸ್ಸು, ಆಲೋಚನೆಯ ಮೇಲೆ ಪ್ರಭಾವ ಬೀರುವ ಶಕ್ತಿ ಸಿನಿಮಾಗಿದೆ ಎಂದರು.

ಸಿನಿಮಾಗಳ ಮೂಲಕ ದೇಶದ ಒಳಗಿನ, ಇತರೆ ದೇಶಗಳ ಜನ ಸಂಸ್ಕೃತಿಯನ್ನು ಅರಿಯುವ ಮತ್ತು ಆ ಮೂಲಕ ನಮ್ಮ ಮಾನವೀಯ ಸಂಸ್ಕೃತಿಯನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ವೇಗವರ್ದಕವಾಗಿ ಕೆಲಸ ಮಾಡುತ್ತದೆ ಎಂದರು.

ಅಂಬೇಡ್ಕರ್ ಅವರು ರೂಪಿಸಿದ ಭಾರತೀಯ ಸಂವಿಧಾನದಲ್ಲಿ ಇತರೆ ದೇಶಗಳ ಸಂವಿಧಾನದಲ್ಲಿ ಇಲ್ಲದ ಸಾಮಾಜಿಕ ನ್ಯಾಯದ ಮೌಲ್ಯಗಳಿವೆ. ಅಂಬೇಡ್ಕರ್ ಮತ್ತು ಅವರ ಮೌಲ್ಯಗಳ ಕುರಿತಾದ ಸಿನಿಮಾಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದರು.

ಕುವೆಂಪು ಅವರ ವಿಶ್ವ ಮಾನವ ಸಂಸ್ಕೃತಿಯನ್ನು ವಿಶ್ವದಲ್ಲಿ ಹೆಚ್ಚೆಚ್ಚು ಪಾಲಿಸುವಂಥ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕೆ ವಿಶ್ವ ಸಿನಿಮಾಗಳು ನೆರವಾಗುತ್ತವೆ ಎಂದು ಹೇಳಿದರು.

2019 ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ನಾವು ಬಾಕಿ ಉಳಿದಿರುವ ಎಲ್ಲಾ ವರ್ಷಗಳ ಉತ್ತಮ ಸಿನಿಮಾಗಳ ಆಯ್ಕೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ವರದಿ ಕೊಟ್ಟ ತಕ್ಷಣ ಪ್ರಶಸ್ತಿಗಳನ್ನು ಘೋಷಿಸಲಾಗುವುದು ಎಂದು ಭರವಸೆ ನೀಡಿದರು.

ಸಭಾಪತಿಗ ಬಸವರಾಜ ಹೊರಟ್ಟಿ, ನಟ ಶಿವರಾಜ್ ಕುಮಾರ್, ಅಂತಾರಾಷ್ಟ್ರೀಯ ಚಿತ್ರೋತ್ಸವದ ರಾಯಭಾರಿ ನಟ ಡಾಲಿ ಧನಂಜಯ್, ನಿರ್ದೇಶಕ ಜಬ್ಬಾರ್ ಪಟೇಲ್, ಚೆಕ್ ರಿಪಬ್ಲಿಕ್ ದೇಶದ ಚಿತ್ರ ವಿಮರ್ಶಕ ಮೆಯೆರಾ ಲಾಂಗೆರೊವಾ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ನಟಿ ಆರಾಧನಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply