ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹೊಂಬೇಗೌಡನಗರ ವಾರ್ಡ್ ನಲ್ಲಿ ಸ್ಲಂ ಸಂಸ್ಥೆ ಮತ್ತು ಗರುಡ ಫೌಂಡೇಷನ್ ಸಹಯೋಗದಲ್ಲಿ ಉಚಿತವಾಗಿ ಕಂಪ್ಯೂಟರ್ ತರಬೇತಿ ಪಡೆದ ಸ್ಲಂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಬಿ.ಜೆ.ಪಿ. ಕಾರ್ಯಕರ್ತರಿಗೆ ಆರೋಗ್ಯ ವಿಮೆ, ಅಪಘಾತ ವಿಮೆ ವಿತರಣೆ ಕಾರ್ಯಕ್ರಮ ನಡೆಯಿತು.
ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್ ಮತ್ತು ಅರಣ್ಯ ಅಭಿವೃದ್ದಿ ನಿಗಮ ನಿರ್ದೇಶಕಿ ಭಾಗ್ಯವತಿ ಅಮರೇಶ್, ಬೆಂಗಳೂರು ನಗರ ಬಿ.ಜೆ.ಪಿ. ಸಂಘಟನಾ ಕಾರ್ಯದರ್ಶಿ ದಶರಥ್, ವಾರ್ಡ್ ಅಧ್ಯಕ್ಷದ ಅಜಿತ್ ಮತ್ತು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬರೀಶ್ ವಿತರಣೆ ಮಾಡಿದರು. ಇದೇ ವೇಳೆ 35 ಬಿ.ಜೆ.ಪಿ. ಕಾರ್ಯಕರ್ತರಿಗೆ ವಿಮೆ ಪ್ರಮಾಣ ಪತ್ರ ಮತ್ತು 40 ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಮೇದಿನಿ ಗರುಡಾಚಾರ್ ಮಾತನಾಡಿ, ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಕಂಪ್ಯೂಟರ್ ತಂತ್ರಜ್ಞಾನ ಶಿಕ್ಷಣ ಪಡೆದರೆ ಉತ್ತಮ ಉದ್ಯೋಗ ಮತ್ತು ದೇಶದ ಆರ್ಥಿಕ ಪ್ರಗತಿಗೂ ಸಹಕಾರಿಯಾಗಲಿದೆ. ಆದ್ದರಿಂದ ಗರುಡಾ ಫೌಂಡೇಷನ್ ಮತ್ತು ಸ್ಲಂ ಸಂಸ್ಥೆ ಸಹಯೋಗದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಬಗ್ಗೆ ಗಮನಹರಿಸಲಾಗಿದೆ ಎಂದರು.
ಭಾಗ್ಯವತಿ ಅಮರೇಶ್ ಮಾತನಾಡಿ, ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಆದ್ದರಿಂದ ಹೊಂಬೇಗೌಡ ನಗರ ವಾರ್ಡ್ ಸ್ಲಂ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ ಹಾಗೂ ವಾರ್ಡ್ ಬಿ.ಜೆ.ಪಿ. ಕಾರ್ಯಕರ್ತರಿಗೆ ಅರೋಗ್ಯ ವಿಮೆ ಮತ್ತು ಅಪಘಾತ ವಿಮೆ ಮಾಡಿಸಿ ಅವರ ಕುಟುಂಬದ ಆರೋಗ್ಯ ರಕ್ಷಣೆಗಾಗಿ ವಿಮೆ ಮಾಡಿಸಲಾಗಿದೆ ಎಂದರು.
ದಶರಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿರವರ 8 ವರ್ಷದ ಆಡಳಿತ ದೇಶದ ಸಮಗ್ರ ಅಭಿವೃದ್ದಿಯತ್ತ ಸಾಗಿದೆ. ಸಮಾಜಕ್ಕೆ ನಾವು ಏನಾದರು ಕೊಟ್ಟರೆ ಮಾತ್ರ ಸಮಾಜ ಗಟ್ಟಿಯಾಗಿ ನಿಲ್ಲಬಹುದು. ಸಮಾಜದ ನಡುವೆ ವಿದ್ಯಾರ್ಥಿಗಳು ಇರಬೇಕು ಆಗ ಸಮಾಜ ಸಂಘಟನೆಯಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಯುವಕರು ಪ್ರಾಣದಾನ ಮಾಡಿದ್ದಾರೆ. ಇಂದಿನ ಯುವಕರಿಗೆ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯ ಮೂಲಕ ಕೊಟ್ಯಂತರ ಉದ್ಯೋಗ ಸೃಷ್ಟಿಸಿದೆ ಎಂದರು.




