ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ: ಶೇಖರಗೌಡ ಜಿ ರಾಮತ್ನಾಳ

1 year ago

ಸಾಮರ್ಥ್ಯಾಭಿವೃದ್ಧಿ ತರಬೇತಿ ಮತ್ತು ಸಂವಾದ ಕಾರ್ಯಕ್ರಮ

ಕೊಪ್ಪಳ: ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ, ಶಾಲೆಯಿಂದ ಹೊರಗುಳಿದ ಮಕ್ಕಳ ಪಾಲಕರನ್ನು ಮನವೊಲಿಸಿ ಅಂತಹ ಮಕ್ಕಳನ್ನು ಮರಳಿ ಶಾಲೆಗೆ ಕರೆದುಕೊಂಡು ಬನ್ನಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ ರಾಮತ್ನಾಳ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ ಎಂಬ ವಿಷಯದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲಾ ಅವಧಿಯಲ್ಲಿ ಶಾಲೆಯಲ್ಲಿರುವುದು ವಿವಿಧ ಕಾಯ್ದೆಯಡಿಯಲ್ಲಿ ಕಡ್ಡಾಯವಾಗಿದೆ. ಒಂದು ವೇಳೆ ಮಕ್ಕಳು ಶಾಲೆಯಿಂದ ಹೊರಗುಳಿದಲ್ಲಿ, ದುಶ್ಚಟಗಳಿಗೆ ಬಲಿಯಾಗಬಹುದು, ಮಾದಕ ವ್ಯಸನಿಗಳಾಗಬಹುದು, ಕಾರ್ಮಿಕರಾಗಿ ದುಡಿಯುತ್ತಾ ಕಿರುಕುಳ, ಹಲ್ಲೆ ಅಥವಾ ದೌರ್ಜನ್ಯಗಳಿಗೆ ಸಿಲುಕಬಹುದಾಗಿದೆ, ಬಾಲ್ಯವಿವಾಹಕ್ಕೆ ತುತ್ತಾಗಿ ಪ್ರತಿ ದಿನವು ಲೈಂಗಿಕ ದೌರ್ಜನ್ಯಗಳಿಗೆ, ಬಾಲ ಗರ್ಬಿಣಿಯರಾಗಿ ಸಾವಿಗೆ ತುತ್ತಾಗಬಹುದಾಗಿದೆ ಅಥವಾ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ. ಇದರಿಂದ ಪ್ರತಿಯೊಬ್ಬ ಅಧಿಕಾರಿಗಳು ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗಿ ದುಡಿಯುವುದು, ಬಾಲ್ಯವಿವಾಹಕ್ಕೆ ಒಳಗಾಗಿ ಲೈಂಗಿಕ ಹಲ್ಲೆ, ಕಿರುಕುಳವನ್ನು ಅನುಭವಿಸುವುದನ್ನು ಹಾಗೂ ಬಾಲ ಗರ್ಭಿಣಿಯರಾಗುವುದನ್ನು ಆಯೋಗ ಸಹಿಸುವುದಿಲ್ಲ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ್ ಮಾತನಾಡಿ, ರಾಜ್ಯದ ದೃಷ್ಟಿಕೋನ ರಾಜ್ಯದಲ್ಲಿನ ಪ್ರತಿ ಮಗುವು ಸುರಕ್ಷಿತ, ರಕ್ಷಣಾತ್ಮಕ ಮತ್ತು ಸಶಕ್ತ ಪರಿಸರದಲ್ಲಿ ಬೆಳೆಯುವುದರೊಂದಿಗೆ, ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಮಗುವು ತನ್ನ ಸಾಮರ್ಥ್ಯವನ್ನು ತಲುಪಲು ಅವಕಾಶಗಳನ್ನು ಒದಗಿಸುತ್ತದೆ. ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಮತ್ತು ಆನಂದಿಸಲು ಅನುಕೂಲಕರವಾದ ಪರಿಸರವನ್ನು ನಿರ್ಮಿಸಲು ರಾಜ್ಯದಲ್ಲಿನ ಎಲ್ಲಾ ಪೋಷಕರು, ಆರೈಕೆ ಸೇವೆಗಳನ್ನು ನೀಡುವವರು ಮತ್ತು ಸಮುದಾಯ ಒಟ್ಟುಗೂಡಿ ಕೆಲಸ ಮಾಡುವುದರೊಂದಿಗೆ ಮಕ್ಕಳ ಕುರಿತ ತಾರತಮ್ಯಗಳನ್ನು ನಿವಾರಿಸುವ ಹಾಗೂ ಮಕ್ಕಳ ಭಾಗವಹಿಸುವಿಕೆ ಸಂಭಾಷಣೆ ಮತ್ತು ಅಭಿಪ್ರಾಯಗಳನ್ನು ಗೌರವಿಸುವುದರೊಂದಿಗೆ ಮಗುವಿನ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ (ಕೆಎಸ್ಸಿಪಿಪಿ)ಯ ಮಕ್ಕಳ ಅಧಿಪತ್ಯದ ತತ್ವವನ್ನಾಧರಿಸಿದ ಮಕ್ಕಳ ರಕ್ಷಣೆಯ ಒಂದು ಸಮಗ್ರ ಭಾಗವಾಗಿದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿರುವ ಘಟನೆಗಳು ವರದಿಯಾಗಿವೆ. ಆದ್ದರಿಂದ ಜಿಲ್ಲೆಯಲ್ಲಿನ ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಮಕ್ಕಳ ಸುರಕ್ಷತಾ ನೀತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದರು.

ಪೊಲೀಸ್ ಉಪಾಧೀಕ್ಷಕರು ಹಾಗೂ ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮುತ್ತಣ್ಣ ಸವರಗೋಳ ಮಾತನಾಡಿ, ರಾಜ್ಯದ ಯಾವುದೇ ಮಗು, ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆ, ದೌರ್ಜನ್ಯ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಸಿಲುಕಿರುವವರನ್ನು ರಕ್ಷಿಸಲು ಮುಂಜಾಗ್ರತಾ ಮತ್ತು ಸುಧಾರಣೆಯ ಎರಡು ರೀತಿಯ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ಸರ್ಕಾರ ರಾಜ್ಯದಲ್ಲಿನ ಎಲ್ಲಾ ಮಕ್ಕಳ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸುವುದರೊಂದಿಗೆ ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಒಳಗೊಂಡಂತೆ ಅವರ ಸುರಕ್ಷತೆಯನ್ನು ಖಚಿತಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪೊಲೀಸ್ ಇಲಾಖೆಯಿಂದ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸಹಕಾರವನ್ನು ನೀಡಲಾಗುವುದು ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ್ ಮಾತನಾಡಿ, ಯಾವುದೇ ಮಗು ಶಾಲೆಯಿಂದ ಹೊರಗುಳಿದಿದ್ದಲ್ಲಿ, ಮಗುವಿನ, ಪಾಲಕರ ಮನವೊಲಿಸಿ ಮರಳಿ ಶಾಲೆಗೆ ಕರೆತರುವುದು ಮುಖ್ಯೋಪಾಧ್ಯಾಯರು, ಶಿಕ್ಷಕರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷತಾ ನೀತಿಯನ್ವಯ ಮಕ್ಕಳ ಸಲಹಾ ಪಟ್ಟಿಗೆಯನ್ನು, ಮಕ್ಕಳ ಸುರಕ್ಷತಾ ಸಮಿತಿ, ಪೋಷಕರ ಸಮಿತಿ, ಸಿಬ್ಬಂದಿಯಿಂದ ಬದ್ಧತಾ ಪತ್ರ, ಮಕ್ಕಳಿಂದ ಬದ್ಧತಾ ಪತ್ರ ಹಾಗೂ ಶೈಕ್ಷಣಿಕ ಸಂಸ್ಥೆಯು ತನ್ನದೇಯಾದ ಸುರಕ್ಷತಾ ನೀತಿಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.

ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ ಕೆ.ರಾಘವೇಂದ್ರ ಭಟ್, `ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ’ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು. ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ವ್ಯವಸ್ಥಾಪಕ ಹರೀಶ ಜೋಗಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಹಾಗೂ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಕುರಿತು ಮಾಹಿತಿ ನೀಡಿದರು.

Leave a Reply