ಬೆಂಗಳೂರು: ದೇಶದ ಪ್ರತೀಷ್ಠಿತ ಫಾಲ್ಕೆ ಪ್ರಶಸ್ತಿಯನ್ನು ಪಡೆದ ವರನಟ ಡಾ. ರಾಜಕುಮಾರ ಅವರು ಪ್ರಶಸ್ತಿಯ ಸಂಪೂರ್ಣ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಇಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು ಬಣ್ಣಿಸಿದರು.
ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಆಯೋಜಿಸಿದ್ದ ಮೇರುನಟ ಡಾ. ರಾಜಕುಮಾರ ಅವರ ೯೪ನೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ರು. ಕಳೆದ ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್ತು ಡಾ. ರಾಜಕುಮಾರ ಅವರ ಜನ್ಮದಿನವನ್ನು ʻಕನ್ನಡ ಅಭಿಮಾನದ ದಿನವಾಗಿʼ ಆಚರಿಸುತ್ತ ಬಂದಿದೆ. ಡಾ. ರಾಜ್ ಅವರಿಗೆ ಪ್ರತಿಷ್ಟಿತ ಫಾಲ್ಕೆ ಪ್ರಶಸ್ತಿ ಬಂದಾಗ ಸುದೀರ್ಘ ಸಂದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿತ್ತು ಎಂದು ನೆನೆಪಿಸಿಕೊಂಡ ನಾಡೋಜ ಡಾ. ಮಹೇಶ ಜೋಶಿಯವರು, ಸಂದರ್ಶನದಲ್ಲಿ ರಾಜಕುಮಾರ್ ಅವರು ʻಮಂತ್ರಾಲಯ ಮಹಾತ್ಮೆʼ ತಮ್ಮ ಅಭಿನಯದ ಚಿತ್ರಗಳ ಪೈಕಿ ಮನಸ್ಸಿಗೆ ಹತ್ತಿರವಾದದ್ದು ಎಂದು ಹೇಳಿಕೊಂಡಿದ್ದರು. ಈ ಚಿತ್ರದ ಚಿತ್ರಿಕರಣದ ಸಂದರ್ಭದಲ್ಲಿ ಸಾತ್ವಿಕ ಜೀವನ ನಡೆಸಿದ ಅವರು ಪಾದರಕ್ಷೆಯನ್ನು ಕೂಡ ಧರಿಸುತ್ತಿರಲಿಲ್ಲ. ಜನರ ಮನಸ್ಸಿಗೆ ವಿರುದ್ಧವಾಗಿ ಯಾವತ್ತೂ ನಡೆದುಕೊಂಡವರಲ್ಲ ಎಂದು ಹೇಳಿದರು.
ಚಿತ್ರಗಳ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡಿ, ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ. ರಾಜಕುಮಾರ ಅವರ ಬಿಡುಗಡೆ’ ಮತ್ತುಎರಡು ಕನಸು’ ಚಿತ್ರಗಳ ಅಂತ್ಯದ ಸನ್ನಿವೇಶವನ್ನು ಬದಲಾಯಿಸಿದ್ದೇ ಜನರು ಅವರಿಂದ ಏನನ್ನು ನಿರೀಕ್ಷಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಜನರ ನಿರೀಕ್ಷೆಯನ್ನು ರಾಜಕುಮಾರ್ ಅವರು ಯಾವತ್ತೂ ಹುಸಿ ಮಾಡದ ಕನ್ನಡ ಕಣ್ಮಣಿಯಾಗಿದ್ದರು. ರಾಜಕುಮಾರ ಅವರ ಕನ್ನಡ ಉಚ್ಛಾರಣೆ ಕನ್ನಡಿಗರೆಲ್ಲಿರಿಗೂ ಮಾದರಿಯಾಗಿತ್ತು. ಕನ್ನಡವನ್ನು ಉಳಿಸಿ ಬೆಳೆಸಿದವರಲ್ಲಿ ರಾಜಕುಮಾರ ಅಗ್ರಸ್ಥಾನದಲ್ಲಿ ಉಳಿದುಕೊಳ್ಳುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿ, ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸುವ ಮೂಲಕ ರಾಜಕುಮಾರ್ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದರು. ಅಮಿತಾಬ್ ಬಚ್ಚನ್ ಅವರಂತಹ ನಟ ಒತ್ತಾಯಿಸಿದರೂ ಪರಭಾಷಾ ಚಿತ್ರಗಳಲ್ಲಿ ಅವರು ಅಭಿನಯಿಸಲಿಲ್ಲ ಎಂದು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರು ಹಾಗೂ ಹಿರಿಯ ಪತ್ರಕರ್ತರಾದ ಪ್ರೊ. ಎನ್.ಎಸ್. ಶ್ರೀಧರಮೂರ್ತಿ ಅವರು ಮಾತನಾಡಿ, ರಾಜಕುಮಾರ ಅವರ ಜೊತೆಗಿನ ತಮ್ಮ ಆತ್ಮೀಯ ಒಡನಾಟವನ್ನು ನೆನಪಿಸಿಕೊಂಡು, ಮೇರುನಟರಾಗಿದ್ದರೂ ರಾಜಕುಮಾರ ಅವರು ಮುಗ್ಧತೆ ಉಳಿಸಿಕೊಂಡಿದ್ದು ಅವರ ವಿಶೇಷತೆಯಾಗಿತ್ತು. ಸಂಗೀತ ಮತ್ತು ಸಾಹಿತ್ಯದ ಕುರಿತು ಸಾಕಷ್ಟು ಹಿಡಿತವನ್ನು ಹೊಂದಿದ್ದ ಅವರು ತಮ್ಮ ಪಾತ್ರಗಳ ಮೂಲಕ ಕನ್ನಡ ಪರಂಪರೆಯನ್ನು ಕಟ್ಟಿಕೊಟ್ಟವರು. ಯಾವುದೇ ಪಾತ್ರಕ್ಕೂ ಜೀವಂತಿಕೆ ತುಂಬಬಲ್ಲ ವಿಶ್ವದ ಏಕೈಕ ನಟ ಅವರಾಗಿದ್ದರು. ವೃತ್ತಿಯ ಬಗ್ಗೆ ಅಪಾರ ಶ್ರದ್ಧೆಯನ್ನು ಹೊಂದಿದ್ದ ಅವರು ತಮ್ಮ ಪಾತ್ರ ಜೀವಂತವಾಗಿಸುವುದು ಹೇಗೆ ಎಂದು ಸದಾ ಚಿಂತಿಸುತ್ತಿದ್ದರು ಎಂದು ಹೇಳಿ ಡಾ. ರಾಜಕುಮಾರ ಅವರಿಗೆ ಸಂಬಂಧಿಸಿದ ಅನೇಕ ಘಟನೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಗೌರವ ಕೋಶಾಧ್ಯಕ್ಷರಾದ ಡಾ. ಬಿ. ಎಮ್. ಪಟೇಲ್ ಪಾಂಡು, ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಹಾಜರಿದ್ದರು.




