(ನಿರೀಕ್ಷಣಾ ಕ್ಷಮಾಪಣೆ: ಹೇಳಲೇಬೇಕಾದ ಪ್ರಸಂಗವನ್ನು ಕಟ್ಟಕಡೆಗೆ ಹೇಳಲಾಗಿದೆ. ಪೀಠಿಕೆ ತುಸು ಲಂಬಿಸಿದೆ; ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ. ಕ್ಷಮೆ ಇರಲಿ)
ಮಾತಿನಮಲ್ಲ ಮಾಸ್ಟರ್ ಹಿರಣ್ಣಯ್ಯ ಯಾರಿಗೆ ತಾನೇ ಗೊತ್ತಿಲ್ಲ. ಕರ್ನಾಟಕದ ಮಟ್ಟಿಗೆ ರಾಜಕೀಯ ವಿಡಂಬನೆ ಎಂದರೆ ಕೇವಲ ಕಾರ್ಟೂನ್ ಎನ್ನುವಂತಿದ್ದ ಸಂಪ್ರದಾಯವನ್ನು ಬ್ರೇಕ್ ಮಾಡಿ, ಮಾತು-ಅಭಿನಯ-ರಂಗಪ್ರಯೋಗದ ಮೂಲಕವೂ ವಿಡಂಬನೆಯನ್ನು ಜನಪ್ರಿಯಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟ ವ್ಯಕ್ತಿ. ರಾಜಕೀಯ ವಿಶ್ಲೇಷಣೆಯನ್ನು ಮೊನಚು ಹಾಸ್ಯದೊಳಗೆ ತುಂಬುವುದು ಒಂದು ಸಾಹಸಮಯ ಕೆಲಸವಾದರೆ, ಅದನ್ನು ನಿರ್ಭಿಡೆಯಿಂದ ಪ್ರೇಕ್ಷಕರೆದುರು ಪ್ರಸ್ತುತಪಡಿಸುವುದು ಇನ್ನೊಂದು ಸಾಹಸ. ಇವೆರಡರಲ್ಲೂ ಸೈ ಅನ್ನಿಸಿಕೊಂಡ ಮಾಸ್ಟರ್ ಹಿರಣ್ಣಯ್ಯ ತಮ್ಮ `ಲಂಚಾವತಾರ’ ರಂಗಪ್ರಯೋಗದ ಮೂಲಕ ಸಮಕಾಲೀನ ರಾಜಕಾರಣವನ್ನು ತರಾಟೆಗೆ ತೆಗೆದುಕೊಂಡವರು. ಆ ನಿರ್ಭಿಡೆಯ ಕಾರಣಕ್ಕೇ ಜನರಿಗೆ ಇಷ್ಟವಾಗುತ್ತಾ ಬಂದವರು. ಇದು, ಮಾಸ್ಟರ್ ಹಿರಣ್ಣಯ್ಯನವರ ಅಗಾಧ ಪ್ರತಿಭೆಯನ್ನು ಗ್ರಹಿಸುವ ಒಂದು ಆಯಾಮವಾದರೆ; ಒಬ್ಬ ವ್ಯಕ್ತಿಯಾಗಿ-ರಾಜಕೀಯ ನಿಲುವುಗಾರನಾಗಿ ಮಾಸ್ಟರ್ ಹಿರಣ್ಣಯ್ಯನವರನ್ನು ತೂಗಿನೋಡುವ ಮತ್ತೊಂದು ಆಯಾಮವೂ ಇದೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಸಮಾಜದ ನಡುವೆ ಬೆಳೆಯುವ ಯಾವ ವ್ಯಕ್ತಿಯೂ ರಾಜಕೀಯ ಅಭಿಪ್ರಾಯದಿಂದ ಮುಕ್ತರಾದವರಲ್ಲ. ಒಬ್ಬ ವ್ಯಕ್ತಿ ತಾನು ಹುಟ್ಟಿ-ಬೆಳೆದ ಪರಿಸರ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ತನ್ನದೇ ಆದ ರಾಜಕೀಯ ಅಭಿಪ್ರಾಯವನ್ನು ತಳೆದಿರುತ್ತಾನೆ ಮತ್ತು ಸಿದ್ಧಾಂತಕ್ಕೂ ಆಕರ್ಷಿತನಾಗಿರುತ್ತಾನೆ. ಭಾರತದಂತಹ ಸಂಕೀರ್ಣ ಸಮಾಜದಲ್ಲಿ ‘ಹುಟ್ಟಿ-ಬೆಳೆದ ಪರಿಸರ’ ಎಂದಾಕ್ಷಣ ಅಲ್ಲಿ ಜಾತಿ, ಧರ್ಮ, ಸಾಮಾಜಿಕ ಸ್ಥಿತಿಗತಿ, ಶೈಕ್ಷಣಿಕ ಅವಕಾಶಗಳೆಲ್ಲವೂ ತಮ್ಮ ಕಾಣಿಕೆ ನೀಡುತ್ತವೆ. ಅವುಗಳ ಪ್ರಭಾವ ಮತ್ತು ಸಂಘರ್ಷದ ನಡುವೆಯೇ ವ್ಯಕ್ತಿಯೊಬ್ಬನ ರಾಜಕೀಯ ನಿಲುವೂ ರೂಪತಳೆಯುತ್ತದೆ. ಇದು ಸಹಜವಾದುದು. ಅದರಲ್ಲೂ ಕಲೆ, ಸಾಹಿತ್ಯದಂತಹ ಕ್ರಿಯಾಶೀಲ ಕ್ಷೇತ್ರಗಳಲ್ಲಿ ಇರುವ ವ್ಯಕ್ತಿಗಳನ್ನು ರಾಜಕೀಯವಾಗಿ ತಟಸ್ಥ ಎಂದು ಕರೆಯುವುದೇ ದೊಡ್ಡ ಮಿಥ್ಯ. ರಾಜಕೀಯ ಅಭಿಪ್ರಾಯ ಮತ್ತು ಸ್ಪಂದನೆಗಳಿಲ್ಲದೆ ಹೋದರೆ ಕವಿ ಕವಿಯಾಗಲಾರ, ಕಲಾವಿದ ಕಲಾವಿದ ಎನಿಸಲಾರ. ತನ್ನ ನಾಜೂಕುತನದ ಕಾರಣಕ್ಕೆ, ಒಳಗಿನ ರಾಜಕೀಯ ನಿಲುವು-ಸಿದ್ದಾಂತಗಳನ್ನು ಅಭಿವ್ಯಕ್ತಿಸದೆ ಮುಚ್ಚಿಟ್ಟುಕೊಂಡರು ಕೂಡಾ ಅವು ಆತನ ನಿಯಂತ್ರಣವನ್ನೂ ಮೀರಿ ತಮ್ಮ ಇರುವಿಕೆಯನ್ನು ಹೊರಸೂಸುತ್ತಿರುತ್ತವೆ.
ರಾಜಕೀಯ ವಿಡಂಬನೆಕಾರರಾದ ಮಾಸ್ಟರ್ ಹಿರಣ್ಣಯ್ಯನವರೂ ಇದಕ್ಕೆ ಹೊರತಾದವರಲ್ಲ. ರಂಗದ ಮೇಲೆ ಎಲ್ಲಾ ರಾಜಕೀಯ ಪಕ್ಷದವರನ್ನೂ ಹರಿತ ಮಾತುಗಳಿಂದ ಇರಿಯುತ್ತಿದ್ದರಾದರೂ, ಅವರಲ್ಲೂ ನಿರ್ದಿಷ್ಟ ರಾಜಕೀಯ ಒಲವು ಇದ್ದಿರಲೇಬೇಕಲ್ಲವೇ? ಅದು ಅವರ ಲಂಚಾವತಾರದ ನಿರೂಪಣೆಯಲ್ಲಿ ವ್ಯಕ್ತವಾಗುತ್ತಿದ್ದವು. ಕಾಂಗ್ರೆಸ್ ಪಕ್ಷವನ್ನು ಮತ್ತು ಕಾಂಗ್ರೆಸ್ ನಾಯಕರನ್ನೇ ಮಾಸ್ಟರ್ ಹಿರಣ್ಣಯ್ಯನವರು ಹೆಚ್ಚಾಗಿ ಟೀಕಿಸುತ್ತಿದ್ದುದು ಆ ಕಾರಣಕ್ಕೇ ಎಂಬುದು ಹಲವರ ವಾದ. ಎಸ್ ನಿಜಲಿಂಗಪ್ಪ ಮತ್ತು ಹಿರಣ್ಣಯ್ಯನವರ ನಡುವೆ ಈ ವಿಚಾರ ಜಟಾಪಟಿಗೆ ಕಾರಣವಾಗಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಸಂಗವೂ ಉಂಟು. ಕೊನೆಗದು ಇಬ್ಬರ ನಡುವೆ ಸೌಹಾರ್ದಯುತವಾಗಿಯೇ ಬಗೆಹರಿಯಿತು. ಎಂಬತ್ತರ ದಶಕದಲ್ಲಿ (1980) ಹಿರಣ್ಣಯ್ಯನವರು ಲಂಚಾವತಾರ ನಾಟಕದ ಮೂಲಕ ವಿಡಂಬನೆಯನ್ನು ಶುರು ಮಾಡಿದಾಗ, ದೇಶದ ಉದ್ದಗಲಕ್ಕೆ ಆವರಿಸಿದ್ದು ಕಾಂಗ್ರೆಸ್ ಪಕ್ಷ. ಹಾಗಾಗಿ ಸಹಜವಾಗಿಯೇ ಅವರು ಆಡಳಿತಾರೂಢ ಕಾಂಗ್ರೆಸ್ ನಾಯಕರನ್ನೇ ವಿಡಂಬನೆ ಮಾಡಬೇಕಿತ್ತು. ಮಾಡಿದರು ಕೂಡಾ. ಹಾಗಾಗಿ ಅವರಿಗೆ ಕಾಂಗ್ರೆಸ್ ವಿರೋಧಿ ಅಥವಾ ಮೇಲ್ಜಾತಿ ರಾಜಕೀಯ ಪಕ್ಷದ ಪರ ಎಂಬ ಪಟ್ಟ ಕಟ್ಟಲು ಸಾಧ್ಯವೇ? ಎಂಬುದು ಕೌಂಟರ್ ವಾದ. ಈ ಎರಡು ವಾದಗಳ ನಡುವೆ ಸತ್ಯ ಹುದುಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಭ್ರಷ್ಟಾಚಾರ ಎನ್ನುವುದು ಒಂದು ಸಾಮಾಜಿಕ ಪಿಡುಗು ಮಾತ್ರವಲ್ಲ; ಅದೊಂದು ಪ್ರಬಲ ಪೊಲಿಟಿಕಲ್ ಟೂಲ್ ಕೂಡಾ ಹೌದು. ಆ ಟೂಲ್ ಅನ್ನು ಸಶಕ್ತ ಪ್ರಬಲರು ತಮಗಿಷ್ಟ ಬಂದಂತೆ ಬಳಸಿಕೊಳ್ಳುತ್ತಾರೆ. ಕೋಮುವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಕರಿನೆರಳು ವ್ಯಾಪಕವಾಗಿ ಆಕ್ರಮಿಸಿರದ ಕಾಲಘಟ್ಟದಲ್ಲಿ ಭ್ರಷ್ಟಾಚಾರವೇ ಎಲ್ಲಾ ಸಾಮಾಜಿಕ ಸಮಸ್ಯೆಗಳ ಮೂಲವಾಗಿ ಗೋಚರಿಸುತ್ತಿತ್ತು. ಭ್ರಷ್ಟಾಚಾರದ ಸಾಧ್ಯತೆ ಯಾವತ್ತೂ ಅಧಿಕಾರವಿರುವವರ ಕೈಯಲ್ಲಿರುತ್ತದೆಯೇ ಹೊರತು, ಅಧಿಕಾರವಂಚಿತರ ಕೈಯಲ್ಲಲ್ಲ. ಹಾಗಾಗಿ ಎಪ್ಪತ್ತು, ಎಂಬತ್ತರ ದಶಕದಲ್ಲಿ ಹಿರಣ್ಣಯ್ಯನವರು ಕಾಂಗ್ರೆಸಿಗರ ಲಂಚಗುಳಿತನವನ್ನು, ವ್ಯವಸ್ಥೆಯ ಭ್ರಷ್ಟತೆಯನ್ನು ಕಟುವಾಗಿ ಟೀಕಿಸಿದ್ದರಲ್ಲಿ ಒಂದು ಬಗೆಯ ನಿಷ್ಪಕ್ಷಪಾತತೆಯನ್ನು ನಾವು ನಿರೀಕ್ಷಿಸಬಹುದು. ಆದರೆ ತೊಂಬತ್ತರ ದಶಕ ಸನಿಹಗೊಂಡಂತೆಲ್ಲ, ಭಾರತದ ರಾಜಕಾರಣದಲ್ಲಿ ಕೋಮುವಾದ ಮತ್ತು ಜಾಗತೀಕರಣದ ಬಂಡವಾಳಶಾಹಿ ವ್ಯವಸ್ಥೆ ಉಲ್ಬಣಿಸಲು ಶುರುವಾದವು.
ಒಬ್ಬ ಸೂಕ್ಷ್ಮಗ್ರಾಹಿ, ಸ್ವತಂತ್ರ ವಿಮರ್ಶಕನಿಗೆ ಅಥವಾ ವಿಡಂಬಕಾರನಿಗೆ ಕಾಲದ ಚಲನೆಯ ದಿಕ್ಕು ಮತ್ತು ವೇಗಗಳ ಅರಿವು ತುಂಬಾ ಮುಖ್ಯ. ಆ ಪ್ರಸ್ತುತತೆಗಳನ್ನು ಧಿಕ್ಕರಿಸಿ, ತನ್ನ ಯಥಾ ಚಿಂತನೆಯನ್ನೆ ಪುನರಾವರ್ತಿಸುತ್ತಾ ಕೂರುತ್ತಾನೆಂದರೆ, ಅಂತಹ ವಿಮರ್ಶಕನನ್ನು ನಾವು ಅಂತರ್ಗತ ರಾಜಕೀಯ ಉದ್ದೇಶಗಾರನಾಗಿಯೇ ಪರಿಗಣಿಸಬೇಕಾಗುತ್ತದೆ. ಹಿರಣ್ಣಯ್ಯನವರು ಭ್ರಷ್ಟಾಚಾರದ ತಾಯಿಬೇರುಗಳಾದ ಕೋಮುವಾದ ಮತ್ತು ಬಂಡವಾಳಶಾಹಿ ಆಕ್ರಮಣದೆಡೆಗೆ ಅಪ್‌ಡೇಟ್ ಆಗಬೇಕಾದಷ್ಟು ತೀಕ್ಷ್ಣವಾಗಿ, ತೀವ್ರವಾಗಿ ತಮ್ಮನ್ನು ಬದಲಿಸಿಕೊಳ್ಳಲಿಲ್ಲ. ನವಪೀಳಿಗೆಯ ಪ್ರಜ್ಞಾವಂತ ಸಮಾಜ ಕೋಮುವಾದದೆಡೆಗೆ ಆತಂಕಗೊಂಡು ಪ್ರತಿಕ್ರಿಯಿಸುವ ಕಾಲಘಟ್ಟದಲ್ಲೂ, ಹಿರಣ್ಣಯ್ಯನವರು ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಲೇವಡಿ ಮಾಡುವುದರಲ್ಲೇ ತಲ್ಲೀನರಾದರು. ರಾಷ್ಟ್ರೀಯತೆಯ ಹೊದಿಕೆ ಹೊದ್ದ ಕೋಮುವಾದವು ಭ್ರಷ್ಟಾಚಾರಕ್ಕಿಂತಲೂ ಅಪಾಯಕಾರಿಯಾದುದು ಅಂತ ಅವರಿಗೆ ಅನ್ನಿಸಲಿಲ್ಲ. ನೆಪಕ್ಕೆಂಬಂತೆ ಕೋಮುವಾದಿ ಪಕ್ಷದ ನಾಯಕರನ್ನೂ ಕಾಲೆಳೆಯುವುದರ ಮೂಲಕ, ತಾನು ಎಲ್ಲಾ ಪಕ್ಷದವರ ವಿರೋಧಿ ಎಂದು ಸಾರಲು ಯತ್ನಸಿದರು. ಈಗಲೂ ನಮ್ಮಲ್ಲಿ ಕೆಲವೊಂದು ನ್ಯೂಸ್ ಚಾನೆಲ್ಲುಗಳಿವೆ. ಅದರ ಪ್ರೈಮ್‌ಟೈಮ್ ಯಜಮಾನರು, ಕಾಂಗ್ರೆಸಿಗರನ್ನೂ ಬೈಯುತ್ತಾರೆ, ಬಿಜೆಪಿಯವರನ್ನೂ ಬೈಯುತ್ತಾರೆ. ಆ ಮೂಲಕ ತಾವು ಎಲ್ಲರನ್ನೂ ಜಾಡಿಸುವ ನಿಷ್ಪಕ್ಷಪಾತ ಪತ್ರಕರ್ತ ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ ಅವರ ಒಟ್ಟಾರೆ ಪತ್ರಿಕೋದ್ಯಮದ ವೈಖರಿ, ಒಲವು, ವಾಲಿಕೆಗಳನ್ನು ನೋಡಿದಾಗ ಅವರು ಸುಸ್ಪಷ್ಟವಾಗಿ ಕೋಮುವಾದಿ ಅಜೆಂಡಾವನ್ನು ಉಸಿರಾಡುತ್ತಿರುವುದು ಮನವರಿಕೆಯಾಗುತ್ತದೆ. ಹಿರಣ್ಣಯ್ಯನವರ ರಾಜಕೀಯ ನಿಲುವು ಗುಮಾನಿಗೊಳಪಡುತ್ತಿರುವುದು ಈ ಆಯಾಮದಿಂದ.
ಆದರೆ ಒಂದಂತೂ ಸತ್ಯ…. ಹಿರಣ್ಣಯ್ಯನವರು ತಮ್ಮ ವಿಡಂಬನಕಾರ ಜೀವನದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಅಧಿಕಾರಸ್ಥರನ್ನು ಹಾಗೂ ಸ್ವಲ್ಪಮಟ್ಟಿಗೆ ಜನತಾ ಪರಿವಾರದ ನಾಯಕರನ್ನೇ ಹೆಚ್ಚಾಗಿ ಲೇವಡಿ ಮಾಡುತ್ತಾ ಬಂದದ್ದು. ಅವರ ವಿಡಂಬನೆಗಳು ಹರಿತವಾಗಿರುತ್ತಿದ್ದವು, ಮತ್ತು ಮುಲಾಜುಗಳಿಂದ ಮುಕ್ತವಾಗಿರುತ್ತಿದ್ದವು. ಎಷ್ಟೋ ಬಾರಿ ರಾಜಕೀಯ ನಾಯಕರ ಹೆಸರುಗಳನ್ನು ನೇರವಾಗಿ ಪ್ರಸ್ತಾಪಿಸಿ ಜಾಡಿಸುತ್ತಿದ್ದರು. ಕೇವಲ ಹಿರಣ್ಣಯ್ಯನವರು ಮಾತ್ರವಲ್ಲ, ಆ ಕಾಲಘಟ್ಟದ ಎಲ್ಲಾ ಕಾರ್ಟೂನಿಸ್ಟರು, ಪತ್ರಕರ್ತರು, ರಾಜಕೀಯ ವಿಶ್ಲೇಷಕರು ರಾಜಕಾರಣಿಗಳನ್ನು ಹೀಗೆ ಮುಕ್ತವಾಗಿ ವಿಮರ್ಶಿಸುತ್ತಿದ್ದರು, ವಿಡಂಬನೆಗೆ ಒಳಪಡಿಸುತ್ತಿದ್ದರು. ಲಂಕೇಶ್ ಪತ್ರಿಕೆ ಕೂಡಾ ಇದಕ್ಕೊಂದು ಉದಾಹರಣೆ. ಅಷ್ಟಾಗಿಯೂ ಆ ರಾಜಕಾರಣಿಗಳ ಜೊತೆ ಅವರಿಗೆ ಸ್ನೇಹ-ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಯಾಕೆಂದರೆ ಆಗಿನ್ನೂ ವಿಡಂಬನೆ, ವಿಶ್ಲೇಷಣೆಗಳನ್ನು ಅಭಿವ್ಯಕ್ತಿ ಸ್ವಾತಂತ್ಯ್ರದ ಭಾಗವಾಗಿ ಪರಿಗಣಿಸುವ ಆರೋಗ್ಯಕರ ವಾತಾವರಣ ಇತ್ತು. ಇಂದಿರಾಗಾಂಧಿಯವರ ಎಮರ್ಜೆನ್ಸಿ ಅವಧಿಯಲ್ಲಿ ಅದು ಕೊಂಚ ನಿಯಂತ್ರಣಕ್ಕೊಳಪಟ್ಟಿದ್ದು ಬಿಟ್ಟರೆ, ರಾಜಕೀಯ ವಿಡಂಬನೆ-ವಿಮರ್ಶೆಗಳಿಗೆ ಸಾಧ್ಯವಾದಷ್ಟು ಸ್ವಾತಂತ್ಯ್ರವಿತ್ತೆಂಬುದು ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರದ ನಿರಂತರ ರಂಗಪ್ರಯೋಗದಿಂದ ನಮಗೆ ಅರ್ಥವಾಗುತ್ತದೆ.
ಈಗ ಮುಖ್ಯ ವಿಚಾರಕ್ಕೆ ಬರೋಣ. ಹಿರಣ್ಣಯ್ಯನವರು ಈಗ್ಯಾಕೆ ನೆನಪಾಗುತ್ತಿದ್ದಾರೆ? ಅದಕ್ಕೆ ಮಹಾರಾಷ್ಟ್ರದ ಶಿಂಧೆ-ಕುನಾಲ್ ಕಮ್ರಾ ಜಟಾಪಟಿ ಕಾರಣ. ಇತ್ತೀಚೆಗೆ ಸಾಕಷ್ಟು ಜನಪ್ರಿಯಗೊಳ್ಳುತ್ತಿರುವ ಸ್ಟಾಂಡಪ್ ಕಾಮಿಡಿ ಟ್ರೆಂಡಿನಲ್ಲಿ ಈ ಕುನಾಲ್ ಕಮ್ರಾ ವಿಶೇಷವಾಗಿ ನಿಲ್ಲುವ ವ್ಯಕ್ತಿ. ಮುಂಬೈನಲ್ಲಿ ಆತ ನೀಡಿದ ಕಾಮಿಡಿ ಶೋ ಈಗ ಸಾಕಷ್ಟು ಗದ್ದಲವೆಬ್ಬಿಸಿದೆ. ಶಿವಸೇನೆಯ ಶಿಂಧೆ ಬಣ ದಾಂಧಲೆ ನಡೆಸಿ, ಕೇಸು ದಾಖಲಿಸಿದೆ. ಸ್ವತಃ ಶಿಂಧೆ ಮತ್ತು ಹಿಂದುತ್ವದ ಬಲಪಂಥೀಯರು ಕುನಾಲ್ ಕಮ್ರಾನ ವಿಡಂಬನೆಯ ವಿರುದ್ಧ ಹರಿಹಾಯುತ್ತಿದ್ದಾರೆ. ಇಂತದ್ದೇ ಒಂದು ಪ್ರಸಂಗ ಹಿರಣ್ಣಯ್ಯನವರ ವೃತ್ತಿಬದುಕಿನ ಕಡೆಯ ದಿನಗಳಲ್ಲಿ ನಡೆದಿತ್ತು. ವಿಪರ್ಯಾಸವೆಂದರೆ, ನಾವು ಇವತ್ತು ಮೌಲ್ಯಾಧಾರಿತ ರಾಜಕಾರಣದ ಕೊನೆಯ ಕೊಂಡಿ ಎಂದು ಗುರುತಿಸುವ ಸಿದ್ದರಾಮಯ್ಯನವರ ಬೆಂಬಲಿಗರು ಹೀಗೆ ದಾಳಿ ಮಾಡಿದ್ದರು. ಆದರೆ, ಅಭಿವ್ಯಕ್ತಿ ಸ್ವಾತಂತ್ಯ್ರದ ಮೇಲಿನ ಇಂತಹ ದಾಳಿಗಳಿಗೆ ಒಬ್ಬ ಸಂವಿಧಾನವಾದಿ ಜನನಾಯಕ ಹೇಗೆ ಪ್ರತಿಕ್ರಿಯಿಸುತ್ತಾನೆ ಮತ್ತು ಒಬ್ಬ ಜೀವವಿರೋಧಿ ದ್ವೇಷ ರಾಜಕಾರಣಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದಕ್ಕೆ ಈ ಎರಡು ಘಟನೆಗಳು ನಮಗೆ ಲಿಟ್ಮಸ್ ಪರೀಕ್ಷೆಯಾಗಿ ಗೋಚರಿಸುತ್ತವೆ.
ಅದು 2014ನೇ ಇಸವಿ. ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಒಂದು ವರ್ಷವಾಗಿತ್ತಷ್ಟೆ. ಒಮ್ಮೆ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಷ್ಟರಲ್ಲಾಗಲೇ ಅವರಿಗೆ 81 ವರ್ಷ. ಆದರೂ ಕಾರ್ಯಕ್ರಮ ನೀಡುತ್ತಿದ್ದರು. ಮೊದಲೇ ಹೇಳಿದಂತೆ, ಕೋಮುವಾದದ ಅಪಾಯದೆಡೆಗೆ ಜಾಣಮೌನ ತಳೆದಿದ್ದ ಹಿರಣ್ಣಯ್ಯನವರು ಯಥಾ ಪ್ರಕಾರ ಕಾಂಗ್ರೆಸ್ ನಾಯಕರನ್ನು ಟೀಕಿಸುವ ತಮ್ಮ ಎಂದಿನ ಶೈಲಿಯ ವಿಡಂಬನೆಗೆ ಮುಂದಾದರು. ಎಲ್ಲವೂ ಸುಸೂತ್ರವಾಗಿ ಸಾಗಿತ್ತು. ಆದರೆ, ಮಾತಿನ ನಡುವೆ ಸಿದ್ದರಾಮಯ್ಯ ಮತ್ತು ಸೋನಿಯಾ ಗಾಂಧಿಯವರನ್ನು ವೈಯಕ್ತಿಕ ಮಟ್ಟದಲ್ಲಿ ಅಶ್ಲೀಲ ಪದ ಬಳಸಿ ನಿಂದಿಸುವ ಮಟ್ಟಕ್ಕೆ ಹೋಗಿಬಿಟ್ಟರು. ವಿಡಂಬನಾ ಮಾತುಗಾರನಿಗೆ ತಾನು ಬಳಸುತ್ತಿರುವ ಪದಗಳ ಬಗ್ಗೆ ಬಹಳ ಎಚ್ಚರಿಕೆ ಇರಬೇಕು. ಕೇಳುಗರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ, ಲಯಕ್ಕೆ ತಕ್ಕಂತೆ ನಿರರ್ಗಳವಾಗಿ ಮಾತಾಡುವ ಭರಾಟೆಯಲ್ಲಿ ಅಪದ್ಧಗಳು ನುಸುಳುವ ಅಪಾಯ ಹೆಚ್ಚು. ಹಾಗಾಗಿ ಇವರು ಪದಗಳ ಬಳಕೆ ಬಗ್ಗೆ ತುಂಬಾ ನಿಗಾವಹಿಸಬೇಕಾಗುತ್ತೆ. ಅಷ್ಟೂ ದಿನ ಅಂತಹ ಎಚ್ಚರಿಕೆ ವಹಿಸಿದ್ದ ಹಿರಣ್ಣಯ್ಯನವರು ವಯೋಸಹಜ ಕಾರಣಕ್ಕೋ, ಏನೋ ಅವತ್ತು ಕ್ಷುಲ್ಲಕ ಬೈಗುಳದಂತಹ ಅಶ್ಲೀಲ ಪದಗಳನ್ನು ಬಳಸಿಬಿಟ್ಟಿದ್ದರು.
ಮೊದಲೇ ಅದು, ಮೈಸೂರು. ಸಿದ್ದರಾಮಯ್ಯನವರ ತವರು ಕ್ಷೇತ್ರ. ನೆರೆದಿದ್ದವರಲ್ಲಿ ಅವರ ಅಭಿಮಾನಿಗಳೇ ಹೆಚ್ಚು. ಕ್ಷಣಾರ್ಧದಲ್ಲಿ ಗದ್ದಲವೇರ್ಪಟ್ಟಿತು. ಸ್ಟೇಜಿಗೆ ನುಗ್ಗಿ ಚೇರು-ಕುರ್ಚಿಗಳನ್ನು ಕಿತ್ತೆಸೆದರು. ಎಸ್ ನಿಜಲಿಂಗಪ್ಪನವರಂತಹ ತತ್ವಬದ್ಧ ರಾಜಕಾರಣಿಯ ಜೊತೆಗೆ ಇಂತದ್ದೇ ಸ್ಟೇಜಿನ ಮೇಲೆ ಮುಖಾಮುಖಿಯಾಗಿ ಮಾತಾಡಿ ನೀಗಿಸಿಕೊಂಡಿದ್ದ ಹಿರಣ್ಣಯ್ಯನವರು ಅವತ್ತು ಅಕ್ಷರಶಃ ಅಧೀರರಾಗಿದ್ದರು. ಯಾಕೆಂದರೆ, ಇವತ್ತು ತಪ್ಪು ಅವರ ಕಡೆಯಿಂದ ಆಗಿತ್ತು. ವಿಡಂಬನೆಯ ಮಿತಿಯನ್ನು ಮೀರಿ, ಬಳಸಬಾರದ ಪದವನ್ನು ಬಳಸಿದ್ದರು. ಅಂತಹ ಪದ ಬಳಸಿದ್ದಕ್ಕೆ ಆ ವೇದಿಕೆಯಲ್ಲೆ ಕ್ಷಮೆಯನ್ನೂ ಕೇಳಿದರು. ಆದರೂ ಅವರಿಗೆ ಸಮಾಧಾನವಾಗಿರಲಿಲ್ಲ.
ಅವತ್ತು ಭಾನುವಾರವಾದ್ದರಿಂದ ಸಿದ್ದರಾಮಯ್ಯನವರು ಕೂಡಾ ಮೈಸೂರಿನಲ್ಲಿ, ತಮ್ಮ ಮನೆಯಲ್ಲಿದ್ದರು. ವಿಚಾರ ತಿಳಿದ ಹಿರಣ್ಣಯ್ಯ ಸೀದಾ ಅವರ ಮನೆಗೆ ದೌಡಾಯಿಸಿದರು. ನಡೆದ ವಿಷಯ ಅರುಹಿ, ತಮ್ಮಿಂದಾದ ಅಚಾತುರ್ಯಕ್ಕೆ ನೇರ ಕ್ಷಮಾಪಣೆ ಕೇಳಿದರು. ತಮ್ಮ ಪಕ್ಷದ ಕಟು ಟೀಕಾಕಾರ ಎನಿಸಿದ ಹಿರಣ್ಣಯ್ಯನವರನ್ನು ಸಿದ್ದರಾಮಯ್ಯನವರು ಸಿಕ್ಕಿದ್ದೇ ಚಾನ್ಸು ಅಂತ ಮತ್ತಷ್ಟು ಅಧೀರಗೊಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಕೂಡಲೇ ಒಂದು ತುರ್ತು ಪತ್ರಿಕಾಗೋಷ್ಠಿ ಕರೆದು, `ಅದು ಹಿರಣ್ಣಯ್ಯನವರ ಬಾಯಿಂದ ಬಂದ ಅಚಾತುರ್ಯದ ಮಾತು. ಉದ್ದೇಶಪೂರ್ವಕವಾಗಿ ನಿಂದಿಸಿದ್ದಲ್ಲ. ಇದಕ್ಕೆ ನನಗೇ ಬೇಸರವಿಲ್ಲ. ದಯವಿಟ್ಟು ನನ್ನ ಬೆಂಬಲಿಗರೆಂದು ಹೇಳಿಕೊಳ್ಳುವವರು ಈ ವಿವಾದ ಮುಂದುವರೆಸದೆ ಇಲ್ಲಿಗೇ ನಿಲ್ಲಿಸಬೇಕು. ಅವರ ಹಿರಿತನಕ್ಕೆ ನಾವೆಲ್ಲ ಗೌರವ ನೀಡಬೇಕು” ಎಂದು ಹೇಳಿದರು. ಅಲ್ಲದೇ ವಿಶೇಷ ಎಸ್ಕಾರ್ಟ್ ವ್ಯವಸ್ಥೆ ಅಣಿಮಾಡಿ, ಹಿರಣ್ಣಯ್ಯನವರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟರು.
ಬಹಳ ಎಚ್ಚರಿಕೆಯ, ಜಾಣ್ಮೆಯ ವ್ಯಕ್ತಿಯಾದ ಕುನಾಲ್ ಕಮ್ರಾ ಇವತ್ತು ಅಂತಹ ಯಾವುದೇ ಅಶ್ಲೀಲ, ಅಪದ್ಧ ಬೈಗುಳವನ್ನು ಬಳಸಿಲ್ಲ. ಹೆಸರು ಕೂಡಾ ಉಲ್ಲೇಖಿಸದೆ ವಿಡಂಬನೆಯ ಮಾತುಗಳನ್ನಾಡಿದ್ದ. ಆದರೆ ಶಿಂಧೆಯ ಶಿವಸೇನೆ ಬಣ ನುಗ್ಗಿ ದಾಂಧಲೆ ನಡೆಸಿದೆ. ತಮ್ಮ ಬೆಂಬಲಿಗರ ಈ ವರ್ತನೆಯನ್ನು ಖಂಡಿಸಬೇಕಿದ್ದ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಂಧೆ `ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತೆ’ ಎಂದು ಪ್ರತೀಕಾರದ, ಪ್ರಚೋದನೆಯ ಮಾತಾಡಿದ್ದಾರೆ. ಕೇಸು ಕೂಡಾ ದಾಖಲಿಸಿದ್ದಾರೆ. ಸಿದ್ದರಾಮಯ್ಯನವರ ಬೆಂಬಲಿಗರೆನಿಸಿಕೊಂಡವರು ವರ್ತಿಸಿದ್ದೂ ತಪ್ಪೂ; ಶಿಂಧೆಯ ಬೆಂಬಗಲಿಗರು ವರ್ತಿಸಿದ್ದೂ ತಪ್ಪು. ಆದರೆ ನಾಯಕನಾಗಿ ಸಿದ್ದರಾಮಯ್ಯ ಆ ಪ್ರಕರಣವನ್ನು ನಿಭಾಯಿಸಿದ ರೀತಿಗೂ, ಶಿಂಧೆ ಕಿಡಿಕಾರುತ್ತಿರುವ ಪ್ರತೀಕಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಾವೀಗ ಗ್ರಹಿಸಬೇಕಿರುವುದು ಇಂತಹ ವ್ಯತ್ಯಾಸಗಳನ್ನು….
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




