ಸಾರ್ತ್ರೆಯ ‘ನಿರೀಶ್ವರವಾದಿ ಆಸ್ತಿತ್ವವಾದ’ ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಆಕರ್ಷಕ ಚಿಂತನೆಯಾಗಿತ್ತು. ಸಾಹಿತಿಗಳು ಇದು ಜಡ ಎಂದು ವಿನಾಕಾರಣ ಟೀಕಿಸುತ್ತಿದ್ದರೂ ಸಹ ಕಾಫ್ಕಾನ ತಲ್ಲಣಗಳು, ಯಾತನೆಯಷ್ಟೆ ಸಾರ್ತ್ರೆಯ ಅಸ್ತಿತ್ವವಾದವೂ ಸಹ ಮಾನವೀಯತೆಯ ಬಂಡಾಯದ ದಾರಿಯಾಗಿತ್ತು. ಜೀವಂತಿಕೆಯಾಗಿತ್ತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ದಾಸ್ತೋವಸ್ಕಿಯ ‘ಬಡಜನರ’ ಅಸಹಾಯಕತೆಗೆ ಸಾರ್ತ್ರೆಯಂತಹ ಚಿಂತಕರು ಸಾಮಾಜಿಕ -ರಾಜಕೀಯ ಚೌಕಟ್ಟು ಜೋಡಿಸಿ ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತಗೊಳಿಸಲು ಯತ್ನಿಸಿದರು. ರಷ್ಯನ್ ಲೇಖಕರು ಬಿಚ್ಚಿಟ್ಟ 19ನೇ ಶತಮಾನದ ಹಿಂಸೆ ಮತ್ತು ನರಳಾಟವನ್ನು ಸಾರ್ತ್ರೆಯಂತಹ ಚಿಂತಕರು ಇಪ್ಪತ್ತನೇ ಶತಮಾನದಲ್ಲಿ ಮರು ಚರ್ಚಿಸಿದರು. ಆ ಲೇಖಕರ ಕಲಾತ್ಮಕತೆಯ ಸಹಜತೆ ಚಿಂತಕರಿಗೆ ಅಚ್ಚರಿ.
ಈ ಬಂಡಾಯ – ಕಲಾತ್ಮಕತೆ ಸೋಜಿಗವನ್ನು ಅರಿತಿದ್ದ ಸಾರ್ತ್ರೆಯಂತಹ ಚಿಂತಕರು ‘ಬ್ಯಾಡ್ ಫೇತ್’ ಕುರಿತು ನುಡಿಗಟ್ಟು ರೂಪಿಸಲು ಯತ್ನಿಸುತ್ತಲೇ ವೈಯಕ್ತಿಕ ನೈತಿಕತೆ, ಬದ್ಧತೆ ಉಳಿಸಿಕೊಂಡವರು ಮಾತ್ರ ಸಮಾಜದ ಒಳಿತು ಕೆಡಕು ಕುರಿತು ವಿಮರ್ಶೆ ಮಾಡುವ ವಿಶ್ವಾಸಾರ್ಹತೆ ಉಳಿಸಿಕೊಂಡಿರುತ್ತಾರೆ ಎಂದು ನಂಬಿದ್ದರು.
ಹೆಗೆಲ್ ನ ‘ಮಾಲೀಕ-ಗುಲಾಮ’ ತತ್ವಮೀಮಾಂಸೆಯನ್ನು ವ್ಯಕ್ತಿಗತ ನೆಲೆ ಹಾಗೂ ಸಾಮಾಜಿಕ ಚೌಕಟ್ಟಿನಲ್ಲಿ ಮರು ಕಟ್ಟಲು ಸಾಹಸಪಡುತ್ತಾ ಈ ‘ಸಾಮಾಜಿಕ ಗುಂಪು’ ಯಾವುದನ್ನು, ಏನನ್ನು define ಮಾಡುತ್ತದೆ ಎಂದು ಪ್ರಶ್ನಿಸಿದರು. ಬಹುಶಃ ಇಂದಿಗೂ ಉತ್ತರ ಸಿಕ್ಕಿದಂತಿಲ್ಲ.
ಇದರ ಚುಂಗನ್ನು ಹಿಡಿದು ‘ಹುಲಿಯೂರಿನ ಸರಹದ್ದು’ ಬರೆದ ಲೇಖಕರ ಯೌವ್ವನದ ವ್ಯಗ್ರತೆ, ಅನಿಶ್ಚಿತತೆಯು ‘ಜುಗಾರಿ ಕ್ರಾಸ್’ ಬರೆಯುವಷ್ಟರಲ್ಲಿ ಕಳೆದು ಹೋಗಿ ಜಾಗತೀಕರಣದ ಲಾಭ ನಷ್ಟಗಳನ್ನು ಸರಳೀಕರಿಸುವ ಕಥನಕ್ಕೆ ಮರುಳಾಗಿದ್ದು ಕುರಿತು ನಾನು ಹೇಳಿದಾಗ ನನ್ನ ಮೇಲೆ ಮುಗಿಬಿದ್ದವರೇ ಹೆಚ್ಚು.
‘ಯಾವ ಬೆಲೆ ತೆತ್ತು ‘ ಎಂದು ಪ್ರಶ್ನಿಸಿ ನೊಬೆಲ್ ಪ್ರಶಸ್ತಿ ತಿರಸ್ಕರಿಸಿದ ಸಾರ್ತ್ರೆಯ ವೈಯಕ್ತಿಕ ನೈತಿಕತೆ ಮತ್ತು ಕಠೋರ ಸಂಯಮದಷ್ಟೇ ಮುಖ್ಯ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಕಾಮೂನ ವೈಯಕ್ತಿಕ ಅನಿಶ್ಚಿತತೆ, ವ್ಯಕ್ತಿ, ವಿಶಿಷ್ಟತೆ ಕುರಿತು ಅನುಮಾನ, ಫ್ಯಾಸಿಸಂ ವಿರುದ್ಧ ತಳಮಳ ಮತ್ತು ಕಲಾತ್ಮಕತೆಯ ಸಹಜತೆ. ಇಬ್ಬರೂ ವ್ಯಕ್ತಿಗತ ನೆಲೆಯಲ್ಲಿ ಪ್ರಾಮಾಣಿಕತೆ, ಉಳಿಸಿಕೊಂಡಿದ್ದರು. ಇದನ್ನು ಸಾಧಿಸುವುದು ತುಂಬಾ ಕಷ್ಟ. ಆದರೆ ಈ ಹಂತವನ್ನು ತಲುಪಲಾದರೂ ಪ್ರಯತ್ನಿಸುವ ಪ್ರಾಮಾಣಿಕತೆಯಿರಬೇಕು. ಇದು ಬೆಂಕಿಯಲ್ಲಿ ಬೇಯುವ ಅನಿವಾರ್ಯತೆ…
ಇಲ್ಲದೇ ಹೋದರೆ…..
– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು




