ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಮೂಲದ ವ್ಯಕ್ತಿಯ ವಿವಾದಾತ್ಮಕ ಪೋಸ್ಟ್ ವೈರಲ್!
ಮಾಲ್ಗುಡಿ ಎಕ್ಸ್‌ಪ್ರೆಸ್ ವಿಶೇಷ ವರದಿ
ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ದೇಶದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಗಳನ್ನು ಬಹಿರಂಗವಾಗಿ ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿರುವ ಪೋಸ್ಟ್ ಒಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಕಳ ಮೂಲದ ಲಕ್ಷ್ಮಣ ಆಕಾಶೆ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಇಂತಹ ಪ್ರಚೋದನಕಾರಿ ಬರಹವನ್ನು ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
- ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನೆ
- ತಪ್ಪು ಮುಚ್ಚಿಕೊಳ್ಳಲು ಧರ್ಮದ ಲೇಪನ ಹಚ್ಚುವ ಬಿಜೆಪಿ ನಾಯಕರು
- ರಾಷ್ಟ್ರಪಿತ ಗಾಂಧೀಜಿ ಹಾಗೂ ಮಾಜಿ ಪ್ರಧಾನಿಗಳ ಹತ್ಯೆ ಸಮರ್ಥನೆ
- ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ನಾಯಕರಿಂದ ರಾಜಕೀಯ ಒತ್ತಡ: ಆರ್.ಅಶೋಕ
- ದುರುದ್ದೇಶಪೂರ್ವಕ Form-7 ಸಲ್ಲಿಕೆ ಕುರಿತು SIT ತನಿಖೆ ನಡೆಸಿ
ಪುಸ್ತಕ ಹಿಡಿದು ಹತ್ಯೆ ಸಮರ್ಥನೆ: ಸದರಿ ವ್ಯಕ್ತಿಯು ‘ನಾನೇಕೆ ಗಾಂಧೀಜಿಯವರ ವಧೆ ಮಾಡಿದೆ?’ ಎಂಬ ಕೃತಿಯನ್ನು ಕೈಯಲ್ಲಿ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದು, ಮಹಾತ್ಮ ಗಾಂಧಿಯವರ ಹತ್ಯೆಯನ್ನು ‘ಕೊಲೆ’ ಎನ್ನದೆ ‘ವಧೆ’ ಎಂದು ಸಮರ್ಥಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಗಾಂಧೀಜಿಯ ಹಂತಕ ನಾಥೂರಾಂ ಗೋಡ್ಸೆಯನ್ನು ‘ಮಹಾತ್ಮ’ ಹಾಗೂ ‘ದೇಶಪ್ರೇಮಿ’ ಎಂದು ಕರೆದು ವೈಭವೀಕರಿಸಿದ್ದಾನೆ.
ಸಂವಿಧಾನ ಹಾಗೂ ಮಾಜಿ ಪ್ರಧಾನಿಗಳ ಹತ್ಯೆಯ ಪ್ರಸ್ತಾಪ: ಈ ಬರಹದಲ್ಲಿ ದೇಶದ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಗಳ ಕುರಿತಾಗಿಯೂ ಅವಹೇಳನಕಾರಿಯಾಗಿ ಮಾತನಾಡಲಾಗಿದ್ದು, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಗಳನ್ನೂ ಪ್ರಸ್ತಾಪಿಸಿ ಆ ಘಟನೆಗಳನ್ನು ಲಘುವಾಗಿ ಬಿಂಬಿಸಲಾಗಿದೆ. ಇಂತಹ ಸಮಾಜಘಾತುಕ ಹಾಗೂ ದ್ವೇಷಪೂರಿತ ಹೇಳಿಕೆಗಳು ದೇಶದ ಸಾರ್ವಭೌಮತ್ವ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.
ಕಾನೂನಿನಲ್ಲಿ ಇದಕ್ಕೆ ಶಿಕ್ಷೆ ಏನು? ಕಾನೂನು ತಜ್ಞರ ವಿಶ್ಲೇಷಣೆ: ಭಾರತೀಯ ಸಂವಿಧಾನ ದೇಶದ ಮೂಲಭೂತ ಕಾನೂನು ಮತ್ತು ನಾಗರಿಕರ ಹಕ್ಕುಗಳನ್ನು ವ್ಯಾಖ್ಯಾನಿಸುತ್ತದೆ; ಅಪರಾಧ ಹಾಗೂ ಶಿಕ್ಷೆಗಳ ವಿವರಗಳನ್ನು ಭಾರತೀಯ ಅಪರಾಧ ದಂಡ ಸಂಹಿತೆ (ಹಿಂದಿನ IPC, ಪ್ರಸ್ತುತ ಭಾರತೀಯ ನ್ಯಾಯ ಸಂಹಿತೆ – BNS) ಮತ್ತು ಸಂಬಂಧಿತ ವಿಶೇಷ ಕಾಯ್ದೆಗಳಲ್ಲಿ ಉಲ್ಲೇಖಿಸಲಾಗಿದೆ. ಕೊಲೆಯನ್ನು ಸಮರ್ಥಿಸುವುದು, ಪ್ರಚೋದಿಸುವುದು ಅಥವಾ ಪ್ರೋತ್ಸಾಹಿಸುವುದರ ಕಾನೂನಾತ್ಮಕ ಅಂಶಗಳು ಮತ್ತು ಶಿಕ್ಷೆಗಳು ಈ ಕೆಳಗಿನಂತಿವೆ:
• ಅಪರಾಧಕ್ಕೆ ಪ್ರಚೋದನೆ ನೀಡುವುದು (Abetment):
o ಕೊಲೆಯನ್ನು ಸಮರ್ಥಿಸುತ್ತಾ ಮತ್ತೊಬ್ಬರಿಗೆ ಕೊಲೆ ಮಾಡಲು ಪ್ರೇರಣೆ ಅಥವಾ ಪ್ರಚೋದನೆ ನೀಡಿದರೆ, ಅದನ್ನು ‘ಪ್ರಚೋದನೆ’ ಎಂದು ಪರಿಗಣಿಸಲಾಗುತ್ತದೆ.
o ಪ್ರಚೋದನೆಯ ಪರಿಣಾಮವಾಗಿ ಕೊಲೆ ನಡೆದರೆ, ಪ್ರಚೋದನೆ ನೀಡಿದವರಿಗೂ ಸಹ ಕೊಲೆಗಾರನಿಗೆ ನೀಡುವ ಶಿಕ್ಷೆಯೇ (ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ) ಅನ್ವಯವಾಗುತ್ತದೆ.
o ಪ್ರಚೋದನೆಯ ನಂತರ ಕೊಲೆ ನಡೆಯದಿದ್ದರೂ, ಗಂಭೀರ ಅಪರಾಧಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ 7 ರಿಂದ 14 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
• ಹಿಂಸೆಗೆ ಪ್ರಚೋದನೆ ಅಥವಾ ಶಾಂತಿ ಭಂಗ (Hate Speech / Incitement):
o ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮೂಲಕ ಕೊಲೆಯನ್ನು ಸಮರ್ಥಿಸಿ, ಆ ಮೂಲಕ ಸಮಾಜದಲ್ಲಿ ದ್ವೇಷ, ಹಿಂಸಾಚಾರ ಅಥವಾ ಗಲಭೆಗೆ ಕಾರಣವಾದರೆ:
o ಸಾರ್ವಜನಿಕ ಶಾಂತಿ ಕದಡಿದ ಮತ್ತು ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
• ಅಪರಾಧಿಕ ಪಿತೂರಿ (Criminal Conspiracy):
o ಕೊಲೆಯನ್ನು ಸಮರ್ಥಿಸುತ್ತಾ ಅದಕ್ಕೆ ಪೂರ್ವಸಿದ್ಧತೆ ಅಥವಾ ಯೋಜನೆಯಲ್ಲಿ ಭಾಗಿಯಾಗಿದ್ದರೆ, ಅದನ್ನು ಅಪರಾಧಿಕ ಪಿತೂರಿ ಎಂದು ಪರಿಗಣಿಸಿ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
• ಸಂವಿಧಾನದ ವಾಕ್ ಸ್ವಾತಂತ್ರ್ಯದ ಮಿತಿ (Article 19(2)):
o ಭಾರತೀಯ ಸಂವಿಧಾನದ 19(1)(a) ವಿಧಿಯು ವಾಕ್ ಸ್ವಾತಂತ್ರ್ಯವನ್ನು ನೀಡಿದ್ದರೂ, 19(2)ನೇ ವಿಧಿಯ ಪ್ರಕಾರ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ಅಪರಾಧಕ್ಕೆ ಪ್ರಚೋದನೆ ನೀಡುವಂತಹ ಮಾತುಗಳಿಗೆ ಯಾವುದೇ ರಕ್ಷಣೆ ಇರುವುದಿಲ್ಲ. ಕೊಲೆಯನ್ನು ಸಮರ್ಥಿಸುವುದು ಸಂವಿಧಾನಾತ್ಮಕ ವಾಕ್ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ.
ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ: ರಾಷ್ಟ್ರ ನಾಯಕರ ಹತ್ಯೆಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿ, ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಹಾಗೂ ಪ್ರಚೋದನಕಾರಿ ವಿಚಾರಗಳನ್ನು ಹರಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಮತ್ತು ವಿವಿಧ ಸಂಘಟನೆಗಳು ಬಲವಾಗಿ ಆಗ್ರಹಿಸಿವೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ರಂಗಕರ್ಮಿ ಯೋಗೇಶ್ ಮಾಸ್ಟರ್, ಈತ ದೇಶಪ್ರೇಮಿಯಂತೆ, ಪುನೀತ್ ಕೆರೇಹಳ್ಳಿ ಚಿಂತಕನಂತೆ, ಗಾಂಧೀಜಿ ಮತ್ತು ಇಂದಿರಾಗಾಂಧಿ ರಾಜೀವ್ ಗಾಂಧಿ ಹತ್ಯೆ ಕೂಡಾ ಸಮರ್ಥನೀಯವಂತೆ. ಅದು ಹತ್ಯೆ ಅಲ್ಲವಂತೆ ವಧೆ ಅಂತೆ. ದೇವಿ ಚಂಡಮುಂಡರನ್ನು ವಧಿಸಿದಂತೆ. ಇವನು ಬ್ರಾಹ್ಮಣನಂತೆ. ಇದು ಕೋಮು ಪ್ರಚೋದನೆ ಮತ್ತು ಹತ್ಯೆಗಳ ಸಮರ್ಥನೆಯ ಆಧಾರದಲ್ಲಿ ಕೇಸ್ ಹಾಕಿ ಬಂಧಿಸಬೇಕು. ಇಂಥವರೇ ಕೊಲೆಗಳನ್ನು ಸಮರ್ಥಿಸುತ್ತಾ ಕೊಲೆಗಾರರನ್ನು ಹುಟ್ಟು ಹಾಕುತ್ತಿರುವುದು. ಇಂಥಾ ಮನುಷ್ಯರಿಗೆ ಕಾನೂನಿನ ರೀತಿಯಲ್ಲಿ ಬುದ್ಧಿ ಕಲಿಸಬೇಕು. ತುಂಬಾ ಅಪಾಯಕಾರಿ ಜನ ಎಂದು ಅಭಿಪ್ರಾಯಪಟ್ಟಿದ್ದಾರೆ.








