ಸರಕಾರಿ ಆಸ್ತಿ ಮೇಲೆ ಪ್ರಭಾವೀ ಕುಳಗಳ ಕುರಿತು ಸದನದಲ್ಲಿ ಬಹಿರಂಗ: ಹೆಚ್.ಡಿ.ಕುಮಾರಸ್ವಾಮಿ

4 years ago

ಬೆಂಗಳೂರು: ರಾಜ್ಯ ಸರಕಾರದ ಅತಿದೊಡ್ಡ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ, ದಾಖಲೆಗಳನ್ನು ಕೊಡಿ ಎಂದು ಪದೇಪದೆ ನನ್ನನ್ನು  ಕೆಣಕಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ  ಸರಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.

ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು‌‌ ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರಕಾರದ ಹಗರಣಗಳ  ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದರು.

ನಾನು ಸುಖಾಸುಮ್ಮನೆ ಸದನ ಸಮಯವನ್ನು ಹಾಳು ಮಾಡಲಾರೆ. ಇವತ್ತಿನ ಜೆಡಿಎಲ್ ಪಿ ಸಭೆಯಲ್ಲಿಯೂ ಈ ವಿಷಯದ ಸೇರಿ ಹಲವು ವಿಚಾರ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಬೆಂಗಳೂರು ನಗರ ಸೇರಿ 22 ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಜನ ಸಂಕಟದಲ್ಲಿ ಸಿಲುಕಿದ್ದಾರೆ. ಇದರಿಂದ ದೊಡ್ಡಮಟ್ಟದ ನಷ್ಟವಾಗಿದೆ. ಬೆಳೆ ಹಾನಿ, ಮನೆ ಕುಸಿತ ಆಗಿದೆ. ಈ ಕುರಿತು ಸದನದಲ್ಲಿ ವಿವರವಾಗಿ ಚರ್ಚೆ ಮಾಡಲಾಗುವುದು ಎಂದರು.

ಪರ್ಸೆಂಟೇಜ್ ಬಗ್ಗೆ ರಾಜ್ಯದ ಉದ್ದಗಲಕ್ಕೂ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಅಧಿಕೃತ ವಿರೋಧ ಪಕ್ಷ, ಆಳುವ ಪಕ್ಷಗಳ ನಡುವೆ ರಾಜ್ಯದಲ್ಲಿ ನಡೆಯುತ್ತಿರುವ ಲೂಟಿ ಬಗ್ಗೆ ಬರೀ ಮಾತಿನಲ್ಲಿ ಪೈಪೋಟಿ ನಡೆಯುತ್ತಿದೆ. ನಿಖರವಾಗಿ ದಾಖಲೆಗಳು ಇದ್ದರೆ ಚರ್ಚೆ ಮಾಡಿ ಎಂದು ನಾನು ನಮ್ಮ ಶಾಸಕರಿಗೆ ತಿಳಿಸಿದ್ದೇನೆ. ನಾನು ಕೂಡ ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ಸುಖಾಸುಮ್ಮನೆ ಸದನದಲ್ಲಿ ಸಂತೆ ಭಾಷಣ ಮಾಡಿದರೆ ಪ್ರಯೋಜನವಿಲ್ಲ. ಸದನದ ಅಮೂಲ್ಯ ಸಮಯ ಸದುಪಯೋಗ ಮಾಡಿಕೊಳ್ಳುವಂತೆ ಶಾಸಕರಿಗೆ ಸಲಹೆ ನೀಡಿದ್ದೇನೆ ಎಂದರು.

ಸುಮ್ಮನೆ ವಿಚಾರ ಇಲ್ಲದೆ, ದಾಖಲೆ ಇಲ್ಲದೇ ಮಾತಾಡೋದ್ರಿಂದ ಸದನದ ಕಲಾಪಕ್ಕೆ ಧಕ್ಕೆ ಆಗಲಿದೆ. ಇತ್ತೀಚೆಗೆ ನಾನು ಸದನದ ಕಲಾಪದಲ್ಲಿ ದೊಡ್ಡ ಮಟ್ಟದ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಯಾವುದಾದರೂ ಮುಖ್ಯ ವಿಚಾರ ಇದ್ದಾಗ ಭಾಗಿಯಾಗಿದ್ದೇನೆ. ನಾನು ಭಾಗಿಯಾದಾಗ ದಾಖಲೆ ಸಮೇತ ಮಾತನಾಡಿದ್ದೇನೆ ಎಂದರು.

ಒಂದಿಷ್ಟು ಜನ ಹೇಳ್ತಾ ಇದ್ದಾರೆ, ಸದನದಲ್ಲಿ ಕುಮಾರಸ್ವಾಮಿ ಏನು ಮಾತಾಡಿ ಬಿಟ್ಟಾರು ಅಂತ. ಯಾರೋ ಸುಮ್ಮನೆ ನನ್ನನ್ನು ಸುಖಾಸುಮ್ಮನೆ ಅವರತ್ರ ನಾನು ಪಾಠ ಹೇಳಿಸಿಕೊಳ್ಳಬೇಕಿದೆ. ಒಂದಿಷ್ಟು ದಾಖಲೆಗಳನ್ನು ನಾನು ಸ್ಯಾಂಪಲ್ ಆಗಿ ಬಹಿರಂಗ ಮಾಡುತ್ತೇನೆ. ಇದನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ. ಸಾರ್ವಜನಿಕ ಆಸ್ತಿಯನ್ನು ಹಣಕ್ಕೋಸ್ಕರ ಮಾರಾಟಕ್ಕೆ ಇಡ್ತಾ ಇದ್ದಾರೆ. ಇದಕ್ಕೆ ತಡೆ ಹಾಕಬೇಕಿದೆ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ರೀತಿ ಇದೆ ಎನ್ನುವುದು ನಾಡಿನ‌ ಜನತೆಗೆ ಹಾಗೂ ಪ್ರಧಾನಿ ಮೋದಿ ಅವರಿಗೂ ಗೊತ್ತಾಗಲಿ. ಅದಕ್ಕೆ ಎಲ್ಲದಕ್ಕೂ ದಾಖಲೆ ಇಟ್ಟು ಮಾತನಾಡುತ್ತೇನೆ. ಇದು ಭಾರೀ ಹಗರಣ. ಸರ್ಕಾರಕ್ಕೆ ಬರಬೇಕಾದ ಎಂಟತ್ತು ಸಾವಿರ ಕೋಟಿ ರೂಪಾಯಿ ಕಬಳಿಸುವ ಹುನ್ನಾರ ನಡೆದಿದೆ ಎಂದರು.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ತೃತೀಯ ರಂಗ ಅನ್ನೋದು ಪ್ರಶ್ನೆ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಶಕ್ತಿಯ ಕನಸು ಅವರದ್ದು. ಕೆಸಿಆರ್ ಅವರು ದೇಶದ ಸಮಸ್ಯೆ ಪರಿಹಾರಕ್ಕೆ ಅವರದ್ದೇ ಆದ ಒಂದು ಕಲ್ಪನೆ ಇಟ್ಟುಕೊಂಡಿದ್ದಾರೆ. ರೈತರ ವಿಚಾರದಲ್ಲಿ ಯಾವ ರೀತಿ ಸಹಾಯ ಆಗಬೇಕು, ರಾಷ್ಟ್ರ ಮಟ್ಟದಲ್ಲಿ ಯಾವ ರೀತಿ ಹೋಗಬೇಕು ಎಂಬ ವಿಚಾರ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ನಮ್ಮ ಬೆಂಬಲ ಕೋರಿದ್ದಾರೆ. ನಾವು ಅವರ ಜೊತೆ ಕೈ ಜೋಡಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ ಎಂದರು.

ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಜೆಡಿಎಸ್ ಗೆ ಇದು ಕೊನೆಯ ಚುನಾವಣೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ನಾನೇ ಅನೇಕ ಬಾರಿ ಹೇಳಿದ್ದೇನೆ. ಈ ಚುನಾವಣೆ ನಮಗೆ ನಿರ್ಣಾಯಕ. ಈ ಚುನಾವಣೆ ಮುಂದಿನ ದಿನಗಳಿಗೆ ಬುನಾದಿ ಇದ್ದಂತೆ ಮುಂದಿನ 25 ವರ್ಷಕ್ಕೆ ಏನು ಆಗಬೇಕು ಅನ್ನೋದು ಮುಖ್ಯ. ಅದಕ್ಕಾಗಿ ಈ ಚುನಾವಣೆ ತುಂಬಾ ಮುಖ್ಯ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.

Leave a Reply