ಬೆಂಗಳೂರು: ಬಿ.ಬಿ.ಎಂ.ಪಿ. 243 ವಾರ್ಡ್ ವಿಂಗಡಣೆಯನ್ನು ಸಮರ್ಪಕವಾಗಿ ವಿಂಗಡನೆ ಮಾಡಿದ್ದರೆ ಸಾರ್ವಜನಿಕರಿಗೆ ಸುಲಭವಾಗಿ ಆಡಳಿತ ತಲುಪುತ್ತಿತ್ತು. ಆದರೆ ರಾಜಕಾರಣಿಗಳ ಮಾತು ಕೇಳಿ ಅಧಿಕಾರಿಗಳು ಅಸಮರ್ಪಕ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಆರೋಪಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡ್ ಮತ್ತು ತಿಲಕ್ ನಗರ ವಾರ್ಡ್ ಗಳನ್ನ ಅವೈಜ್ಞಾನಿಕ ವಿಂಗಡನೆ ಮಾಡಿರುವ ರಾಜ್ಯ ಸರ್ಕಾರ ಮತ್ತು ಬಿ.ಬಿ.ಎಂ.ಪಿ.ವಿರುದ್ದ ಕಾಂಗ್ರೆಸ್ ಪಕ್ಷ ಮತ್ತು ಸ್ವಯಂ ಸೇವಾ ಸಂಘಟನೆಗಳು, ಸಾರ್ವಜನಿಕರು ಭೈರಸಂದ್ರ ವಾರ್ಡ್ ಉಷಾ ಅಪಾರ್ಟ್ ಮೆಂಟ್ ಮುಂಭಾಗದಲ್ಲಿ ಬೃಹತ್ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಪ್ರತಿಕ್ರಿಯಿಸಿದ ಅವರು, ಎಲ್ಲ ಧರ್ಮ, ಜಾತಿಯವರು ಒಟ್ಟಾಗಿ ಇದ್ದೀವಿ. ಆದರೆ ಬಿ.ಜೆ.ಪಿ. ಸರ್ಕಾರ ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡಿದೆ ಎಂದರು.
ವಾರ್ಡ್ ಕಛೇರಿ ಮತ್ತು ಮತದಾನ ಕೇಂದ್ರದ ಹತ್ತಿರ ಇರುವ ವಾರ್ಡ್ ಗೆ ಸೇರಿಸಬೇಕು. ಆದರೆ 2 ಕಿಲೋ ಮೀಟರ್ ದೂರದ ಪಕ್ಕದ ವಾರ್ಡ್ ಗೆ ಸೇರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು ಇರುವ ಕಡೆ ವಾರ್ಡ್ ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ. ಅಧಿಕಾರಿಗಳು ರಾಜ್ಯ ಸರ್ಕಾರದ ಕೈಗೊಂಬೆಯಾಗಿ ವಾರ್ಡ್ ವಿಂಗಡಣೆನ್ನು ಅವೈಜ್ಞಾನಿಕವಾಗಿ ವಿಂಗಡಣೆ ಮಾಡಿದ್ದಾರೆ. ವಾರ್ಡ್ ವಿಂಗಡಣೆ ಸಂದರ್ಭದಲ್ಲಿ ಶಾಸಕರ ಅಭಿಪ್ರಾಯ ಕೇಳಿಲ್ಲ. ಇಂದು ಅವೈಜ್ಞಾನಿಕ ವಾರ್ಡ್ ವಿಂಗಡಣೆ ಬಗ್ಗೆ ದೂರು ಸಲ್ಲಿಸಲಾಗುವುದು ಎಂದರು.
ಆಡಳಿತ ಪಕ್ಷದ ಮಾಜಿ ನಾಯಕ ಎನ್.ನಾಗರಾಜು ಮಾತನಾಡಿ, ಬಿ.ಜೆ.ಪಿ. ಸರ್ಕಾರ ವೈಯಕ್ತಿಕ ಹಿತಾಸಕ್ತಿ ಮತ್ತು ಕೆಲವು ಬಿ.ಜೆ.ಪಿ. ನಾಯಕರು ದುರುದ್ದೇಶದಿಂದ ಭೈರಸಂದ್ರ ವಾರ್ಡ್ ನಲ್ಲಿರುವ 80 ಅಡಿ ಭಾಗದಷ್ಟು ಭಾಗವನ್ನು 2 ಕಿಲೋ ಮೀಟರ್ ದೂರದಲ್ಲಿರುವ ಪಕ್ಕದ ವಾರ್ಡ್ ಗೆ ಮತದಾರರನ್ನು ಸೇರಿಸಿ ಮರು ವಿಂಗಡಣೆ ಮಾಡಿದ್ದಾರೆ ಎಂದರು.
ಮತದಾರರು ಮತ್ತು ಸ್ಥಳೀಯ ನಿವಾಸಿಗಳಿಗೆ ವಾರ್ಡ್ ಕಛೇರಿಗೆ ಬರಲು ಮತ್ತು ಮತದಾನ ಮಾಡಲು ಬಹುದೂರ ಸಂಚರಿಸಬೇಕು. ಒಂದು ವರ್ಗದ ಜನರನ್ನು ಹೊಂದಿರುವ ಪ್ರದೇಶವನ್ನು ವಿಂಗಡಣೆ ಮಾಡಿ, ಕುತಂತ್ರವಾಗಿ ಗೆಲ್ಲಬಹುದು ಎಂಬ ಕುತಂತ್ರ ರೂಪಿಸಿದ್ದಾರೆ. ಜಾತಿ, ಜಾತಿ ನಡುವೆ ಸಂಘರ್ಷ ತರುವ ಹಾಗೇ ಮಾಡಿದ್ದಾರೆ. ಬಿ.ಜೆ.ಪಿ. ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿ.ಬಿ.ಎಂ.ಪಿ. ಮತ್ತು ನಗರಾಭಿವೃದ್ದಿ ಇಲಾಖೆ ಸರ್ಕಾರದ ಕೈಗೊಂಬೆಯಾಗಿ ಅವೈಜ್ಞಾನಿವಾಗಿ ವಾರ್ಡ್ ವಿಂಗಡಣೆ ಮಾಡಿದ್ದಾರೆ. ವೈಜ್ಞಾನಿಕವಾಗಿ ವಿಂಗಡಣೆ ಮತದಾರರಿಗೆ ನ್ಯಾಯ ಒದಗಿಸಬೇಕು ಬಿ.ಬಿ.ಎಂ.ಪಿ. ಮುಖ್ಯ ಆಯುಕ್ತರಿಗೆ ಮನವಿ ಮಾಡಲಾಗುವುದು. ನಮಗೆ ನ್ಯಾಯ ಸಿಗದೇ ಹೋದರೆ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಕಾರರು ಹೇಳಿದರು.
ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಬಿ.ಬಿ.ಎಂ.ಪಿ. ಸದಸ್ಯರಾದ ಮೊಹಮ್ಮದ್ ರಿಜ್ಞಾನ್, ಮಂಜುನಾಥ್, ಸಮಿವುಲ್ಲ, ಭೈರಸಂದ್ರ ಎಲ್.ಐ.ಸಿ. ಕಾಲೋನಿ ವೆಲ್ ಫೇರ್ ಆಸೋಸಿಯೇಷನ್ ಅಧ್ಯಕ್ಷ ಬಾಬುರಾವ್, ಪ್ರಾಂಕ್ ಮಾರ್ಥ್, ಪರಮೇಶ್ವರನ್, ಆಚಾರ್ಯ, ಕೆನರಾ ಬ್ಯಾಂಕ್ ಕಾಲೋನಿ, ಜಿ.ಹನುಮಂತಪ್ಪ ಲೇಔಟ್ ನಿವಾಸಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



