ನಿರಂಕುಶಾಧಿಕಾರ ಮತ್ತು ಧಾರ್ಮಿಕ ಮತಾಂಧತೆಯನ್ನು ಗಟ್ಟಿದನಿಯಲ್ಲಿ ಖಂಡಿಸಬೇಕು: ಜನಶಕ್ತಿ

4 years ago

ಬೆಂಗಳೂರು: ಪ್ರಜಾತಂತ್ರದ ಬುಡಕ್ಕೆ ಕೊಡಲಿಯೇಟು ನೀಡುತ್ತಿರುವ ನಿರಂಕುಶಾಧಿಕಾರವನ್ನೂ ಮತ್ತು ಧಾರ್ಮಿಕ ಮತಾಂಧತೆಯನ್ನೂ ಗಟ್ಟಿದನಿಯಲ್ಲಿ ಖಂಡಿಸುವ ಅಗತ್ಯವಿದೆ ಎಂದು ಕರ್ನಾಟಕ ಜನಶಕ್ತಿ ಪತ್ರಿಕಾ ಪ್ರಕಟಣೆ ನೀಡಿದೆ.

ಮತಾಂಧತೆಗೆ ಜಾತಿ-ಧರ್ಮವಿಲ್ಲ

ಮತಾಂಧತೆ ಅಳಿಯಲಿ, ಮಾನವತೆ ಬೆಳೆಯಲಿ

ಭಾರತದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರಜಾತಂತ್ರವಾದಿ ನ್ಯಾಯವಾದಿಗಳು, ಚಿಂತಕರು, ಹೋರಾಟಗಾರರು, ಪತ್ರಕರ್ತರ ಬಂಧನಗಳು ಸರಣಿ ರೂಪದಲ್ಲಿ ನಡೆಯುತ್ತಿರುವುದು ಎಲ್ಲ ಪ್ರಜ್ಞಾವಂತ ಪ್ರಜೆಗಳಲ್ಲಿ ಆತಂಕ ಉಂಟುಮಾಡಿದ್ದರೆ, ಮತ್ತೊ‌ಂದೆಡೆ ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಸಂಘಪರಿವಾರದ ಬೆಂಬಲಿಗನಾದ ಟೈಲರ್ ಕನ್ಹಯ್ಯ ಲಾಲನ ಕೊಲೆಯು ಧಾರ್ಮಿಕ ಮತಾಂಧತೆಯ ಕ್ರೂರ ಪರಿಣಾಮಗಳ ಬಗ್ಗೆ ಎಲ್ಲರನ್ನೂ ಚಿಂತೆಗೀಡು ಮಾಡಿದೆ ಎಂದಿದೆ.

ಈ ಒಂದೇ ವಾರದಲ್ಲಿ ಪ್ರಭುತ್ವದ ದಮನಕಾರಿ ನೀತಿಗಳನ್ನು, ರಕ್ತದಾಹಿ ದಾಳಿಗಳನ್ನು, ಜನರ ಕಣ್ಣಿಗೆ ಮಣ್ಣೆರಚುವ ಸುಳ್ಳುಸುದ್ದಿಗಳು, ತಿರುಚಲ್ಪಟ್ಟ ವಿಡಿಯೋಗಳೇ ಮೊದಲಾದ ಪ್ರಚೋದನಕಾರಿ ಕೆಲಸಗಳನ್ನು ಪ್ರಶ್ನಿಸುವವರನ್ನು, ವಿರೋಧಿಸುವವರನ್ನು ಬೆನ್ನತ್ತಿ, ಅಂತಹ ಖ್ಯಾತನಾಮರಾದ ತೀಸ್ತಾ ಸೆಟಲ್‌ವಾಡ್, ಶ್ರೀಕುಮಾರ್, ಮಹಮ್ಮದ್ ಜ಼ುಬೇರ್  ಮೊದಲಾದವರನ್ನು  ಬಂಧನಕ್ಕೊಳಪಡಿಸಲಾಗಿದೆ. ಇದು, ದೇಶದ ಪ್ರಜಾತಂತ್ರ ಅತಿದೊಡ್ಡ ಅಪಾಯದಲ್ಲಿದೆ ಎಂಬುದರ ಸಂಕೇತವೇ ಹೊರತು ಬೇರೇನಲ್ಲ ಎಂದಿದೆ.

ಈಗಾಗಲೇ ಹಲವು ವರ್ಷಗಳಿಂದ ನಡೆಯಲಾರಂಭಿಸಿದ ಬೆಳವಣಿಗೆ ಇದು. ದಲಿತರು,ಆದಿವಾಸಿಗಳು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿದ್ದ, ಚಿಂತಿಸುತ್ತಿದ್ದ, ಬರೆಯುತ್ತಿದ್ದ ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ವರವರರಾವ್ ಇವರೇ ಮೊದಲಾದ ಅನೇಕರನ್ನು ಈಗಾಗಲೇ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಹಾಕಲಾಗಿದೆ.‌ ಮಾನವತೆಯ ಪ್ರತಿರೂಪವಾಗಿದ್ದ ಫಾದರ್ ಸ್ಟ್ಯಾನ್ ಸ್ವಾಮಿಯವರನ್ನು 82ನೇ ವಯಸ್ಸಿನಲ್ಲಿ ಬಂಧಿಸಿ, ಚಿಕಿತ್ಸೆ ನೀಡದೆ ಸಾವಿಗೆ ದೂಡಲಾಗಿದೆ.‌ ಇಂತಹವು ಖಂಡನಾರ್ಹ ಬೆಳವಣಿಗೆಗಳು ಎಂದಿದೆ.

ಇದೇ ಸಮಯದಲ್ಲಿ, ಇಂದು ಬಂದಿರುವ ಸುದ್ದಿಯ ಪ್ರಕಾರ, ರಾಜಸ್ಥಾನದ ಉದಯಪುರದಲ್ಲಿ ಅನ್ಯಮತೀಯ ಯುವಕರಿಬ್ಬರು ತಮ್ಮ ಧರ್ಮಗುರುಗಳನ್ನು ಅವಹೇಳನ‌ಮಾಡಿದ್ದ ನೂಪುರ್ ಶರ್ಮಾ ಚಿತ್ರವನ್ನು ಡಿಪಿಯಾಗಿ ಇಟ್ಟುಕೊಂಡಿದ್ದ ಕನ್ಹಯ್ಯ ಲಾಲ್ ಎಂಬ ಟೈಲರ್‌ನನ್ನು ಹತ್ಯೆ ಮಾಡಿದ್ದೂ ಅಲ್ಲದೇ ವೀಡಿಯೋ ಮಾಡಿ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಅತ್ಯಂತ ಆತಂಕಕಾರಿ ಘಟನೆ! ಧಾರ್ಮಿಕ ಮತಾಂಧತೆಯ ಅತಿರೇಕದ ಪ್ರದರ್ಶನದ ಇಂತಹ ಕ್ರೂರ ಪ್ರತೀಕಾರದ ಕೃತ್ಯಗಳಿಂದ ಈಗಾಗಲೇ ಹದಗೆಟ್ಟಿರುವ ದೇಶದ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದಿದೆ.

ಹೀಗಾಗಿ, ಇಂದು ಜಾತಿ-ಧರ್ಮ-ಮತದ ಸಂಕುಚಿತವಾದವನ್ನು ತೊರೆದು ಮಾನವತೆಯ ಉಳಿವಿಗಾಗಿ ಶ್ರಮಿಸಬೇಕಿದೆ.‌ ದೇಶದ ಸಂವಿಧಾನ ಮತ್ತು ಪ್ರಜಾತಂತ್ರ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಮಾನವತೆ, ಶಾಂತಿ, ಸಹಬಾಳ್ವೆಯನ್ನು ಉದ್ದೀಪಿಸುವುದೇ ನಮ್ಮೆಲ್ಲರ ಕರ್ತವ್ಯವಾಗಿದೆ. ಆ ದಿಕ್ಕಿನಲ್ಲಿ ಶ್ರಮಿಸೋಣ ಎಂದು ಕರೆನೀಡಿದೆ.

Leave a Reply