ಬೆಂಗಳೂರು: ಮಕ್ಕಳು ದೇಶದ ಮುಂದಿನ ಪ್ರಜೆಗಳು. ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಿದರೆ, ದೇಶ ಕಟ್ಟುವ ಕೆಲಸ ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಜಯನಗರ ವಿಧಾನಸಭಾ ಕ್ಷೇತ್ರದ ಶಾಲಿನಿ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಶನ್ 10ನೇ ವರ್ಷಾಚರಣೆ ಸಂದರ್ಭದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ 1 ಲಕ್ಷ ನೋಟ್ ಪುಸ್ತಕ ವಿತರಣೆ ಮತ್ತು ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ರಕ್ಷಾ ಫೌಂಡೇಶನ್ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದೆ. ಮನುಷ್ಯನ ಜನ್ಮ ಲಭಿಸಿರುವುದು ಪುಣ್ಯ. ಸಮಾಜದ ಒಳಿತಿಗಾಗಿ ನಮ್ಮ ಜೀವನವನ್ನು ಉಪಯೋಗಿಸಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ಮತ್ತು ಮಕ್ಕಳ ಶಿಕ್ಷಣಕ್ಕೆ ರಾಜ್ಯ ಸರ್ಕಾರದ ಜೊತೆಯಲ್ಲಿ ಸ್ವಯಂ ಸೇವಾ ಸಂಘಟನೆಗಳ ಸಹಕಾರ ಅಗತ್ಯ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ತಂದೆ, ತಾಯಿಗಳ ಪರಿಶ್ರಮದಿಂದ ನಿಮ್ಮನ್ನು ಒಳ್ಳೆಯ ಶಾಲೆಗೆ ಸೇರಿಸಿರುತ್ತಾರೆ. ಪೋಷಕರು ಮತ್ತು ಸಮಾಜ ಮೆಚ್ಚುವಹಾಗೆ ವಿದ್ಯಾವಂತರಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಂತೆ ನೀವು ಆಗಬೇಕು ಎಂದರು.
ರಕ್ಷಾ ಫೌಂಡೇಶನ್ ಗೌರವಾಧ್ಯಕ್ಷ ಸಿ.ಕೆ.ರಾಮಮೂರ್ತಿ ಮಾತನಾಡಿ, ರಕ್ಷಾ ಫೌಂಡೇಶನ್ ಕಳೆದ 10 ವರ್ಷಗಳಿಂದ ಮಕ್ಕಳ ಶಿಕ್ಷಣ, ಪರಿಸರ ಮತ್ತು ಆರೋಗ್ಯದ ವಿಷಯದ ಬಗ್ಗೆ ಹೆಚ್ಚಿನ ಗಮನಹರಿಸಿ ಸಾರ್ವಜನಿಕರ ಸಹಕಾರದಿಂದ ಶ್ರಮಿಸುತ್ತಿದೆ. ಯುವ ಶಕ್ತಿ ವಿದ್ಯಾವಂತರಾದರೆ ದೇಶ ಸಧೃಡ, ಸಶಕ್ತವಾಗಿರುತ್ತದೆ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಹ ಉತ್ತಮ ಜೀವನ ಸಾಗಿಸಲು, ಸಮಾಜ ಮುಖ್ಯವಾಹಿನಿ ತರಲು ರಕ್ಷಾ ಫೌಂಡೇಶನ್ ಶ್ರಮಿಸುತ್ತಿದೆ ಎಂದರು.
ಶಾಸಕ ಮಸಾಲೆ ಜಯರಾಮ್, ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಅದಮ್ಯ ಚೇತನ ಸಂಸ್ಥಾಪಕಿ ತೇಜಸ್ವಿನಿ ಆನಂತ್ ಕುಮಾರ್, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ನಾಗರತ್ನ ರಾಮಮೂರ್ತಿ ಮೊದಲಾದವರು ಹಾಜರಿದ್ದರು.



