ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ವರಿಷ್ಠ ಮಂಡಳಿ ಸಕಾರಾತ್ಮಕವಾಗಿ ಸ್ಪಂದನೆ ನೀಡಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಫ್ರೀಡಂ ಪಾರ್ಕ್‌ನಲ್ಲಿ ಮೀಸಲಾತಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 2 ದಿನಗಳಿಂದ ಧರಣಿ ನಡೆಸಿರುವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ವರಿಷ್ಠ ಮಂಡಳಿ ಜತೆ ಮಾತನಾಡಿದ್ದಾರೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ರಾಜ್ಯ ಸರ್ಕಾರಕ್ಕೆ ವರಿಷ್ಠರು ಸೂಕ್ತ ನಿರ್ದೇಶನ ನೀಡುವ ಸೂಚನೆ ಸಿಕ್ಕಿದೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ದೂರವಾಣಿಯಲ್ಲಿ ಮಾತನಾಡಿದ್ದು, ಈ ತಿಂಗಳ 21 ರಂದು ವಿಜಯಪುರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬರಲಿದ್ದಾರೆ. ಆಗ ಅವರು ಯತ್ನಾಳ್ ಜತೆ ಮಾತನಾಡುತ್ತಾರೆ ಎಂದರು.
ಮೀಸಲಾತಿ ವಿಚಾರದಲ್ಲಿ ಕಾನೂನು ತೊಡಕಿದೆ ನಿಜ. ಮುಖ್ಯಂಮತ್ರಿಗಳು ವಿನಾಕಾರಣ ತಡ ಮಾಡುತ್ತಿದ್ದಾರೆ ಏಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ನಮಗೆ ಬೇಸರ ತರಿಸಿದೆ ಎಂದು ಅವರು ಹೇಳಿದರು.
ಸಮುದಾಯದ ಬೇಡಿಕೆ ನ್ಯಾಯಯುತವಾಗಿದೆ. ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದೆ. ಬಿಜೆಪಿ ವರಿಷ್ಠರು ಎಲ್ಲವನ್ನು ಸರಿಪಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.




