ಬೆಂಗಳೂರು: ವಿಪರೀತ ಬುದ್ದಿ ವಿನಾಶ ಕಾಲೇ ಎಂಬಂತೆ ಎಲ್ಲರಿಗೂ ಹದ್ದುಮೀರಿ ಮಾತನಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯದಲ್ಲಿ ಖಂಡಿತವಾಗಿಯೂ ವಿನಾಶ ಆಗಿಯೇ ತೀರುತ್ತಾರೆ ಎಂದು ಶಾಸಕ ಹಾಗೂ ಅಖಿಲ ಭಾರತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಯತ್ನಾಳ್ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಮಠಾಧೀಶರು, ಸ್ವಾಮೀಜಿಗಳು, ರಾಜಕಾರಣಿಗಳು ಸೇರಿದಂತೆ ನನಗೆ ಯಾರೊಬ್ಬರು ಸರಿಸಾಟಿ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಇದು ವಿಪರೀತ ಬುದ್ದಿ ವಿನಾಶ ಕಾಲೇ ಎಂಬಂತಾಗಿದೆ. ನಾನು ಸುಮ್ಮನೆ ಹೇಳುವುದಿಲ್ಲ. ಅವರು ಖಂಡಿತವಾಗಿ ವಿನಾಶವಾಗುತ್ತಾರೆ ಎಂದರು.
ಸಮಾನತೆ ಸಾರಿದ ಬಸವಣ್ಣನವರ ಬಗ್ಗೆಯೂ ನಾಲಿಗೆ ಹರಿಬಿಟ್ಟು ತಮ್ಮ ಕೀಳು ಅಭಿರುಚಿಯನ್ನು ತೋರಿಸಿದ್ದಾರೆ. ವಿಭೂತಿ ಹಚ್ಚುವವರ ಬಗ್ಗೆಯೂ ಅವಹೇಳನ ಮಾಡುತ್ತಾರೆ. ಯಾವ ಪಕ್ಷದಲ್ಲೂ ಇವರಿಗೆ ನಿಯತ್ತು ಎಂಬುದಿಲ್ಲ. ತಾನೊಬ್ಬನೇ ಹರಿಶ್ಚಂದ್ರ ಇಲ್ಲದವರೆಲ್ಲರೂ ಅಪ್ರಮಾಣಿಕರು ಎಂದುಕೊಂಡಿದ್ದಾರೆ ಎಂದರು.
ಬಿಜೆಪಿಯಲ್ಲಿದ್ದಾಗಲೂ ಅಲ್ಲಿಯೂ ನಿಷ್ಠೆಯಿಂದ ಇರಲಿಲ್ಲ. ಹೀಗಾಗಿಯೇ ಅವರನ್ನು ಕಿತ್ತು ಹಾಕಲಾಗಿತ್ತು. ಬಳಿಕ ಜೆಡಿಎಸ್ ಸೇರಿದಾಗ ಮಸೀದಿಗೆ ಹೋಗಿ ನಮಾಜ್ ಮಾಡಿ ಬಂದಿದ್ದಾರೆ. ಇದರ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಟಿಪ್ಪು ಸುಲ್ತಾನ್ ಮತಾಂಧ ಎನ್ನುವ ಯತ್ನಾಳ್ ಹಿಂದೆ ಟೋಪಿ ಹಾಕಿಕೊಂಡು ಏನು ಗುಣಗಾನ ಮಾಡಿದ್ದಾರೆ ಎಂಬುದು ಅರಿವಿಲ್ಲವೇ ಎಂದರು.
ಬಸವನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವಮಾನ ಮಾಡುವ ರೀತಿ ಹೇಳಿಕೆ ನೀಡಿದ್ದಾರೆ. ಬಸವಣ್ಣ ಹೊಳೆ ಹಾರಿದರು ಎಂದು ಒಮ್ಮೆ ಹೇಳುತ್ತಾರೆ. ಇನ್ನೊಂದು ಬಾರಿ ನಾನು ಹಾಗೇ ಹೇಳಿಯೇ ಇಲ್ಲ ಎನ್ನುತ್ತಾರೆ. ಲಿಂಗಾಯತ ಪಂಚಮಸಾಲಿ ಧರ್ಮದಲ್ಲಿ ಜನಿಸಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಜಗಜ್ಯೋತಿ ಬಸವಣ್ಣನವರ ಬಗ್ಗೆ ಹೇಡಿ ಎಂಬ ರೀತಿ ಮಾತಾಡಿದ್ದನ್ನು ಖಂಡಿಸಿದ ಕಾಶಪ್ಪನವರ್, ಯತ್ನಾಳ್ ಕ್ಷಮೆ ಕೇಳುವುದಕ್ಕೂ ಅರ್ಹರಲ್ಲ. ತಮ್ಮ ಹೇಳಿಕೆಗಳನ್ನು ನಿಲ್ಲಿಸದೇ ಇದ್ದರೆ ಬಸವ ಅನುಯಾಯಿಗಳು ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದರು.
ವಕ್ಫ್ ನೋಟಿಸ್ ಬಗ್ಗೆ ಹೋರಾಟ ಮಾಡುತ್ತಿರುವುದು ಕಪಟ ನಾಟಕದಂತಿದೆ. ಇದು ಯಾವ ರೈತರ ಪರ ಹೋರಾಟವೂ ಅಲ್ಲ. ಹಿಂದೆ ಇದೇ ಯತ್ನಾಳ್ ಬಿಜೆಪಿ ಕಾಲದಲ್ಲಿ ನೊಟೀಸ್ ಕೊಟ್ಟಾಗ ಏಕೆ ಮಾತಾಡಲಿಲ್ಲ. ಆಗ ನಿಮ್ಮ ಬಾಯಿ ಬಿದ್ದು ಹೋಗಿತ್ತೇ ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಗುರಿಯಾಗಿಟ್ಟುಕೊಂಡು ಯತ್ನಾಳ್ ಹೋರಾಟ ನಡೆಸುತ್ತಿದ್ದಾರೆ. ಇದು ವಿಜಯೇಂದ್ರ ಹಠಾವೋ, ಪಾರ್ಟಿ ಬಚಾವೋ ಅಷ್ಟೇ ಆಗಿದೆ. ಹಿಂದೆ ಯತ್ನಾಳ್ ಅವರ ಸರ್ಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಕ್ಫ್ ಬಗ್ಗೆ ಏನು ಹೇಳಿದ್ದರು? ಸುಮ್ಮನೆ ಯತ್ನಾಳ್ ಗುಂಪುಗಾರಿಕೆ ಕಟ್ಟಿಕೊಂಡು ಪ್ರವಾಸ ಮಾಡುತ್ತಿದ್ದಾರೆ ಎಂದರು.
ಯತ್ನಾಳ್ ಎಲ್ಲ ಹೋರಾಟದಲ್ಲೂ ಗಿಮಿಕ್ ಮಾಡುತ್ತಿದ್ದಾರೆ. ಪಂಚಮಸಾಲಿ ಸಮುದಾಯ ಕೇವಲ ಬಿಜೆಪಿ ಪರವಾಗಿ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ. ಅವರಿಂದಾಗಿಯೇ ಪಂಚಮಸಾಲಿ ಹೋರಾಟದ ವೇಳೆ ಬೆಳಗಾವಿ ಮುತ್ತಿಗೆ ಹಾಕಲಿಲ್ಲ ಎಂದರು.
ಅವರು ಕೇವಲ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಆರೋಪ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಪೂರ್ಣ ಪ್ರಮಾಣದ ವರದಿ ಬಂದ ಮೇಲೆ ಮೀಸಲಾತಿ ನೀಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಈಗಲೂ ಕೂಡ ನಾವು ಪಂಚಮಸಾಲಿ ಹೋರಾಟದಿಂದ ಹಿಂದೆ ಸರಿದಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ಮಧ್ಯಂತರ ವರದಿ ಮೇಲೆ ಮೀಸಲಾತಿ ನೀಡಿದ್ದರು. ಅದೇ ತಪ್ಪನ್ನು ಸಿದ್ದರಾಮಯ್ಯ ತಾನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮೀಸಲಾತಿ ಹೋರಾಟದಲ್ಲಿ ಸತ್ಯ ಮಾತಾಡಿದರೆ ಯತ್ನಾಳ್ ಅವರ ಬಣ್ಣ ಬಯಲಾಗುತ್ತದೆ ಎಂದರು.
ಯಾಕೆ ಯತ್ನಾಳ್ ಮಾತೆತ್ತಿದರೆ ಸಮುದಾಯದ ಹೆಸರು ತೆಗೆದುಕೊಳ್ತಾರೆ. ಒಬ್ಬ ಧರ್ಮಗುರು ಆದವರು ಎಲ್ಲರೂ ಸಮಾನರು ಎಂಬ ಮನಸ್ಥಿತಿ ಇರಬೇಕು. ಜಯಮೃತ್ಯುಂಜಯ ಸ್ವಾಮೀಜಿ ಕೇವಲ ಯತ್ನಾಳ್ ಅವರ ರಕ್ಷಣೆಗೆ ಹೊರಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಯತ್ನಾಳ್ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಿದಾಗ ಸ್ವಾಮೀಜಿಗಳು ಅವರ ಪರವಾಗಿ ಮಾತನಾಡುವುದು ಸರಿಯಲ್ಲ. ಸರ್ಕಾರದ ವಿರುದ್ದ ಯಾಕೆ ಸ್ವಾಮೀಜಿಗಳು ಮಾತಾಡಬೇಕು ಎಂದರು.
ಪಂಚಮಸಾಲಿ ಹೋರಾಟ ಯತ್ನಾಳ್ಗೆ ಸೀಮಿತವಾದ ಹೋರಾಟ ಆಗಿದೆ. ಜಯ ಮೃತ್ಯುಂಜಯ ಸ್ವಾಮೀಜಿಗಳು ಕೇವಲ ಯತ್ನಾಳ್ ಪರ ಮಾತನಾಡುತ್ತಾರೆ. ಅವರು ಇಡೀ ಸಮುದಾಯದ ಹಿತ ಕಾಪಾಡಬೇಕು. ಒಬ್ಬ ವ್ಯಕ್ತಿಗಾಗಿ ಅಲ್ಲ ಎಂದರು.




