ಕನ್ನಡ ನಾಮಫಲಕ ಅಳವಡಿಸಲು ಪ್ರತಿಭಟನೆ
ಬೆಂಗಳೂರು: ನಗರದ ಏರ್ಪೋರ್ಟ್ ರಸ್ತೆ ಹುಣಸಮಾರನಹಳ್ಳಿಯಲ್ಲಿರುವ ಕಲ್ಯಾಣಿ ಮೋಟಾರ್ಸ್ ಮಾರುತಿ ಸುಜುಕಿ ಕಾರುಮಳಿಗೆಯ ನಾಮಫಲಕದಲ್ಲಿ ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿತು.

ಜಯಕರ್ನಾಟಕ ಜನಪರ ವೇದಿಕೆ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಸಾರಥ್ಯ,ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಹಾಗೂ ಬೆಂಗಳೂರು ಅಧ್ಯಕ್ಷ ಜೆ.ಶ್ರೀನಿವಾಸ್ ಮಾರ್ಗದರ್ಶನ ದಲ್ಲಿ ಕಲ್ಯಾಣಿ ಮೋಟಾರ್ಸ್ ಮುಂಭಾಗ ಜಮಾಯಿಸಿದ ವೇದಿಕೆ ಕಾರ್ಯಕರ್ತರು ಕನ್ನಡ ವಿರೋಧಿ ನೀತಿಗೆ ಧಿಕ್ಕಾರ ಕೂಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ವೇದಿಕೆಯ ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ ಎಚ್.ಬಿ. ಹರೀಶ್ ಕುಮಾರ್ ಮಾತನಾಡಿ, ಕಲ್ಯಾಣಿ ಮೋಟಾರ್ಸ್ ನವರು ಆಂಗ್ಲ ಭಾಷೆಯಲ್ಲಿ ನಾಮಫಲಕ ಅಳವಡಿಸಿ ಕನ್ನಡವನ್ನು ಕಡೆಗಣಿಸಿದ್ದಾರೆ. ರಾಜ್ಯದ ಅಂಗಡಿ, ಹೊಟಲ್, ಕಂಪನಿಗಳು ಸೇರಿದಂತೆ ಪರವಾನಗಿ ಪಡೆದಿರುವ ಮಳಿಗೆಗಳ ನಾಮಫಲಕದಲ್ಲಿ ಪ್ರಥಮವಾಗಿ ಕನ್ನಡ ಬಳಸುವುದು ಕಡ್ಡಾಯ ಎಂದು ವಾಣಿಜ್ಯ ಕೈಗಾರಿಕೆ ಆದೇಶದಲ್ಲಿ ತಿಳಿಸಿದೆ. ಹೀಗಿದ್ದರೂ ಸಹ ಕನ್ನಡದಲ್ಲಿ ನಾಮಫಲಕ ಅಳವಡಿಸಲು ತಾತ್ಸಾರ ತೋರುತ್ತಿದ್ದಾರೆ ಎಂದರು.

ಬ್ಯಾಟರಾಯನಪುರ ಅಧ್ಯಕ್ಷ ವಿನಯ್.ಎಸ್. ಮಾತನಾಡಿ, ಕನ್ನಡ ಕಡೆಗಣಿಸಿ ಕನ್ನಡ ದ್ರೋಹಿ ನೀತಿ ಅನುಸರಿಸುತ್ತಿರುವ ಕಲ್ಯಾಣಿ ಮೋಟಾರ್ಸ್ ನೀತಿಯನ್ನು ಜಯಕರ್ನಾಟಕ ಜನಪರ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೆ ಕನ್ನಡ ನಾಮಫಲಕ ಅಳವಡಿಸಬೇಕು. ಜೊತೆಗೆ ಕನ್ನಡ ಕಡೆಗಣಿಸಿರುವ ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಮನವಿಮಾಡಿದರು. ಕೂಡಲೆ ಕನ್ನಡ ನಾಮಫಲಕ ಅಳವಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ಮುಖಂಡರಾದ ಜಿ.ಎನ್.ರಾಜಣ್ಣ, ಶ್ರೀನಿವಾಸ್, ರಘು, ರಮೇಶ,ಸೀನಪ್ಪ, ವಿಕಾಸ್, ವಿಘ್ನೇಶ್, ಮೋನಿಷ್ ಮೊದಲಾದವರು ಭಾಗವಹಿಸಿದ್ದರು.




