ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಗಳಸ್ಯ-ಕಂಠಸ್ಯ ಗೆಳೆಯರು ಎಂದೇ ಗುರುತಿಸಿಕೊಂಡಿದ್ದವರು ಶಾಸಕ ಜಿ.ಜನಾರ್ದನರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಗಣಿ ನಾಡು ಬಳ್ಳಾರಿ ರಾಜಕೀಯದಲ್ಲಿ ಇವರ ಮಾತೇ ವೇದವಾಕ್ಯ. ಇವರ ವಿರುದ್ಧ ಯಾರೂ ತಕರಾರು ಎತ್ತುವಂತಿರಲಿಲ್ಲ. ಈ ಇಬ್ಬರೂ ನಾಯಕರು ಒಟ್ಟಾಗಿ ರಾಜಕೀಯ ತಂತ್ರಗಾರಿಕೆ ಹೊಸೆಯುವುದರಲ್ಲಿ ನಿಷ್ಣಾತರು.
ಆದರೆ ಇದೀಗ ಈ ಇಬ್ಬರ ನಡುವೆ ದೊಡ್ಡ ಮಟ್ಟದ ಅಸಮಾಧಾನ, ವೈಮನಸ್ಸು ತಲೆದೋರಿದೆ. ಒಬ್ಬರ ಮುಖ ಮತ್ತೊಬ್ಬರು ನೋಡಲಾರದಂತಹ ಸ್ಥಿತಿಗೆ ತಲುಪಿದ್ದಾರೆ.
ಈ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಈಗಿನದಲ್ಲ. ಕಳೆದ ಮೂರು ವರ್ಷಗಳಿಂದಲೂ ಇಬ್ಬರ ನಡುವೆ ಶೀತಲ ಸಮರ ನಡೆದಿದೆಯಾದರೂ ಇಲ್ಲಿಯವರೆಗೂ ಎಲ್ಲೂ ಸ್ಫೋಟಗೊಂಡಿರಲಿಲ್ಲ. ಆದರೆ ಇದೀಗ ಬಿಜೆಪಿ ಭಿನ್ನಮತದ ಪರಿಣಾಮ ಅದೂ ಕೂಡ ಸ್ಫೋಟಗೊಂಡಿದೆ.
ಸಂಡೂರು ಉಪಚುನಾವಣೆಯ ಸೋಲಿನ ಕುರಿತ ಚರ್ಚೆಯಿಂದ ಆರಂಭವಾದ ರೆಡ್ಡಿ ಹಾಗೂ ರಾಮುಲು ಅವರ ನಡುವಿನ ಅಸಮಾಧಾನ ಈಗ ವೈಯಕ್ತಿಕ ವಿಚಾರಗಳತ್ತ ತಿರುಗಿದೆ. ನಾಲ್ಕು ದಶಕಗಳಿಂದ ಅಣ್ಣತಮಂದಿರಂತಿದ್ದ ಇವರು, ಇದೀಗ ತಮ್ಮ ಜೀವನದಲ್ಲಿ ಹಿಂದೆ ನಡೆದ ಘಟನೆ, ಪ್ರಕರಣಗಳು, ಸನ್ನಿವೇಶಗಳನ್ನು ಉಲ್ಲೇಖಿಸಿ ಬಹಿರಂಗ ಸವಾಲೊಡ್ಡುವ ಹಂತ ತಲುಪಿದ್ದಾರೆ.
ರಾಜಕೀಯವಾಗಿ ಅಸ್ತಿತ್ವ ಸಾಧಿಸಲು ಉಭಯ ನಾಯಕರು ವೈಯಕ್ತಿಕವಾಗಿ ಒಬ್ಬರ ಮೇಲೆ ಒಬ್ಬರು ಕೆಸರೆರಚಾಟಕ್ಕೆ ಸಜ್ಜಾಗಿದ್ದು ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ದಂಗುಬಡಿಸಿದೆ.
ಇಂತಹ ಸ್ಪೋಟಕ್ಕೆ ಕಾರಣ ಏನು ಎಂದು ಹುಡುಕಿದರೆ ರಾಜಕೀಯಕ್ಕಿಂತಲೂ ರಾಜಕೀಯೇತರ ಕೆಲ ಬೆಳವಣಿಗೆಗಳು ಇಬ್ಬರ ನಡುವೆ ಮನಸು ಮುರಿಯಲು ಪ್ರಮುಖ ಕಾರಣವಾಗಿದೆ ಎಂದು ತಿಳಿಯುತ್ತದೆ.
ಅದರಲ್ಲಿಯೂ ಪ್ರಮುಖವಾಗಿ ಬಳ್ಳಾರಿ ನಗರದಲ್ಲಿನ ಸುಮಾರು 90 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ನೂತನ ಕಾಲನಿಯಲ್ಲಿನ ಪಾಲುದಾರಿಕೆ ವಿಚಾರದಲ್ಲಿ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಜೊತೆ ವಿರಸ ಉಂಟಾಗಿತ್ತು. ಆದರೆ, ಈ ವಿಚಾರ ಮುನ್ನೆಲೆಗೆ ಬಂದಿರಲಿಲ್ಲ. ಈ ಬೆಳವಣಿಗೆ ಬಳಿಕ ರೆಡ್ಡಿ ಹಾಗೂ ಶ್ರೀರಾಮುಲು ಮೇಲ್ನೋಟಕ್ಕೆ ಆತ್ಮೀಯರಾಗಿದ್ದಾರೆ ಎಂದು ಕಂಡು ಬಂದರೂ ಮೊದಲಿನ ಸ್ನೇಹ ಉಳಿದಿರಲಿಲ್ಲ. ಪರಸ್ಪರ ಅವಿಶ್ವಾಸ ಉಂಟಾಗಿತ್ತು, ನಂಬಿಕೆ ಮುರಿದು ಬಿದ್ದಿತ್ತು.
ಇದರ ಜೊತೆಗೆ ಹಲವು ವ್ಯಾವಹಾರಿಕ ಕಾರಣಗಳು ಕೂಡ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಪಾಲಾಗಿದ್ದ ವೇಳೆ ಅವರ ಎಲ್ಲ ವ್ಯವಹಾರವನ್ನು ಶ್ರೀರಾಮುಲು ಅವರೇ ನೋಡಿಕೊಳ್ಳುತ್ತಿದ್ದು ಅದರಲ್ಲಿ ಅವರು ಗೋಲ್ ಮಾಲ್ ಮಾಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವೈಷಮ್ಯ ಉಲ್ಬಣಿಸಿದೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.



