ಭಾರತದ ಭವಿಷ್ಯದ ಭರವಸೆಯ ನಾಯಕ ರಾಹುಲ್ ಗಾಂಧಿ: ಜಗದೀಶ್ ಕೊಪ್ಪ

3 years ago

 

ಕಳೆದ ಮೂರು ತಿಂಗಳಿನಿಂದ ಕಾಲ್ನಡಿಗೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ರಾಹುಲ್ ಗಾಂಧಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಬಂದ ನನಗೆ ಈ ಯುವಕನ ಬಗ್ಗೆ ಪಕ್ಷದಿಂದಾಚೆಗೆ ನನಗೆ ಇದ್ದ ನಂಬಿಕೆ, ವಿಶ್ವಾಸ ಈಗ ನೂರು ಪಟ್ಟು ಹೆಚ್ಚಾಗಿದೆ.

ನಾನು ರಾಹುಲ್ ಗಾಂಧಿಯನ್ನು ಮೊದಲು ಗಮನಿಸಿದ್ದು, 1984 ರ ಅಕ್ಟೋಬರ್ 30 ರಂದು . ಅಜ್ಜಿ ಇಂದಿರಾಗಾಂಧಿಯವರು ಹತ್ಯೆಯಾದಾಗ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ತನ್ನ ತಂದೆ ರಾಜೀವ್ ಗಾಂಧೀಯವರನ್ನು ತಬ್ಬಿಕೊಂಡು ಅವರ ಎದೆಯ ಮೇಲೆ ಮುಖವಿಟ್ಟು ಅಳುತ್ತಿದ್ದ ಬಾಲಕನಾಗಿದ್ದ ರಾಹುಲ್ ಎಂಬ ಮುದ್ದು ಬಾಲಕನನ್ನು ನೋಡಿ ಕಣ್ಣುಗಳು ತೇವಗೊಂಡಿದ್ದವು. ಏಕೆಂದರೆ, ಪ್ರಧಾನಿಯಾಗಿದ್ದ ಇಂದಿರಾ ಅವರು ತಮ್ಮ ಕೆಲಸ ಒತ್ತಡದ ನಡುವೆಯೂ ತೀನ್ ಮೂರ್ತಿ ನಿವಾಸದಲ್ಲಿ ತಮ್ಮ ಮೊಮ್ಮಕ್ಕಳಾದ ರಾಹುಲ್ ಮತ್ತು ವರುಣ್ ಗಾಂಧಿ( ಸಂಜಯ್ ಗಾಂಧಿ ಪುತ್ರ) ಇಬ್ಬರ ಜೊತೆ ಆಟವಾಡುತ್ತಾ ಸಂಭ್ರಮಿಸುತ್ತಿದ್ದರು.

ಈ ದುರ್ಘಟನೆ ಸಂಭವಿಸಿದ ಆರು ವರ್ಷದ ನಂತರ ಅಂದರೆ 1990 ಮೇ 21 ರಂದು ರಾಹುಲ್ ಗಾಂಧಿ ಅಂತಹದ್ದೇ ಹೀನ ಕೃತ್ಯದಲ್ಲಿ ತನ್ನ ಪ್ರೀತಿಯ ತಂದೆಯನ್ನು ಕಳೆದುಕೊಂಡ ಸಂಕಟವನ್ನು ಅನುಭವಿಸಬೇಕಾಯಿತು. ತನ್ನ ಕೌಟುಂಬಿಕ ದುರಂತದ ನಡುವೆ ಎಂದಿಗೂ ಸಂಯಮವನ್ನು ಕಳೆದುಕೊಳ್ಳದ ಹಾಗೂ ತುಟಿ ಮೀರಿ ಮಾತನಾಡದ ರಾಹುಲ್ ಗಾಂಧಿ ಓರ್ವ ಸುಸಂಸ್ಕೃತ ನಾಗರೀಕನಾಗಿ ಬೆಳೆದು ರಾಜಕೀಯ ಪ್ರವೇಶಿಸಿದ ನಂತರ ಸಂಘಪರಿವಾರ ಮತ್ತು ಬಿ.ಜೆ.ಪಿ. ಪಕ್ಷದ ವಿಧೂಷಕರಿಂದ ಪಪ್ಪು ಅಥವಾ ಪೆದ್ದು ಹುಡುಗ ಎಂಬ ಅಪವಾದಕ್ಕೆ ಒಳಗಾಗಬೇಕಾಯತು. ಆದರೆ, ಈಗ ಭಾರತ ಜೋಡಿಸು ಯಾತ್ರೆಯಲ್ಲಿ ಇಡೀ ದೇಶದ ಸಾಮಾನ್ಯ ಜನತೆ ಹಾಗೂ ಕಲಾವಿದರು, ವಿದ್ವಾಂಸರು, ರಾಜಕೀಯ ಚಿಂತಜರು ರಾಹುಲ್ ಕುರಿತಾಗಿ ತೋರಿಸುತ್ತಿರುವ ಪ್ರೀತಿಯನ್ನು ನೋಡಿ ದಂಗಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ನವರಂಧ್ರಗಳನ್ನು ಮುಚ್ಚಿಕೊಂಡಿದ್ದಾರೆ.

ನಾನು ಗಮನಿಸಿದಂತೆ ರಾಹುಲ್ ಗಾಂಧಿ ಸಂಸದನಾದ ನಂತರ ಸಂಸತ್ತಿನಲ್ಲಿ ಮಾತನಾಡಿರುವ ಅಥವಾ ಯಾವುದಾದರೂ ವಿಷಯ ಕುರಿತಂತೆ ನೀಡಿರುವ ಹೇಳಿಕೆಯಲ್ಲಿ ಅಸಂಬದ್ಧ ಎನಿಸುವ ಯಾವ ಅಂಶಗಳೂ ಇರಲಿಲ್ಲ. ರಾಹುಲ್ ಪ್ರತಿ ಮಾತನ್ನು ನಿಖರ ಅಂಕಿ ಅಂಶಗಳಜೊತೆ ಮಾತಾನಾಡುವುದು ವಿಶೇಷ. ಹಾಗೆ ನೋಡಿದರೆ, ಸಂಸತ್ತಿನಲ್ಲಿ ನರೇಂದ್ರ ಮೋದಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡವರೆಂದರೆ ನಮ್ಮ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮಾತ್ರ. ಆದರೆ, ರಾಹುಲ್ ವ್ಯಕ್ತಿತ್ವವನ್ನು ಕುಗ್ಗಿಸಲು ಬಿ.ಜೆ.ಪಿ. ಪಪ್ಪು ಎಂಬ ಶಬ್ದವನ್ನು ಬಳಸಿ ಈಗ ಇದೀಗ ಭಾರತದುದ್ದಕ್ಕೂ ಬೆತ್ತಲಾಗಿದೆ. ಸಾವಿರಾರು ರಕ್ಷಣಾ ಸಿಬ್ಬಂದಿ ನಡುವೆ ಸುತ್ತಾ ನಿಂತ ರಕ್ಷಣಾ ಪಡೆಗಳ ಯೋಧರ ನಡುವೆ ಕಾರಿನಲ್ಲಿ ಮೆರವಣಿಗೆ ಸಾಗುವ ನಕಲಿ ನಾಯಕನಿಗೂ ಹಾಗೂ ತನ್ನ ಅಜ್ಜಿ, ತಂದೆಯನ್ನು ಕಳೆದುಕೊಂಡರೂ ಸಹ ರಾಹುಲ್ ಗಾಂಧಿ ತನ್ನ ಜೀವ ರಕ್ಷಣೆಯ ಬಗ್ಗೆ ಚಿಂತಿಸದೆ, ಜನಸಾಮಾನ್ಯರ ಜೊತೆ ಬೆರೆಯುತ್ತಾ, ನಡೆಯುತ್ತಿರುವ ಬಗೆಯನ್ನು ನೋಡಿದರೆ, ಅಂತೂ ಈ ದೇಶಕ್ಕೆ ಒಬ್ಬ ನಾಯಕ ಸಿಕ್ಕಿದ ಎಂದು ಎದೆ ತುಂಬಿ ಬರುತ್ತಿದೆ.

ನಾಳೆ ರಾಹುಲ್ ಪ್ರಧಾನಿ ಆಗಬಹುದು ಅಥವಾ ಆಗದೇ ಇರಬಹುದು ಆದರೆ, ಸಂಸತ್ತಿನಲ್ಲಿ ಹಾಗೂ ಸದನದ ಹೊರಗಡೆ ನಿಂತು ಈ ನೆಲದ ಕಷ್ಟಗಳ ಕುರಿತು, ಈ ಜನರ ಬವಣೆಗಳ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಒಬ್ಬ ನಿಷ್ಟಾವಂತ ಹಾಗೂ ಯಾವುದೇ ತಳಕು-ಬಳಕು ಗಳಿಲ್ಲದ, ಮುಖವಾಡವಿಲ್ಲದ ನಾಯಕ ನಮ್ಮ ನಡುವೆ ಇದ್ದಾನೆ ಎಂಬುದೇ ನಮ್ಮ ಪಾಲಿಗೆ ಒಂದು ನೆಮ್ಮದಿಯ ಸಂಗತಿ.

ನನ್ನ ನಲವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಭಾರತದ ರಾಜಕೀಯ ರಂಗದಲ್ಲಿ ಬಂಗಾಳದ ಜ್ಯೋತಿಬಸು, ತ್ರಿಪುರಾ ದ ಮಾಣಿಕ್ಯ ಸರ್ಕಾರ್ ನೋಡಿದ್ದೆ. ಇತ್ತೀಚೆಗಿನ ವರ್ಷಗಳಲ್ಲಿ ರಾಹುಲ್ ಗಾಂಧಿ, ತಮಿಳುನಾಡಿನ ಆರ್ಥಿಕ ಸಚಿವ ತ್ಯಾಗರಾಜನ್, ಬಿಹಾರದ ಕನಯ್ಯ ಕುಮಾರ್, ಗುಜರಾತಿನ ಜಿಗ್ನೇಶ್ ಮೇವಾನಿ ಹೀಗೆ ಅನೇಕ ಯುವಕರು ಭರವಸೆ ಹುಟ್ಟಿಸುತ್ತಿದ್ದಾರೆ. ಇದು ನಮ್ಮ ಪಾಲಿಗೆ ಹೆಮ್ಮಯ ಸಂಗತಿ.

-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply