ಜಾಗೋ ಬಂಜಾರ – ಮಾರೋ ನಂಗಾರ!

4 years ago

ನಾನು ವಡ್ಡಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ  ವ್ಯಾಸಂಗ ಮಾಡುತ್ತಿದ್ದಾಗ ನ‌ನಗೆ ಸಹಪಾಠಿಯಾಗಿ ಜೊತೆಯಾದವನು ತಾರಾಸಿಂಗ್. ವಡ್ಡಗೆರೆಗೆ ಮೂರು ಕಿಲೋಮೀಟರ್ ದೂರದಲ್ಲಿರುವ ಓಬಳದೇವರಹಳ್ಳಿ ಎಂಬ ಕುಗ್ರಾಮದಿಂದ ಲಾಡಿ ನಿಕ್ಕರ್ ಮತ್ತು ಅಂಗಿ ಧರಿಸಿಕೊಂಡು ಬರಿಗಾಲಿನಲ್ಲಿ ನಡೆದು ಶಾಲೆಗೆ ಬರುತ್ತಿದ್ದ ತಾರಾಸಿಂಗ್ ಲಂಬಾಣಿ ಬುಡಕಟ್ಟು ಸಮುದಾಯದ ಹುಡುಗ.

ಬ್ರಿಟಿಷ್ ಸರ್ಕಾರ ಕ್ರಿ.ಶ.1871 ರಲ್ಲಿ ಪಟ್ಟಿ ಮಾಡಿದ್ದ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಯಲ್ಲಿ ಲಂಬಾಣಿ ಅಥವಾ ಬಂಜಾರ ಸಮುದಾಯವೂ ಒಂದು. ಅಪಾರವಾದ ದೈಹಿಕ ಪರಿಶ್ರಮವನ್ನು ಬೇಡುವ ಕೆರೆಕಟ್ಟೆ- ಕಲ್ಯಾಣಿ ಬಾವಿ- ಮನೆ -ರಸ್ತೆ- ಚೆಕ್ ಡ್ಯಾಮ್, ಬಾಂಧಾರಗಳನ್ನು ನಿರ್ಮಿಸುತ್ತಿದ್ದ ಬಂಜಾರ ಸಮುದಾಯದ ಹೆಂಗಸರು ಚಿಕ್ಕ ಚಿಕ್ಕ ಕನ್ನಡಿಗಳಿಂದ ಬ್ರಿಂಗ ಬಿಗಿಸಿ ಕಸೂತಿ ಮಾಡಿದ ಗೋರಮಾಟಿ ವಸ್ತ್ರಗಳನ್ನು ಹಾಗೂ ಬೆಳ್ಳಿ-ಹವಳ-ಮಣಿ- ದಂತದ ಒಡವೆಗಳನ್ನು ಧರಿಸುತ್ತಿದ್ದರು.  ಊರಿನ ಬೀದಿಗಳಲ್ಲಿ ಈ ಲಂಬಾಣಿ ಜನಾಂಗದ ಹೆಂಗಸರು ಎಲಚಿಹಣ್ಣು ನೇರಳೆಹಣ್ಣು ಬೇಲದಹಣ್ಣು ಸೀತಾಫಲ, ಕೇದಗೆಗರಿ, ಸಂಪಿಗೆ ಹೂವು, ಜಾಲಾರದ ಹೂವು ಇನ್ನೂ ಮುಂತಾದ ಕಾಡಿನ ಕಿರು ಉತ್ಪನ್ನಗಳನ್ನು ಬುಟ್ಟಿಯಲ್ಲಿ ಹೊತ್ತು ತಂದು ಮಾರಾಟ ಮಾಡುತ್ತಿದ್ದರು. ವಸಾಹತುಶಾಹಿ ಬ್ರಿಟಿಷರ ದೃಷ್ಟಿಯಲ್ಲಿ ಇವರು ಹೇಗೆ ಕ್ರಿಮಿನಲ್ ಟ್ರೈಬ್ಸ್ ಗಳಾಗಿದ್ದರೋ ತಿಳಿಯದು. ಆಗಿನ ನಮ್ಮ ಬಾಲ್ಯಕಾಲದಲ್ಲಿ ಈ ಸಮುದಾಯದವರು ಶಿಕ್ಷಣ ಪಡೆಯುತ್ತಿದ್ದದ್ದು ತೀರಾ ವಿರಳವಾಗಿತ್ತು.

ತಾರಾಸಿಂಗ್ ಮತ್ತು ನಾನು ಐದನೇ ತರಗತಿಯ ನಂತರ ಪ್ರೌಢಶಾಲಾ ಶಿಕ್ಷಣವನ್ನು  ಜೊತೆಯಲ್ಲಿಯೇ ಒಂದೇ ಪ್ರೌಢಶಾಲೆಯ ‘ಬಿ’ ವಿಭಾಗಲ್ಲಿ ವ್ಯಾಸಂಗ ಮಾಡಿ ಒಟ್ಟಿಗೆ ಎಸ್ಎಸ್ಎಲ್ಸಿ ತೇರ್ಗಡೆಯಾದೆವು. ನಮ್ಮ ತಾಲ್ಲೂಕು ಕೇಂದ್ರದಲ್ಲಿನ ಪ್ರೌಢಶಾಲೆಯಲ್ಲಿ ನಮಗೆ ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮಾನೀಟರ್ ಆಗಿದ್ದ ಜಂಪೇನಹಳ್ಳಿ ರಾಜಣ್ಣ ಈಗಲೂ ನಮ್ಮ ಟೀಮಿನ ಮಾನೀಟರ್ ಆಗಿದ್ದಾರೆ.

ಮೊದಲು ಪೊಲೀಸ್ ಪೇದೆಯಾಗಿ ನೌಕರಿಗೆ ಸೇರಿದ ತಾರಾಸಿಂಗ್, ಇತ್ತೀಚೆಗೆ ಬಡ್ತಿ ಪಡೆದು ಮಧುಗಿರಿ ತಾಲೂಕಿನ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ತನ್ನ ಹುಟ್ಟೂರು ಓಬಳದೇವರಹಳ್ಳಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ ಹಾಗೂ ತಾನು ಎಸ್ಐ ಆದ ಸಂತೋಷವನ್ನು ಔತಣಕೂಟ ಏರ್ಪಡಿಸುವ ಮೂಲಕ ಹಂಚಿಕೊಳ್ಳುವ ಸಲುವಾಗಿ ಬಾಲ್ಯಕಾಲದ ಗೆಳೆಯರನ್ನು ತನ್ನ ಮನೆಗೆ ಆಹ್ವಾನಿಸಿದ. ನಮ್ಮ ಮಾನೀಟರ್ ಜಂಪೇನಹಳ್ಳಿ ರಾಜಣ್ಣನ ಮುತುವರ್ಜಿಯಲ್ಲಿ ಆಗಿನ ನಮ್ಮ ಕೆಲವು ಸಹಪಾಠಿಗಳು ತಾರಾಸಿಂಗನ ಮನೆಯಲ್ಲಿ ಒಟ್ಟಿಗೆ ಸೇರುವಂತಾಯಿತು. ತಾರಾಸಿಂಗ್ ತನ್ನ ಮೊಮ್ಮಗು ಚಾರ್ವಿತ್ ಸಿಂಗ್ ಹೆಸರಿನಲ್ಲಿ ಮಂಡೆಕ್ಷೌರ- ಸೇವಾಲಾಲ್ ತುಳಜಾಭವಾನಿ ದೇವರ ಪೂಜೆಯ ಕಾರ್ಯಕ್ರಮ ಹಮ್ಮಿಕೊಂಡು ನಾಲ್ಕು ಐನಾತಿ ಹೋತಗಳನ್ನು ಕಡಿದು ಊಟ ಹಾಕಿಸಿದ.

ಸುಕಾಲಿ, ಸುಗಾಲಿ, ಲಂಬಾಣಿ, ಲಮಾಣಿ, ಲವಣಿಗರು, ಬಂಜಾರ, ವನಜಾರ ಮುಂತಾದ ಹೆಸರುಗಳಿಂದ ಗುರುತಿಸಲಾಗಿರುವ ಬಂಜಾರ ಸಮುದಾಯವು ಕರ್ನಾಟಕಕ್ಕೆ ಉತ್ತರ ಭಾರತದಿಂದ ವಲಸಿಗರಾಗಿ ಬಂದು ನೆಲೆಸಿದವರು.

ನಮ್ಮೂರು ವಡ್ಡಗೆರೆಯ ಪಕ್ಕದಲ್ಲಿ ಹೊಂದಿಕೊಂಡಿರುವ ವಡ್ಡಗೆರೆ ತಾಂಡದಿಂದ ಅನೇಕ ವಿದ್ಯಾರ್ಥಿಗಳು ನಮ್ಮೂರಿನ ಶಾಲೆಯಲ್ಲಿ ನನ್ನೊಂದಿಗೆ ವ್ಯಾಸಂಗ ಮಾಡುತ್ತಿದ್ದರು. ಲಂಬಾಣಿ ಜನಾಂಗದ ಗಂಡುಮಕ್ಕಳಿಗೆ  ಸೇವ್ಯಾ ನಾಯ್ಕ್, ಚಂದ್ಯಾ ನಾಯ್ಕ್, ದವಜಾನಾಯ್ಕ್, ಪೋಮಿಯಾ ನಾಯ್ಕ್, ಹರ್ಲಾನಾಯ್ಕ್, ಸುಕ್ರಾನಾಯ್ಕ್, ಲೋಕಸಿಂಗ್ ನಾಯ್ಕ್, ಧನಸಿಂಗ್ ನಾಯ್ಕ್, ಗೋಣಿಯಾ ನಾಯ್ಕ್, ಪೀಕಿಯಾ ‌ನಾಯ್ಕ್, ಬೋಡಿಯಾ ನಾಯ್ಕ್, ರೂಪ್ಲಾ ನಾಯ್ಕ್ ಇನ್ನೂ ಮುಂತಾದ ವಿಶಿಷ್ಟವಾದ ಹೆಸರುಗಳಿರುತ್ತಿದ್ದವು. ರೂಪ್ಲಿ ಬಾಯಿ, ರಮ್ಕಿ ಬಾಯಿ, ಚಂದ್ರಿ ಬಾಯಿ, ಚಾಂದ್ ಬಾಯಿ, ತುಳಜಾ ಬಾಯಿ, ಗಂಗಾಬಾಯಿ, ಸುಕ್ರಿ ಬಾಯಿ ಮುಂತಾದ ಹೆಸರುಗಳಿರುತ್ತಿದ್ದವು. ಹುಡುಗರು ತಮ್ಮ ಹೆಸರುಗಳೊಂದಿಗೆ ‘ನಾಯ್ಕ್’ ಎಂಬುವ ಹಾಗೂ ಹುಡುಗಿಯರು ‘ಬಾಯಿ’ ಎಂಬ ಅಂತ್ಯ ಪ್ರತ್ಯಯವನ್ನು ಹೊಂದಿರುವುದು ಸಾಮಾನ್ಯವಾಗಿತ್ತು. ಇವರು ತಮ್ಮದೇ ಬುಡಕಟ್ಟಿನ ಜನರೊಂದಿಗೆ  “ಗೋರ್ ಬೋಲಿ” ಅಥವಾ “ಲಂಬಡಾ” ಎಂಬ ಮಾತೃ ಭಾಷೆಯಲ್ಲಿ ವ್ಯವಹರಿಸುತ್ತಾ ಹೊರಗಿನ ಜನರೊಂದಿಗೆ ಕನ್ನಡದಲ್ಲಿ ವ್ಯವಹರಿಸುತ್ತಿದ್ದರು. ಇಡೀ ಭಾರತ ದೇಶಾದ್ಯಂತ ಬಂಜಾರ ಜನಾಂಗದವರು ಒಂದೇ ಮಾತೃ ಭಾಷೆಯನ್ನು ಹೊಂದಿರುವುದು ವಿಶೇಷ ಸಂಗತಿ. ನಮ್ಮೂರಿನ ಲಂಬಾಣಿಗರು ಕನ್ನಡವನ್ನು ತಮ್ಮದೇ ಭಾಷೆಯ ಧ್ವನಿಮಾ ಸ್ಪರ್ಶದಲ್ಲಿ ಉಚ್ಚಾರಣೆ ಮಾಡುತ್ತಿದ್ದರು. ಬಾಲ್ಯದಲ್ಲಿಯೇ ಇವರೊಂದಿಗೆ ಬೆರೆತುಹೋದ ನಾನು ಇವರ ಭಾಷೆಯಲ್ಲಿ ಮಾತಾಡುವುದನ್ನು ಅಲ್ಪಸ್ವಲ್ಪ ಕಲಿತುಕೊಂಡೆ. ಲಂಬಾಣಿ ಜನಾಂಗ ನಿಷ್ಠವಾದ ಏಕ ಭಾಷೆ ಹೇಗೋ ಹಾಗೆ ಇವರು ತಮ್ಮದೇ ಬುಡಕಟ್ಟು ನಿಷ್ಠವಾದ ದೈವಾರಾಧನೆ ಅಳವಡಿಸಿಕೊಂಡಿದ್ದಾರೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪ ಎಂಬ ಗ್ರಾಮದಲ್ಲಿ ಹದಿನೇಳನೇ ಶತಮಾನದಲ್ಲಿ ಜೀವಿಸಿದ್ದ ಕಾಲಜ್ಞಾನಿ, ಸಂತ ಸೇವಾಲಾಲ್ ಹಾಗೂ ಹಾತಿರಾಮ್ ಭಾವಾಜಿ ಎಂಬ ಸಾಂಸ್ಕೃತಿಕ ನಾಯಕರನ್ನು ದೈವಗಳನ್ನಾಗಿ ಇಡೀ ಭಾರತದ ಬಂಜಾರರು ಆರಾಧಿಸುತ್ತಾರೆ. ಮಹಾರಾಷ್ಟ್ರದ ತುಳಜಾಪುರದಲ್ಲಿ ಪುರದೇವತೆಯಾಗಿ ನೆಲೆಸಿರುವ ತುಳಜಾ ಭವಾನಿ ಇವರ ಮುಖ್ಯ ಸ್ತ್ರೀ ದೇವತೆ.

ಇದೇ ಮಹಾರಾಷ್ಟ್ರದ ನಾಂದೇಡ್ ಎಂಬ ಊರು ಬಂಜಾರರ ಪಾಲಿನ ನ್ಯಾಯನಿರ್ಣಯಗಳನ್ನು, ಕುಲದ ವ್ಯಾಜ್ಯಗಳನ್ನು ಬಗೆಹರಿಸುವ ಸಾಂಸ್ಕೃತಿಕ- ಧಾರ್ಮಿಕ ರಾಜಧಾನಿ. ಹೀಗೆ ತಮ್ಮದೇ ಸಂಸ್ಕೃತಿ ನಿಷ್ಠ ನೇಯ್ಗೆಯನ್ನು ಹೊಂದಿರುವ ಬಂಜಾರರು ದೀಪಾವಳಿ ಹಬ್ಬವನ್ನು ಇತರೆಲ್ಲಾ ಹಬ್ಬಗಳಿಗಿಂತಲೂ ಅತ್ಯಂತ ಸಂಭ್ರಮ ಸಡಗರಗಳಿಂದ ಆಚರಿಸುತ್ತಾರೆ. ಕತ್ತಲ ಕಾಡುಗಳಲ್ಲಿ ವಾಸವಿದ್ದ ಈ ವನಜಾರ (ಬನಜಾರ- ಬಂಜಾರ) ಜನರಿಗೆ ದೀಪಾವಳಿ ಬೆಳಕಿನ ಹಬ್ಬ. ಕಾಡಿನಲ್ಲಿ ಲವಣ ತಯಾರಿಸಿ ಎತ್ತು ಕತ್ತೆಗಳ ಮೇಲೆ ಹೇರಿಕೊಂಡು ಮಾರಾಟ ‌ಮಾಡುತ್ತಿದ್ದುದರಿಂದ ಇವರು ಲವಣಿಗರಾಗಿ ಹಾಗೂ ಕಿವಿಗಳಿಗೆ ಗಾಲಿಯಂತಹ ಆಭರಣ ಧರಿಸುತ್ತಿದ್ದುದರಿಂದಾಗಿ ಸುಗಾಲಿಗರಾಗಿ ಗುರುತಿಸಿಕೊಂಡರು. ಕಾಡಿನಲ್ಲಿ ಕಾವಲುಗಾರರಾಗಿದ್ದ ಬಿಳಿಯ ಬ್ರಿಟಿಷ್ ಸೈನಿಕರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಕಾರಣದಿಂದ ಇವರು ಕಂದು ಮಿಶ್ರಿತ ಬಿಳಿ ಚರ್ಮವನ್ನು ಹೊಂದಿದ್ದಾರೆಂಬ ಅಭಿಪ್ರಾಯವಿದೆ. ಮಹಾರಾಷ್ಟ್ರ, ರಾಜಾಸ್ಥಾನ,  ಕರ್ನಾಟಕ, ಆಂಧ್ರ ಪ್ರದೇಶದ ಸೀಮಾಂಧ್ರ ರಾಜ್ಯಗಳಲ್ಲಿ ಸಾಂದ್ರವಾಗಿ ಹಾಗೂ ಮಧ್ಯಪ್ರದೇಶ, ಗುಜರಾತ್, ಛತ್ತೀಸ್ಗಢ ಮುಂತಾದ ಇತರೆ ರಾಜ್ಯಗಳಲ್ಲಿ ವಿರಳವಾಗಿ ಚದುರಿದಂತೆ ಬಂಜಾರರು ನೆಲೆಸಿದ್ದಾರೆ.

ದೀಪಾವಳಿ ಹಬ್ಬ ಇನ್ನೂ ಒಂದು ತಿಂಗಳು ದೂರ ಇರುವಾಗಲೇ, ಬೆಳ್ಳಂಬೆಳಗ್ಗೆಯೇ ನಮ್ಮೂರಿನ ಬೀದಿಗಳಲ್ಲಿ ಗುಂಪುಗುಂಪಾಗಿ ಬಂಜಾರ ಹೆಂಗಸರು ಕನ್ನಡಿಗಳು ಮತ್ತು ಬೆಳ್ಳಿ ಹಿತ್ತಾಳೆ ಲೋಹದ ಹಾಗೂ ದಂತದ ಒಡವೆಗಳ ಬ್ರಿಂಗ ಬಿಗಿಸಿದ ಗೋರ್ ಮಾಟಿ ಉಡುಪುಗಳನ್ನು ಧರಿಸಿಕೊಂಡು, ಕೈಗಳಲ್ಲಿ ಕೋಲಾಟದ ಕೋಲುಗಳನ್ನು ಹಿಡಿದುಕೊಂಡು ನೃತ್ಯ ಪ್ರದರ್ಶನ ಮಾಡುತ್ತಾ ಕಾಣಿಸಿಕೊಳ್ಳುತ್ತಿದ್ದರು. ಅವರನ್ನು ನೋಡಿದ ಕೂಡಲೇ  ನಾವು ಚಿಣ್ಣರು, ‘ಪಾಪಡಿಗಳು ಬಂದವ್ರೆ ಕಾಯ್ರೇ… ಯಾರೇ ಯಾಡಿರೇ… ಯಾಡಿ ಯಾಡಿರೇ ಪಾಪಡಿರೇ…’ ಎಂದು ಕೂಗಿ ಕ್ಯಾಕಾಕುತ್ತಿದ್ದೆವು. ಕೋಲಾಟ ಆಡುತ್ತಾ ವೃತ್ತಾಕಾರದಲ್ಲಿ ಕುಣಿಯುತ್ತಾ ಹಾಡುತ್ತಿದ್ದ ಇವರ ಕೋಲುಪದಗಳಲ್ಲಿ ತಿರುಪತಿ ಬಾಲಾಜಿ ಮತ್ತು ಬಂಜಾರರ ಸಾಂಸ್ಕೃತಿಕ ವೀರ ಹಾತಿರಾಮ್ ಭಾಬಾಜಿಯರ ನಡುವೆ ಇದ್ದ ಗೆಳೆತನದ ಕಥನವಿರುತ್ತಿತ್ತು. ತಿರುಪತಿ ತಿಮ್ಮಪ್ಪನ ಗುಡಿಯನ್ನು ಕಟ್ಟಿದವರು ಲಂಬಾಣಿಗರೆಂದು ಹೇಳಿಕೊಳ್ಳುತ್ತಿದ್ದರು. ತಿರುಪತಿಯಲ್ಲಿ ಹಾತಿರಾಮ್ ಭಾವಾಜಿಯ ಗದ್ದಿಗೆಯಿದ್ದು ಅಗ್ರಪೂಜೆ ಸಲ್ಲುತ್ತದೆ. ಹೀಗೆ ಕಥನಗಳನ್ನು ಹಾಡುತ್ತಾ ಜನರಿಂದ ದುಡ್ಡು ದುಗ್ಗಾಣಿ ದವಸಧಾನ್ಯಗಳನ್ನು ಎತ್ತುವಳಿ ಮಾಡಿ ಅದ್ದೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರು.

ನಮ್ಮೂರಿನ ಸುತ್ತಲಿನಲ್ಲಿ ವಡ್ಡಗೆರೆ ತಾಂಡ, ಕೋತಿಮರದಹಟ್ಟಿ ತಾಂಡ, ಪೆಮ್ಮೆದೇವರಹಳ್ಳಿ ತಾಂಡ, ಓಬಳದೇವರಹಳ್ಳಿ ಮುಂತಾದ ನಾಲ್ಕಾರು ತಾಂಡಗಳಲ್ಲಿ ಸುಕಾಲಿಗರು ನೆಲೆಸಿದ್ದಾರೆ. ಬೂಕ್ಯಾ, ಒಡ್ತಿಯಾ, ಜಾತ್ ಎಂಬ ಮೂರು ಪ್ರಬೇಧಗಳಲ್ಲಿ ವಿಂಗಡಣೆಯಾಗಿರುವ ಬಂಜಾರರು ಒಂದೇ ಪ್ರಬೇಧದಲ್ಲಿ ಮದುವೆಯಾಗುವಂತಿಲ್ಲ. ಬೂಕ್ಯಾ ಪ್ರಬೇಧಕ್ಕೆ ಸೇರಿರುವ ನನ್ನ ಗೆಳೆಯ ತಾರಾಸಿಂಗ್ ಒಡ್ತಿಯಾ ಪ್ರಬೇಧದಲ್ಲಿ ಮದುವೆಯಾಗಿದ್ದಾನೆ.

ಮೊನ್ನೆ ತಾರಾಸಿಂಗನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ತುಳಜಾಭವಾನಿ ಮತ್ತು ಸೇವಾಲಾಲ್ ಹೆಸರಿನಲ್ಲಿ ಹೋತ ಕತ್ತರಿಸಿ ಬಾಡೂಟ ಹಾಕಿಸಿದ. ತುಳಜಾ ಭವಾನಿಯನ್ನು ಪೂಜಿಸುವ ಇವರು ಮಹಾರಾಷ್ಟ್ರ ತುಳಜಾಪುರದಲ್ಲಿರುವ ತುಳಜಾಭವಾನಿಯ ಗುಡಿಗೆ ಯಾವತ್ತೂ ಹೋಗಿಲ್ಲವಂತೆ.  ತೀರಾ ಇತ್ತೀಚಿನ ದಿನಗಳಲ್ಲಿ ತುಳಜಾಪುರಕ್ಕೆ ಲಂಬಾಣಿಗರು ಹೋಗಿ ಬರುವುದನ್ನು ರೂಢಿಸಿಕೊಂಡಿದ್ದಾರೆ.

ಮೊನ್ನೆ ಔತಣ ಕೂಟದಲ್ಲಿ ತಾರಾಸಿಂಗ್ ನ ಜೊತೆಯಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೂ ಸ್ನೇಹದ ಕೊಂಡಿ ಉಳಿಸಿಕೊಂಡಿರುವ ಅನೇಕ ಗೆಳೆಯರು, ಪೊಲೀಸ್ ಅಧಿಕಾರಿಗಳು, ನಮಗೆ ಕಲಿಸಿದ ಶಾಲಾ ಶಿಕ್ಷಕರು, ಅಪಾರ ಬಂಧುಗಳು ಅಣಿನೆರೆದಿದ್ದರು. ಔತಣದ ಬಳಿಕ ನಂಗಾರ ಎಂಬ ಚರ್ಮವಾದ್ಯ ನುಡಿಸುತ್ತಾ ಲಂಬಾಣಿ ಹಿರೀಕ ಕಲಾವಿದರು ಕಥನಕಾವ್ಯವನ್ನು ಹಾಡತೊಡಗಿದರು. ಮಧ್ಯರಾತ್ರಿ ನಂಗಾರ ಬಾರಿಸುವ ಕುಣಿತದ ಒಂದು ಗಸ್ತಿಗೆ ನಾವು ಬಾಲ್ಯದ ಗೆಳೆಯರು ತಾರಾಸಿಂಗ್ ನನ್ನು ಜೊತೆಗೆ ಸೇರಿಸಿಕೊಂಡು, ನಮ್ಮ ಬಾಲ್ಯದ ಚೈತನ್ಯವನ್ನು ಮತ್ತೆ ತುಂಬಿಕೊಂಡು ಕೇಕೆ ಹಾಕುತ್ತಾ ಕುಣಿದಾಡಿದೆವು. ನಮ್ಮ ಮಾನೀಟರ್ ಜಂಪೇನಹಳ್ಳಿ ಜೆ.ಎಸ್.ರಾಜಣ್ಣ, ದಮಗಲಯ್ಯನ ಪಾಳ್ಯದ ಡಿ.ಆರ್.ನಾಗರಾಜ್ (ನಿವೃತ್ತ ಯೋಧ), ಎತ್ತಗಾನಹಳ್ಳಿ ವೀರರಂಗಯ್ಯ (ಪೊಲೀಸ್), ಬುರುಗನಹಳ್ಳಿಯ ವೀರಭದ್ರ (ನಿವೃತ್ತ ಯೋಧ), ಶಿವಲಿಂಗಯ್ಯ ಎಂ ನವಿಲಡಕು (ಮುಖ್ಯೋಪಾಧ್ಯಾಯ), ರತ್ನಗಿರಿ ಎನ್. ನಾಗರಾಜ್ ಮುಂತಾದವರು  ನಂಗಾರ ನೃತ್ಯ ಮಾಡಿದ್ದು ಹಾಗೂ ಲಂಬಾಣಿ ಕಥನಕಾವ್ಯವನ್ನು ಆಲಿಸಿದ ಸಂಗೀತ ರಾತ್ರಿಯನ್ನು ನಾನೆಂದಿಗೂ ಮರೆಯಲಾರದ ಅನುಭೂತಿಯಾಗಿದೆ.

  • ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ

Leave a Reply