ಚಾಮರಾಜನಗರ: ವೈಕಲ್ಯ ಮನಸ್ಸಿಗೆ ಹೊರತು ದೇಹಕಲ್ಲ. ಬದುಕಿ ಸಾಧಿಸುವ ಛಲ ಇದ್ದರೆ ಸಿಕ್ಕೇ ಸಿಗುತ್ತದೆ ಫಲ ಎಂಬ ಮಾತಿಗೆ ಅನ್ವರ್ಥವಾಗಿ ಹೊನ್ನೂರು ಗ್ರಾಮದ ಹಿರಿಯ ದಲಿತ ಪ್ರತಿಭೆ ಹೊನ್ನೂರು ಗೌರಮ್ಮ ಅವರಿಗೆ ಹುಟ್ಟಿನಿಂದಲೇ ಎರಡು ಕಣ್ಣುಗಳು ಕಾಣದಾದರು ಸೋಬಾನೆ ಹಾಡಿನ ಮೂಲಕ ಸೋಬಾನೆ ಕಲೆ ಉಳಿಸಿ ಬೆಳೆಸುವಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ ಎಂದು ಯಳಂದೂರು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುಗಂಧರಾಜ್ ಶ್ಲಾಘಿಸಿದರು.
ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ಮುಂಭಾಗ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಧರಾಗಿರುವ ಗೌರಮ್ಮ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಾರೆಂದು ಕೇಳಿ ಬಹಳ ಹೆಮ್ಮೆ ಎನಿಸುತ್ತದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಮಾರ್ಚ್ 13 ರಂದು ಸಂಜೆ 5 ಗಂಟೆಗೆ ರಾಮನಗರದ ಜಾನಪದ ಲೋಕದಲ್ಲಿ ಏರ್ಪಡಿಸಿರುವ ರಾಜ್ಯಮಟ್ಟದ ಪ್ರವಾಸಿ ಜಾನಪದ ಲೋಕೋತ್ಸವ -2022ರ ಅಂಗವಾಗಿ ಗೌರಮ್ಮ ಅವರಿಗೆ ಸೋಬಾನೆ ಚಿಕ್ಕಮ್ಮ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 10 ಸಾವಿರ ನಗದು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ ಡಿ.ಎನ್.ನಟರಾಜ್ ಗೌರಮ್ಮ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ಮನು ಎಂಟರ್ಪ್ರೈಸಸ್ ಮಾಲೀಕರಾದ ಮನು, ಡಾ. ಬಿ.ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಮತ್ತು ಊರಿನ ಗ್ರಾಮಸ್ಥರು ಹಾಜರಿದ್ದರು.




