ಸಿಎಂ ಬದಲಾವಣೆ ಮಾಡುವ ವಿಚಾರ ಹೈಕಮಾಂಡ್ ಕೈಯಲ್ಲಿದೆ: ಮಲ್ಲಿಕಾರ್ಜುನ ಖರ್ಗೆ

11 months ago

ಬೆಂಗಳೂರು: ಎರಡೂವರೆ ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ತಮ್ಮ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂಬ ಚರ್ಚೆಗಳ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ವಿಚಾರ ಪಕ್ಷದ ಹೈಕಮಾಂಡ್ ಕೈಯಲ್ಲಿದೆ ಎಂದರು.

ಹೈಕಮಾಂಡ್‌ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಯಾರೂ ಹೇಳಲಾಗದು. ನಾಯಕತ್ವ ಬದಲಾವಣೆ ಕೇವಲ ಊಹಾಪೋಹ. ಮಾಧ್ಯಮಗಳಲ್ಲಿ ಬರುತ್ತಿರುವುದು ನಿಮ್ಮ ಕಲ್ಪನೆ ಮಾತ್ರ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಶಾಸಕರು ಏನು ಹೇಳುತ್ತಾರೆ, ಜೊತೆಗೆ ಏನೇನು ನಡೆದಿದೆ ಎಂದು ಅವರು ಕೇಳುತ್ತಾರೆ. ಅದನ್ನು ನೋಡಿಕೊಂಡು ಮುಂದೇನು ಮಾಡಬೇಕೆಂದು ನೋಡೋಣ ಎಂದರು.

ಸಚಿವರು, ಶಾಸಕರ ವಿಭಿನ್ನ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲರ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ನಾನು ಉತ್ತರ ಕೊಡುವುದು ಎಐಸಿಸಿ ಮಟ್ಟದ್ದಕ್ಕೆ ಮಾತ್ರ. ಇಲ್ಲಿಯ ಪ್ರತಿಯೊಂದಕ್ಕೂ ಉತ್ತರ ಕೊಡಲು ಹೋದರೆ, ಸಾಕಷ್ಟು ವಿಚಾರಗಳಿವೆ ಎಂದರು.

Leave a Reply