ಬೆಂಗಳೂರು: ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ, ಕಮಿಷನ್ ಆರೋಪ, ಅಧಿಕಾರ ಹಂಚಿಕೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ರಾಜ್ಯ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಗೊಂದಲ ಪರಿಹರಿಸಲು ಹೈಕಮಾಂಡ್ ಮುಂದಾಗಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳು ಶಾಸಕರ ಅಹವಾಲು ಕೇಳುತ್ತಿಲ್ಲ, ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಆರೋಪಗಳ ಕುರಿತಂತೆ ಎಲ್ಲ ಶಾಸಕರು ಮತ್ತು ಕಾರ್ಯಕರ್ತರ ಜೊತೆ ಮಾತುಕತೆ ನಡೆಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೆವಾಲ ತೀರ್ಮಾನಿಸಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ಬೆಂಗಳೂರಿಗೆ ಆಗಮಿಸಿದವರು ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮೂರು ದಿನಗಳ ಕಾಲ ಶಾಸಕರ ಜೊತೆ ಸಮಾಲೋಚನೆ ನಡೆಸಲಿದ್ದು ನಂತರ ಕಾರ್ಯಕರ್ತರ ಅಹವಾಲು ಆಲಿಸಲಿದ್ದಾರೆ.
ಮೊದಲಿಗೆ ದಕ್ಷಿಣ ಮತ್ತು ಮಧ್ಯ ಕರ್ನಾಟಕ ಶಾಸಕರ ಜೊತೆ ಸಭೆ ನಡೆಸಲಿರುವ ಅವರು,ಉತ್ತರಕರ್ನಾಟಕ ಭಾಗದ ಜಿಲ್ಲೆಗಳ ಶಾಸಕರ ಜೊತೆ ಮುಂದಿನ ವಾರ ಸಭೆ ನಡೆಸಲು ಮತ್ತೊಂದು ಸುತ್ತಿನ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಾಸಕರ ಜೊತೆ ವ್ಯಕ್ತಿಗತ ಚರ್ಚೆ ನಡೆಸುತ್ತಿರುವ ಸುರ್ಜೇವಾಲ, ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳ ನಮೂನೆಯನ್ನು ಸಿದ್ಧಪಡಿಸಿಕೊಂಡಿದ್ದು, ಪ್ರತಿಯೊಬ್ಬರಿಂದಲೂ ಅದಕ್ಕೆ ವಿವರಣೆ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಶಾಸಕರ ಅಭಿಪ್ರಾಯಗಳನ್ನು ಖುದ್ದು ಆಲಿಸುತ್ತಿದ್ದಾರೆ.
ಸಚಿವರು ತಮ್ಮ ಕ್ಷೇತ್ರಗಳಿಗೆ ಎಷ್ಟು ಬಾರಿ ಬಂದಿದ್ದಾರೆ, ಯಾರ್ಯಾರು ಬಂದಿದ್ದಾರೆ, ಯಾರೆಲ್ಲಾ ಬಂದಿಲ್ಲ, ಮನವಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಶಾಸಕರು ಯಾರು, ಸ್ಪಂದಿಸದೇ ಇರುವ ಶಾಸಕ ಮಂತ್ರಿಗಳು ಯಾರು ಎಂಬ ವಿವರ ಸಂಗ್ರಹಿಸುತ್ತಿದ್ದಾರೆ.
ಇಲಾಖಾವಾರು ತಮ್ಮ ಕ್ಷೇತ್ರಕ್ಕೆ ಬಂದಿರುವ ಅನುದಾನವೆಷ್ಟು, ಅದರಲ್ಲಿ ಬಿಡುಗಡೆಯಾದ ಹಣ, ಖರ್ಚಾಗಿರುವ ಹಣವೆಷ್ಟು?, ಬಾಕಿ ಬಿಡುಗಡೆಯಾಗಬೇಕಿರುವ ಹಣ ಮತ್ತು ಅನುಮತಿ ದೊರೆಯಬೇಕಾದ ಬಾಕಿ ಪ್ರಸ್ತಾವನೆಗಳೆಷ್ಟು? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ತಮ ಕ್ಷೇತ್ರಕ್ಕೆ ಎಷ್ಟು ಫಲಾನುಭವಿಗಳಿಗೆ ಸೌಲಭ್ಯ ದೊರಕಿದೆ.ಯ? 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಮತದಾರರು ನಂತರ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಹೊಂದಿರುವ ಅಭಿಪ್ರಾಯಗಳೇನು?, ಗ್ಯಾರಂಟಿ ಯೋಜನೆಗಳು ಜನರನ್ನು ಖುಷಿಪಡಿಸಲಿವೆಯೇ?, ಇವು ಕಾಂಗ್ರೆಸ್‌ಗೆ ರಾಜಕೀಯ ಲಾಭ ತಂದುಕೊಡಲಿವೆಯೇ? ಎಂಬ ಪ್ರಶ್ನೆಗಳನ್ನು ಶಾಸಕರ ಮುಂದಿಟ್ಟಿದ್ದಾರೆ.
ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರಗಳಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೀರ?, ಹಿಂದಿನ ಕಾಮಗಾರಿಗಳು ಎಷ್ಟು ಮುಗಿದಿವೆ?, ಹೊಸ ಯೋಜನೆಗಳನ್ನು ಯಾವ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ? ಎಂಬ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕುವ ಮೂಲಕ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದೆಯೇ? ಇಲ್ಲವೇ ಎಂದು ಸ್ಪಷ್ಟನೆ ಪಡೆದುಕೊಳ್ಳಲು ಯತ್ನಿಸಿದ್ದಾರೆ.
ಜಿಲ್ಲಾವಾರು ಪಕ್ಷ ಸಂಘಟನೆಯಲ್ಲಿ ಶಾಸಕರ ಪಾತ್ರ ಏನು, ಜಿಲ್ಲೆ, ಬ್ಲಾಕ್ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಿದ್ದಾರೆ, ಶಾಸಕರು ಮತ್ತು ಪಕ್ಷದ ನಡುವಿನ ಸೌಹಾರ್ದತೆಯ ಸಂಬಂಧ ಯಾವ ಮಟ್ಟಿಗಿದೆ ಎಂಬುದನ್ನು ಸುರ್ಜೇವಾಲ ಪ್ರಶ್ನೆಗಳ ಮೂಲಕ ತಿಳಿದುಕೊಂಡಿದ್ದಾರೆ.




