ಬೆಂಗಳೂರು: ಯಡಿಯೂರಪ್ಪನವರನ್ನು ಭೇಟಿಯಾಗದೆ ಅವಮಾನಿಸಿ ಕಳಿಸಿದ್ದ ಬಿಜೆಪಿ ಹೈಕಮಾಂಡ್ ಈಗ ಸದಾನಂದಗೌಡರ ಮುಖವನ್ನೂ ನೋಡದೆ ವಾಪಾಸ್ ಕಳಿಸಿದೆ ಎಂದು ಕೆಪಿಸಿಸಿ ಹೇಳಿದೆ.
ಕಳೆದ ಎರಡು ದಿನಗಳ ಹಿಂದೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರು ದೆಹಲಿಗೆ ಬರುವಂತೆ ದೆಹಲಿ ಹೈಕಮಾಂಡ್ ನಿಂದ ಕರೆ ಬಂದಿತ್ತು ಎಂದು ವರದಿಯಾಗಿತ್ತು. ಈ ನಡುವೆ ಅವರು ದೆಹಲಿಗೆ ತೆರಳಿದ್ದರು. ಆದರೆ, ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಡಿ.ವಿ.ಸದಾನಂದಗೌಡ ಅವರ ಭೇಟಿಗೆ ಸಮಯ ನೀಡಿಲ್ಲ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ, ನಾಯಕರು ಕುಮಾರಸ್ವಾಮಿಯವರನ್ನು ಕರೆದುಕೊಂಡು ಹೋಗಿದ್ದರೆ ಕನಿಷ್ಠ ದೆಹಲಿ ನಾಯಕರ ಮುಖವನ್ನಾದರೂ ನೋಡುವ ಸೌಭಾಗ್ಯ ಸಿಗುತ್ತಿತ್ತೇನೋ! ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ.
ಕುಮಾರಸ್ವಮಿಯವರಿಗೆ ಸುಲಭದಲ್ಲಿ ಸಿಗುವ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸಿಗದಿರುವುದೇಕೆ? ಕರ್ನಾಟಕದಲ್ಲಿ ಸಾಂವಿಧಾನಿಕ ಹುದ್ದೆಯಾದ ವಿಪಕ್ಷ ನಾಯಕನ ಸ್ಥಾನ ಹಲವು ತಿಂಗಳುಗಳಿಂದ ಖಾಲಿ ಇರುವುದು ಬಿಜೆಪಿಗೆ ಗಂಭೀರ ವಿಷಯವಲ್ಲವೇ? ಯಡಿಯೂರಪ್ಪನವರು ಹಾಗೂ ಸದಾನಂದಗೌಡರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಇಂತಹವರನ್ನೇ ಅವಮಾನಿಸುತ್ತಿರುವುದರಿಂದ ಬಿಜೆಪಿಗರ ಸ್ವಾಭಿಮಾನಕ್ಕೆ ದಕ್ಕೆಯಾದಂತೆ ಅಲ್ಲವೇ? ಎಂದು ಪ್ರಶ್ನಿಸಿದೆ.
ಇಂತಹ ಅವಮಾನ, ತಿರಸ್ಕಾರಗಳಿಗೆ ಒಳಪಟ್ಟರೂ ಸಹಿಸಿಕೊಳ್ಳುತ್ತಿರುವುದು ಗುಲಾಮಗಿರಿಯ ಸಂಕೇತವಲ್ಲವೇ BJP Karnataka? ಬಿಜೆಪಿ ನಾಯಕರನ್ನು ಕೆಣಕಿದೆ.


