ಬೆಂಗಳೂರು: ‘ Araga Jnanendra ಅವರೇ, ನಿಮ್ಮ ಬ್ರಾಂಡ್ ಯಾವುದು? ಚೆನ್ನಾಗಿಯೇ ಕಿಕ್ ಹೊಡೆದಂತಿದೆ?! ಕಾಯ್ದೆ ಕಾನೂನುಗಳ ಕನಿಷ್ಠ ಜ್ಞಾನ ಇಲ್ಲದೆ ತೀರ ಬಾಲಿಶವಾಗಿ ಮಾತನಾಡುತ್ತಿರುವ ತಾವು 4 ವರ್ಷ ರಾಜ್ಯದ ಗೃಹಸಚಿವರಾಗಿದ್ದು ಘೋರ ದುರಂತ! ಎಂದು ಕೆಪಿಸಿಸಿ ಹೇಳಿದೆ.
ಹುಲಿಯುಗುರು ಪ್ರಕರಣಗಳು ಬೆಳಕಿಗೆ ಬಂದ ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಕೇಸ್ ದಾಖಲಿಸುತ್ತ ಹೋದರೆ ಸೆರೆಮನೆಗಳಲ್ಲಿ ಜಾಗ ಇರುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿರುವ ಕೆಪಿಸಿಸಿ, ವನ್ಯಜೀವಿಗಳ ಉತ್ಪನ್ನಗಳ ಬಳಕೆ ಹಾಗೂ ಸಂಗ್ರಹ ವನ್ಯಜೀವಿಗಳ ಹತ್ಯೆಗೆ ಪ್ರೋತ್ಸಾಹಿಸುವ ಸಾಧ್ಯತೆ ಇರುವುದರಿಂದ ಜಾಗೃತಿ ಮೂಡಿಸುವ ಹಾಗೂ ಕಾನೂನು ಪಾಲಿಸುವ ಸಲುವಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದಿದೆ.
ಸರ್ಕಾರದ ಕಾನೂನು ಪಾಲನೆಯನ್ನು ಪ್ರೋತ್ಸಾಹಿಸಬೇಕೆ ಹೊರತು ಕೊಂಕು ತೆಗೆಯುವುದಲ್ಲ, ಹುಲಿ ಕೊಲ್ಲುವ ಟಿಪ್ಪು ಫೋಟೋ ನೋಡಿ ಜನರೂ ಹುಲಿ ಕೊಲ್ಲಲು ಹೋಗುತ್ತಾರೆ ಎನ್ನುವುದು ಮೂರ್ಖತನದ ಪರಮಾವಧಿ, ಜ್ಞಾನೇಂದ್ರರವರೇ, ಹೊಯ್ಸಳರ ಲಾಂಛನವೂ ಹುಲಿ ಕೊಲ್ಲುವುದೇ ಆಗಿದೆ.. ಅದನ್ನೂ ತೆಗೆಯಬೇಕು ಎನ್ನುತ್ತೀರಾ? ಎಂದು ಪ್ರಶ್ನಿಸಿದೆ.


