ಎಸ್‌ಡಿಪಿಐ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಇಸಾಖ್ ಹುಸೇನ್ ಆಯ್ಕೆ

1 year ago

ಕಲಬುರಗಿ ರೈಲ್ವೆ ವಿಭಾಗ ಆಗಬಾರದು ಎಂಬ ಷಡ್ಯಂತ್ರ ಹೂಡಿ ಈ ಭಾಗವನ್ನು ವಿವಿಧೆಡೆ ಹಂಚಿಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಮೂಲ ಸೌಕರ್ಯ ಅಭಿವೃದ್ಧಿ ಸರ್ಕಾರ ಮೊದಲ ಆದ್ಯತೆ ನೀಡಿ: ಅಫ್ಸರ್ ಕೊಡ್ಲಿಪೇಟೆ

ಶಹಾಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಸುವ ಆಂತರಿಕ ಚುನಾವಣೆಯ ಭಾಗವಾಗಿ ಯಾದಗಿರಿ ಜಿಲ್ಲೆಯ 2024-27 ರ ಅವಧಿಯ ನೂತನ ಜಿಲ್ಲಾ ನಾಯಕತ್ವದ ಆಯ್ಕೆಗಾಗಿ ಇಂದು ಶಹಾಪುರದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಸೈಯದ್ ಇಶಾಕ್ ಹುಸೇನ್ ( ಖಾಲಿದ್ ) ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿಲಾಲ್ ಖುರೇಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಜಮೀರ್ ಶೇಖ್, ಕೋಶಾಧಿಕಾರಿಯಾಗಿ ರಶೀದ್ ಪೀರ್ ಜಿ, ಕಾರ್ಯದರ್ಶಿಗಳಾಗಿ ಇಮ್ರಾನ್ ಬಾಬಾ ಹಾಗೂ ಮುಜಾಹಿದ್ ಗೋಗಿ ಹಾಗೂ ಸಮಿತಿ ಸದಸ್ಯರುಗಳಾಗಿ ಇಕ್ಬಾಲ್ ಜಾನಿ , ಯೂನಸ್ ನಗನೂರಿ, ಫುರ್ಖಾನ್ ಖಾಜಿ , ಝಾಕಿರ್ ಸಂಗ್ರಾಮ್, ಮತ್ತು ಬಾಶುಮಿಯಾ ಕನ್ಯಾಕೂಳೂರು ರವರು ಆಯ್ಕೆಯಾಗಿದ್ದಾರೆ.

ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ನಾಯಕ ಡಾ. ರಿಜ್ವಾನ್ ನಡೆಸಿಕೊಟ್ಟರು.

ಜಿಲ್ಲಾ ಪ್ರತಿನಿಧಿ ಸಭೆ ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸದೇ ಇರುವುದು ಖಂಡನೀಯ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಮೂಲ ಸೌಕರ್ಯ ಅಭಿವೃದ್ಧಿ ಸರ್ಕಾರ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆ, ವಾಣಿಜ್ಯ, ಕೃಷಿ ಸೇರಿ ಸಮಗ್ರ ಅಭಿವೃದ್ಧಿಗೆ ಪೂರಕವಾದ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಕೈಗೆತ್ತಿಕೊಂಡಿರುವ ಹೋರಾಟಕ್ಕೆ ಎಸ್ಡಿಪಿಐ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

2013-14ರಲ್ಲೇ ಡಾ.ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ವಿಭಾಗೀಯ ಕಚೇರಿ ಘೋಷಿಸಿ ಐದು ಕೋಟಿ ರೂ.ನಲ್ಲಿ 43 ಎಕರೆ ಜಮೀನು ಸ್ವಾಧೀನಪಡಿಸಿ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಕಡೆಗಣಿಸಿವೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನಿರಂತರ ಅನ್ಯಾಯವಾಗುತ್ತಿದ್ದು, ಈ ಭಾಗದ ಜನ ಪ್ರತಿನಿಧಿಗಳು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಕಲಬುರಗಿ ನಿಲ್ದಾಣದಲ್ಲಿ ಹೆಚ್ಚುವರಿ ರೈಲು ನಿಲುಗಡೆ, ಹೊಸ ಮತ್ತು ನೇರ ರೈಲು ಆರಂಭಿಸಿದರೆ ಐದು ಸಾವಿರಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿ ಜತೆಗೆ ಟಿಕೆಟ್‌ಗಾಗಿ ಅಲೆದಾಟ ತಪ್ಪುತ್ತದೆ. ಬಡವರ ಸಂಚಾರ ಸಮಸ್ಯೆಗೆ ಮುಕ್ತಿ ಸಿಗಲಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ಬಲ ದೊರೆಯುತ್ತದೆ ಎಂದರು.

ಕೃಷಿ ಚಟುವಟಿಕೆಗಳಿಗೆ ಶಕ್ತಿ ತುಂಬಲು ಪೂರಕವಾಗಿರಲಿದೆ. ಅಧ್ಯಯನಕ್ಕೆ ಬರುವ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಸೊಲ್ಲಾಪುರಗಳಿಂದ ರೈಲುಗಳಿವೆ. ಸೊಲ್ಲಾಪುರ ವಿಭಾಗಕ್ಕೆ ಶೇ.50 ಆದಾಯ ಕಲಬುರಗಿ, ಯಾದಗಿರಿ ಜಿಲ್ಲೆಯಿಂದ ಬರುತ್ತದೆ. ರೈಲ್ವೆ ವಿಭಾಗ ಆಗಬಾರದು ಎಂಬ ಷಡ್ಯಂತ್ರ ಹೂಡಿ ಈ ಭಾಗವನ್ನು ವಿವಿಧೆಡೆ ಹಂಚಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.

Leave a Reply