ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಪರಿಶೀಲನೆ ನಡೆಸಲಾಗುವುದು: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ  ನಟ ದರ್ಶನ್ ಗೆ ರಾಜಾತಿಥ್ಯ ವಿವಾದದ ಬೆನ್ನಲ್ಲೇ ರಾಜ್ಯದ ಎಲ್ಲಾ ಜೈಲುಗಳ ಮೇಲೆ ತೀವ್ರ ನಿಗಾ ಮತ್ತು ಸುಧಾರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಏನೆಲ್ಲ ನಡೆಯುತ್ತಿದೆ? ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಾಗುವುದು. ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ತರಿಸಿಕೊಳ್ಳಲಾಗುವುದು ಎಂದರು.

ಹಿಂಡಲಗಾ ಜೈಲಿಗೆ ಭೇಟಿ ನೀಡಿದಾಗ ಕೆಲವು ಲೋಪದೋಷಗಳು ಕಂಡುಬಂದಿತ್ತು. ಕ್ರಮ ಕೈಗೊಳ್ಳಲಾಗಿತ್ತು. ಶಿವಮೊಗ್ಗ, ಮಂಗಳೂರು ಕಾರಾಗೃಹ ಎಲ್ಲವನ್ನು ಪರಿಶೀಲಿಸಲಾಗುವುದು ಎಂದರು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಈ ಹಿಂದೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ವೇಳೆ ಜೈಲು ಸುಧಾರಣೆಗೆ ವರದಿ ನೀಡಿದ್ದಾರೆ. ಅದನ್ನು ತರಿಸಿಕೊಂಡು ಪರಿಶೀಲಿಸಲಾಗುವುದು. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ರಾಷ್ಟ್ರಮಟ್ಟದಲ್ಲಿ ಪೊಲೀಸ್ ಸುಧಾರಣೆ, ಕಾರಾಗೃಹ ಸುಧಾರಣೆಗೆ ವರದಿ ನೀಡಲಾಗಿತ್ತು. ಆ ವರದಿಯ ಆಧಾರದಲ್ಲಿ  ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗುವುದು ಎಂದರು.

ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ವಿಚಾರವನ್ನು ಸರ್ಕಾರ ತೀರ್ಮಾನ ಮಾಡುವುದಿಲ್ಲ. ಬಂದೀಖಾನೆ ಪ್ರಾಧಿಕಾರ ಕೋರ್ಟ್ನ ನಿರ್ದೇಶನದ ಮೇರೆಗೆ ಆರೋಪಿಗಳನ್ನು ಸ್ಥಳಾಂತರ ಮಾಡಲಿದೆ ಎಂದರು.

ದರ್ಶನ್ ವಿಚಾರಣಾದೀನ ಕೈದಿಯಾಗಿರುವುದರಿಂದ ಕೆಲವು ನಿಯಮಗಳ ಪ್ರಕಾರವೇ ಸ್ಥಳಾಂತರ ಮಾಡಬೇಕಾಗುತ್ತದೆ. ಅದರ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಸ್ಥಳಾಂತರ ಆಗಬಹುದು ಎಂದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತೆ ದೃಷ್ಟಿಯಿಂದ ಆಂತರಿಕ ಆಡಳಿತದ ಬದಲಾವಣೆ ಮಾಡಬಹುದು. ಆದರೆ, ಮೂರು ಭಾಗ ಮಾಡಲು ಆಗುವುದಿಲ್ಲ. ಬ್ಲಾಕ್ 1, ಬ್ಲಾಕ್ 2 ಬ್ಲಾಕ್ 3 ಇವೆ. ಅದರ ಜೊತೆಗೆ ಬೇರೆ ಬ್ಯಾರಕ್ಗಳಿವೆ. ಇದರಲ್ಲಿ ಕೈದಿಗಳನ್ನು ಇರಿಸಲು ಮಾರ್ಪಾಡು ತರಬಹುದು, ಭಾಗ ಮಾಡುವುದಿಲ್ಲ ಎಂದರು.

ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಎಂಬುವನಿಗೆ ಒಂದು ಬ್ಯಾರಕ್ನಿಂದ ಮತ್ತೊಂದು ಬ್ಯಾರಕ್ಗೆ ಹೋಗಲು ಅವಕಾಶ ಕೊಟ್ಟಿದ್ದಾರೆ ಎಂಬುದು ನಿನ್ನೆ ಭೇಟಿ ನೀಡಿದ ವೇಳೆ ಗೊತ್ತಾಗಿದೆ. ಈ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಈಗಾಗಲೇ 9 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಜೈಲಿನ ಮುಖ್ಯ ಅಧೀಕ್ಷಕ, ಅಧೀಕ್ಷಕನನ್ನು ಅಮಾನತು ಮಾಡಿದ್ದೇವೆ. ಈ ಸ್ಥಳಗಳಿಗೆ ಬೇರೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದರು.

ಕಾರಾಗೃಹದಲ್ಲಿ ದರ್ಶನ್ಗೆ ಯಾರೆಲ್ಲ ಸಹಕಾರ ಕೊಟ್ಟಿದ್ದಾರೋ ಅವರನ್ನು ಅಮಾನತು ಮಾಡಲಾಗಿದೆ. ತನಿಖೆ ಇನ್ನೂ ಮುಂದುವರೆದಿದೆ. ಹೆಚ್ಚಿನ ತನಿಖೆಗಾಗಿ ಒಬ್ಬರು ಹಿರಿಯ ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

Leave a Reply