ದ್ವಿತೀಯ ಪಿಯುಸಿ ಪರೀಕ್ಷೆಗಳು ರಾಜ್ಯದ 1,109 ಕೇಂದ್ರಗಳಲ್ಲಿ ಆರಂಭ

3 years ago

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದು ಪರಿಗಣಿಸಲ್ಪಡುವ ದ್ವಿತೀಯ ಪಿಯುಸಿ ಪರೀಕ್ಷೆಗಳು ರಾಜ್ಯದ 1,109 ಕೇಂದ್ರಗಳಲ್ಲಿ ನಡೆಯುತ್ತಿದ್ದು ಮೊದಲ ದಿನ ಎಲ್ಲಾ ಪ್ರಕ್ರಿಯೆಗಳು ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನೆರವೇರಿತು.

ಹಾಲ್‌ಟಿಕೆಟ್‌ ಇದ್ದರೂ ಹಾಜರಾತಿ ಕಡಿಮೆ ಇರುವುದರಿಂದ ಪರೀಕ್ಷಾ ಮಂಡಳಿ ಒಎಂಆರ್‌ ಶೀಟ್‌ ಕಳುಹಿಸದೆ ಹೊಸಪೇಟೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗದ ಪ್ರಕರಣ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಘಟನೆ ಹೊರತುಪಡಿಸಿದರೆ ಇತರೆ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ ನಡೆಯಿತು.

ಒಎಂಆರ್‌ ಶೀಟ್‌ ಇಲ್ಲದೇ ಪರೀಕ್ಷೆ ಬರೆಯಲು ಸಾಧ್ಯವಾಗದ ವಿಷಯವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಗಮನಕ್ಕೆ ಅಧಿಕಾರಿಗಳು ತಂದಿದ್ದು, ಮರು ಪರೀಕ್ಷೆಗೆ ಅವಕಾಶ ನೀಡುವ ಭರವಸೆ ದೊರೆತಿದೆ.

ತುಮಕೂರು ಜಿಲ್ಲೆಯ ತಿಪಟೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆಗಳು ನಡೆಯುತ್ತಿವೆ. ಮಾರ್ಚ್‌ 29ಕ್ಕೆ ಪರೀಕ್ಷೆ ಮುಗಿಯಲಿದ್ದು, ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದರು.

ರಾಜ್ಯದ 1,109 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಸುಮಾರು 7 ಲಕ್ಷ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

Leave a Reply