ಇಂದಿರಾ ಹೆಲ್ತ್ ಕೇರ್ ಲೋಕಾರ್ಪಣೆ ಸಮಾರಂಭ
ಸಮಾಜ ಸೇವಕ ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಇ.ಸಿ.ಜಿ. ಮತ್ತು ರಕ್ತ ಪರೀಕ್ಷೆ, ಬಿ.ಪಿ. ಮತ್ತು ಜನರಲ್ ಚೆಕಪ್
ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಡವರ ಅಭಿವೃದ್ಧಿ ಪರ ಚಿಂತನೆ ಮಾಡುತ್ತಿದ್ದರು. ಪ್ರಧಾನಿಯಾಗಿ 16 ವರ್ಷ ಆಡಳಿತದಲ್ಲಿ ಬಡವರು ಆರ್ಥಿಕವಾಗಿ ಸಬಲರಾಗಲು ಹಲವು ಯೋಜನೆಗಳನ್ನು ಜಾರಿಗೆ ತಂದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ಇಂದಿರಾ ಹೆಲ್ತ್ ಕೇರ್ ಕ್ಲಿನಿಕ್ ಲೋಕಾರ್ಪಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಮಾಜಿ ಸಚಿವ ಕೃಷ್ಣಭೈರೇಗೌಡ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಮಾಜಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು, ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಎಸ್.ಕೇಶವಮೂರ್ತಿರವರು, ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಕುಮಾರ್ ಉದ್ಘಾಟಿಸಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತಾಡಿದ ರಾಮಲಿಂಗಾರೆಡ್ಡಿ, ಇಂದಿರಾ ಗಾಂಧಿಯವರು ಉಕ್ಕಿನ ಮಹಿಳೆ ಎಂದೇ ಖ್ಯಾತಿ ಗಳಿಸಿದ್ದರು. ಇಂದಿರಾ ಗಾಂಧಿಯವರ ಸ್ಮರಣೆಯಲ್ಲಿ ಮಹದೇವಪ್ಪ ಪ್ರತಿಷ್ಠಾನ ವತಿಯಿಂದ ಇಂದಿರಾ ಹೆಲ್ತ್ ಕೇರ್ ಆರಂಭಿಸಲಾಗಿದೆ. ಎಲ್ಲರು ಬಂದು ಉಚಿತವಾಗಿ ಇ.ಸಿ.ಜಿ. ಮತ್ತು ರಕ್ತ ಪರೀಕ್ಷೆ ಹಾಗೂ ಬಿ.ಪಿ. ಜನರಲ್ ಚೆಕಪ್ ಮಾಡಿಸಿಕೊಳ್ಳಬಹುದು ಎಂದರು.
ಕೋವಿಡ್ ಸಾಂಕ್ರಮಿಕ ರೋಗದ ಲಾಕ್ ಡೌನ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೊರೋನಾ ವಾರಿಯರ್ಸ್ ನಂತೆ ಕೆಲಸ ಮಾಡಿದರು. ಆಹಾರ ಕಿಟ್ ಮತ್ತು ಔಷಧಿ ಮತ್ತು ಮಾಸ್ಕ್, ಸ್ಯಾನಿಟೈಸರ್ ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದರು. ಕಾಂಗ್ರೆಸ್ ಬಡವರ ಪರ ಸದಾ ಶ್ರಮಿಸುವ, ದುಡಿಯುವ ಪಕ್ಷವಾಗಿದೆ ಎಂದರು.
ಹೆಚ್.ಎಂ.ರೇವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷ ಆಡಳಿತ ಅವಧಿಗಳಲ್ಲಿ ಅನ್ನ, ಆಶ್ರಯ, ಆರೋಗ್ಯ ಮತ್ತು ಪರಿಸರ, ಅಭಿವೃದ್ದಿ ಎಂಬ ಪಂಚಸೂತ್ರಗಳನ್ನು ಸರ್ಕಾರ ಆಳವಡಿಸಿಕೊಂಡಿರುವ ಕಾರಣದಿಂದ ದೇಶ ಇಷ್ಟು ಅಭಿವೃದ್ದಿಗೆ ಸಾಕ್ಷಿಯಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ವಿಶ್ವದ ಬಲಿಷ್ಠ ನಾಯಕಿ ಎಂಬ ಕೀರ್ತಿ ಗಳಿಸಿದ್ದರು. ಸಾರ್ವಜನಿಕರು ಇಂದಿರಾ ಹೆಲ್ತ್ ಕೇರ್ ಭೇಟಿ ನೀಡಿ ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಎಮ್.ಶಿವರಾಜು ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸ್ಮರಣೆಯಲ್ಲಿ ಇಂದಿರಾ ಹೆಲ್ತ್ ಕೇರ್ ಕ್ಲಿನಿಕ್ ಆರಂಭಿಸಲಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ತಪಾಸಣೆ ಮಾಡಿಸಿಕೊಳ್ಳಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಉಚಿತವಾಗಿ ಇ.ಸಿ.ಜಿ. ಮತ್ತು ಸಕ್ಕರೆ ಖಾಯಿಲೆ, ಬಿ.ಪಿ. ಹಾಗೂ ಜನರಲ್ ಚೆಕಪ್ ಗಳನ್ನು ಉಚಿತವಾಗಿ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಕುಕ್ಕರ್ ಮತ್ತು ಆಹಾರ ಕಿಟ್ ಗಳನ್ನು ವಿತರಿಸಲಾಯಿತು ಹಾಗೂ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.




