ಬೆಂಗಳೂರು: ದಕ್ಷಿಣ ರಾಜ್ಯಗಳ ನಡುವಿನ ಸಂಪರ್ಕ ಸೇತುವೆ ಎಂದು ಬಣ್ಣಿಸಲಾದ ಬೆಂಗಳೂರು –ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕರ್ನಾಟಕದ ಬೆಳವಣಿಗೆಯ ಹಾದಿಗೆ ಕೊಡುಗೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉದ್ಘಾಟನೆಗೆ ಸಜ್ಜುಗೊಂಡಿರುವ ಬೆಂಗಳೂರು –ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಚಿತ್ರವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ಹೆದ್ದಾರಿ ಕರ್ನಾಟಕದ ಬೆಳವಣಿಗೆಗೆ ಪೂರಕ ಎಂದಿದ್ದಾರೆ.
ಈ ಹೆದ್ದಾರಿಯು ಶ್ರೀರಂಗಪಟ್ಟಣ, ಕೊಡಗು, ಊಟಿ ಮತ್ತು ಕೇರಳದಂತಹ ಪ್ರದೇಶಗಳ ನಡುವಿನ ಸಂಪರ್ಕ ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಗಡ್ಕರಿ ಹೆದ್ದಾರಿಯ ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
ಈ ಯೋಜನೆಯು ಎನ್‌ಎಚ್-275 ರ ಒಂದು ಭಾಗವನ್ನು ಒಳಗೊಂಡಿದೆ. ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ಮಹತ್ವದ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಮೇಲ್ಸೇತುವೆಗಳ ಅಭಿವೃದ್ಧಿಯನ್ನು ಸಹ ಒಳಗೊಂಡಿದೆ ಎಂದು ಗಡ್ಕರಿ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.
ಲೋಕಾರ್ಪಣೆ: ಈ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಲಿದ್ದಾರೆ. ಮಂಡ್ಯದ ಗೆಜ್ಜಲಗೆರೆ ಬಳಿ ನಡೆಯಲಿರುವ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುತ್ತಿರುವ ರಾಜ್ಯ ಸರ್ಕಾರ ಇದರ ಮೂಲಕ ಹಳೆ ಮೈಸೂರು ಪ್ರದೇಶದಲ್ಲಿ ಬಿಜೆಪಿ ಪರವಾದ ಅಲೆಯಾಗಿ ಪರಿವರ್ತಿಸುವ ಉದ್ದೇಶ ಹೊಂದಿದೆ.
ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಭೇಟಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರು, ಚಾಮರಾಜನಗರ,ಕೊಡಗು ಹಾಸನ ಜಿಲ್ಲೆಯ 2400 ಪೊಲೀಸರನ್ನು ನಿಯೋಜನೆ ಮಾಡಿ ಅಭೂತಪೂರ್ವ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಅವರಿಂದ ಮಾರ್ಚ್ 12 ರಂದು ಮೈಸೂರು-ಬೆಂಗಳೂರು ಹೆದ್ದಾರಿ ಉದ್ಘಾಟನೆ ಹಿನ್ನೆಲೆ ಮಂಡ್ಯದಿಂದ ಗೆಜ್ಜಲಗರೆ ಸಮಾವೇಶದವರೆಗೂ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ.
ಮಂಡ್ಯದ ಐಬಿ ಸರ್ಕಲ್ ನಿಂದ ನಂದ ಟಾಕೀಸ್ ವರೆಗೆ ರೋಡ್ ಶೋ ನಡೆಯಲಿದ್ದು ಅಮರಾವತಿ ಹೋಟೆಲ್ ಬಳಿ ಪ್ರಧಾನಿ ಮೋದಿ ರಸ್ತೆ ವೀಕ್ಷಣೆ ಮಾಡಲಿದ್ದಾರೆ.
ಪ್ರಧಾನಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮದ್ದೂರು/ಮಂಡ್ಯ ವ್ಯಾಪ್ತಿಯಲ್ಲಿ ಲಕ್ಷಾಂತರ ಜನರು, ಬಿಜೆಪಿ ಕಾಯಕರ್ತರು ಸೇರಲಿದ್ದಾರೆ. ಈ ಕಾರಣಕ್ಕೆ ಸಂಚಾರ ಪೊಲೀಸರು ವಾಹನ ಸವಾರರಿಗೆ ಮಾರ್ಚ್ 12ರಂದು ಪರ್ಯಾಯ ಮಾರ್ಗಗಳನ್ನು ಕಲ್ಪಿಸಿದ್ದಾರೆ.
ಮೈಸೂರು ನಗರದಿಂದ ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿರುವ ಎಲ್ಲ ವಿಧದ ವಾಹನಗಳು ಮೈಸೂರು- ಬನ್ನೂರು ಮಾರ್ಗವಾಗಿ ಕಿರುಗಾವಲು ಅಲ್ಲಿಂದ ಮಳವಳ್ಳಿ- ಹಲಗೂರು- ಕನಕಪುರ ಹಾದು ಬೆಂಗಳೂರು ತಲಪಬೇಕು.
ಮೈಸೂರು ನಗರದಿಂದ ತುಮಕೂರಿಗೆ ಮಂಡ್ಯ ಮಾರ್ಗವಾಗಿ ಬರುವವರು ಮೈಸೂರು- ಶ್ರೀರಂಗಪಟ್ಟಣ- ಪಾಂಡವಪುರ- ನಾಗಮಂಗಲ, ಬೆಳ್ಳೂರು ಕ್ರಾಸ್ ಮೂಲಕ ತುಮಕೂರಿಗೆ ಬರಬಹುದು.
ತುಮಕೂರಿನಿಂದ ಮೈಸೂರಿಗೆ ಮದ್ದೂರು ಮಂಡ್ಯ ಮಾರ್ಗವಾಗಿ ಬರುವವ ಎಲ್ಲ ವಾಹನ ಸವಾರರು, ತುಮಕೂರಿನಿಂದ ಬೆಳ್ಳೂರು ಕ್ರಾಸ್- ನಾಗಮಂಗಲ- ಪಾಂಡವಪುರ- ಶ್ರೀರಂಗಪಟ್ಟಣ- ಮೈಸೂರು ಮಾರ್ಗವಾಗಿ ಸಂಚರಿಸುವಂತೆ ಪೊಲೀಸರು ಕೋರಿದ್ದಾರೆ.




