ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಕೈಗೆ ದುಡ್ಡು ನೀಡಲು ಗ್ಯಾರೆಂಟಿ ಯೋಜನೆಗಳ ಜಾರಿ: ಸಿದ್ದರಾಮಯ್ಯ

3 years ago

#Implementation #guarantee #schemes #money #people #shaken #pricehike #Siddaramaiah

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ  ಜನರ ಕೈಗೆ ದುಡ್ಡು ನೀಡಲು ನಮ್ಮ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ತಂದಿದೆ. ಈ ಯೋಜನೆಗಳ ಬಗ್ಗೆ ಜನರು ಸಂತುಷ್ಟರಾಗಿದ್ದಾರೆ. ಇದಕ್ಕಾಗಿ 35410 ಕೋಟಿ ರೂ. ಅಗತ್ಯವಿದ್ದು, ಆಯವ್ಯಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಪ್ರಸಕ್ತ ಸಾಲಿನ ಬಜೆಟ್ ಮೇಲೆ ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ಹಣ ಹಾಕುವ ಈ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮಗಳಿಂದ ಪ್ರೇರಿತವಾಗಿವೆ ಎಂದರು.

ಸಾಮಾಜಿಕ ಸ್ವಾತಂತ್ರ್ಯ ಇಲ್ಲದಿದ್ದರೆ, ದೇಶಕ್ಕೆ ಸ್ವಾತಂತ್ರ್ಯ ಬಂದರೂ ಪ್ರಯೋಜನವಿಲ್ಲ. ರಾಜಕೀಯ ಪ್ರಜಾಪ್ರಭುತ್ವವಿದ್ದರೆ ಸಾಲದು, ಸಾಮಾಜಿಕ ಪ್ರಜಾಪ್ರಭುತ್ವವಿರಬೇಕು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯಿಂದ ಕಷ್ಟದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು. ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯವೇ ಸಮಾಜವಾದ. ನಮ್ಮ ಸರ್ಕಾರ ಜನರ ಜೇಬಿಗೆ ದುಡ್ಡು ಕೊಡುವ ಮೂಲಕ  ಉದ್ಯೋಗ ಸೃಷ್ಟಿ , ಜಿಡಿಪಿ ಬೆಳವಣಿಗೆ, ತೆರಿಗೆ ಮೂಲಕ್ಕೂ ದಾರಿಯಾಗುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ 13500 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ, 8068 ಕೋಟಿ ರೂ. ಹೆಚ್ಚುವರಿ ಸಾಲ, ಬಂಡವಾಳ ಯೋಜನೆಗಳ ಮರು ಆದ್ಯತೆ ನಿಗದಿ ಮೂಲಕ 6086 ಕೋಟಿ ರೂ. ಹಾಗೂ ರಾಜಸ್ವ ಯೋಜನೆಗಳ ಮರು ಆದ್ಯತೆ ನಿಗದಿಪಡಿಸುವ ಮೂಲಕ 7೦೦೦ ಕೋಟಿ ರೂ. ಸೇರಿದಂತೆ ಒಟ್ಟು 34,654 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತಿಲ್ಲ. 76 ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ.  ಶಕ್ತಿ ಯೋಜನೆ ಮೂಲಕ ಪ್ರತಿ ದಿನ ಸುಮಾರು 50 ಲಕ್ಷ ಜನ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 2800 ಕೋಟಿಯನ್ನು ಈ ಯೋಜನೆಗೆ ಈ ವರ್ಷ ಇಡಲಾಗಿದೆ. ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಜಾರಿ ಮಾಡಿ, ಫಲಾನುಭವಿಗಳು ಆಗಸ್ಟ್ ತಿಂಗಳಿನಿಂದ ಬಿಲ್ಲು ಪಾವತಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಜನರ ಗೃಹಬಳಕೆಯ ವಿದ್ಯುತ್ ಸರಾಸರಿ 53 ಯೂನಿಟ್ .12 ತಿಂಗಳ ಸರಾಸರಿಗೆ ಶೇ.10 ರಷ್ಟು ಸೇರಿಸಿ , ಉಚಿತ ವಿದ್ಯುತ್ ನೀಡಲಾಗುವುದು. ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ 2,29,000 ಮೆ.ಟನ್ ಅಕ್ಕಿ ಬೇಕಾಗುತ್ತದೆ. ಅಕ್ಕಿ ಸರಬರಾಜಿಗೆ ಕೇಂದ್ರ ನಿರಾಕರಿಸಿದ್ದರಿಂದ 5 ಕೆಜಿ ಬದಲು 170 ರೂ.  ವೆಚ್ಚವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದ್ದು , ಈ ಯೋಜನೆಗೆ ಸುಮಾರು 10 ಸಾವಿರ ಕೋಟಿ ರೂ. ಮೀಸಲಿರಿಸಲಾಲಿದೆ. ಈವರೆಗೆ 57.51 ಲಕ್ಷ ಕುಟುಂಬಗಳಿಗೆ  337.08 ಕೋಟಿ ಬ್ಯಾಂಕ್ ಖಾತೆಗೆ ತಲುಪಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ 34000 ಕೋಟಿ ರೂ., ಈ ವರ್ಷ 18000 ಕೋಟಿ ರೂ ಮೀಸಲಿರಿಸಲಾಗಿದೆ. ಯುವನಿಧಿ ಯೋಜನೆಯಡಿ 2022-23 ರಲ್ಲಿ ಪಾಸಾದ ಪದವಿಧರರು ಹಾಗೂ ಡಿಪ್ಲೋಮಾ ಪಡೆದಿರುವವರಿಗೆ 3000 ರೂ. ಹಾಗೂ 1500 ರೂ. ಅನುಕ್ರಮವಾಗಿ 24 ತಿಂಗಳವರಗೆ  ನೀಡಲಾಗುವುದು. ಪಂಚ ಗ್ಯಾರೆಂಟಿಗಳಿಂದ  1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದರು.

2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023 ಕ್ಕೆ ಇಂದು 5,20,000 ಕೋಟಿ ರೂ.ಸಾಲವಿದೆ. ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ ಎಂದರು.

ರಾಜ್ಯಕ್ಕೆ ಬರುವ ಅನುದಾನ 14  ಮತ್ತು 15 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ  ಕಡಿಮೆಯಾಗಿದೆ. ಕೇಂದ್ರ ಸರ್ಕಾರ 5495 ಕೋಟಿ ರೂ. ಮಧ್ಯಂತರ ಪರಿಹಾರ  ನೀಡಲಿಲ್ಲ. ಬಿಜೆಪಿಯ 25 ಜನ ಸಂಸದರಿದ್ದರೂ ಇದರ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಲಿಲ್ಲ ಎಂದರು.

ರಾಜ್ಯಗಳಿಗೆ ನೀಡುವ ಸಬ್ಸಿಡಿಗಳು ಕಡಿಮೆಯಾಗಿದೆ. ಯೋಜನೆಯಲ್ಲಿ ಶೇ. 80 ರಷ್ಟು ರಾಜ್ಯ ಹಾಗೂ ಶೇ.20 ರಷ್ಟು ಕೇಂದ್ರ ಸರ್ಕಾರ ಹಾಕಿ , ಕೇಂದ್ರ ಪುರಸ್ಕೃತ ಯೋಜನೆ ಎನ್ನಲಾಗುತ್ತದೆ. ಈ ವರ್ಷ ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ಹೋಗುತ್ತಿದ್ದು, ಅದರಲ್ಲಿ ತೆರಿಗೆ ಪಾಲು ಹಾಗೂ  ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೇರಿ ಕೇವಲ 50257 ಕೋಟಿ ಬರುತ್ತದೆ ಎಂದರು.

ತೆರಿಗೆ ಸಂಗ್ರಹಕ್ಕೆ ಗುರಿ ಹೆಚ್ಚಳ: ತೆರಿಗೆ ಸೋರಿಕೆಯನ್ನು ತಡೆದು, ತೆರಿಗೆ ಸಂಗ್ರಹಕ್ಕೆ ಪ್ರಮುಖ ಇಲಾಖೆಗಳಿಗೆ ಹೆಚ್ಚಿನ ಗುರಿಯನ್ನು ನೀಡಲಾಗಿದೆ. 13,500 ಕೋಟಿ ತೆರಿಗೆ ಬಾಬ್ತುಗಳಿಂದ ಸಂಗ್ರಹವಾಗುತ್ತದೆ.  ನಮ್ಮ ಸರ್ಕಾರ 85,808 ಕೋಟಿ ಹೆಚ್ಚುವರಿ ಸಾಲ ಪಡೆಯುತ್ತಿದೆ. ಯೋಜನೆಗಳ ಆದ್ಯತೀಕರಣದಿಂದ ರೂ. 34,650 ಕೋಟಿ ಕ್ರೋಢೀಕರಣ ಮಾಡಲಾಗುತ್ತದೆ.  ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯೊಳಗೆ ಇದೆ. ಮುಂದೆಯೂ ಉಳಿತಾಯ ಬಜೆಟ್ ಮಾಡಲು ಪ್ರಯತ್ನಿಸಲಾಗುವುದು ಎಂದರು.

ರಾಜ್ಯದ ಆಯವ್ಯಯದ ಗಾತ್ರ 3,26,747 ಕೋಟಿ ರೂ.ಗಳಷ್ಟಿದ್ದು, 2022-23 ರ ಆಯವ್ಯಯ ಗಾತ್ರಕ್ಕಿಂತ ಶೇ. 22 ರಷ್ಟು ಹೆಚ್ಚಳವಾಗಿದೆ. ವಿತ್ತೀಯ ಕೊರತೆ ಶೇ. 2.6 ರಷ್ಟಿದ್ದು, ಸಾಲದ ಪ್ರಮಾಣ ಜಿ.ಎಸ್.ಡಿ.ಪಿ. ಯ ಶೇ. 22 ರಷ್ಟಿದೆ. ಆದ್ದರಿಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಶಿಸ್ತನ್ನು ನಿರ್ಧರಿಸುವ ಎರಡು ಮಾನದಂಡಗಳನ್ನು ನಮ್ಮ ಸರ್ಕಾರ ಪಾಲನೆ ಮಾಡಿದೆ. ಈ ಬಾರಿ 15,523 ಕೋಟಿ ರೂ. ಕೊರತೆ ಬಜೆಟ್‌ ಮಂಡಿಸಲಾಗಿದ್ದು, ಗ್ಯಾರಂಟಿ ಯೋಜನೆಗಳ ಕಾರಣದಿಂದ ಕೊರತೆ ಬಜೆಟ್‌ ಮಂಡಿಸಲಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ, ಕೊರತೆ ಪ್ರಮಾಣ ಕಡಿಮೆಯಾಗಿದೆ. ಮುಂದಿನ ಬಾರಿ ಉಳಿತಾಯ ಬಜೆಟ್‌ ಮಂಡಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಆದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಬಿಟ್‌ ಕಾಯಿನ್‌ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಕೋವಿಡ್‌ ಉಪಕರಣ/ ಔಷಧ ಖರೀದಿ ಹಗರಣ ಮೊದಲಾದವುಗಳ ತನಿಖೆ ಈಗಾಗಲೇ ಪ್ರಾರಂಭವಾಗಿದೆ ಎಂದರು.

Leave a Reply