ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ನೈರುತ್ಯ ಮುಂಗಾರು ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬರಗಾಲ ಪರಿಸ್ಥಿತಿ ಘೋಷಣೆ ಮಾಡಲು ಇರುವ ಮಾನದಂಡಗಳನ್ನು ಬದಲಾವಣೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಮಾಡಿದೆ.
ಈ ಸಂಬಂಧ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದರು.
ರಾಜ್ಯದ ಹಲವೆಡೆ ಎದುರಾಗಿರುವ ಬರಪರಿಸ್ಥಿಯನ್ನು ನಿಭಾಯಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಆಯಾ ಜಿಲ್ಲೆಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡುವ ಬಗ್ಗೆಯೂ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿರುವ ಹಾಗೂ ಇದರಿಂದಾಗಿ ಕುಡಿಯುವ ನೀರು ಮತ್ತು ರೈತರಿಗೆ ಬಿತ್ತನೆಯಲ್ಲಿ ಸಮಸ್ಯೆಯಾಗಿರುವ ವಿಚಾರ ಕುರಿತು ನಿಯಮ 69ರಡಿ ಅಲ್ಪ ಕಾಲಾವಧಿ ಚರ್ಚೆಯಡಿ ಹಲವಾರು ಆಡಳಿತ ಪಕ್ಷದ ಶಾಸಕರು ವ್ಯಕ್ತಪಡಿಸಿದ ತೀವ್ರ ಕಳಕಳಿಗೆ ಸ್ಪಂದಿಸಿದ ಅವರು, ಈ ವಿಚಾರವನ್ನು ಸ್ಪಷ್ಟಪಡಿಸಿದರು.
ಬರಗಾಲ ಘೋಷಣೆ ಮಾಡಬೇಕು ಎಂದು ಶಾಸಕರು ಆಗ್ರಹಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬರಗಾಲ ಘೋಷಣೆ ಸಂಬಂಧ ರಾಜ್ಯ ಸರ್ಕಾರ ಏಕಾಏಕಿ ಘೋಷಣೆ ಮಾಡಲು ಅವಕಾಶವಿಲ್ಲ. ಕೇಂದ್ರ ಸರ್ಕಾರ 2016ರಲ್ಲಿ ರೂಪಿಸಿದ್ದ ಮಾನದಂಡಗಳನ್ನು 2020ರಲ್ಲಿ ಪರಿಷ್ಕರಣೆ ಮಾಡಿ ಪ್ರಕಟಿಸಿದೆ. ಇದರ ಪ್ರಕಾರ ವಾಡಿಕೆ ಮಳೆಗಿಂತ ಶೇ.60ರಷ್ಟು ಮಳೆ ಕೊರತೆಯಾಗಿರಬೇಕು. ಕನಿಷ್ಠ ಮೂರು ವಾರ ಸತತವಾಗಿ ಮಳೆ ಬಂದಿರಬಾರದು ಎಂಬ ಷರತ್ತುಗಳನ್ನು ವಿಧಿಸಿದೆ. ಇದರ ಪ್ರಕಾರ ಮುಂಗಾರು ಹಂಗಾಮಿನ ಮಧ್ಯೆ ಮಳೆಯಾಗದಿದ್ದರೆ, ಆಗಸ್ಟ್ ಮೊದಲು ಬರ ಘೋಷಣೆ ಮಾಡಲು ಅವಕಾಶವಿಲ್ಲ. ಆದರೆ, ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿದರೆ ಮಾತ್ರವೇ ಅಕ್ಟೋಬರ್ ಮೊದಲ ವಾರದಲ್ಲಿ ಬರಗಾಲ ಪರಿಸ್ಥಿತಿ ಘೋಷಣೆ ಮಾಡಬಹುದು ಎಂದು ರಾಜ್ಯಗಳಿಗೆ ಸೂಚಿಸಿದೆ. ಈ ಮಾನದಂಡಗಳಿಗೂ ರಾಜ್ಯದಲ್ಲಿನ ಕೆಲವು ತಾಲ್ಲೂಕುಗಳಲ್ಲಿ ಎದುರಾಗಿರುವ ತಳಮಟ್ಟದ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ ತಾಳಮೇಳ ಇಲ್ಲದಂತಾಗಿದೆ ಎಂದರು.
ಕೇಂದ್ರದ ನಿಯಮಗಳನ್ನು ಪಾಲಿಸಬೇಕು ಎಂದು ಕಾದು ಕುಳಿತರೆ, ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮಾನದಂಡಗಳನ್ನು ಬದಲಾಯಿಸಬೇಕು ಎಂದು ಕೇಂದ್ರಕ್ಕೆ ಒಯತ್ತಾಯಿಸುವ ಪತ್ರ ಸಿದ್ಧವಾಗಿದೆ. ಮುಖ್ಯಮಂತ್ರಿಗಳು ವಿತ್ತೀಯ ಕಲಾಪದಲ್ಲಿ ಬ್ಯುಸಿಯಾಗಿದ್ದು, ಅವರು ಬಿಡುವಾದ ಕೂಡಲೇ ಕೇಂದ್ರಕ್ಕೆ ಪತ್ರವನ್ನು ಕಳುಹಿಸಿಕೊಡಲಿದ್ದಾರೆ ಎಂದರು.




