ವಿರೋಧಪಕ್ಷಗಳು ಸ್ವಾರ್ಥ ಬಿಟ್ಟು ಒಂದಾಗದಿದ್ದರೆ ಸರ್ವಾಧಿಕಾರದ ಸಂಭ್ರಮ

3 years ago

ನಾಲ್ಕು ವರ್ಷಗಳ ಹಿಂದೆ ಚುನಾವಣಾ ಸಭೆಯೊಂದರಲ್ಲಿ ರಾಹುಲ್‌ ಗಾಂಧಿಯವರು ಆಡಿದ ಮಾತಿನ ಕಾರಣಕ್ಕೆ ಮಾನನಷ್ಟ ಮೊದಕದ್ದಮೆಯನ್ನು ಹೂಡಿ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ಹೊರಬರುತ್ತಿದ್ದಂತೆ ಸಂಭ್ರಮಿಸಿದ ಸರ್ವಾಧಿಕಾರದ ರಾಯಭಾರಿಗಳು ರಾಹುಲ್ ಗಾಂಧಿರವರ ಲೋಕಸಭಾ ಸದಸ್ಯತ್ವ ರದ್ದಾಗುತ್ತಿದ್ದಂತೆ ಕೇಕೆ ಹಾಕಿ ಕುಣಿಯುತ್ತಿದ್ದಾರೆ.

ಭಾರತ ದೇಶದಲ್ಲಿ ಇಂದು ಕೇಂದ್ರ ಸರ್ಕಾರದ ವಿರುದ್ಧ ಆ ನಾಯಕರುಗಳು ಮತ್ತು ಅವರ ನೀತಿ, ನಿಲುವುಗಳ ಬಗ್ಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿದರೆ ದೊಡ್ಡ ಅಪರಾಧ, ದೇಶದ್ರೋಹದ ಕೆಲಸವೆಂಬ ಹಣೆ ಪಟ್ಟಿಯನ್ನು ಕಟ್ಟಿ ತಮ್ಮದೇ ಆದ ಒಂದಷ್ಟು ಮಂದಿಯ ಮೂಲಕ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡುವುದು, ಇಲ್ಲವೇ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸುವುದು ದಿನನಿತ್ಯದ ಸುದ್ದಿಯಾಗಿದೆ.

ಇದು ಸಾಲದು ಎಂಬಂತೆ ತನಿಖಾ ಸಂಸ್ಥೆಗಳ ದುರ್ಬಳಕೆಯ ಕಾರಣದಿ ಹಲವಾರು ಸಂಘಟನೆಗಳು, ನಾಯಕರುಗಳು, ಸಾಮಾನ್ಯರು ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಮೌನಕ್ಕೆ ಶರಣಾಗಿದ್ದಾರೆ. ಇದರ ವಿರುದ್ಧ ದಿಟ್ಟತನದಿಂದ ಎದುರಿಸಿ ನಿಲ್ಲುವವರು ನ್ಯಾಯಾಲಯಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಪದೇ ಪದೆ ಅತಿಥಿಗಳಾಗಿ ಕಾಣಿಸಿಕೊಳ್ಳಬೇಕಾಗಿದೆ. ಇದರ ಮುಂದುವರೆದ ಭಾಗವಾಗಿ ರಾಹುಲ್ ಗಾಂಧಿಯವರು ಸರ್ವಾಧಿಕಾರಿಗಳ ಅಟ್ಟಹಾಸಕ್ಕೆ ಗುರಿಯಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕಂಡಿತ ಸರ್ವಾಧಿಕಾರಿಗಳು ಸಂಭ್ರಮಿಸುತ್ತಾರೆ. ಜನಧ್ವನಿಗಳೆಲ್ಲ ಸತ್ತು ಹೋಗುತ್ತವೆ. ಪ್ರಶ್ನಿಸುವವರೇ ಇಲ್ಲದೇ ಹೌದಪ್ಪಗಳ ಹೊಗಳುಭಟ್ಟರ ಸಾಮ್ರಾಜ್ಯ ಸ್ಥಾಪನೆಯಾಗುತ್ತದೆ.

ಈ ದೇಶದಲ್ಲಿ 1977, 1989, 1996, 2004 ಹೀಗೆ ಅನೇಕ ಬಾರಿ ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯಕ್ಕೆ ಸಿಲುಕಿದಾಗ ಸರ್ವಾಧಿಕಾರದ ಸಂಭ್ರಮ ಹೆಚ್ಚಾದಾಗ ವಿರೋಧಪಕ್ಷಗಳು ವಿವಿಧ ಸ್ವರೂಪದಲ್ಲಿ ಒಂದಾಗಿ ಆಯಾ ಕಾಲಘಟ್ಟದಲ್ಲಿ ಆಗಬಹುದಾಗಿದ್ದ ಅಪಾಯಗಳನ್ನು ತಪ್ಪಿಸಿ ಕಡಿವಾಣವನ್ನು ಹಾಕಿವೆ. ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

2014 ಮತ್ತು 2019ರಲ್ಲಿ ಎಂತಹ ಕೆಟ್ಟ ಪರಿಸ್ಥಿತಿಯಲ್ಲಿಯೂ ಸಹ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 20ರಷ್ಟು ಮತವನ್ನು ಕಾಂಗ್ರೆಸ್ ಪಕ್ಷ ಪಡೆದಿರುವುದನ್ನು ಅನ್ಯ ವಿರೋಧಪಕ್ಷದವರು ವಿಶೇಷವಾಗಿ ಪ್ರಾದೇಶಿಕ ಪಕ್ಷಗಳು ಗಂಭೀರವಾಗಿ ಪರಿಗಣಿಸಿ ಎಲ್ಲರೂ ಕೈ ಜೋಡಿಸಿದರೆ ನಿಯಂತ್ರಣವಿಲ್ಲದೆ ಸಾಗುತ್ತಿರುವ ಈ ವ್ಯವಸ್ಥೆಗೆ ಕಡಿವಾಣ ಹಾಕಬಹುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರುಗಳು ಸೆರೆಮನೆಯಲ್ಲಿರಬೇಕಾಗುತ್ತದೆ.

ಇಂದು ರಾಹುಲ್ ನಾಳೆ ಮತ್ತೊಬ್ಬರಿಗೆ, ಮುಂದೊಂದು ದಿನ ಮತ್ತಷ್ಟು ಮಂದಿಗೆ ಇಂತಹ ಅಪಾಯಗಳು ಕಟ್ಟಿಟ್ಟ ಬುತ್ತಿ. ಕೇಂದ್ರ ಸರ್ಕಾರದ ತಪ್ಪುಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶವನ್ನು ನೀಡದೆ ತಮ್ಮ ಮೇಲಿನ ಕಪೋಕಲ್ಪಿತ ಆರೋಪಗಳಿಗೆ ಉತ್ತರವನ್ನು ನೀಡಲು ತಡೆಗಟ್ಟುವ ವ್ಯವಸ್ಥಿತವಾದ ತಂತ್ರಗಾರಿಕೆಯ ಮುಂದುವರೆದ ಭಾಗವೆ ರಾಹುಲ್ ಗಾಂಧಿರವರ ಅನರ್ಹಗೊಳಿಸಿರುವ ಪ್ರಕರಣ.

  • ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply