ದುರಾಶೆಗಳು ಬಂದ್ ಆಗದಿದ್ದರೆ ನೀರು, ಗಾಳಿಗಾಗಿ ಪ್ರತಿದಿನ ಬಂದ್‌ ಮಾಡಬೇಕಾಗುತ್ತದೆ

3 years ago

#greed #notstopped #Bandh #daily #water #air #ksnagaraj

ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಕಡಿದು ನಾಡುಗಳನ್ನಾಗಿಸಿ, ರಸ್ತೆಗಳ ಅಗಲೀಕರಣದ ಹೆಸರಿನಲ್ಲಿ ಮರಗಳನ್ನು ಕತ್ತರಿಸಿ, ಗಟ್ಟಿಯಾದ ರಸ್ತೆಗಳ ಹೆಸರಿನಲ್ಲಿ ಕಾಂಕ್ರಿಟ್ ರಸ್ತೆಗಳನ್ನಾಗಿಸಿ, ಗುಣಮಟ್ಟದ ಪಾದಾಚಾರಿ ಮಾರ್ಗವೆಂದು ಅವುಗಳಿಗೆ ಟೈಲ್ಸ್‌ಗಳನ್ನು ಅಳವಡಿಸಿ, ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುವಂತೆ ಮಾಡುತ್ತಾ ಮಳೆಯ ನೀರು ಭೂಮಿಗೆ ಇಳಿಯಲು ಎಲ್ಲಿಯೂ ಅವಕಾಶವನ್ನು ಕೊಡದೆ ನಮ್ಮ ಸ್ವಾರ್ಥಗಳಿಗಾಗಿ ನಾವು ಮಾಡುತ್ತಿರುವ ಕ್ರಿಯೆಗಳು ನಮ್ಮನ್ನು ಹಾಳು ಮಾಡುತ್ತಿವೆ.

ಮಿತಿ ಇಲ್ಲದೆ ಬೆಳೆಯುತ್ತಿರುವ ನಗರಗಳು ಕೃಷಿ ಭೂಮಿಗಳನ್ನು ವಸತಿ ಪ್ರದೇಶಗಳನ್ನಾಗಿ ಪರಿವರ್ತಿಸುತ್ತಿರುವುದು, ಲೆಕ್ಕವಿಲ್ಲದಷ್ಟು ಕೊಳವೆ ಬಾವಿಗಳನ್ನು ತೊಡಿಸುತ್ತಿರುವುದು, ಮನೆಯ ವಿಸ್ತೀರ್ಣಕ್ಕೆ ಸಮನಾದ ಪ್ರಮಾಣದಲ್ಲಿ ನೀರು ಸಂಗ್ರಹಣೆಗಾಗಿ ಸಂಪ್‌ಗಳನ್ನು ರಾಜಾರೋಷವಾಗಿ ನಿರ್ಮಿಸಿಕೊಳ್ಳುತ್ತಿರುವುದು, ಬೆಟ್ಟಗಳನ್ನು ಕಡಿದು ನಮ್ಮ ಜೇಬು ತುಂಬಿಸಿಕೊಳ್ಳುತ್ತಿರುವುದು, ಕೆರೆಗಳನ್ನು ನುಂಗಿ ನೀರು ಕುಡಿಯುತ್ತಿರುವುದು, ನದಿಗಳ ಪಾತ್ರವನ್ನು ಕಿರಿದಾಗಿಸುತ್ತಿರುವುದು… ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಮ್ಮ ಸ್ವಾರ್ಥಗಳಿಗಾಗಿ, ನಮ್ಮ ವೈಭವದ ಬದುಕಿಗಾಗಿ, ನಮ್ಮ ದುರಾಶೆಗಾಗಿ ಪ್ರಕೃತಿಯ ಮೇಲೆ ಮೇಲಿಂದ ಮೇಲೆ ನಾವು ದಾಳಿ ಮಾಡುತ್ತಲೇ ಇದ್ದರೆ ಎಲ್ಲಿಂದ ತಾನೇ ಕಾಲ ಕಾಲಕ್ಕೆ ಮಳೆ ಬಂದೀತೂ, ನೀರು ಹರಿದೀತೂ, ನದಿಗಳು ತುಂಬೀತೂ, ಮೋಡಗಳು ಕರಗಿ ಮಳೆಯಾಗುವುದು ಎಲ್ಲಿಂದ ಸಾಧ್ಯ. ಹೀಗಾಗಿ ಕುಡಿಯುವ ನೀರಿಗೆ ಕಾವೇರಿ ನೀರಿನ ವಿಚಾರದಲ್ಲಿ ನಡೆಯುತ್ತಿರುವ ಎಲ್ಲಾ ಹೋರಾಟಗಳು, ಚಳುವಳಿಗಳು, ಬಂದ್‌ಗಳು ಇನ್ನು ಮುಂದಿನ ದಿನದಲ್ಲಿ ಮೇಲಿಂದ ಮೇಲೆ ನಡೆಯುತ್ತಲೇ ಇರಬೇಕಾಗುತ್ತದೆ.

ಇಂದು ಕಾವೇರಿ ನಾಳೆ ಕೃಷ್ಣ ಮುಂದೆ ಮಹಾದಾಯಿ ಹೀಗೆ ಮುಂದುವರಿಯುತ್ತದೆ. ರಾಜಕೀಯ ನಾಯಕರುಗಳು ಸಮಸ್ಯೆಯ ಆಳವನ್ನು ತಿಳಿಯುವ ಪ್ರಯತ್ನವನ್ನು ಮಾಡದೇ ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾ ಬೆಂಕಿ ಬಿದ್ದಮನೆಯಲ್ಲಿ ನೀರು ಕಾಯಿಸಿಕೊಳ್ಳುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಶುದ್ಧವಾದ ಕುಡಿಯುವ ನೀರಿರಲಿ ಗಾಳಿಯೂ ದೊರೆಯುವುದಿಲ್ಲ. ಯಾವ ರೀತಿಯಲ್ಲಿ ಅಡಿಗೆ ಅನಿಲವನ್ನು ತುಂಬಿಸಿಕೊಳ್ಳುತ್ತಿದ್ದೇವೋ ಅದೇ ರೀತಿಯಲ್ಲಿ ಪ್ರತಿಯೊಬ್ಬರು ಆಕ್ಸಿಜನ್ ಸಿಲಿಂಡರ್‌ಗಳನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡಬಹುದಾದ ಕೆಟ್ಟ ದಿನಗಳ ಬರಬಹುದು. ಕಾವೇರಿ ಸಮಸ್ಯೆ ಒಂದು ನೆಪವಷ್ಟೆ.

ಪ್ರಕೃತಿಯನ್ನು ನಮ್ಮ ದುರಾಶೆಗಾಗಿ ಹಾಳು ಮಾಡುವುದನ್ನು ನಿಲ್ಲಿಸದಿದ್ದರೆ ಇಂತಹ ಪರಿಸ್ಥಿತಿಗಳು ಮತ್ತೆ ಮತ್ತೆ ನಿರ್ಮಾಣವಾಗುತ್ತವೆ. ತಿನ್ನುವ ಅನ್ನಕ್ಕೂ ಬರಗಾಲ ಬರುತ್ತದೆ. ಕೃಷಿ ಭೂಮಿಗಳು ಮಾಯವಾದರೆ ಎಲ್ಲಿಂದ ಬರುತ್ತದೆ ಆಹಾರ ಪದಾರ್ಥಗಳು, ಎಲ್ಲಿಂದ ಕೊಡುತ್ತಾರೆ ಬೆಳೆದ ಬೆಂಗಳೂರಿಗೆಲ್ಲಾ ಕುಡಿಯುವ ನೀರು, ಬೆಂಗಳೂರಿನ ಬಗ್ಗೆ ಚಿಂತಿಸುವ ಜನ ಗಂಭೀರವಾಗಿ ಮುಂದಾಲೋಚನೆಯ ಕ್ರಮಗಳನ್ನು ಕೈಗೊಂಡು ಹಸಿರು ವಲಯವನ್ನು ನಿಗದಿಪಡಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

– ಕೆ.ಎಸ್‌.ನಾಗರಾಜ್, ಬೆಂಗಳೂರು

Leave a Reply