ಡಾ. M.S. ಸ್ವಾಮಿನಾಥನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ

3 years ago

#Tribute #MSSwaminathan #greerevolution #farmer #shivasundar #normanborlaug #America #Imperialism #reality

ಹಸಿವು ನಿವಾರಿಸುವ ಹೆಸರಲ್ಲಿ  ಉಸಿರು ತೆಗೆವ “ಪರಿಹಾರಗಳ ”  ಕುರಿತು..

ಡಾ. ಎಂ. ಎಸ್. ಸ್ವಾಮಿನಾಥನ್ ಎಂಬ ಹೆಸರು ಇತ್ತೀಚಿನ ದಿನಗಳಲ್ಲಿ ಈ ದೇಶದ ರೈತ ಹೋರಾಟದ ಜೊತೆ ಆಳವಾಗಿ ಬೆಸುಗೆಯಾಗಿತ್ತು.

ಸ್ವಾಮಿನಾಥನ್ ಅವರು  ತಮ್ಮ ನೇತೃತ್ವದ ಕೃಷಿ ಆಯೋಗದ ಮೂಲಕ ರೈತರ ಬೆಳೆಗಳ ಬೆಲೆಯನ್ನು ಅಂದಾಜು ಮಾಡಲು ಮುಂದಿಟ್ಟ  C2+50% (ರೈತರ ಒಳಸುರಿ ವೆಚ್ಚ+ರೈತ ಕುಟುಂಬದ ಶ್ರಮ+ಭೂಮಿಯ ಬಾಡಿಗೆ+ ಭೂಮಿಯ ಸವಕಳಿ… ಇತ್ಯಾದಿ ಒಟ್ಟು ಸೇರಿಸುವ ರೈತರ ಕೃಷಿ ವೆಚ್ಚದ ಲೆಕ್ಕಾಚಾರ ಮಾಡುವ) ಸೂತ್ರ ಅತ್ಯಂತ ವೈಜ್ಞಾನಿಕವಾಗಿತ್ತು ಮತ್ತು ರೈತರ ಬದುಕನ್ನು ಸಹನೀಯಗೊಳಿಸುವಂತಿತ್ತು.

ಈ ಸೂತ್ರವನ್ನು 2008 ರಲ್ಲೇ UPA  ಸರ್ಕಾರದ ಮುಂದಿಟ್ಟರೂ UPA-1, UPA-2  ಸರ್ಕಾರಗಳು ಅದರ ಬಗ್ಗೆ ಸ್ಮಶಾನ ಮೌನ ಅನುಸರಿಸಿದವು.

ಇನ್ನು ಮೋದಿ ಸರ್ಕಾರವಂತೂ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ಅಧಿಕಾರಕ್ಕೆ ಬಂದ ಮೇಲೆ ಸುಪ್ರೀಂ ಕೋರ್ಟಿನಲ್ಲೇ ಯಾವ ಕಾರಣಕ್ಕೂ ಸ್ವಾಮಿನಾಥನ್ ಸೂತ್ರ ಪಾಲಿಸಲು ಸಾಧ್ಯ ಇಲ್ಲ ಎಂದು ಘೋಷಿಸಿಬಿಟ್ಟಿತು.

ಅದೇನೇ ಇರಲಿ… ರೈತರ ಒಟ್ಟಾರೆ ಕಶ್ಟವನ್ನು ಸಮಗ್ರವಾಗಿ ಪರಿಗಣಿಸಿ ಪರಿಣಾಮಕಾರಿಯಾಗಿ ಸರ್ಕಾರ ಹಾಗೂ ಜಗತ್ತಿನ ಮುಂದಿಟ್ಟಿದ್ದಕ್ಕೆ ರೈತ ಸಮುದಾಯ ಸ್ವಾಮಿನಾಥನ್ ಅವರಿಗೆ ಋಣಿಯಾಗಿದೆ. 

ಇದಲ್ಲದೆ ಸದ್ಯ ಇರುವ ಮಾರುಕಟ್ಟೆ ಅವಲಂಬಿತ ಕೃಷಿ ವ್ಯವಸ್ಥೆಯ ಚೌಕಟ್ಟಿನೊಳಗೆ ಸ್ವಾಮಿನಾಥನ್ ಅವರು ಕೃಷಿ ಬದುಕು ಹಾಗೂ ಸಣ್ಣ ರೈತಾಪಿಯ ಹಿತಾಸಕ್ತಿಯ ಬಗ್ಗೆ   ಹಲವು ರೈತ ಪರ ಸಲಹೆಗಳನ್ನು ಕೊಟ್ಟಿದ್ದರು.

ವಿಪರ್ಯಾಸವೆಂದರೆ… ರೈತಾಪಿಯನ್ನು ಅದರಲ್ಲೂ ಸಣ್ಣ ರೈತಾಪಿಯನ್ನು ಇಂಥಾ ಮಾರುಕಟ್ಟೆ ಚಕ್ರದೊಳಗೆ ತಂದದ್ದೂ ಸಹ ಸ್ವಾಮಿನಾಥನ್  ಅವರ ತಾಂತ್ರಿಕ ನೇತೃತ್ವದ ಹಾಗೂ ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅಮೇರಿಕ ನಿರ್ದೇಶಿತ ಹಸಿರು ಕ್ರಾಂತಿಯೇ.

ವಾಸ್ತವವಾಗಿ ಹಸಿರು ಕ್ರಾಂತಿಯು ಭಾರತದ ಹಸಿವನ್ನು ನೀಗಿದರೂ ಭಾರತದ ಕೃಷಿ ವ್ಯವಸ್ಥೆಯನ್ನು ಕೃಷಿ ಬಹುರಾಷ್ಟ್ರೀಯ ಕಂಪನಿಗಳ  ಮತ್ತು ಅಮೇರಿಕ ನೇತೃತ್ವದ ಶ್ರೀಮಂತ ದೇಶಗಳ ಅವಲಂಬಿತ ವಸಾಹತುವಾಗಿಸಿಬಿಟ್ಟಿತು ಹಾಗೂ ನಿಧಾನವಾಗಿ ರೈತರನ್ನು ದಿವಾಳಿಯಾಗಿಸಿ, ಪರಿಸರವನ್ನು ವಿನಾಶದತ್ತ ತಳ್ಳಿತು.

ಹೀಗಾಗಿ ಹಸಿರು ಕ್ರಾಂತಿ ಎಂಬುದು ಆಗ ವರವಂತೆ ಭಾಸವಾಗಿದ್ದರೂ ಈಗ ಶಾಪದಂತೆ ಕಾಡುತ್ತಿದೆ. ಆಗ ವರ ಎಂದು ಭಾವಿಸಿದ ಹಲವರು ಈಗ ಅದರ ಹಿಂದಿನ ಘೋರವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ.

ಆದರೆ ಡಾ. ಸ್ವಾಮಿನಾಥನ್ ಅದರ ಬಗ್ಗೆ ಆಗಾಗ ಕೆಲವು ಮರುಯೋಚನೆಗಳ ಉದ್ಗಾರವನ್ನು ಮಾಡಿದ್ದರೂ ಸಮಗ್ರವಾಗಿ ಪುನರಾವಲೋಕನ ದಲ್ಲಿ ತೊಡಗಿಕೊಂಡಂತೆ ಕಾಣುವುದಿಲ್ಲ…

ಆಗ ದೇಶ ಹಸಿವಿನಿಂದ  ಬಳಲುತ್ತಿತ್ತು. ಆಹಾರ ಉತ್ಪಾದನೆಯಲ್ಲಿ ಸಾರ್ವಭೌಮತೆಯನ್ನು ಸಾಧಿಸಬೇಕೆಂದರೇ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಲೇ ಬೇಕಾದ ತುರ್ತಿನಲ್ಲಿದ್ದ ಭಾರತದಂಥ ಹಲವಾರು ದೇಶಗಳ ಕೃಷಿ ವ್ಯವಸ್ಥೆಯನ್ನು  ಅಮೇರಿಕ ಕೃಷಿ ಕಾರ್ಪೊರೇಟು  ಕಂಪೆನಿಗಳು ಮತ್ತು ಅದರ ಬೆಂಬಲಕ್ಕಿದ್ದ  ಅಮೇರಿಕ ಸರ್ಕಾರ ತಮ್ಮ ವಸಾಹತುವನ್ನಾಗಿ ಮಾಡಿಕೊಂಡರು.

ಮತ್ತೊಂದು ಕಡೆ ಗ್ರಾಮೀಣ ಪ್ರದೇಶದ ಹಸಿವು – ಬಡತನಗಳಿಗೆ ಕಾರಣವಾಗಿದ್ದ  ಭೂಮಾಲೀಕತ್ವ ಹಾಗೂ ಊಳಿಗಮಾನ್ಯ ಪಾಳೇಗಾರಿ ವ್ಯವಸ್ಥೆಯ ವಿರುದ್ಧ ರೈತಕೂಲಿಗಳ ಬಂಡಾಯದ ಕೆಂಪುಕ್ರಾಂತಿಯನ್ನು ಬಗ್ಗುಬಡಿಯಲು  ಕೂಡ  ಸ್ಥಳೀಯ ಆಳುವವರ್ಗಗಳು ಪಾಶ್ಚಿಮಾತ್ಯ ದೇಶಗಳ ಸಂಪೂರ್ಣ ಕುಮ್ಮಕ್ಕಿನೊಂದಿಗೆ ಹಸಿರುಕ್ರಾಂತಿಯನ್ನು ಬಳಸಿಕೊಂಡರು.. 

ಈ ಹಸಿರುಕ್ರಾಂತಿ ಪವಾಡ ಸದೃಶವೆಂಬಂತೆ ಬೆಳೆಯನ್ನು ಹೆಚ್ಚಿಸಿತು. ಜನರ ಹಸಿವನ್ನು ನೀಗಿಸದಿದ್ದರೂ ದೇಶದ ಆಹಾರ ಉತ್ಪಾದನೆಯನ್ನು ಹೆಚ್ಚಿಸಿತು.

ಉತ್ಪಾದನೆಯ ಹೆಚ್ಚಳದಲ್ಲಿ ತೊಡಗಿದ್ದ ವರ್ಗಗಳು  ಗ್ರಾಮೀಣ ಪ್ರದೇಶದಲ್ಲಿ ಹೊಸ ನವ ಶ್ರೀಮಂತ ರೈತಾಪಿ ವರ್ಗಾವಾಗಿ ವಿಕಸನಗೊಂಡರು

ನಿಧಾನವಾಗಿ ಈ ರೈತ ವರ್ಗಕ್ಕೆ ತಳಹಂತದ ರಾಜಕೀಯ ಅಧಿಕಾರವೂ ದೊರೆತು ತಳಮಟ್ಟದ ಆಳುವ ವರ್ಗಗಳಾದರು. ನಂತರ ಇದರ ಮೇಲ್ ಸ್ಥರ  80-90ರ ದಶಕದಲ್ಲಿ ಪ್ರಾದೇಶಿಕ ಹಾಗೂ ರಾಷ್ಟೀಯ ಅಧಿಕಾರದಲ್ಲೂ ಪಾಲು ಪಡೆದರು.

ಮತ್ತೊಂದು ಕಡೆ ಗ್ರಾಮೀಣ ಸಮಾಜದ ಬಡ- ಹಾಗೂ ರೈತ ಕೂಲಿ ವರ್ಗಗಳು- (ಇವರು  ಸಾಮಾನ್ಯವಾಗಿ ದಲಿತ ಹಾಗೂ ಅತಿಹಿಂದುಳಿದ ಶೂದ್ರ ಜಾತಿಗಳಿಗೆ ಸೇರಿರುತ್ತಾರೆ )- ಈ ಅಭಿವೃದ್ಧಿ ಕಥನದಲ್ಲಿ ಯಾವುದೇ ಪಾಲು ಪಡೆಯದೇ ನಿತ್ರಾಣಗೊಳ್ಳುತ್ತಾ ಹೋದರು.

ಹಾಗೆಯೇ ಅತಿ ಉತ್ಪಾದನೆಯ ಮೋಹದಲ್ಲಿ ರಾಸಾಯನಿಕಗಳ ಒಳಸುರಿಯ ಹೆಚ್ಚಳದಿಂದ ಮಣ್ಣು ಕ್ಷಾರವಾಗುತ್ತಾ ಹೋಯಿತು. ಉತ್ಪಾದನೆಯೂ ಇಳಿಮುಖವಾಗುತ್ತಾ ಹೋಯಿತು. ಹಳೆಯ ಕೃಷಿ ವ್ಯವಸ್ಥೆಯ ಎಕೋ ಸಿಸ್ಟಮ್ ಸಂಪೂರ್ಣವಾಗಿ ಧ್ವಂಸವಾಯಿತು.

ಅದೇ ವೇಳೆ ಜಾಗತೀಕರಣದ ಒಪ್ಪಂದಗಳಿಂದಾಗಿ ಸರ್ಕಾರ ತನ್ನ ಬೆಂಬಲವನ್ನೂ ಹಿಂತೆಗೆದುಕೊಂಡಿತು. ಮತ್ತು  ಅಗ್ಗದ ವಿದೇಶಿ ಕೃಷಿ ಸರಕುಗಳು ಭಾರತರ ಮಾರುಕಟ್ಟೆಯಲ್ಲಿ ಸುರಿಯಲಾರಂಭಿಸಿ ಭಾರತದ ರೈತರು ಆತ್ಮಹತ್ಯೆ ಮಾಡಿಕೊಳ್ಳಲಾರಂಭಿಸಿದರು.

ಹೀಗೆ ಹಸಿರು ಕ್ರಾಂತಿ ಕೇವಲ ಉತ್ಪಾದನೆಯನ್ನು ಮಾತ್ರ ಹೆಚ್ಚಿಸಿದ ಒಂದು ತಾಂತ್ರಿಕ ವಿದ್ಯಮಾನವಾಗಿರಲಿಲ್ಲ. ಅದು ಭಾರತದ ರೈತ ವರ್ಗ, ಅದರಲ್ಲೂ ಸಣ್ಣ ಹಾಗೂ ಅತಿ ಸಣ್ಣ ರೈತಾಪಿಯನ್ನು ದಿವಾಳಿಯೆಬ್ಬಿಸಿದೆ. ಅದರ ಜೊತೆಗೆ  ಭಾರತದ ಕೃಷಿ, ಗ್ರಾಮೀಣ ಆರ್ಥಿಕತೆ, ಈ ದೇಶದ ನೆಲ-ಜಲ ಎಲ್ಲವೂ ಕೊನೆಯರಿಯದ ಖಾಯಿಲೆಗೆ ದೂಡಿದ ವಿದ್ಯಮಾನವಾಯಿತು.

ಹೀಗಾಗಿ  ಹಸಿರು ಕ್ರಾಂತಿ ಭಾರತದ ಅಂದಿನ ಹಸಿವು ನೀಗಿಸಿದರೂ ಭವಿಷ್ಯದ  ಉಸಿರು ತೆಗೆಯಿತು.

ಇವೆಲ್ಲಕ್ಕೂ ಸ್ವಾಮಿನಾಥನ್ ಅವರು ಹೊಣೆಯಲ್ಲ. ಅವರು ಅಂದಿನ ದೇಶದ ಸಮಸ್ಯೆಯಾದ ಹಸಿವನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನವನ್ನೇ ಮಾಡಿದರು. ಆದರೆ ಈಗ ಹಿಂತಿರುಗಿ ನೋಡಿದರೆ ನರಕದಂತೆ ಕಂಡು ಬರುವ ಗ್ರಾಮೀಣ ಭಾರತದ ಬದುಕಿಗೆ ಹಸಿರು ಕ್ರಾಂತಿಯ ಅಂತರ್ಗತ ಲಾಭೋದ್ದೇಶದ ಆಸಕ್ತಿ ಕಾರಣ ಎಂದು ಪಶ್ಚತ್ತಾಪ ಪಟ್ಟಿರಬಹುದೇ ಎಂಬ ಬಗ್ಗೆ  ಮಾತ್ರ ಯಾವುದೇ ಸಾರ್ವಜನಿಕ ಮಾಹಿತಿಯಿಲ್ಲ.

ಹಾಗೆಯೇ ಹಸಿರು ಕ್ರಾಂತಿಯ ಯಶಸ್ಸಿಗಾಗಿ  ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿದ ಹೊಸ ಸರ್ಕಾರಿ ಮತ್ತು ಖಾಸಗಿ-ಸರ್ಕಾರಿ ಸಹಯೋಗಿ ಸಂಸ್ಥೆಗಳು ಹೇಗೆ ಇತರ ಪರ್ಯಾಯ ಸಾಧ್ಯತೆಗಳೆನ್ನೆಲ್ಲಾ ತಿರಸ್ಕರಿಸಿ ಅಮೇರಿಕ ಕಾರ್ಪೊರೇಟು ನಿರ್ದೇಶಿತ ಪ್ರಯೋಗ ಮತ್ತು ಕಾರ್ಯಕ್ರಮಗಳನ್ನು ಮಾತ್ರ ಜಾರಿ ಮಾಡಿದವು  ಮತ್ತು ತಮ್ಮ ಯೋಜನೆಯನ್ನು ಅನುಮಾನಿಸುವ ಪರಿಣಿತರನ್ನು ಕಿತ್ತುಹಾಕಿ, ತಮ್ಮ ವಿಶ್ವಾಸಿಗಳನ್ನು ಮಾತ್ರ ಕೀಲಕ ಸ್ಥಾನದಲ್ಲಿ ನೇಮಿಸಿದರು  ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಕೂಲಂಕಷವಾಗಿ ವಿಮರ್ಶಿಸುವ ಅಗತ್ಯವಿದೆ. ಏಕೆಂದರೆ ಆ ಹುದ್ದೆಗಳು  ವ್ಯಕ್ತಿಗಳ ಪರಿಣಿತಿಯ ಮಾನದಂಡದ ಜೊತೆಗೆ  ರಾಜಕೀಯ ಆಯ್ಕೆಯೂ ಆಗಿದ್ದವು..

ಈ ಅಂತರರಾಷ್ಟ್ರೀಯ “ಸಂಶೋಧನಾ” ಸಂಸ್ಥೆಗಳು ಪಾಶ್ಚಿಮತ್ಯ ದೈತ್ಯ ಕಾಪೋರೇಟು ಕಂಪನಿಗಳು ಭಾರತದ ಸಹಸ್ರಾರು ಸ್ಥಳೀಯ ಧಾನ್ಯ ತಳಿಗಳನ್ನು ಹಗಲು ದರೋಡೆ ಮಾಡಲು ಪೂರಕವಾದವು… ಪ್ರಾರಂಭದಲ್ಲಿ ಅಂತಹ ಕೆಲವು ಸಂಸ್ಥೆಗಳು ಜಗತ್ತಿಗೆ ಉಪಕಾರ ಮಾಡುತ್ತಿವೆ ಎಂಬ ಸಾರ್ವತ್ರಿಕ ತಿಳವಳಿಕೆಯೇ ಸ್ವಾಮಿನಾಥಾನ್ ಅವರಿಗೂ ಇತ್ತು… ಅಂತಹ ಹಲವು ಸಂಸ್ಥೆಗಳ ಮುಖ್ಯಸ್ಥರಾಗಿಯೂ ಅವರು ಕೆಲಸ ಮಾಡಿದ್ದರು..

ಸ್ವಾಮಿನಾಥನ್ ಅವರು ಕೇವಲ ಹಸಿರು ಕ್ರಾಂತಿಯ  ಬಗೆಗೆ ಮಾತ್ರವಲ್ಲದೆ ನಂತರದ ದಿನಗಳಲ್ಲಿ ನಿರಂತರ ಹಸಿರು ಕ್ರಾಂತಿಯ ಬಗೆಗೆ ಮತ್ತು ಈ ಶತಮಾನದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಜೆನೆಟಿಕಲ್ ಮಾಡಿಫೈಡ್ – ಕುಲಾಂತರಿ ತಂತ್ರಜ್ಞಾನದ ಪ್ರತಿಪಾದಕರಾಗಿದ್ದರು. ಈ ತಂತ್ರಜ್ಞಾನವು ಪರಿಸರದ ಮೇಲೆ, ಮಣ್ಣಿನ ಮೇಲೆ ಮತ್ತು ಭೂಹೀನ ಮಣ್ಣಿನ ಮಕ್ಕಳ ಮೇಲೆ ಮಾಡಬಹುದಾದ  ದುಷ್ಪರಿಣಾಮದ ಆಯಾಮಗಳನ್ನು ಸ್ವಾಮಿನಾಥನ್ ಅವರು ಉತ್ಪಾದನೆಯ ಹೆಚ್ಚಳದಷ್ಟು ಗಂಭೀರವಾಗಿ  ಪರಿಗಣಿಸದಂತೆ ಕಾಣುವುದಿಲ್ಲ.

ವಾಸ್ತವದಲ್ಲಿ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವಿದ್ದರೆ ಸಾಕು ಉತ್ಪಾದನಾ ಮಾದರಿ ಮತ್ತು ತಂತ್ರಜ್ಞಾನ ಮಾದರಿ ಬಂಡವಾಳ ಶಾಹಿ ಆಗಿದ್ದರೂ ಪರವಾಗಿಲ್ಲ ಎಂಬ ಇಂಥಾ ತಿಳವಳಿಕೆ ಇಂದಿನ ಬಹುಪಾಲು ಎಡಪಂಥೀಯರಲ್ಲು ವ್ಯಾಪಾಕವಾಗಿದೆ… ಅದು ಹೇಗೆ ಹಗಲುಗುರುಡಿನ ಗ್ರಹಿಕೆ ಎಂಬುದಕ್ಕೆ ಹಸಿರು ಕ್ರಾಂತಿಯ ವಿನಾಶಕಾರಿ ಪರಿಣಾಮಗಳೇ ಸಾಕ್ಷಿ…

ಈ ಉತ್ಪಾದನೆ ಹೆಚ್ಚಳ – ಅರ್ಥಾತ್ ಇದರ ಹಿಂದಿನ ಬೀಜ, ಒಳಸುರಿ ಮತ್ತು ಕೃಷಿ ಮಾರುಕಟ್ಟೆ ದೈತ್ಯ ಕಾರ್ಪೊರೇಟ್ ಕಂಪನಿಗಳ ಲಾಭದ ವಿಜ್ಞಾನ – ರಾಜಕೀಯ ಮೇಲುಗೈ ಪಡೆದು ಇತರ ಪರ್ಯಾಯಗಳು ಮತ್ತು ಅದನ್ನು ಪ್ರತಿಪಾದಿಸುತ್ತಿದ್ದವರು ಸದ್ದಿಲ್ಲದೇ ಹಿನ್ನೆಲೆಗೆ ಸರಿದದ್ದನ್ನು ಇಂದು ಈ ಸಂದರ್ಭದಲ್ಲಿ ನೆನೆಪು ಮಾಡಿಕೊಳ್ಳಬೇಕಿದೆ.

ಏಕೆಂದರೆ ಇವತ್ತು ಮತ್ತೆ BAYER-Monsanto  ದಂಥ ಬೃಹತ್ ಕೃಷಿ ಬಹುರಾಷ್ಟ್ರೀಯ  ಕಂಪನಿಗಳು ಎರಡನೇ ಮತ್ತು ನಿರಂತರ ಹಸಿರು ಕ್ರಾಂತಿಯ ಹೆಸರಲ್ಲಿ ಭಾರತದ  ಕೃಷಿಯ ಭವಿಷ್ಯವನ್ನು ಕಬ್ಜಾ ಮಾಡಿಕೊಳ್ಳಲು ಹವಣಿಸುತ್ತಿವೆ.

ಮತ್ತೊಂದೆಡೆ ಅಮೇರಿಕ ಮತ್ತು ಐರೋಪ್ಯ ಒಕ್ಕೂಟಗಳು ಭಾರತದಂಥ ಬಡರಾಷ್ಟ್ರಗಳ ಮೇಲೆ  Global Methane Pledge ಗೆ ಸಹಿ ಹಾಕಲು ಒತ್ತಡ ಹೆಚ್ಚಿಸುತ್ತಿವೆ. ಅವುಗಳ ಪ್ರಕಾರ ಜಾಗತಿಕ ತಾಪಮಾನ ಹೆಚ್ಚಿಸುತ್ತಿರುವ ಹಸಿರು ಮನೆ ಅನಿಲಗಳಲ್ಲಿ ಒಂದಾದ ಮೀಥೇನ್  ನ ಶೇ. 40ರಷ್ಟು ಉತ್ಪಾದನೆ ಕೃಷಿಯಿಂದ ಅದರಲ್ಲೂ ಭತ್ತ  ಉತ್ಪಾದನೆಯಿಂದ ಆಗುತ್ತಿದೆಯಂತೆ. ಹೀಗಾಗಿ ಭತ್ತ ಉತ್ಪಾದನೆಯನ್ನು ಕಡಿಮೆ ಮಾಡಲು ಒತ್ತಡ ಹಾಕುತ್ತಿವೆ. ಅದಕ್ಕೆ ತಕ್ಕಂತೆ ಮೋದಿ ಸರ್ಕಾರ ಜಗತ್ತಿಗೆ ತಾನು ಸಿರಿ ಧಾನ್ಯ ಉತ್ಪಾದನೆ ಮಾಡುವುದಾಗಿ ಘೋಷಿಸಿದೆ. ಅದರ ಸಾಧ್ಯತೆ ಮತ್ತು ಪರಿಣಾಮಗಳ ಯೋಚನೆ ಮಾಡದೆ ಆಗಲೇ ಅದಕ್ಕೆ ಕಾರ್ಪೊರೇಟ್ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಹೀಗೆ ಈ ಕಾಲಘಟ್ಟದಲ್ಲಿ ಮತ್ತೊಮ್ಮೆ ಭಾರತದ ಕೃಷಿ ಎರಡನೇ ಹಸಿರು ಕ್ರಾಂತಿಯ ಹೆಸರಲ್ಲಿ, ಜೆನೆಟಿಕಲ್ ಮಾಡಿಫೈಡ್ – ಕುಲಾಂತರಿ ತಳಿ ಉತ್ಪಾದನೆಯ ಹೆಸರಲ್ಲಿ, ಕಾರ್ಪೊರೇಟ್ ಮಾರುಕಟ್ಟೆಗೆ ಸಿರಿಧಾನ್ಯ ಉತ್ಪಾದನೆ ಮಾಡುವ ತಂತ್ರೋಪಾಯಗಳಲ್ಲಿ  ಶ್ರೀಮಂತ ರಾಷ್ಟ್ರಗಳ ಕಾರ್ಪೊರೇಟ್ ಬಂಡವಾಳಶಾಹಿ ಜಾಲಕ್ಕೆ ಸಿಲುಕಿಕೊಳ್ಳುತ್ತಿದೆ.

ಮೊದಲ ಹಸಿರು ಕ್ರಾಂತಿ ಹೇಗೆ ಉತ್ಪಾದನೆ ಹೆಚ್ಚಳದ ತಾಂತ್ರಿಕ ಪರಿಹಾರವನ್ನು ಮುಂದುಮಾಡಿ ಭಾರತದ ಕೃಷಿ  ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ರೈತಾಪಿಗಳನ್ನು ಮತ್ತು ಭಾರತದ ಕೃಷಿ ಪರಿಸರವನ್ನು ವಿನಾಶದತ್ತ ಕೊಂಡೊಯ್ಯಿತು ಎಂಬ ಅನುಭವ ಈ ದೇಶಕ್ಕಿದೆ.

ಈಗ ಭಾರತ ಮತ್ತೊಮ್ಮೆ ಉತ್ಪಾದನೆಯ ಹೆಚ್ಚಳವೆಂಬ ಪಾಶ್ಚಿಮಾತ್ಯ ಕಾರ್ಪೊರೇಟ್ ತಂತ್ರ  ಜಾಲದ  ಅಪಾಯವನ್ನು ಎದುರಿಸುತ್ತಿದೆ.

ಭಾರತಕ್ಕೆ, ಕೃಷಿಗೆ ಮತ್ತು ರೈತಾಪಿಗೆ ಬೇಕಿರುವುದು ಕಾರ್ಪೊರೇಟ್ ಬಂಡವಾಳಶಾಹಿ ನಿಯಂತ್ರಿತ ತಾಂತ್ರಿಕ ಪರಿಹಾರವಲ್ಲ.

ಸಮಗ್ರ ಉತ್ಪಾದನೆ ಮಾದರಿ, ತಂತ್ರಜ್ಞಾನಗಳಲ್ಲೂ ಜನಮುಖಿ ಕೃಷಿ, ರೈತ ಮತ್ತು ದೇಶದ  ಸಾರ್ವಭೌಮತೆ ಕಾಪಾಡುವ, ಅವರ ವಿವೇಕ ಮತ್ತು ಜ್ಞಾವನ್ನು ಗೌರವಿಸುವ,  ಜನಹಿತದ ರಾಜಕೀಯ ಉಳ್ಳ ಪರಿಸರ ಭಾಗೀ ಕೃಷಿ ವ್ಯವಸ್ಥೆ ..

ಹೀಗಾಗಿ ಇಂದು ಮೊದಲ ಹಸಿರು ಕ್ರಾಂತಿಯ ರಾಜಕೀಯ, ಕೃಷಿ ಆರ್ಥಿಕ, ಹಾಗೂ ಪರಸರವಾದಿ ಪಾಠಗಳನ್ನು  ಸಮಗ್ರವಾಗಿ ಕಲಿತು ಬೇಡವಾದದ್ದನ್ನು ಬೇಡ ಎಂದು  ನಿರಾಕರಿಸುವ  ಸ್ವಾಯತ್ತತೆಯನ್ನು ಬೆಳೆಸಿಕೊಳ್ಳುವ ಮೂಲಕ ಮಾತ್ರ ಸ್ವಾಮಿನಾಥನ್ ಅವರಿಗೆ ನಿಜವಾದ ನಮನ ಸಲ್ಲಿಸಬಹುದು.

ಈ ಹಿನ್ನೆಲೆಯಲ್ಲಿ ಮೊದಲ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಸಿಕೊಳ್ಳಲ್ಪಡುವ ನೋರ್ಮಾನ್ ಬೋರ್ಲಾಗ್ ನಿಧನರಾದಾಗ ಅವರ ಬಗ್ಗೆ ಮತ್ತು ಹಸಿರು ಕ್ರಾಂತಿಯ ಹಿಂದಿನ  ನವ ವಸಾಹತುಶಾಹಿ ಹುನ್ನಾರಗಳ ಬಗ್ಗೆ 2009 ರ ಸೆಪ್ಟೆಂಬರ್ ನಲ್ಲಿ “ಗೌರಿ ಲಂಕೇಶ್ ” ಪತ್ರಿಕೆಗೆ ಬರೆದ ಲೇಖನವೊಂದನ್ನು ಹಂಚಿಕೊಳ್ಳಬೇಕೆನಿಸಿತು..

ನಾರ್ಮನ್ ಬೊರ್ಲಾಗ್: ಹಸಿರು ಕ್ರಾಂತಿಯ ಹರಿಕಾರ-ಬಡ ರೈತಾಪಿಯ ಕೊಲೆಗಾರ!

ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನ ಗ್ರಾಮೀಣ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ ನಾರ್ಮನ್ ಬೊರ್ಲಾಗ್ ಎಂಬ ಕೃಷಿ ವಿಜ್ಞಾನಿ 2009  ಸೆಪ್ಟೆಂಬರ್ 13ರಂದು ತನ್ನ 95 ನೇ ವಯಸ್ಸಿನಲ್ಲಿ ಮೃತರಾದರು. ನಾರ್ಮನ್ ಬೊರ್ಲಾಗ್ ಯಾರು ಎಂದು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.

‘ಹಸಿರು ಕ್ರಾಂತಿ’ಯ ಹರಿಕಾರ ಎಂದು ಬಣ್ಣಿಸಲಾಗುವ ಈ ವಿಜ್ಞಾನಿ  ಯಾರ ಸ್ನೇಹಿತ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಪಡೆಯಬೇಕೆಂದರೆ ನಮ್ಮ ದೇಶದ ಅಭಿವೃದ್ಧಿ ಮಾದರಿಯ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಮತ್ತು ನಿಲುವುಗಳು ಬೇಕಾಗುತ್ತವೆ. ಏಕೆಂದರೆ ನಮ್ಮ ದೇಶದ ರೈತಾಪಿ ಇಂದು ತಲುಪಿರುವ ಸ್ಥಿತಿಗೆ ಈ ಮಹಾಶಯರು ಪರಿಚಯಿಸಿದ ಹಸಿರುಕ್ರಾಂತಿ ಮತ್ತು ಕೃಷಿ ಪದ್ಧತಿಯೇ ಕಾರಣ. ಹೀಗಾಗಿ ನಾರ್ಮನ್ ಬೊರ್ಲಾಗ್ ಭಾರತದ ರೈತಾಪಿಯ ಸ್ನೇಹಿತನೊ ಅಥವಾ ಶತ್ರುವೋ ಎಂಬ ತೀರ್ಮಾನವು ಭಾರತದ ರೈತಾಪಿಯ ಪರಿಸ್ಥಿತಿ ಮತ್ತು ಭಾರತದ ಆಹಾರ ಭದ್ರತೆಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನಮ್ಮ ನಮ್ಮ ಅಭಿಪ್ರಾಯಗಳನ್ನೇ ಆಧರಿಸಿರುತ್ತದೆ.

ಭಾರತ ಸರ್ಕಾರದ ಪ್ರಕಾರ ಭಾರತದ ಆಹಾರ ಭದ್ರತೆ ಮೊದಲಿಗಿಂತ ಉತ್ತಮಗೊಂಡಿದೆ. ಭಾರತದ ರೈತಾಪಿ ಮೊದಲಿಗಿಂತ ಹೆಚ್ಚು ಸುಖವಾಗಿದ್ದಾರೆ. ಆದ್ದರಿಂದಲೇ ಭಾರತದ ಬಡವರ ಸಂಖ್ಯೆ ಹಸಿರು ಕ್ರಾಂತಿ ಪರಿಚಯಿಸುವ ಮೊದಲು ಶೇ.50 ರಿಂದ  ಇದ್ದದ್ದು ಈಗ ಶೇ.27 ಕ್ಕೆ ಇಳಿದಿದೆ. ಗ್ರಾಮೀಣ ರೈತಾಪಿಯ ಕೊಳ್ಳುವ ಶಕ್ತಿ ಹೆಚ್ಚಿದೆ, ಇತ್ಯಾದಿ, ಇತ್ಯಾದಿ.

ಇದಕ್ಕೆಲ್ಲಾ ಭಾರತದ ಕೃಷಿ ಪದ್ಧತಿಯಲ್ಲಿ ಸರ್ಕಾರ ನಾರ್ಮನ್ ಬೊರ್ಲಾಗ್ ಕಂಡುಹಿಡಿದ ಇಳುವರಿ ಪದ್ಧತಿಯನ್ನು ಜಾರಿಗೆ ತಂದಿದ್ದೇ ಕಾರಣ. ಆ ಪದ್ಧತಿಯಲ್ಲಿ ಹೆಚ್ಚು ಇಳುವರಿ ಕೊಡುವ HYV ಬೀಜಗಳನ್ನು, ಅದಕ್ಕೆ ತಕ್ಕಂತೆ ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೀಟನಾಶಕಗಳನ್ನು ಬಳಸುತ್ತಾ ಮೊದಲಿಗಿಂತ ಹತ್ತಾರುಪಟ್ಟು ಹೆಚ್ಚು ಇಳುವರಿಯನ್ನು ಹೆಚ್ಚಿಸಿಕೊಂಡಿದ್ದೇ ಕಾರಣ ಎಂಬ ವಾದವನ್ನು ಮಂಡಿಸಲಾಗುತ್ತದೆ. ಈ ವಾದವನ್ನು ಕೇವಲ ಭಾರತ ಸರ್ಕಾರ ಮಾತ್ರವಲ್ಲ, ಏಷಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಎಲ್ಲಾ ಬಡ ದೇಶಗಳ ಸರ್ಕಾರಗಳು ಮಂಡಿಸುತ್ತವೆ.

ಈ ವಾದದ ಒಟ್ಟು ಸಾರಾಂಶವೇನೆಂದರೆ ಆಹಾರ ಉತ್ಪಾದನೆಯ ಕುಸಿತದಿಂದ ಆಹಾರಕ್ಕೂ ಅಮೆರಿಕ ಮತ್ತಿತರ ದೇಶಗಳ ಸರ್ಕಾರವನ್ನೇ ಅವಲಂಬಿಸುವಂತಹ ದೈನೇಸಿ ಪರಿಸ್ಥಿತಿಯಲ್ಲಿದ್ದ ದೇಶಗಳನ್ನು ಆಹಾರ ಸ್ವಾವಲಂಬಿ ಮಾಡಿದ್ದೇ ನಾರ್ಮನ್ ಬೊರ್ಲಾಗ್‌ನ ಹಸಿರುಕ್ರಾಂತಿ. ಅದಕ್ಕೆ ಪೂರಕವಾಗಿ ಅವರು 1965ರಲ್ಲಿ ಭಾರತ ಎದುರಿಸುತ್ತಿದ್ದ ಆಹಾರ ಬಿಕ್ಕಟ್ಟನ್ನು ಮತ್ತು 1950 ರಲ್ಲಿ ಮೆಕ್ಸಿಕೋ ಎದುರಿಸುತ್ತಿದ್ದ ಆಹಾರ ಬಿಕ್ಕಟ್ಟನ್ನು ಉದಾಹರಿಸಿ ಹಸಿರು ಕ್ರಾಂತಿಯ ನಂತರ ಭಾರತ ಮತ್ತು ಮೆಕ್ಸಿಕೋದಂತ ದೇಶಗಳು ಹೇಗೆ ಕೆಲವೇ ವರ್ಷಗಳಲ್ಲಿ ಆಹಾರ ಸ್ವಾವಲಂಬಿಯಾಗಿದ್ದು ಮಾತ್ರವಲ್ಲದೇ ಹೆಚ್ಚುವರಿ ಉತ್ಪಾದನೆ ಮಾಡಿ ವಿದೇಶಕ್ಕೂ ರಫ್ತು ಮಾಡುವಂತಾಯಿತು ಎಂದು ಅಂಕಿಅಂಶಗಳನ್ನು ಮಂಡಿಸುತ್ತಾರೆ.

ಈ ವಾದವು ಸುಳ್ಳಲ್ಲ. ಹಾಗೆಯೇ ಸತ್ಯವೂ ಅಲ್ಲ!

ಭಾರತದ ಗೊಡೋನುಗಳಲ್ಲಿ ಅಪಾರ ಆಹಾರ ಧಾನ್ಯ ಸಂಗ್ರಹಣೆ ಇರುವುದು ನಿಜ. ಈ ಪ್ರಮಾಣದ ಆಹಾರ ಉತ್ಪಾದನೆ ಸಾಧ್ಯವಾದದ್ದು ಹಸಿರುಕ್ರಾಂತಿಯಿಂದ ಎಂಬುದೂ ಸತ್ಯವೇ. ಆದರೆ ಈ ಅಪಾರ ಪ್ರಮಾಣದ ಆಹಾರ ಉತ್ಪಾದನೆಯಿಂದ ರೈತಾಪಿಯ ಬಾಳು ಮೊದಲಿಗಿಂತ ಹಸನು ಆಗಿದೆಯೇ ಎಂಬ ಪ್ರಶ್ನೆಗೆ ಸರ್ಕಾರವೂ ಉತ್ತರ ಕೊಡುವುದಿಲ್ಲ. ಬೊರ್ಲಾಗ್ ಕೂಡ  ಸಾಯುವವರೆಗೆ ಉತ್ತರ ಕೊಡಲಿಲ್ಲ.

ಭಾರತದ ಕೃಷಿಯ ಕಥೆ ಈ ದೇಶದ ಅಭಿವೃದ್ಧಿ ಮಾದರಿಯಂತೇ ಉಳ್ಳವರಿಗೆ ಅಮೃತವನ್ನೂ ಇಲ್ಲದವರಿಗೆ ಹಾಲಾಹಲವನ್ನೂ ಉಣಿಸುತ್ತಾ ಬರುತ್ತಿದೆ. ಉದಾಹರಣೆಗೆ ನಮ್ಮ ದೇಶದಲ್ಲಿ ಆಹಾರ ಸಮೃದ್ಧಿಯಿದೆ. ಆದರೆ ಭಾರತದ ಗ್ರಾಮೀಣ ಪ್ರದೇಶದ ತಲಾವಾರು ಆಹಾರ ಪ್ರಮಾಣದ ಬಳಕೆ ಮಾತ್ರ ಕಡಿಮೆಯಾಗುತ್ತಲೇ ಬರುತ್ತಿದೆ.

ಹಸಿರುಕ್ರಾಂತಿ ಪರಿಚಯವಾಗುವ ಮುನ್ನ – ಅಂದರೆ 1970 ರಲ್ಲಿ – ಭಾರತದ ಗ್ರಾಮೀಣ ಪ್ರದೇಶದ ತಲಾವಾರು ಆಹಾರ ಬಳಕೆ ವಾರ್ಷಿಕ 175  ಕೆಜಿ ಇದ್ದದ್ದು ಈಗ 160  ಕೆಜಿಗೆ ಕುಸಿದಿದೆ. ಇದಾದದ್ದು ಆಹಾರದ ಉತ್ಪಾದನೆಯ ಕೊರತೆಯಿಂದಲ್ಲ. ಹೀಗಾಗಿ ಹಸಿರುಕ್ರಾಂತಿಯು ಏಕಕಾಲದಲ್ಲಿ ಆಹಾರ ಉತ್ಪಾದನೆಯನ್ನು ಜಾಸ್ತಿ ಮಾಡಿದ್ದು ನಿಜವಾದರೂ ಜನತೆಯ ಬಡತನವನ್ನೂ ಜಾಸ್ತಿ ಮಾಡಿದ್ದು ನಿಜ.

ಈ ಪ್ರಕ್ರಿಯೆ ಹಸಿರು ಕ್ರಾಂತಿಯ ತಂತ್ರಜ್ಞಾನದಲ್ಲೇ ಅಡಕವಾಗಿದೆ. ಅಧಿಕ ಇಳುವರಿ ಬೀಜವನ್ನು ಬಿತ್ತನೆ ಮಾಡಿದ ನಂತರ ಅದು ಅಧಿಕ ಇಳುವರಿ ಕೊಡಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಸಬೇಕು. ಇದಕ್ಕೆ ಕಾಸು ಖರ್ಚಿಲ್ಲದೆ ಕೊಟ್ಟಿಗೆಯಲ್ಲಿ ಸಿಗುತ್ತಿದ್ದ ಸಗಣಿ ಗೊಬ್ಬರ ಸಾಕಾಗುವುದಿಲ್ಲ. ಅಲ್ಲದೆ ಈ ಬೀಜಗಳು ಸಹಜವಾಗಿಯೇ ಹಲವಾರು ಹೊಸ ಬಗೆಯ ಕ್ರಿಮಿ ಮತ್ತು ಕೀಟಗಳನ್ನು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನೂ ಆಹ್ವಾನಿಸುತ್ತವಾದ್ದರಿಂದ ಕ್ರಿಮಿನಾಶಕ ಮತ್ತು ಕೀಟನಾಶಕಗಳನ್ನೂ ಕೊಳ್ಳಬೇಕು. ಅಲ್ಲದೇ ಸಾಂಪ್ರದಾಯಿಕ ಬೀಜಗಳಿಗಿಂತ ಈ ಹೈಬ್ರಿಡ್ ಬೀಜಗಳು ಹೆಚ್ಚು ನೀರನ್ನೂ ಕಬಳಿಸುತ್ತವೆ. ಹೀಗಾಗಿ ಇಳುವರಿ ಮೊದಲಿಗಿಂತ ಐದು ಪಟ್ಟು ಹೆಚ್ಚಾದರೂ ಒಂದು ಕ್ವಿಂಟಾಲ್ ಇಳುವರಿಗೆ ರೈತ ಹೂಡುತ್ತಿದ್ದ ಹೂಡಿಕೆಯೂ ಸಹ ಐದು ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ ಸಾರಾಂಶದಲ್ಲಿ ರೈತನ ಆರ್ಥಿಕತೆಯಲ್ಲಿ ಏರಿಕೆಗಿಂತ ಇಳಿಕೆ ಮತ್ತು ಬರ್ಬಾದಿಯೇ ಹೆಚ್ಚಾಗುತ್ತದೆ.

ಹಸಿರುಕ್ರಾಂತಿಯ ಪ್ರಾರಂಭದ ದಿನಗಳಲ್ಲಿ ಸರ್ಕಾರವೇ ಸಬ್ಸಿಡಿ ದರದಲ್ಲಿ ಇವೆಲ್ಲವನ್ನೂ ಪೂರೈಸುತ್ತಿತ್ತು. ಆದರೆ ಉದಾರೀಕರಣದ ಪ್ರಕ್ರಿಯೆಯಲ್ಲಿ ಸರ್ಕಾರ ಎಲ್ಲಾ ಜನಕಲ್ಯಾಣ ಕಾರ್ಯಕ್ರಮಗಳಿಂದ ಹಿಂತೆಗೆಯುತ್ತಿದ್ದಂತೆ ರೈತಾಪಿ ಇನ್ನಷ್ಟು ಅನಾಥನಾಗಿ ಮಾರುಕಟ್ಟೆಯಲ್ಲಿ ಭಿಕ್ಷುಕನಾದ.

ಅಲ್ಲದೆ ಹಸಿರುಕ್ರಾಂತಿಯನ್ನು ಭಾರತದಂತ ದೇಶಗಳಲ್ಲಿ ಅಳವಡಿಸಲು ಸರ್ಕಾರಗಳು ಕೊಡುತ್ತಿದ್ದ ಮತ್ತೊಂದು ಅತಿ ಮುಖ್ಯ ಕಾರಣ ಸ್ವಾವಲಂಬನೆ. ಆದರೆ ಹಸಿರುಕ್ರಾಂತಿ ಜಾರಿಯಾದ ನಾಲ್ಕು ದಶಕಗಳ ನಂತರ ಹಿಂತಿರುಗಿ ನೋಡಿದರೆ ಭಾರತ ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಗಿರಬಹುದು. ಆದರೆ ಕೃಷಿ ಪದ್ಧತಿಯ ವಿಷಯದಲ್ಲಿ ಸ್ವಾವಲಂಬಿಯಾಗಿದೆಯೇ? ಖಂಡಿತಾ ಇಲ್ಲ.

ಅದರಲ್ಲೂ ಜಾಗತೀಕರಣವೆಂಬ ಸಾಮ್ರಾಜ್ಯಶಾಹಿ ನೀತಿಗಳನ್ನು ಭಾರತವೂ ಒಳಗೊಂಡಂತೆ ಪ್ರಪಂಚದ ಎಲ್ಲಾ ಬಡದೇಶಗಳು ಜಾರಿಗೆ ತರಲು ಪ್ರಾರಂಭಿಸಿದ ಮೇಲೆ ಭಾರತದ ರೈತಾಪಿ ಬೀಜ, ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳ ವಿಷಯದಲ್ಲೂ ಅಮೆರಿಕದಂತಹ ದೇಶಗಳನ್ನು ಸಂಪೂರ್ಣವಾಗಿ ಅವಲಂಬಿಸಬೇಕಾಗಿದೆ.

ಹೀಗಾಗಿ ಹಸಿರುಕ್ರಾಂತಿ ನಮ್ಮ ಪರಾವಲಂಬನೆಯನ್ನೇನೂ ತಪ್ಪಿಸಲಿಲ್ಲ. ಆದರೆ ಹಸಿರುಕ್ರಾಂತಿಯ ಸಂಪೂರ್ಣ ಲಾಭ ಅನುಭವಿಸಿದ್ದು ಮಾತ್ರ ಅಮೆರಿಕದ ಮಾನ್ಸಾಂಟೋ, ಡು-ಪಾಂಟ್, ಫೋರ್ಡ್, ರಾಕ್‌ಫೆಲ್ಲರ್, ಸಿಬಾ-ಗೈಗಿ, ಕಾರ್ಗಿಲ್‌ನಂತಹ ಗೊಬ್ಬರ, ಬೀಜ, ಮತ್ತು ಕ್ರಿಮಿನಾಶಕ ಕಂಪನಿಗಳು.

ಎರಡನೇ ಮಹಾಯುದ್ಧದಲ್ಲಿ ಇದೇ ಕಂಪನಿಗಳೇ ಹಿಟ್ಲರ್‌ಗೂ ಮತ್ತು ಆತನ ವಿರುದ್ಧ ಯುದ್ಧ ಮಾಡುತ್ತಿದ್ದ ಬ್ರಿಟನ್‌ನಂತಹ ದೇಶಗಳಿಗೂ ಶಸ್ತ್ರಾಸ್ತ್ರಗಳನ್ನೂ, ರಾಸಾಯನಿಕಗಳನ್ನೂ ಸರಬರಾಜು ಮಾಡುತ್ತಿದ್ದವು. ಯುದ್ಧದ ನಂತರ ಅದೇ ಕಂಪನಿಗಳೇ ಇದ್ದಕ್ಕಿದ್ದಂತೆ ಕೃಷಿ ವಲಯಕ್ಕೆ ಕಾಲಿಟ್ಟು ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಸರಬರಾಜು ಮಾಡಲು ಪ್ರಾರಂಭಿಸಿ ಯುದ್ಧಾನಂತರವೂ ತಮ್ಮ ಮಾರುಕಟ್ಟೆಯನ್ನು ಬೇರೊಂದು ರೂಪದಲ್ಲಿ ಉಳಿಸಿಕೊಂಡವು.

ಅದಕ್ಕೆ ಮಾರುಕಟ್ಟೆ ಸೃಷ್ಟಿಸುವ ಹಸಿರು ಕ್ರಾಂತಿ ಜಗತ್ತಿನಾದ್ಯಂತ ಜಾರಿಗೆ ಬಂದದ್ದು ಕಾಕತಾಳೀಯವೇನಲ್ಲ. ಏಕೆಂದರೆ ನಾರ್ಮನ್ ಬೊರ್ಲಾಗ್ ಕೆಲಸ ಮಾಡುತ್ತಿದ್ದದ್ದು ಕೆಮಿಕಲ್ ಸಂಸ್ಥೆಯಾಗಿದ್ದ ಡು-ಪಾಂಟ್‌ನಲ್ಲಿ. ಆತನಿಗೆ ಫೆಲೋಶಿಪ್ ನೀಡಿ ಮೆಕ್ಸಿಕೋದಲ್ಲಿ ತಾವು ನಡೆಸುತ್ತಿದ್ದ ಕೃಷಿ ಸಂಶೋಧನೆಯಲ್ಲಿ ಸಹಾಯ ಮಾಡುವಂತೆ ಆಹ್ವಾನಿಸಿದ್ದು ಇದೇ ರಾಕ್‌ಫೆಲ್ಲರ್ ಕಂಪನಿಯೇ!

ಈಗ ಭಾರತ ಮತ್ತೆ ಆಹಾರ ಕೊರತೆಯನ್ನು ಅನುಭವಿಸಲು ಪ್ರಾರಂಭಿಸಿದ್ದು ನಾರ್ಮನ್ ಬೊರ್ಲಾಗ್ ಆದಿಯಾಗಿ ಎಲ್ಲರೂ ಅದಕ್ಕೆ ಜನಸಂಖ್ಯಾ ಸ್ಫೋಟವನ್ನು ಹೊಣೆ ಮಾಡುತ್ತಿದ್ದಾರೆ ಮತ್ತು ಅದನ್ನು ಎದುರಿಸಲು ಎರಡನೇ ಹಸಿರುಕ್ರಾಂತಿಯನ್ನು ಅಂದರೆ ಜೆನಿಟಿಕಲ್ ಮಾಡಿಫೈಡ್ ಕೃಷಿಯೆಂಬ ಅತ್ಯಂತ ವಿನಾಶಕಾರಿ ಪದ್ಧತಿಯನ್ನು ಅಳವಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಜೆನಿಟಿಕಲ್ ಮಾಡಿಫೈಡ್ ಕೃಷಿಯ ಪ್ರಧಾನ ಫಲಾನುಭವಿಗಳೆಲ್ಲಾ ಮತ್ತೆ ಇದೇ ಕೃಷಿ ಬಹುರಾಷ್ಟ್ರೀಯ ಕಂಪನಿಗಳೇ!

ಹೀಗಾಗಿ ನಾರ್ಮನ್ ಬೊರ್ಲಾಗ್ ಎಂಬ ಒಬ್ಬ ವಿಜ್ಞಾನಿ ಹೇಗೆ ಸರ್ಕಾರಗಳ ಆರ್ಥಿಕ ಮತ್ತು ರಾಜಕೀಯ ನೀತಿಗಳಿಗೆ ಹೊಣೆಗಾರನಾಗುತ್ತಾನೆ ಎಂಬ ಪ್ರಶ್ನೆಯೇ ಅಸಂಬದ್ಧವಾಗುತ್ತದೆ.

ನಾರ್ಮನ್ ಬೊರ್ಲಾಗ್‌ರನ್ನೂ ಒಳಗೊಂಡಂತೆ ಹಸಿರು ಕ್ರಾಂತಿಯೆಂಬ ಯೋಜನೆಯೇ ಎರಡನೇ ಮಹಾಯುದ್ಧದ ನಂತರ ಇಡೀ ಜಗತ್ತನ್ನೇ ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳಬೇಕೆಂಬ ಅಮೆರಿಕನ್ ಸಾಮ್ರಾಜ್ಯಶಾಹಿ ಆಸಕ್ತಿಯಿಂದ ಹುಟ್ಟಿಕೊಂಡಿದ್ದು ಎಂಬುದನ್ನು ಗಮನಿಸಿದಾಗ ಹಸಿರುಕ್ರಾಂತಿಯ ಅಸಲಿ ಸ್ವರೂಪ ಇನ್ನಷ್ಟು ಸ್ಪಷ್ಟವಾಗುತ್ತದೆ.

ಹಸಿರುಕ್ರಾಂತಿಯ ನೈಜ ಕಥೆ 1943 ರಲ್ಲಿ ರಾಕ್‌ಫೆಲ್ಲರ್ ಸಂಸ್ಥೆಯು ಕೃಷಿ ಪರಿಣಿತರ ಒಂದು ತಂಡವನ್ನು ಮೆಕ್ಸಿಕೋಗೆ ಅಲ್ಲಿನ ಸ್ಥಳೀಯ ಧಾನ್ಯಗಳ ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಲು ಕಳಿಸುವುದರ ಮೂಲಕ ಪ್ರಾರಂಭವಾಗುತ್ತದೆ.

ನಾರ್ಮನ್ ಬೊರ್ಲಾಗ್ ಈ ತಂಡಕ್ಕೆ 1944 ರಲ್ಲಿ ಸೇರ್ಪಡೆಯಾಗುತ್ತಾರೆ. ರಾಕ್‌ಫೆಲ್ಲರ್ ಈ ಅಧ್ಯಯನವನ್ನು ಕೈಗೆತ್ತಿಕೊಳ್ಳಲು ಪ್ರಧಾನ ಕಾರಣ 1939 ರಲ್ಲಿ ಮೆಕ್ಸಿಕೋದಲ್ಲಿ ಅಧಿಕಾರಕ್ಕೆ ಬಂದಿದ್ದ ಅಧ್ಯಕ್ಷ ಲಜಾರ್ದೋ ಕಾರ್ಡೆನೇಜ್‌ನ ರಾಷ್ಟ್ರೀಯವಾದಿ ಸರ್ಕಾರ ರಾಕ್‌ಫೆಲ್ಲರ್‌ನ ಸ್ಟಾಂಡರ್ಡ್ ಆಯಿಲ್ ಕಂಪನಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಮತ್ತು ಎರಡನೆಯದಾಗಿ ಆ ದಕ್ಷಿಣಾರ್ಧ ಗೋಳದಲ್ಲಿ ನಾಜಿಗಳ ಕಾಲದಿಂದಲೂ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳಬೇಕೆಂಬ ಸತತ ಪ್ರಯತ್ನ ನಡೆಯುತ್ತಿದ್ದದ್ದು.

ಯುದ್ಧಕ್ಕಿಂತ ಅಭಿವೃದ್ಧಿಪರರೆಂಬ ಮುಖವಾಡ ತಮ್ಮ ಹೂಡಿಕೆಯನ್ನು ಮತ್ತು ಪ್ರಭಾವವನ್ನು ವಿಸ್ತರಿಸಲು ಸಹಾಯ ಮಾಡುತ್ತದೆಂದು ಎರಡನೇ ಮಹಾಯುದ್ಧ ಅವರಿಗೆ ಕಲಿಸಿಕೊಟ್ಟಿತ್ತು.

1956 ರ ಸುಮಾರಿಗೆ ಬೊರ್ಲಾಗ್ ತಂಡ ಈ ವಿಶೇಷ ಇಳುವರಿ ಪದ್ಧತಿಯನ್ನು ಕಂಡುಹಿಡಿದಿದ್ದರು. ಅದನ್ನು ನಾಲ್ಕು ವರ್ಷಗಳ ಕಾಲ ಮೆಕ್ಸಿಕೋದ ಮಣ್ಣಲ್ಲಿ ಪರೀಕ್ಷಿಸಿ ಅದಕ್ಕೆ ಬೇಕಾಗುವ ಅಗತ್ಯಗಳೇನೆಂದು ಗುರುತಿಸಲಾಯಿತು. ಈ ಹೈಬ್ರಿಡ್ ಕೃಷಿ ಹೊಸಬಗೆಯ ಬೀಜವನ್ನು ಮಾತ್ರವಲ್ಲದೆ ಬಡದೇಶಗಳ ಸ್ವಾವಲಂಬಿ ಕೃಷಿ ಪದ್ಧತಿಯನ್ನೇ ಸಂಪೂರ್ಣವಾಗಿ ನಾಶಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕಗಳೆಲ್ಲವಕ್ಕೂ ತಮ್ಮ ಮೇಲೆ ಅಂದರೆ ಬಂಡವಾಳಶಾಹಿ ಜಗತ್ತಿನ ಮೇಲೆ ಅವಲಂಬಿಸುವಂತೆ ಮಾಡುತ್ತದೆಂದು ಖಾತ್ರಿ ಪಡಿಸಿಕೊಳ್ಳಲಾಯಿತು.

ಪ್ರಪಂಚವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಯುದ್ಧದ ಅಗತ್ಯವೇ ಇಲ್ಲದ ಮತ್ತೊಂದು ಸಾಧನವಾಗಿ ಹಸಿರುಕ್ರಾಂತಿಯು ಸಾಮ್ರಾಜ್ಯಶಾಹಿಗಳಿಗೆ ದಕ್ಕಿತ್ತು.

“ಕೆಂಪು ಕ್ರಾಂತಿಯನ್ನು ಹತ್ತಿಕ್ಕಬೇಕೆಂದರೆ ಹಸಿರು ಕ್ರಾಂತಿ ಅತ್ಯಗತ್ಯ-ಚೆಸ್ಟರ್ ಬೌಲೆಸ್”

ಅದೇ ವೇಳೆಗೆ ಜಗತ್ತು ಹೊಸ ಬಗೆಯ ರಾಜಕೀಯ ಪಲ್ಲಟವನ್ನು ಕಾಣುತ್ತಿತ್ತು. ಏಷಿಯಾದ ಬೃಹತ್ ರಾಷ್ಟ್ರ ಚೀನಾದಲ್ಲಿ ಕಮ್ಯುನಿಸ್ಟ್ ಕ್ರಾಂತಿಯಾಗಿ ಭೂಮಾಲೀಕರನ್ನು ಮತ್ತು ಸಾಮ್ರಾಜ್ಯಶಾಹಿಗಳನ್ನು ಚೀನಾದಿಂದ ಹೊರಗಟ್ಟಲಾಗಿತ್ತು. ಕೊರಿಯಾದಲ್ಲಿ ಸಹ ಅಂತರ್ಯುದ್ಧ ಪ್ರಾರಂಭವಾಗಿ ಅರ್ಧ ಕೊರಿಯಾ ಕಮ್ಯುನಿಸ್ಟ್ ಪ್ರಭಾವಕ್ಕೊಳಗಾಗಿತ್ತು. ಮಲೇಷಿಯಾದಲ್ಲಿ ಬ್ರಿಟನ್ ಸಾಮ್ರಾಜ್ಯಶಾಹಿಗಳ ವಿರುದ್ಧ ಎಡಪಂಥೀಯ ಗೆರಿಲ್ಲಾಗಳ ಯುದ್ಧ ಪ್ರಾರಂಭವಾಗಿತ್ತು. ಕಾಂಬೋಡಿಯಾ, ಲಾವೋಸ್ ಇನ್ನಿತ್ಯಾದಿ ಇಂಡೋ-ಚೈನಾ ದೇಶಗಳಲ್ಲಿ ಕಮ್ಯುನಿಸ್ಟರ ಗೆರಿಲ್ಲಾಗಳು ಅಧಿಕಾರದ ಕದವನ್ನು ತಟ್ಟುತ್ತಿದ್ದರು. ಫಿಲಿಫೈನ್ಸ್ ದೇಶದಲ್ಲೂ ಎಡಪಂಥೀಯ ಗೆರಿಲ್ಲಾಗಳೂ ಸಶಕ್ತಗೊಳ್ಳುತ್ತಿದ್ದರು. ಭಾರತವೊಂದನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಏಷಿಯಾ ದೇಶಗಳಲ್ಲಿ ಹೆಚ್ಚು ಕಡಿಮೆ ಕಮ್ಯುನಿಸ್ಟರ ಪ್ರಭಾವ ಹೆಚ್ಚುತ್ತಿತ್ತು. ಎರಡನೇ ಮಹಾಯುದ್ಧ ಕೊನೆಗೊಳ್ಳುವ ಜೊತೆಜೊತೆಗೆ ಅರ್ಧ ಯೂರೋಪೂ ಸಹ ಬಂಡವಾಳಶಾಹಿ ಜಗತ್ತಿನ ಪ್ರಭಾವವನ್ನು ಕಳಚಿಕೊಂಡು ಕಮ್ಯುನಿಸ್ಟರ ಪ್ರಭಾವದೆಡೆ ಸೆಳೆಯಲ್ಪಡುತ್ತಿತ್ತು.

ಅಮೆರಿಕ ಹಸಿರುಕ್ರಾಂತಿಯನ್ನು ಅನ್ವೇಷಿಸಿದ್ದು ಇಂಥಾ ರಾಜಕೀಯ ಸಂದರ್ಭದಲ್ಲಿ. ಕಮ್ಯುನಿಸಂ ಬಲಗೊಳ್ಳುವುದೇ ಹಸಿವಿರುವಾಗ ಎಂದು ಅರ್ಥಮಾಡಿಕೊಂಡ ಅಮೆರಿಕನ್ನರು ಹಸಿವಿಗೆ ತುತ್ತನ್ನ ಒದಗಿಸಿ ಕಮ್ಯುನಿಸ್ಟರ ಪ್ರಭಾವದಲ್ಲಿರುವ ದೇಶಗಳನ್ನು ಮತ್ತೆ ಬಂಡವಾಳಶಾಹಿ ಜಗತ್ತಿಗೆ ಎಳೆದು ತರುವ ಸಂಚಿನ ಭಾಗವಾಗಿಯೇ ಹಸಿರು ಕ್ರಾಂತಿ ರೂಪುಗೊಂಡಿತು.

ಹೀಗಾಗಿಯೇ 1965 ರಲ್ಲಿ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಚೆಸ್ಟರ್ ಬೌಲೆಸ್ “ಕೆಂಪು ಕ್ರಾಂತಿಯನ್ನು ಹತ್ತಿಕ್ಕಬೇಕೆಂದರೆ ಹಸಿರು ಕ್ರಾಂತಿ ಅತ್ಯಗತ್ಯ”  ಎಂದು ಘೋಷಿಸಿದ್ದರು. ಆದ್ದರಿಂದಲೇ 1970 ರಲ್ಲಿ ನಾರ್ಮನ್ ಬೊರ್ಲಾಗ್ ನೊಬೆಲ್ ಪ್ರಶಸ್ತಿ ಸಿಕ್ಕಿದ್ದು ಕೃಷಿ  ವಿಜ್ಞಾನಕ್ಕಲ್ಲ. ಬದಲಿಗೆ ಶಾಂತಿಗಾಗಿ! ಆತಂಕದಲ್ಲಿದ್ದ ಬಂಡವಾಳಶಾಹಿ ಜಗತ್ತಿಗೆ ಶಾಂತಿ ತಂದುಕೊಟ್ಟಿದ್ದಕ್ಕಾಗಿ…

ಹೀಗಾಗಿ ಈ ಮೊದಲೇ ವಿವರಿಸಿದಂತೆ ಹಸಿರು ಕ್ರಾಂತಿಯ ತಂತ್ರಜ್ಞಾನವು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಹೊಸ ಮಾರುಕಟ್ಟೆ ತಂದುಕೊಡುವುದು ಎಂದು ಖಾತರಿಯಾದ ಮೇಲೆ ಅಮೆರಿಕಾ ಅದನ್ನು ಕಡ್ಡಾಯವಾಗಿ ಎಲ್ಲಾ ದೇಶಗಳ ಮೇಲೆ ಹೇರತೊಡಗಿತು. ಆವರೆಗೆ ಪ್ರಪಂಚದ ಎಲ್ಲಾ ಬಡ ದೇಶಗಳಿಗೆ ಪಿಎಲ್-480  ಯೋಜನೆಯಡಿಯಲ್ಲಿ ಗೋಧಿಯನ್ನು ಸಬ್ಸಿಡಿ ದರದಲ್ಲಿ ಸರಬರಾಜು ಮಾಡುತ್ತಿದ್ದ ಅಮೆರಿಕದ ನೀತಿಯನ್ನು 1965 ರಲ್ಲಿ ಅಧ್ಯಕ್ಷ ಲಿಂಡನ್ ಜಾನ್ಸನ್ ಬದಲಾಯಿಸಿದ. ಇನ್ನು ಮುಂದೆ ಅಮೆರಿಕದ ಸಬ್ಸಿಡಿ ಗೋಧಿ ಬೇಕೆಂದರೆ ಬಡ ದೇಶಗಳು ತಮ್ಮ ಕೈಗಾರೀಕರಣ ನೀತಿಯನ್ನು ಕೈಬಿಡಬೇಕು, ಹೈಬ್ರಿಡ್ ಕೃಷಿಯನ್ನು ಅನುಸರಿಸಬೇಕು ಮತ್ತು ಅಮೆರಿಕದ ಬಂಡವಾಳಕ್ಕೆ ತಮ್ಮ ದೇಶದ ಮಾರುಕಟ್ಟೆಯನ್ನು ತೆರೆದಿಡಬೇಕು ಎಂಬ ಷರತ್ತನ್ನು ವಿಧಿಸಿದ.

1965 ರಲ್ಲಿ ಭಾರತದಲ್ಲಿ ಹಿಂದೆಂದೂ ಕಾಣದ ಕ್ಷಾಮ ಡಾಮರ ಆವರಿಸಿ ಅಪಾರ ಆಹಾರ ಕೊರತೆ ಎದುರಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ಅಮೆರಿಕ ಭಾರತವೂ ಹಸಿರುಕ್ರಾಂತಿ ಯೋಜನೆಯನ್ನು ಜಾರಿ ಮಾಡಬೇಕೆಂದೂ, ಅಮೆರಿಕದ ಕೃಷಿ ಬಂಡವಾಳಕ್ಕೆ ಮಾರುಕಟ್ಟೆಯನ್ನು ತೆರೆಯಬೇಕೆಂದೂ, ಇಲ್ಲದಿದ್ದರೆ ಆಹಾರ ಸರಬರಾಜು ಮಾಡುವುದಿಲ್ಲವೆಂದೂ ಬ್ಲಾಕ್‌ಮೇಲ್ ಮಾಡಿ ಹಸಿರು ಕ್ರಾಂತಿ ಯೋಜನೆಯನ್ನು ಮಂಡಿ ಬಲವಿಲ್ಲದ ಭಾರತದ ಸರ್ಕಾರದ ಮೇಲೆ ಹೇರಿತು.

ಹೀಗಾಗಿ ಹಸಿರುಕ್ರಾಂತಿಯೆಂಬುದು ಭಾರತದಂತಹ ಕೃಷಿ ಪ್ರಧಾನ ದೇಶವನ್ನು ಅಮೆರಿಕನ್ ಸಾಮ್ರಾಜ್ಯಶಾಹಿ ನಿಯಂತ್ರಣಕ್ಕೆ ಒಳಪಡಿಸುವ ಸಂಚೇ ಹೊರತು ರೈತೋದ್ಧಾರದ ಯೋಜನೆಯಲ್ಲ.

ಅದರ ಪರಿಣಾಮವೇ ಕೊನೆಯಿಲ್ಲದ ರೈತರ ಆತ್ಮಹತ್ಯೆಗಳು. ಹಸಿವಿನ ಸಾವುಗಳು. ಬತ್ತಿಹೋದ ಕೆರೆಗಳು. ಕುಸಿದುಬಿದ್ದಿರುವ ಅಂತರ್ಜಲದ ಮಟ್ಟ. ಕಂಡುಕೇಳರಿಯದ ಬೆಳೆ ರೋಗಗಳು. ಅತಂತ್ರ ರೈತ. ಪರಾವಲಂಬಿ ದೇಶ… 

ಇವೆಲ್ಲದರ ಮೂಲ ಸೂತ್ರಧಾರಿ ನಾರ್ಮನ್ ಬೊರ್ಲಾಗ್.

ಆದ್ದರಿಂದಲೇ ಹೇಳಿದ್ದು ಈ ಮಹಾಶಯ ಸಾಮ್ರಾಜ್ಯಶಾಹಿಗಳ ಉಗ್ರಾಣ ತುಂಬಿಸಲು ಬಡದೇಶಗಳ, ಬಡರೈತರ ಕೈಯಲ್ಲಿದ್ದ ತಟ್ಟೆಯನ್ನೂ ಕಸಿದುಕೊಂಡ ಕೊಲೆಗಾರ ಎಂದು.

– ಶಿವಸುಂದರ್, ಸಾಮಾಜಿಕ ಹೋರಾಟಗಾರರು

Leave a Reply