ಮಂತ್ರಿಗಳು ತಮ್ಮ ಖಾತೆಗಳ ನಿರ್ವಹಣೆ ಮೂಲಕ ಸುದ್ದಿಯಲ್ಲಿದ್ದರೆ ಒಳಿತು

3 years ago

#ministers #news #managing #portfolios #ksnagaraj #politics

ಕರ್ನಾಟಕ ರಾಜ್ಯದಲ್ಲಿ ಕೆ.ವಿ. ಶಂಕರೇಗೌಡರು ಮತ್ತು ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದರು. ಇವರುಗಳು ಗೊಂದಲಮಯವಾದ ಅಥವಾ ಅಗ್ಗದ ಪ್ರಚಾರದ ರಾಜಕೀಯ ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಉಳಿದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಇವರುಗಳು ಮಾಡಿದ ಸಾಧನೆಯಿಂದ ಇವರ ಹೆಸರುಗಳು ಉಳಿದುಕೊಂಡಿದೆ.

ಅದೇ ರೀತಿಯಲ್ಲಿ ಮಲ ಹೊರುವ ಪದ್ಧತಿಯನ್ನು ರದ್ದುಪಡಿಸಿದ ಬಸವಲಿಂಗಪ್ಪರವರ ಹೆಸರು ಅವರ ದಿಟ್ಟತನ ಮತ್ತು ಇಚ್ಛಾಶಕ್ತಿಯ ಕಾರಣಕ್ಕೆ ಉಳಿದುಕೊಂಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಇದನ್ನು ನಿರ್ವಹಿಸಿ ಅಧಿಕಾರ ವಿಕೇಂದ್ರಿಕರಣದ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿ ಬರಗಾಲದ ಬವಣೆಯಲ್ಲಿ ಬೇಯುತ್ತಿದ್ದ ಸಂದರ್ಭದಲ್ಲಿ 65 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ತೆಗಿಸಿ ನೀರ್ ಸಾಬ್ ಎಂದು ಕರೆಯುವ ಮಟ್ಟಕ್ಕೆ ನಜೀರ್ ಸಾಬರ್ ಬೆಳೆದದ್ದು ತಮ್ಮ ಇಲಾಖೆಯ ಕಾರ್ಯಗಳಿಂದ ಹೊರತು ರಾಜಕೀಯ ಹೇಳಿಕೆಗಳಿಂದಲ್ಲ.

ಕಡಿದಾಳ ಮಂಜಪ್ಪ, ಹುಚ್ಚುಮಾಸ್ತಿ ಗೌಡರು, ಎಲ್.ಜಿ. ಹಾವನೂರು ಮುಂತಾದವರು ಸಹ ತಮ್ಮ ಇಲಾಖೆಗಳ ಕ್ರಾಂತಿಕಾರಿ ಕಾರ್ಯಕ್ರಮಗಳ ಮೂಲಕ ಹೆಸರಾದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆಯನ್ನು ನಿರ್ವಹಿಸಿ ಡಾ.ಜೀವರಾಜ್ ಆಳ್ವ ಮತ್ತು ಎಂ.ಪಿ. ಪ್ರಕಾಶ್‌ರವರು ಹೆಸರಾದರು.

ಯಾರು ಕೇಳರಿಯದ ಸಣ್ಣ ಉಳಿತಾಯ ಖಾತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ವೀರಣ್ಣರವರು ದೊಡ್ಡ ಸುದ್ದಿಯಾದರು.

ಈ ರೀತಿಯಲ್ಲಿ ಅನೇಕ ಸಚಿವರುಗಳು ರಾಜಕಾರಣದ ಮಾತುಗಳಿಗಿಂತ ತಮ್ಮ ಇಲಾಖೆಯಲ್ಲಿನ ಕೆಲಸ ಕಾರ್ಯಗಳ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಂತ್ರಿಗಳು ತಾವು ನಿರ್ವಹಿಸುವ ಖಾತೆಯ ಬಗ್ಗೆ ಮಾತನಾಡಿರುವುದೇ ಇಲ್ಲ. ಮಾತನಾಡಿದ್ದರೂ ಅದು ಅಪರೂಪ. ಅವರು ಯಾವ ಖಾತೆ ಸಚಿವರು ಎನ್ನುವುದು ಜನರಿಗೆ ಗೊತ್ತಿರುವುದಿಲ್ಲ. ಆದರೆ ತಮ್ಮ ಗೊಂದಲಮಯವಾದ ಮತ್ತು ಪ್ರಚಾರಕ್ಕಾಗಿ ರಾಜಕಾರಣದ ಮಾತುಗಳನ್ನಾಡಿ ಸುದ್ದಿಯಲ್ಲಿರಲು ಬಯಸುತ್ತಾರೆ. ಅವರಿಗೆ ಕಾಲ ಕಾಲಕ್ಕೆ ಆಡಳಿತಾತ್ಮಕವಾದಂತಹ ಜನರಿಗೆ ಬೇಕಿರುವುದು ರಾಜಕಾರಣದ ಮಾತುಗಳಲ್ಲ. ಅವರಿಗೆ ಅನುಕೂಲಗಳಷ್ಟೇ.

ಯಾವುದೇ ಸಚಿವರಾಗಲಿ ಅಥವಾ ಶಾಸಕರಾಗಲಿ ಯಾವ ಜಾತಿಯವರೆಂದು ಜನರು ನಾಯಕತ್ವನ್ನು ನೀಡುವುದಿಲ್ಲ. ತಮಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ. ಎಷ್ಟರ ಮಟ್ಟಿನ ವ್ಯಕ್ತಿತ್ವ ಹೊಂದಿದ್ದಾರೆ ಎಂಬುದರ ಮೇಲೆ ಜನರು ಇಷ್ಟ ಪಡುತ್ತಾರೆ. ನಾಯಕತ್ವ ಎನ್ನುವುದು ಸ್ಥಾನಮಾನದಿಂದ ಬರುವುದಲ್ಲ. ಸಾಧನೆ, ಸೇವೆ ಮತ್ತು ಕಾಲ ಕಾಲಕ್ಕೆ ತೆಗೆದುಕೊಳ್ಳುವ ಗಟ್ಟಿತನದ ನಿರ್ಧಾರಗಳಿಂದಷ್ಟೆ.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply