ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ: ಯಡಿಯೂರಪ್ಪ

3 years ago

ಬೆಂಗಳೂರು: ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾನು ಮನೆಯಲ್ಲೇ ಕೂರುವ ಪ್ರಶ್ನೆಯೇ ಇಲ್ಲ. ನಾಳೆಯಿಂದಲೇ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದರು.

15ನೇ ವಿಧಾನಸಭೆಯ ಕೊನೆಯ ದಿನವಾದ ಇಂದು ಅವರು ತಮ್ಮ ವಿದಾಯ ಭಾಷಣ ಮಾಡಿದ ಅವರು, ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವವರೆಗೂ ವಿರಮಿಸುವುದಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಅಷ್ಟೇ ಸತ್ಯ ಎಂದರು.

ನನ್ನ ಜೀವನದ ಕೊನೆಯುಸಿರು ಇರುವವರೆಗೂ ನಾನು ಹೋರಾಟ ಮಾಡುತ್ತಲೇ ಇರುತ್ತೇನೆ. ಅಧಿಕಾರ ಇರಲಿ, ಇಲ್ಲದಿರಲಿ ಎಂದಿಗೂ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ಪಕ್ಷ ನನಗೆ ಎಲ್ಲವೂ ಕೊಟ್ಟಿದೆ. ಅತ್ಯಂತ ಸಂತೃಪ್ತಿಯಾಗಿದ್ದೇನೆ. ಶಿಕಾರಿಪುರ ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿಯೂ ಆಗಿದ್ದೆ. ಅವರ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಅವರಿಗೆ ನಾನು ಎಂದಿಂದೆಗೂ ಆಭಾರಿ ಎಂದರು.

ಇಳಿವಯಸ್ಸಿನಲ್ಲೂ ನಾಡಿನ ಜಲ, ನೆಲ, ಭಾಷೆ, ರೈತರ ಬಗ್ಗೆ ಚಿಂತನೆ ನಡೆಸುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಮ್ಮೆಲ್ಲರಿಗೂ ಆದರ್ಶಪ್ರಾಯರು. ಇಂಥ ವಯಸ್ಸಿನಲ್ಲೂ ಅವರು ನಾಡಿನ ಬಗ್ಗೆ ಇಟ್ಟುಕೊಂಡಿರುವ ಕಳಕಳಿ, ರೈತರ ಬಗ್ಗೆ ಚಿಂತನೆ, ಬದ್ದತೆ, ನಮಗೆ ಪ್ರೇರಣೆ ಎಂದು ಶ್ಲಾಘಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಕಲಾಪದಲ್ಲಿ ಅವರು ಚರ್ಚಿಸುವ ವೇಳೆ ಸಾಕಷ್ಟ ಸಿದ್ದತೆ ಮಾಡಿಕೊಂಡು ತಪ್ಪು ಮಾಡಿದಾಗ ಕಿವಿ ಹಿಂಡುತ್ತಿದ್ದರು. ಅಗತ್ಯ ಬಿದ್ದಾಗ ಸದನಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ಇದರಿಂದ ಸಾಕಷ್ಟು ಲಾಭವಾಗಿದೆ ಎಂದರು.

ಸಭಾಧ್ಯಕ್ಷರಾಗಿ ನೀವು(ವಿಶ್ವೇಶ್ವರ ಹೆಗಡೆ ಕಾಗೇರಿ) ಉತ್ತಮವಾಗಿ ಮುನ್ನಡೆಸಿದ್ದೀರಿ. ಈಗ ಅಧ್ಯಕ್ಷರಾಗಿ ಉತ್ತಮ ಕಾರ್ಯ ಮಾಡಿದ್ದೀರಿ. ಮುಂದೆ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿ ನಿಮ್ಮ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆಯಿರಿ ಎಂದು ಶುಭ ಕೋರಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆಟಿಪ್ಪಣಿಗಳು ಸರ್ವೆ ಸಾಮಾನ್ಯ. ಆದರೂ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ಸಚಿವರು, ಶಾಸಕರು ಬೆಂಬಲ ಕೊಟ್ಟಿದ್ದಾರೆ. ಅನೇಕ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದರು.

Leave a Reply