ಬೆಂಗಳೂರು: ಪ್ರಸಕ್ತ ಸಾಲಿನ ಜಿ20 ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ಪಡೆದಿರುವ ಭಾರತದಲ್ಲಿ ಶೃಂಗಕ್ಕೂ ಮುನ್ನ ಹಲವು ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇಂತಹ ಸಭೆಗಳು ನಡೆಯುತ್ತಿವೆ.
ಇದರ ಮುಂದುವರಿದ ಭಾಗವಾಗಿ ಜಿ20 ರಾಷ್ಟ್ರಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಮುಖ್ಯಸ್ಥರುಗಳ ಸಭೆ ಮುಂದಿನ ವಾರ ಬೆಂಗಳೂರು ಸಮೀಪದ ನಂದಿ ಬೆಟ್ಟದಲ್ಲಿ ನಡೆಯಲಿದೆ.
ಫೆಬ್ರವರಿ 22 ರಿಂದ 25ರವರೆಗೆ ನಡೆಯಲಿರುವ ಈ ಸಭೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಸಾಲದ ತೊಂದರೆಗಳು, ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಮತ್ತು ಜಾಗತಿಕ ಮಂದಗತಿ ಕುರಿತಂತೆ ಚರ್ಚೆ ನಡೆಸಲಾಗುವುದು.
ಈ ಸಭೆಯ ನಂತರ ಮಾ.1 ಮತ್ತು 2 ರಂದು ನವದೆಹಲಿಯಲ್ಲಿ ವಿದೇಶಾಂಗ ಸಚಿವರುಗಳ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಜಾಗತಿಕ ಸಾಲದ ವೆಚ್ಚಗಳು ಹೆಚ್ಚಾಗುತ್ತಿದ್ದಂತೆ, ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಇತ್ತೀಚಿನ ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಹಣಕಾಸು ಬೆಂಬಲವನ್ನು ಕೋರಿವೆ. ಈ ವಿಷಯ ಕುರಿತಂತೆ ನಂದಿ ಬೆಟ್ಟದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಾಂಕ್ರಾಮಿಕ ಮತ್ತು ಉಕ್ರೇನ್ ಯುದ್ಧದಿಂದ ಎದುರಾಗಿರುವ ಆರ್ಥಿಕ ಪ್ರಭಾವದಿಂದ ಕೆಟ್ಟದಾಗಿ ಹಾನಿಗೊಳಗಾದ ಸಾಲಗಾರ ರಾಷ್ಟ್ರಗಳಿಗೆ ಸಹಾಯ ಮಾಡಲು ಜಿ 20 ದೇಶಗಳಿಗೆ ಇದು ಪ್ರಸ್ತಾವನೆಯನ್ನು ರೂಪಿಸುತ್ತಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.


