ಹಿಂದು – ಮುಸ್ಲಿಮರೆಲ್ಲ ಓದಲೇಬೇಕಾದ ಒಂದು ಕರಪತ್ರ…

3 years ago

ನೀವು ಓದಲೇಬೇಕಾದ ಒಂದು ಕರಪತ್ರ…
ಯಾಕೆ ಅಂತ ಕೊನೆಗೆ ಗೊತ್ತಾಗುತ್ತೆ!

“ನಮ್ಮನ್ನು ಆಳುತ್ತಿರುವವರು ಯಾರು?”

“ಈ ಕಳ್ಳ ಖದೀಮರು ನಿಜಕ್ಕೂ ನಮ್ಮನ್ನು ಆಳಲು ಅರ್ಹರೇ? ಇವರು ನಮ್ಮ ಕರಕುಶಲ ಕಸುಬುಗಳನ್ನು ಹಾಳು ಮಾಡಿದ್ದಾರೆ. ನಮ್ಮ ನೇಕಾರರಿಂದಲೂ ಕಮ್ಮಾರರಿಂದಲೂ ಉದ್ಯೋಗ ಕಸಿದುಕೊಂಡಿದ್ದಾರೆ. ನಮ್ಮ ದೇಶದಲ್ಲೇ ತಯಾರಾಗುವ ವಸ್ತುಗಳನ್ನೂ ಅಪಾರ ಸಂಖ್ಯೆಯಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಜನರ ಮೂಲಕ ನಮ್ಮ ಪೇಟೆಗಳಲ್ಲೇ ಅವನ್ನು ಮಾರುತ್ತಿದ್ದಾರೆ, ಹೀಗೆ ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಜನರ ಜೀವ ಹಿಂಡುತ್ತಿದ್ದಾರೆ. ಇಂಥಾ ಕಳ್ಳರು ನಮ್ಮನ್ನು ಆಳಲು ಅರ್ಹರೇ? ನಮ್ಮ ಹೊಲಗಳಲ್ಲಿನ ಸುಗ್ಗಿಯನ್ನು ಸೂರೆಗೈಯ್ಯುತ್ತಿರುವ, ನಮ್ಮನ್ನು ಉಪವಾಸ, ರೋಗರುಜಿನಗಳಿಗೆ ಈಡು ಮಾಡುತ್ತಿರುವ ಇವರು ನಿಜಕ್ಕೂ ನಮ್ಮನ್ನು ಆಳಲರ್ಹರೇ? ನಮ್ಮ ಮೇಲೆ ಸತತವಾಗಿ ಹೆಚ್ಚುಹೆಚ್ಚು ತೆರಿಗೆಗಳನ್ನು ಹೇರುತ್ತಿರುವ ಇವರು ನಮ್ಮನ್ನು ಆಳಲು ಅರ್ಹರೇ? ಸೋದರರೇ, ನೀವು ಎಷ್ಟು ತಾಳ್ಮೆಯಿಂದಿರುತ್ತೀರೋ ಈ ವಿಶ್ವಾಸಘಾತಕ ಜನರು ಅಷ್ಟೂ ಹೆಚ್ಚಾಗಿ ಮರ್ದಿಸುತ್ತಾರೆ. ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳಬೇಕು ಮತ್ತು ಶೋಧೆ ಮಾಡಬೇಕು. ಇವರಿಂದ ನಮಗೆ ಮುಕ್ತಿಯಾಗುವ ಮಾರ್ಗಗಳಿಲ್ಲವೇ? ಸೋದರರೇ, ನಾವೇ ಈ ನೆಲದ ಸಾರ, ಸರ್ವಸ್ವ. ಇವರು ನಮ್ಮ ಹಣದಿಂದ, ಕೆಲಸ ಮಾಡದೆಯೇ ಕೊಬ್ಬುತ್ತಿದ್ದಾರೆ. ಇವರು ನಮ್ಮ ರಕ್ತ ಹೀರುತ್ತಿದ್ದಾರೆ. ನಾವು ಇದನ್ನು ಸಹಿಸಿಕೊಂಡಿರಬೇಕೆ.”

“ಹಿಂದೂ ಸೋದರರೇ, ಕಾಳಿ, ದುರ್ಗ, ಮಹದೇವ ಮತ್ತು ಶ್ರೀಕೃಷ್ಣರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ. ಮುಸ್ಲೀಂ ಸೋದರರೇ, ಅಲ್ಲಾನ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ. ಹಿಂದೂ ಮುಸ್ಲೀಮರು ತಾಯ್ನಾಡಿಗಾಗಿ ಒಗ್ಗಟ್ಟಿನಿಂದ ಜೊತೆಗೂಡುವೆವು ಎಂದು ಹಳ್ಳಿಹಳ್ಳಿಗಳಲ್ಲೂ ಘೋಷ ಮೊಳಗಿಸೋಣ. ಎದ್ದೇಳಿ ಸೋದರರೇ! ನಾವು ಭಾರತ ಮಾತೆಯ ಸುಪತ್ರರೆಂದು ತೋರಿಸಿಕೊಳ್ಳೋಣ. ಕೆಚ್ಚೆದೆಯಿಂದ ಹೋರಾಡೋಣ, ತ್ಯಾಗ ಮಾಡೋಣ.”

ಇಲ್ಲಿಗೆ ಈ ಕರಪತ್ರ ಅಂತ್ಯಗೊಳ್ಳುತ್ತೆ. ಹೌದು, ನಮ್ಮ ದೇಶ ಇವತ್ತು ಹಿಂದೆಂದಿಗಿಂತಲೂ ದುರಾದೃಷ್ಟಕರ ಸ್ಥಿತಿಯಲ್ಲಿದೆ. ಇಂದು ನಮ್ಮನ್ನು ಆಳುತ್ತಿರುವ ಸರ್ಕಾರ ಬಂಡವಾಳಿಗರಿಗೆ ಮಣೆ ಹಾಕುವ ಸಲುವಾಗಿ ದೇಸೀ ಕಸುಬುಗಳನ್ನೂ, ಸಾರ್ವಜನಿಕ ಉದ್ಯಮಗಳನ್ನೂ ನಾಶ ಮಾಡಿದೆ. ನಮ್ಮಲ್ಲೇ ಸಾಕಷ್ಟು ಉತ್ಪಾದನೆಯಾಗುವಂತಹ ಅಡಕೆಯಂತಹ ಕೃಷಿ ಉತ್ಪನ್ನಗಳನ್ನೂ ನೆರೆ ದೇಶಗಳಿಂದ ಆಮದು ಮಾಡಿಕೊಂಡು ಧಾರಣೆ ಕುಸಿಯುವಂತೆ ಮಾಡುತ್ತಿದೆ. ಬೆರಳೆಣಿಕೆಯ ಉದ್ಯಮಪತಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಿರುವುದರಿಂದ ಉದ್ಯೋಗ ನಷ್ಟವಾಗಿ ನಿರುದ್ಯೋಗ ತಾಂಡವವಾಡುತ್ತಿದೆ. ಜಾಗತಿಕ ಮಟ್ಟದ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಹೀನಾಯವಾಗಿ ಕುಸಿದಿದೆ. ರೈತರ ಮೇಲೆ ದಮನಕಾರಿ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಇದರ ವಿರುದ್ಧ ದಿಲ್ಲಿಯಲ್ಲಿ ರೈತರು ಸಂಘಟಿಸಿದ ಐತಿಹಾಸಿಕ ಹೋರಾಟ ಕಣ್ಣ ಮುಂದಿದೆ. ತಿನ್ನುವ ಮೊಸರಿನಿಂದ ಹಿಡಿದು ಎಲ್ಲದರ ಮೇಲೂ ಜಿಎಸ್‌ಟಿ ಹೆಸರಿನ ದುಬಾರಿ ತೆರಿಗೆ ಹೇರಿ ಜನರ ರಕ್ತ ಹೀರಲಾಗುತ್ತಿದೆ. ಕೊರೊನಾ ಕಾಲದಲ್ಲಿ, ಜನರಿಗೆ ಸಮರ್ಪಕವಾಗಿ ಆಕ್ಸಿಜನ್ ಕೂಡಾ ಪೂರೈಸಲಾಗದೆ ರಾಶಿ ಹೆಣ ಬೀಳುವಂತೆ ಮಾಡಿದ್ದಾರೆ. ಸಮಾಜದಲ್ಲಿ ಹಿಂದೂ, ಮುಸ್ಲಿಂ ಎಂಬ ಕೋಮುದಳ್ಳುರಿಯನ್ನು ಸೃಷ್ಟಿಸಿ, ನಮ್ಮ ಒಗ್ಗಟ್ಟನ್ನು ಒಡೆದು, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಹೋರಾಡದೆ ಬೇರೆ ಮಾರ್ಗವಿಲ್ಲ.

ಇಂಥಾ ಒಂದು ಸದುದ್ದೇಶದಿಂದ ಯಾವುದೋ ಜನಪರ ಸಂಘಟನೆ ಈ ಕರಪತ್ರ ಬರೆದಿದೆ ಎಂದುಕೊಂಡಿರಾ?

ಹಾಗೇನಾದರೂ ನೀವು ಭಾವಿಸಿದ್ದರೆ ಅದು ಖಂಡಿತ ತಪ್ಪು. ಯಾಕೆಂದರೆ ಈ ಕರಪತ್ರ ೧೧೦ ವರ್ಷಗಳಷ್ಟು ಹಳೆಯದು! ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಭಾರತೀಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ೧೯೦೯ರಲ್ಲಿ ಕಾಂಗ್ರೆಸಿನ ತೀವ್ರಗಾಮಿ ವರ್ಗ ಬರೆದಿದ್ದ ಕರಪತ್ರ ಇದು! ಅಂದರೆ ಸ್ವಾತಂತ್ರ್ಯ ಚಳುವಳಿಯ ಸಾಗರಕ್ಕೆ ಮಹಾತ್ಮಾ ಗಾಂಧಿ, ನೆಹರೂ, ಬೋಸ್, ಭಗತ್‌ಸಿಂಗ್, ಮೌಲಾನಾ ಸಾಹೇಬರು ಮೊದಲಾದ ಧಾರೆಗಳು ಮೇಳೈಸುವುದಕ್ಕು ಮೊದಲೇ ಬರೆದಿದ್ದ ಕರಪತ್ರ ಇದು. ಒಂದು ಕಡೆ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ಹೋರಾಟ ತೀವ್ರಗೊಳ್ಳುತ್ತಿರುವಂತೆಯೇ ೧೯೦೫ರಲ್ಲಿ ಲಾರ್ಡ್ ಕರ್ಜನ್ ಬಂಗಾಳ ವಿಭಜನೆ ಮಾಡಿದ್ದರಿಂದ ದೇಶದಲ್ಲಿ ಕೋಮುಸಂಘರ್ಷ ಭುಗಿಲೆದ್ದಿತು. ಇದರಿಂದ ಬ್ರಿಟಿಷರಿಗೆ ಒಂದು ಸಂಗತಿ ಮನವರಿಕೆಯಾಯಿತು. ಭಾರತದಲ್ಲಿ ಹಿಂದೂ, ಮುಸ್ಲಿಮರ ನಡುವೆ ಸಂಘರ್ಷವನ್ನು ಜೀವಂತವಾಗಿಟ್ಟರೆ, ಸ್ವಾತಂತ್ರ್ಯ ಚಳವಳಿಯನ್ನು ತಾವು ಹತ್ತಿಕ್ಕಬಹುದು ಅನ್ನೋದು. ಅದನ್ನು ಕಾರ್ಯಗತಕ್ಕೆ ತರುವ ಸಲುವಾಗಿಯೇ ೧೯೦೯ರಲ್ಲಿ ಮಾರ್ಲೆ-ಮಿಂಟೋ ಸುಧಾರಣೆಗಳನ್ನು ಜಾರಿಗೆ ತಂದರು. ಭಾರತೀಯ ವಿಧಾಯಕ ಸಭೆಗಳನ್ನು ಅನುಷ್ಠಾನಕ್ಕೆ ತರುವ ಪ್ರತ್ಯಕ್ಷ ಉದ್ದೇಶವಿದ್ದಾಗ್ಯೂ ಈ ಸುಧಾರಣೆಗಳು ಹಿಂದೂ ಮುಸ್ಲೀಮರಲ್ಲಿ ಪರಸ್ಪರ ಸಂಘರ್ಷವನ್ನು ತಂದಿಡುವ ಹುನ್ನಾರಗಳನ್ನು ಹೊಂದಿದ್ದವು. ಅದನ್ನು ಮನಗಂಡ ಕಾಂಗ್ರೆಸಿನ ತೀವ್ರಗಾಮಿಗಳು ಬ್ರಿಟಿಷರ ವಿಭಜಕ ನೀತಿಯ ವಿರುದ್ಧ ಹೋರಾಟಕ್ಕಿಳಿದಿದ್ದರು. ಆಗ ಬರೆದಿದ್ದ ಕರಪತ್ರ ಇದು.

ಈ ಕರಪತ್ರ ಹೊರಬಂದು ಒಂದು ಶತಮಾನ ಸರಿದುಹೋಗಿದೆ. ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯವೂ ಸಿಕ್ಕಿಯಾಗಿದೆ. ಪ್ರಜಾಪ್ರಭುತ್ವ ನೆಲೆಗೊಂಡಿದೆ, ಸಂವಿಧಾನ ಅನುಷ್ಠಾನಕ್ಕೆ ಬಂದಿದೆ. ನಮ್ಮಿಂದ ಚುನಾಯಿತರಾದ, ನಮ್ಮವರೇ ಈಗ ಆಳುತ್ತಿದ್ದಾರೆ. ಆದರೆ, ಸಾಮಾನ್ಯ ಜನರ ಬವಣೆ ಹಾಗೂ ಆಳುತ್ತಿರುವವರ ಶೋಷಣೆಯ ವೈಖರಿಗಳೇನಾದರೂ ಬದಲಾಗಿವೆಯೇ? ಖಂಡಿತ ಇಲ್ಲ! ಹೆಚ್ಚೂಕಮ್ಮಿ ಇವತ್ತಿನ ಸಂದರ್ಭಕ್ಕೆ ಸರಿಯಾಗಿ ನೂರು ವರ್ಷಗಳ ಹಿಂದೆಯೇ ಬರೆದಂತಿದೆ ಈ ಕರಪತ್ರ. ಅಂದರೆ ನಾವು ತೊಡಗಿಸಿಕೊಳ್ಳಲೇಬೇಕಾದ ಸ್ವಾತಂತ್ರ್ಯ ಸಂಗ್ರಾಮ ಇನ್ನೂ ಜಾರಿಯಲ್ಲಿದೆ ಅಂತಲೇ ಅರ್ಥ. ಈಗ ಮತ್ತೊಮ್ಮೆ ಆ ಕರಪತ್ರ ಓದಿ ನೋಡಿ….

– ಗಿರೀಶ್ ತಾಳಿಕಟ್ಟೆ, ಬರಹಗಾರರು

(ಸೂಚನೆ: ಅಂದಹಾಗೆ, ಮೇಲ್ಕಂಡ ಮೂಲ ಕರಪತ್ರದಲ್ಲಿ ಎರಡು ಕಡೆ ಇದ್ದ ‘ವಿದೇಶಿಯರು’ ಎಂಬ ಪದವನ್ನು ಉದ್ದೇಶಪೂರ್ವಕವಾಗಿಯೇ ‘ಇವರು’ ಎಂದು ಬದಲಿಸಲಾಗಿದೆ; ಆಳುವವರ ಜಾಗದಲ್ಲಿ ವಿದೇಶಿಯರ ಬದಲು ಸ್ವದೇಶಿಯರು ಬಂದು ಕೂತಿದ್ದರು ಸಹಾ, ಇವತ್ತಿಗೂ ಈ ಕರಪತ್ರ ಎಷ್ಟು ಪ್ರಸ್ತುತ ಎಂಬುದನ್ನು ಮನದಟ್ಟು ಮಾಡಿಸುವ ಸಲುವಾಗಿ…. ಪ್ರೊಗ್ರೆಸ್ ಪಬ್ಲಿಷರ‍್ಸ್ ಪ್ರಕಾಶನ ಸಂಸ್ಥೆ ಪ್ರಕಟಿಸಿದ, ಗೊರೇವ್ ಎ ಮತ್ತು ಝಿಮ್ಯಾನಿನ್ ವಿ ಎಂಬ ವಿದೇಶಿ ಲೇಖಕರು ನೆಹರೂ ಅವರ ಜೀವನದ ಕುರಿತು ಬರೆದ ’ಜವಾಹರಲಾಲ್ ನೆಹರೂ’ ಎಂಬ ಕೃತಿಯಲ್ಲಿ ಈ ಕರಪತ್ರದ ಉಲ್ಲೇಖವಿದೆ.)

Leave a Reply