ಕಾಂಗ್ರೆಸ್ ಅವಧಿಯಲ್ಲಿ ಬಿಜೆಪಿ ಅವಧಿಗಿಂತ ಹೆಚ್ಚಿನ ಕಮೀಷನ್: ಬಿ.ಶಿವರಾಂ

2 years ago

ಬೆಂಗಳೂರು: ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಕಮಿಷನ್ ಆರೋಪ ಇದೀಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೂಡ ಪ್ರತಿಧ್ವನಿಸಿದೆ.

ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದ್ದರೆ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ.ಶಿವರಾಂ ಕಮೀಷನ್ ಆರೋಪ ಮಾಡುವ ಮೂಲಕ ಪಕ್ಷ ಮತ್ತು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಕಮಿಷನ್‌ ಆರೋಪ ಮಾಡಿ ಅಧಿಕಾರಕ್ಕೆ‌ ಬಂದಿದ್ದೇವೆ. ಈಗ ಕಮಿಷನ್‌ ಅದಕ್ಕಿಂತ ಜಾಸ್ತಿಯಾಗಿದೆ. ಅದಕ್ಕೆ ಕಡಿವಾಣ ಹಾಕಿ ಎಂದು ನೇರವಾಗಿ ಸಿಎಂಗೆ ತಿಳಿಸಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಶಿವರಾಂ ಅವರ ಈ ಆರೋಪ ರಾಜ್ಯ ರಾಜಕಾರಣದಲ್ಲಿ ಇದೀಗ ಹೊಸ ವಿವಾದದ ಕಿಡಿ ಸೃಷ್ಟಿಸಿದೆ. ಶಿವರಾಂ ಅವರ ಹೇಳಿಕೆ ಬೆನ್ನಲ್ಲೇ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದವು. ಇತ್ತ ಶಿವರಾಂ ಅವರಿಗೆ ಪ್ರದೇಶ ಕಾಂಗ್ರೆಸ್ ಎಚ್ಚರಿಕೆಯ ಸಂದೇಶ ನೀಡಿದೆ.

ಇದರ ನಡುವೆ ತಮ್ಮ ಹೇಳಿಕೆ ಸಮರ್ಥಿಸಿರುವ ಶಿವರಾಂ, ಕೆಪಿಸಿಸಿ ಅಧ್ಯಕ್ಷರು ತಮಗೆ ಎಚ್ಚರಿಕೆ ನೀಡಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಬೇಡ ಅಂತ ಹೇಳುವುದಿಲ್ಲ. ಅವರು ಪಕ್ಷದ ಹಿತದೃಷ್ಟಿಯಿಂದ ಹೇಳಿರಬಹುದು. ಆದರೆ, ಒಬ್ಬರು ಸಚಿವರಾಗಿ ನಾನು ಹೈಕಮಾಂಡ್ ಗುಲಾಮರಲ್ಲ ಅಂತಾರೆ ಅದು ಏನಾಯ್ತು ಎಂದು ಮರು ಪ್ರಶ್ನಿಸಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಶಿವರಾಂ, ಹಾಸನ‌ ಜಿಲ್ಲಾ ಪಂಚಾಯಿತಿಗೆ ₹ 13 ಕೋಟಿ ಅನುದಾನ ಬಂದಿದ್ದು, ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಆ ಅನುದಾನ ಉಸ್ತುವಾರಿ ಸಚಿವರ ವಿವೇಚನಾಧಿಕಾರದ ಕೋಟಾ ಅಂತೆ. ಕೇವಲ 50 ಸಾವಿರ ಜನಸಂಖ್ಯೆಯುಳ್ಳ ಸಚಿವರ ಸಮುದಾಯಕ್ಕೆ ₹ 2.5 ಕೋಟಿ ಅನುದಾನ ನೀಡಿದ್ದು, 4 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಪರಿಶಿಷ್ಟ ಸಮುದಾಯಕ್ಕೆ ₹ 1 ಅನುದಾನವನ್ನು ಕೊಟ್ಟಿಲ್ಲ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ₹ 3 ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಶೇ 40 ಕಮಿಷನ್‌ ಆರೋಪ ಮಾಡಿ ಅಧಿಕಾರಕ್ಕೆ‌ ಬಂದಿದ್ದೇವೆ. ಈಗ ಕಮಿಷನ್‌ ಅದಕ್ಕಿಂತ ಜಾಸ್ತಿಯಾಗಿದೆ. ಅದಕ್ಕೆ ಕಡಿವಾಣ ಹಾಕಿ ಎಂದು ನೇರವಾಗಿ ಹೇಳಿದ್ದೇನೆ ಎಂದರು.

ಹೇಳಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದು, ಏನೇ ಇದ್ದರೂ ಪಕ್ಷದ ಒಳಗೆ ಮಾತನಾಡಬೇಕು. ಹೀಗೆ ಹೊರಗೆ ಮಾಧ್ಯಮದ ಮುಂದೆ ಹೋಗಿ ಮಾತನಾಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾದೀತು. ನಾನು ಈ ಬಗ್ಗೆ ಶಿವರಾಂಗೆ ವಾರ್ನ್‌ ಮಾಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಎಚ್ಚರಿಕೆ ನೀಡಿದರು.

Leave a Reply