ಡಿ ಕೆ ಶಿವಕುಮಾರ್ ಅವರಿಂದ ಸದ್ದಿಲ್ಲದೆ ಶಾಸಕರ ಬೆಂಬಲ ಕ್ರೂಢೀಕರಣ!

7 months ago

ಬೆಂಗಳೂರು : ಅಧಿಕಾರ ಹಸ್ತಾಂತರ ಕುರಿತಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ವಿದ್ಯಮಾನಗಳು ಚುರುಕು ಪಡೆದುಕೊಂಡಿದ್ದು, ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇದೀಗ ಸದ್ದಿಲ್ಲದೆ ಶಾಸಕರ ಬೆಂಬಲ ಕ್ರೂಢೀಕರಣಕ್ಕೆ ಮುಂದಾಗಿದ್ದಾರೆ.

ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ, ಸೋದರ ಹಾಗೂ ಮಾಜಿ ಸಂಸದ ಡಿ ಕೆ ಸುರೇಶ್ ಅವರೊಂದಿಗೆ ಮನೆಯಲ್ಲಿ ಕುಳಿತಿರುವ ಶಿವಕುಮಾರ್,  ತಮ್ಮ ನಿವಾಸಕ್ಕೆ ಶಾಸಕರನ್ನು ಕರೆಸಿಕೊಂಡು ಅವರ ಜೊತೆ ಮಾತುಕತೆ ನಡೆಸುವ ಮೂಲಕ ಬಲಾಬಲ ಪ್ರದರ್ಶನಕ್ಕೆ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸಿನ ಒಟ್ಟು 140 ಶಾಸಕರ ಪೈಕಿ 60ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿರುವ ಡಿ ಕೆ ಶಿವಕುಮಾರ್,  ತಮಗೆ ಬೆಂಬಲ ನೀಡುವಂತೆ ಕೋರಿರುವುದಾಗಿ ಕೆಲವರನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಹೈಕಮಾಂಡ್ ಗೆ ಬರೆದಿರುವ ಮನವಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಸುಮಾರು 35 ಶಾಸಕರು ಈ ಮನವಿ ಪತ್ರಕ್ಕೆ ಸಹಿ ಹಾಕಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿರುವುದಾಗಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ. 

ಶಿವಕುಮಾರ್ ಅವರನ್ನು ಮಂಡ್ಯ, ಕಲಬುರ್ಗಿ, ರಾಮನಗರ, ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗದ ಹಲವು ಕಾಂಗ್ರೆಸ್ ಶಾಸಕರು ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ಶಾಸಕರ ಈ ಬೆಂಬಲ ಕಂಡು ಖುಷಿಯಾಗಿರುವ ಶಿವಕುಮಾರ್, ಇದೀಗ ಶಾಸಕಾಂಗ ಪಕ್ಷದ ಸಭೆ ಕರೆದು ನಾಯಕತ್ವದ ವಿಚಾರ ತೀರ್ಮಾನಿಸುವಂತೆ ವರಿಷ್ಠರ ಮೇಲೆ ಒತ್ತಡ ಹೇರಲು ನಿರ್ಧರಿಸಿರುವುದಾಗಿ ಗೊತ್ತಾಗಿದೆ.

ಇದಕ್ಕೆ ಪೂರಕವೆಂಬಂತೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ, ಕೆಲವು ಶಾಸಕರು ದೆಹಲಿಗೆ ಹೋಗಿದ್ದಾರೆ. ಅವರು ಯಾಕೆ ದೆಹಲಿ ಯಾತ್ರೆ ಕೈಗೊಂಡಿದ್ದಾರೋ ಗೊತ್ತಿಲ್ಲ. ಆದರೆ ಇದರಿಂದ ಗೊಂದಲ ಉಂಟಾಗಿದೆ. ಈ ಗೊಂದಲವನ್ನು ಬಗೆಹರಿಸಲು ಹೈಕಮಾಂಡ್ ಮಧ್ಯಪ್ರವೇಶಿಸಬೇಕು. ಇದಕ್ಕಾಗಿ ಶಾಸಕಾಂಗ ಸಭೆ ಕರೆಯಬೇಕು ಎಂದರು.

ಕಾಂಗ್ರೆಸ್‌‍ ಶಾಸಕರು ದೆಹಲಿಗೆ ಹೋಗಿ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಡ ಹಾಕುವ ಪರಿಸ್ಥಿತಿ ಬಂದೊದಗಿಲ್ಲ. ಒಂದು ವೇಳೆ ವರಿಷ್ಠರ ಬಳಿ ಆ ರೀತಿಯ ಬೇಡಿಕೆ ಇಟ್ಟರೂ ತಪ್ಪಿಲ್ಲ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಶಾಸಕರಿಗಿಂತಲೂ ಹೆಚ್ಚಾಗಿ ಹೈಕಮಾಂಡ್‌ ನಾಯಕರನ್ನು ನಂಬಿಕೊಂಡಿದ್ದಾರೆ. ಹೀಗಾಗಿ ಹೈಕಮಾಂಡ್‌ ನಾಯಕರೇ ತೀರ್ಮಾನ ಮಾಡಬೇಕು ಮತ್ತು ಸ್ಪಷ್ಟನೆ ನೀಡಬೇಕು. ಅದರ ಬದಲು ಶಾಸಕರು ದೆಹಲಿಗೆ ಹೋಗಿ ಒತ್ತಾಯ ಹಾಕಿ ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಮಾಡಿ ಎನ್ನುವ ಪರಿಸ್ಥಿತಿ ಇಲ್ಲ ಎಂದರು.

ಮದ್ದೂರು ಶಾಸಕ ಉದಯ್ ಗೌಡ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಶಿವಕುಮಾರ್ ಅವರು ದೊಡ್ಡ ಶ್ರಮ ಹಾಕಿದ್ದಾರೆ. ಅದಕ್ಕೆ ಅವರಿಗೆ ಪ್ರತಿಫಲ ಸಿಗಬೇಕು. ಹೀಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.

ಇದರ ಬೆನ್ನಲ್ಲೇ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಿವಗಂಗಾ ಬಸವರಾಜ್, ಶರತ್ ಬಚ್ಚೇಗೌಡ, ಆರ್. ಶ್ರೀನಿವಾಸ್ ಆನೇಕಲ್ ಶಿವಣ್ಣ, ಡಾ. ರಂಗನಾಥ್, ರಾಜೇಗೌಡ, ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣನವರ್ ಸೇರಿದಂತೆ ಸುಮಾರು 15 ಜನ ಶಾಸಕರು ದೆಹಲಿಗೆ ತೆರಳಿದ್ದಾರೆ.

ಕೃಷಿ ಸಚಿವ ಚೆಲುವರಾಯಸ್ವಾಮಿ ಮತ್ತು ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಈ ಎಲ್ಲ ಶಾಸಕರು ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು ಅಧಿಕಾರ ಹಸ್ತಾಂತರ ಕುರಿತಾಗಿ ಹೈಕಮಾಂಡ್ ತೀರ್ಮಾನ ಪ್ರಕಟಿಸಬೇಕು ಎಂದು ಒತ್ತಾಯಿಸಲಿದ್ದಾರೆ ಎಂದು ಗೊತ್ತಾಗಿದೆ.

Leave a Reply