ಹೆಗಡೆಯವರ ನೆನಪು ಎಂದರೆ ಒಂದು ರಾಜಕೀಯ ಸಂಸ್ಕೃತಿಯ ಸ್ಮರಣೆ

1 year ago

ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರುಗಳು ಪರಸ್ಪರ ಟೀಕೆಗಳನ್ನು ಮಾಡುವ ಸಂದರ್ಭದಲ್ಲಿ ಬಳಸುತ್ತಿರುವ ಭಾಷೆ ಮತ್ತು ಪದಗಳನ್ನು ಗಮನಿಸಿದಾಗ ರಾಮಕೃಷ್ಣ ಹೆಗಡೆಯವರು ತಮ್ಮ ಆರು ದಶಕದ ರಾಜಕಾರಣದಲ್ಲಿ ಎಂದಿಗೂ ಕೆಟ್ಟ ಭಾಷೆಯನ್ನ ರಾಜಕೀಯ ಭಾಷಣದ ಸಂದರ್ಭದಲ್ಲಿ ಬಳಸುತ್ತಿರಲಿಲ್ಲ ಮತ್ತು ವಿರೋಧಪಕ್ಷದವರನ್ನು ಟೀಕೆ ಮಾಡುವ ಸಂದರ್ಭದಲ್ಲಿ ಸಹ ಅವರ ಮಾತು ಗಂಭೀರವಾಗಿರುತ್ತಿತ್ತು. ಪದಗಳ ಬಳಕೆ ಸೂಕ್ಷ್ಮವಾಗಿರುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಗಡೆಯರವರ ನೆನಪು ಎಂದರೆ ಒಂದು ಸಜ್ಜನಿಕೆಯ ರಾಜಕಾರಣದ ನಡವಳಿಕೆಯ ಸ್ಮರಣೆಯಾಗುತ್ತದೆ.

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕುಟುಂಬದಿಂದ ಬಂದಂತಹ ರಾಮಕೃಷ್ಣ ಹೆಗಡೆಯವರಿಗೆ ಸಹಜವಾಗಿಯೇ ರಕ್ತಗತವಾಗಿ ರಾಷ್ಟ್ರ ಪ್ರೇಮ ಮತ್ತು ಸಂಸ್ಕಾರವಂತಿಕೆಯ ನಡವಳಿಕೆ ಒಲಿದು ಬಂದಿತ್ತು. ವಿಶೇಷವಾಗಿ ಆಚಾರ್ಯ ವಿನೋಭಾವೆಯವರ ಸಂಪರ್ಕ ಮತ್ತು ಅವರ ಮಾರ್ಗದರ್ಶನ ಇವರ ಬದುಕಿನ ಮೇಲೆ ಅಪಾರ ಪರಿಣಾಮವನ್ನು ಬೀರಿ ಇವರನ್ನು ಒಬ್ಬ ನಿಜವಾದ ಜಾತ್ಯತೀತ ನಾಯಕ ಮತ್ತು ಅದಕ್ಕೆ ಬದ್ಧರಾದಂತಹ ವ್ಯಕ್ತಿಯನ್ನಾಗಿ ರೂಪಿಸಿತು.

ರಸ್ತೆ ಬದಿಯಲ್ಲಿ ಮಲ ಎತ್ತುವ ಕಾರ್ಯಕ್ಕೆ ಇವರನ್ನು ವಿನೋಬಾ ಭಾವೆರವರು ನಿಯೋಜಿಸಿ ಇವರಲ್ಲಿ ಇರಬಹುದಾಗಿದ್ದ ಬ್ರಾಹ್ಮಣಿಕೆ ಎಂಬ ಅಹಂಕಾರವನ್ನು ಹೋಗಲಾಡಿಸಿ ಇವರನ್ನು ಸಹ ಒಬ್ಬ ಮಾನವನನ್ನಾಗಿಸಿದರು.

ಇತ್ತೀಚಿಗೆ ಜಾತಿಯ ನಾಯಕರುಗಳು ರಾಜಕಾರಣದಲ್ಲಿ ಹೆಚ್ಚೆಚ್ಚು ಆಗುತ್ತಿದ್ದಾರೆ. ಪ್ರತಿ ಸಂದರ್ಭದಲ್ಲಿ ತಮ್ಮ ಜಾತಿಯ ನಾಯಕರುಗಳ ಅಧಿಕಾರ ಅಂತಸ್ತು ಪದವಿ ಇವುಗಳ ಬಗ್ಗೆ ಮಾತ್ರವೇ ಚಿಂತಿಸುತ್ತ ತಮ್ಮನ್ನು ತಾವೇ ಒಂದು ಚೌಕಟ್ಟಿಗೆ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆಯವರು ಸಮಾಜದ ಎಲ್ಲ ವರ್ಗದ ಜನರ ನಾಯಕರಾಗಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದ ಜನರಿಗೆ ಅತ್ಯಂತ ವಿಶ್ವಾಸ ತುಂಬಿದ ನೇತಾರರಾಗಿ ಬೆಳೆದು ಬಂದದ್ದು ಅವರ ನಡವಳಿಕೆ ಮತ್ತು ಅವರು ಹಾಕಿದ ಯೋಜನೆಗಳು ಬಡಜನರು ಮತ್ತು ಮಹಿಳೆಯರ ಬಗ್ಗೆ ಅವರಿಗಿದ್ದಂತಹ ಕಾಳಜಿ ಕಳಕಳಿ ಕಾರಣವಾಗಿರುತ್ತದೆ.

ಹತ್ತು ಹಲವಾರು ಯೋಜನೆಗಳ ಮತ್ತು ಕಾರ್ಯಕ್ರಮಗಳ ಮೊದಲಿಗರು ಇವರಾದರೂ ಇವರ ವಿಚಾರದಲ್ಲಿ ಎಲ್ಲ ಸರ್ಕಾರಗಳು ಸೂಕ್ತವಾದಂತಹ ಗೌರವವನ್ನು ನೀಡುವಲ್ಲಿ ಆಸಕ್ತಿಯೂ ಇಲ್ಲ ಅಥವಾ ಅಸಡ್ಡೆಯೂ ಇರಬಹುದು.

ಯಾರು ನೆನಪಿಸಿಕೊಳ್ಳಲಿ ಬಿಡಲಿ ಎಲ್ಲಿಯ ತನಕ ಅಧಿಕಾರವಿ ಕೇಂದ್ರೀಕರಣದ ವ್ಯವಸ್ಥೆ ರಾಜ್ಯದಲ್ಲಿ ಇರುತ್ತದೆ ಅಲ್ಲಿಯ ತನಕ ಹೆಗಡೆ ರವರ ಹೆಸರು ಅಳಿಸದೆ ಉಳಿದಿರುತ್ತದೆ.

ಬಾಣಂತಿಯರ ನಿರಂತರ ಸಾವಿನ ಸಂದರ್ಭದಲ್ಲಿ ಹೆಗಡೆಯವರು ಕೂಲಿ ಮಾಡುವ ಮಹಿಳೆಯರ ಬದುಕಿನ ಬಗ್ಗೆ ಚಿಂತಿಸಿ ಹೆರಿಗೆ ಭತ್ಯೆ ಎಂಬ ಯೋಜನೆ ಜಾರಿಗೊಳಿಸಿ ಹೆರಿಗೆಗೆ ಮೊದಲು ಮತ್ತು ಹೆರಿಗೆಯ ನಂತರ ಒಟ್ಟು ಆರು ತಿಂಗಳುಗಳ ಕಾಲ ಆರ್ಥಿಕವಾಗಿ ನೆರವನ್ನು ನೀಡುವ ಕಾರ್ಯಕ್ರಮ ನಿಜಕ್ಕೂ ದುಡಿದು ಬದುಕುವ ಮಹಿಳೆಯರಿಗೆ ಅನುಕೂಲವಾಯಿತು.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ತಂದುಕೊಟ್ಟದ್ದು ಹಿಂದುಳಿದ ವರ್ಗದವರು ಮತ್ತು ದಲಿತರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಇಲ್ಲದಿದ್ದರೂ ತಮ್ಮ ಬದ್ಧತೆಯ ಕಾರಣಕ್ಕೆ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಾವಂತ ಶೋಷಿತ ಸಮುದಾಯದ ಪ್ರತಿನಿಧಿಗಳನ್ನು ಜಿಲ್ಲಾ ಪರಿಷತ್ ಮತ್ತು ಮಂಡಲ್ ಪಂಚಾಯಿತಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಕಲ್ಪಿಸಿಕೊಟ್ಟರು.

ತಾವು ವಹಿಸಿಕೊಂಡಂತಹ ಎಲ್ಲಾ ಹುದ್ದೆಗಳಿಗೆ ಗೌರವವನ್ನು ತಂದು ಕೊಡುವ ರೀತಿಯಲ್ಲಿ ನಡೆದುಕೊಂಡಿರುತ್ತಾರೆ. 1957 ರಲ್ಲಿಯೇ ಶಾಸಕರಾಗಿ ಮಂತ್ರಿಯಾಗಿ ತದನಂತರ ರಾಜ್ಯದ ಅರ್ಥ ಸಚಿವರಾಗಿ 12 ಬಾರಿ ಮುಂಗಡಪತ್ರಗಳನ್ನು ಮುಖ್ಯಮಂತ್ರಿಯಾದ ಸಂದರ್ಭ ಸೇರಿದಂತೆ ಮಂಡಿಸಿರುತ್ತಾರೆ. ರಾಜ್ಯದ ಮುಖ್ಯಮಂತ್ರಿ ಆಗಿ, ಕೇಂದ್ರದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ದುಡಿದ ಇವರು ತಮ್ಮ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿರುತ್ತಾರೆ.

ತಮಗಿಂತ ಅತ್ಯಂತ ಕಿರಿಯರಾದಂತಹ ಸಾಮಾನ್ಯ ಕಾರ್ಯಕರ್ತರನ್ನು ಬಹುವಚನದಲ್ಲಿ ಮಾತನಾಡಿಸುತ್ತಾ ಎಲ್ಲರೊಂದಿಗೂ ಗೌರವದಿಂದ ನಡೆದುಕೊಳ್ಳುತ್ತಿದ್ದ ಇವರು ಇವರ ಭೇಟಿಗೆ ಬಂದ ಸಮಾಜದ ಎಲ್ಲ ವರ್ಗದ ಜನರನ್ನು ಯಾವುದೇ ರೀತಿಯ ಬೇದ ಭಾವ ಎಣಿಸದೆ ಅಷ್ಟೇ ಗೌರವದಿಂದ ಮತ್ತು ಪ್ರೀತಿಯಿಂದ ಮಾತನಾಡಿಸಿ ಅವರೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ ಅನೇಕ ರಾಜಕಾರಣಿಗಳಿಗೆ ಮಾದರಿಯಾಗಬೇಕು.

ರಾಮಕೃಷ್ಣ ಹೆಗಡೆರವರು ನಿಧನರಾಗಿ 21 ವರ್ಷಗಳು ಕಳೆದರೂ ಸಹ ಅನೇಕ ಸಭೆಗಳಲ್ಲಿ ಇಂದಿಗೂ ಸಹ ಅವರ ವಿಚಾರಗಳು ಪ್ರಸ್ತಾಪವಾಗುತ್ತಲೇ ಇರುತ್ತದೆ. ಇದು  ರಾಜಕಾರಣದಲ್ಲಿ ನೆನಪಿನಲ್ಲಿ ಉಳಿಯುವಂತಹ ರೀತಿಯಲ್ಲಿ ತಮ್ಮ ಬದುಕಿನಲ್ಲಿ ನಡೆದುಕೊಂಡಿದ್ದರು ಎಂಬುದನ್ನು ತೋರಿಸುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply