ವಿಧಾನ ಪರಿಷತ್ತಿಗೆ ಡಾ.ಬಿ.ಎಲ್.ಶಂಕರ್ ಭೂಷಣ

2 years ago

73ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿ.ಎಲ್.ಶಂಕರ್ ಅವರಿಗೆ ಶುಭ ಸುದ್ದಿ ನೀಡಲಿ

ರಾಜಕಾರಣದ ನಡುವೆ ಸಾಹಿತ್ಯ ಮತ್ತು ಸಂಸ್ಕೃತಿ ಕಲೆ ಇವುಗಳ ವಿಚಾರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿರುವ ಕೆಲವೇ ಕೆಲವು ರಾಜ್ಯದ ರಾಜಕಾರಣಿಗಳಲ್ಲಿ ಡಾ. ಬಿ ಎಲ್ ಶಂಕರ್ ಪ್ರಮುಖವಾಗಿ ಕಂಡುಬರುತ್ತಾರೆ.

ರಾಜಕಾರಣಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಗಂಭೀರವಾಗಿ ಅಧ್ಯಯನವನ್ನು ಮಾಡಿ ಪಿಎಚ್ ಡಿ ಪದವಿ ಪಡೆಯುವುದು ಸುಲಭದ ಮಾತಲ್ಲ. ಬಿ ಎಲ್ ಶಂಕರ್ ಅವರು ಭಾರತ ದೇಶದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಚಾರದಲ್ಲಿ ಅಧ್ಯಯನವನ್ನು ಮಾಡಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ.

ಮೂಲತಃ ಓದಿನಲ್ಲಿ ಅಪಾರವಾದಂತಹ ಆಸಕ್ತಿಯನ್ನು ಹೊಂದಿರುವ ಇವರು ದೇಶ ಮತ್ತು ವಿದೇಶದ ಅನೇಕ ರಾಜಕೀಯ ಬದಲಾವಣೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಜೊತೆಗೆ ಕುವೆಂಪು ತೇಜಸ್ವಿ ಲಂಕೇಶ್ ಮುಂತಾದಂತಹ ಮಹನೀಯರ ಸಂಪರ್ಕವನ್ನು ಹೊಂದಿದ್ದ ಇವರು ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಬಹಳಷ್ಟು ಕೃತಿಗಳನ್ನು ಓದಿ ಅದರ ಬಗ್ಗೆ ಸಮಾನ ಮನಸ್ಕನೊಂದಿಗೆ ಚರ್ಚಿಸುವ ಗುಣವು ಇವರಲ್ಲಿದೆ.

ಅಧಿಕಾರಕ್ಕಾಗಿ ಎಂದೂ ಸಹ ತಮ್ಮ ಸ್ವಾಭಿಮಾನವನ್ನು ಬಿಟ್ಟು ನಡೆದುಕೊಂಡವರಲ್ಲ. ಅಧಿಕಾರಕ್ಕಾಗಿ ನಾಯಕರ ಮುಂದೆ ಕೈಕಟ್ಟಿ ನಿಂತವರಲ್ಲ. ಅಧಿಕಾರಕ್ಕಾಗಿ ಅಸಮರ್ಥರನ್ನು ಹೊಗಳುವಂತಹ ಕೆಲಸವನ್ನು ಮಾಡುವುದಿಲ್ಲ. ಅಧಿಕಾರ ಬಂದರೆ ಬರಲಿ ಬರದಿದ್ದರೂ ಚಿಂತೆ ಇಲ್ಲ ತಮ್ಮ ಓದು ಮತ್ತು ಸಾಹಿತ್ಯದ ಆಸಕ್ತಿ ಸಾಂಸ್ಕೃತಿಕ ಚಟುವಟಿಕೆ ಇವುಗಳ ಕಡೆ ತಮ್ಮ ಗಮನವನ್ನು ಕೇಂದ್ರೀಕರಿಸಿರುತ್ತಾರೆ.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶವನ್ನು ಮಾಡಿ, ಯುವ ಜನತಾದಳದ ಮೂಲಕ ರಾಜಕಾರಣವನ್ನ ಅರಿತುಕೊಂಡು ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿರುತ್ತಾರೆ. ರಾಮಕೃಷ್ಣ ಹೆಗಡೆ ಮತ್ತು ಜೆ ಎಚ್ ಪಟೇಲ ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಎಚ್ ಡಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಜನತಾದಳದ ಅಧ್ಯಕ್ಷರಾಗಿಯೂ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಜೊತೆಗೆ ವಿಧಾನ ಪರಿಷತ್ತಿನಲ್ಲಿ ಸಭಾಪತಿಯಾಗಿ ತಮ್ಮದೇ ಆದಂತಹ ಹೆಜ್ಜೆ ಗುರುತುಗಳನ್ನ ಮೂಡಿಸಿರುತ್ತಾರೆ. ಕರ್ನಾಟಕ ರಾಜ್ಯ ಚಿತ್ರ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸದಾ ಚಟುವಟಿಕೆಯಿಂದ ಇರುವ ಇವರು, ಚಿತ್ರಕಲಾ ಪರಿಷತ್ತಿಗೆ ಒಂದು ಮಹತ್ವವನ್ನು ತಂದುಕೊಟ್ಟಿದ್ದಾರೆ.

ಪ್ರತಿ ವರ್ಷ ನಡೆಯುವಂತಹ ಚಿತ್ರ ಸಂತೆ ವಿಶ್ವದ ಗಮನವನ್ನು ಸೆಳೆದಿದೆ ಸಹಸ್ರಾರು ಕಲಾವಿದರು ತಮ್ಮ ಕಲಾಕೃತಿಗಳನ್ನು ಮಾರಾಟ ಮಾಡಿ ಚಿತ್ರಕಲೆಯ ಮಹತ್ವವನ್ನು ಸಾರಿದ್ದಾರೆ ಚಿತ್ರಕಲಾ ಪರಿಷತ್ತಿನಲ್ಲಿ ಪ್ರತಿ ವರ್ಷ ನಡೆಸುವ ಚಿತ್ರ ಸಂತೆಗೆ ಒಂದು ಜಾತ್ರೆಯ ರೀತಿಯಲ್ಲಿ ಸಹಸ್ರಾರು ಜನರನ್ನು ಆಕರ್ಷಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಜನಪ್ರಿಯತೆ ಹೆಚ್ಚಾಗುತ್ತಿದೆ. ಜನ ಸೇರುವವರು ಹೆಚ್ಚಾಗುತ್ತಿದ್ದಾರೆ. ಮಾರಾಟವೂ ಸಹ ಹೆಚ್ಚಿನ ಪ್ರಮಾಣದಲ್ಲಾಗುತ್ತಿದೆ. ನಿಜಕ್ಕೂ ಚಿತ್ರ ಕಲಾವಿದರಿಗೆ ಇದೊಂದು ದೊಡ್ಡ ವೇದಿಕೆಯಾಗಿದೆ.

ಡಾ. ಬಿಎಲ್ ಶಂಕರ್ ಅವರು ಪ್ರಮುಖವಾಗಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಅನುಯಾಯಿಯಾಗಿ ಭಾರತ ಪಾದಯಾತ್ರೆ ಸಂದರ್ಭದಲ್ಲಿ ಹೆಚ್ಚಿನ ಕೆಲಸವನ್ನು ಮಾಡಿರುತ್ತಾರೆ. ಚಂದ್ರಶೇಖರ್ ಅವರ ಅಚ್ಚುಮೆಚ್ಚಿನ ಕರ್ನಾಟಕದ ನಾಯಕರುಗಳಲ್ಲಿ ಶಂಕರ್ ಅವರಿಗೆ ವಿಶೇಷ ಸ್ಥಾನವಿತ್ತು.

ಎಂದಿಗೂ ಯಾರೊಬ್ಬರ ಬಗ್ಗೆಯೂ ಲಘುವಾಗಿ ಮಾತನಾಡದ ಮತ್ತು ತಮ್ಮ ಬಳಿಗೆ ಅನ್ಯರ ವಿಚಾರದಲ್ಲಿ ಚಾಡಿ ಹೇಳುವ ಜನರ ಮಾತುಗಳಿಗೆ ಎಂದು ಸಹ ಇವರು ಕಿವಿಯಾಗುವುದಿಲ್ಲ. ಅಂತಹ ಮಾತುಗಳಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣವನ್ನು ಹಾಕುತ್ತಾರೆ.

ಕರ್ನಾಟಕದಲ್ಲಿ ಬಹಳಷ್ಟು ಸಂಘ ಸಂಸ್ಥೆಗಳಿಗೆ ತಮ್ಮ ಕಾರ್ಯಕ್ರಮಗಳಲ್ಲಿ ಸ್ಪಷ್ಟವಾಗಿ ವಿಚಾರಗಳನ್ನು ಮಂಡಿಸಬಲ್ಲ ಮತ್ತು ಸಾರ್ವಜನಿಕ ವಲಯದಲ್ಲಿ ಗೌರವವನ್ನು ಉಳಿಸಿಕೊಂಡಿರುವ ಮುಖ್ಯ ಅತಿಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಇರುವ ಕೆಲವೇ ಕೆಲವು ಪ್ರಮುಖರಲ್ಲಿ ಶಂಕರ್ ಅವರ ಉಪಸ್ಥಿತಿಯನ್ನು ಬಹಳಷ್ಟು ಜನ ಬಯಸುತ್ತಾರೆ.

ಶಂಕರ್ ಅವರು ಮಾಡುವ ಭಾಷಣವನ್ನು ಆಸಕ್ತಿಯಿಂದ ಸಭಿಕರು ಕೇಳುತ್ತಾರೆ. ಕಾರಣ ಅದೊಂದು ರೀತಿಯ ವಿಮರ್ಶೆಯಾಗಿರುತ್ತದೆ ಮತ್ತು ತುಲಾನಾತ್ಮಕವಾದಂತ ಮಾತುಗಳಾಗಿರುತ್ತದೆ. ಇವರು ಎಷ್ಟೇ ಹೊತ್ತು ಮಾತನಾಡಿದರು ಸಭಿಕರು ಆಸಕ್ತಿಯಿಂದ ಕೇಳುತ್ತಾರೆ. ಶಂಕರ್ ಅವರ ಮಾತುಗಾರಿಕೆಗೆ ಅಂತಹ ಶಕ್ತಿ ಇದೆ.

ಶಂಕರ್ ಅವರು ತಮ್ಮದೇ ಆದಂತಹ ಒಂದು ಬಳಗವನ್ನ ಕಟ್ಟಿಕೊಂಡು ಪ್ರತಿ ವರ್ಷ ಅನೇಕ ಮಹನೀಯರ ಹುಟ್ಟು ಹಬ್ಬದ ಮತ್ತು ಅವರ ನೆನಪಿನ ಕಾರ್ಯಕ್ರಮಗಳನ್ನು ಚಿತ್ರಕಲಾ ಪರಿಷತ್ತಿನಲ್ಲಿ ನಿರಂತರವಾಗಿ ನಡೆಸುತ್ತ ಬಂದಿದ್ದಾರೆ. ಕಾರ್ಯಕ್ರಮ ಆಯೋಜಕರು ಇವರ ಮಾರ್ಗದರ್ಶನ ಮತ್ತು ಸಲಹೆಯನ್ನ ಪಡೆದುಕೊಂಡೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಾರೆ.

ಕರ್ನಾಟಕ ರಾಜ್ಯದ ಜನರಲ್ಲಿ ಒಂದು ಅಭಿಪ್ರಾಯವಿದೆ. ಶಂಕರ್ ಅವರಂತಹ ವಿಚಾರವಂತರು ಸಜ್ಜನರು ಬುದ್ದಿಜೀವಿಗಳು ಇವರಿಗೆ ರಾಜಕೀಯದಲ್ಲಿ ಸರಿಯಾದಂತಹ ಅವಕಾಶಗಳು ದೊರೆಯಲಿಲ್ಲ. ಅವರನ್ನು ಸರ್ಕಾರ ಸರಿಯಾಗಿ ಗುರುತಿಸಿದ್ದರೆ ಒಂದಷ್ಟು ಒಳ್ಳೆಯ ಕೆಲಸಗಳಾಗುತ್ತಿತ್ತು ಎನ್ನುವ ಮಾತು ಕೇಳಿಬರುತ್ತಿದೆ. ವಿಧಾನ ಪರಿಷತ್ತಿಗೆ ಸದಸ್ಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಿ ಎಲ್ ಶಂಕರ್ ಅವರ ಹೆಸರನ್ನು ಸರ್ಕಾರ ಮತ್ತು ಪಕ್ಷ ಪರಿಗಣಿಸಿದರೆ ಇದರಿಂದ ಪರಿಷತ್ತಿಗೆ ಗೌರವ ಹೆಚ್ಚುತ್ತದೆ. ವಿಧಾನ ಪರಿಷತ್ತಿನಲ್ಲಿ ಒಬ್ಬ ಶ್ರೇಷ್ಠ ಸಂಸದೀಯ ಪಟುವನ್ನು ಮತ್ತೆ ಕಾಣಲು ಸಾಧ್ಯವಾಗುತ್ತದೆ.

ವಿಧಾನ ಪರಿಷತ್ತು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಶಂಕರವರಂತಹ ಒಂದಷ್ಟು ಮಂದಿ ವಿಧಾನ ಪರಿಷತ್ತಿನಲ್ಲಿ ಇದ್ದರೆ ಪ್ರಜಾಪ್ರಭುತ್ವವನ್ನು ಗೌರವಿಸುವ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆಯನ್ನು ಬಯಸುವ ಜನರಿಗೆ ಸಮಾಧಾನವಾಗುತ್ತದೆ.

ಶಿಸ್ತು ಶಂಕರ್ ಅವರಲ್ಲಿ ಇರುವಂತಹ ಮತ್ತೊಂದು ಗುಣ. ಅನಾವಶ್ಯಕವಾಗಿ ಪತ್ರಿಕಾ ಹೇಳಿಕೆ ಕೊಡುವುದು, ದೃಶ್ಯ ಮಾಧ್ಯಮಗಳಿಗೆ ಮುಖ ತೋರಿಸುವುದು, ತಮ್ಮದಲ್ಲದ ತಮ್ಮ ಪಾತ್ರವಿಲ್ಲದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಇಂತಹ ಗುಣಗಳಿಲ್ಲದಂತಹ ವಿಶೇಷವಾದ ವ್ಯಕ್ತಿತ್ವ ಇವರದಾಗಿದೆ. ರಾಜಕಾರಣದಲ್ಲಿ ಇಂತಹ ವ್ಯಕ್ತಿತ್ವಗಳು ಅಪರೂಪ.

29, ಮೇ 2024ಕ್ಕೆ 73ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಇವರಿಗೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೂಕ್ತವಾದ ಗೌರವವನ್ನು ನೀಡುವುದರ ಮೂಲಕ ಶುಭ ಸಂದೇಶವನ್ನು ಕೊಡಲಿ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply